ಮುಂಬೈ, ಅಕ್ಟೋಬರ್ 22: ಭಾರತದ ಆರ್ಥಿಕ ಬೆಳವಣಿಗೆಯ ಸಾಧ್ಯತೆ ಬಗ್ಗೆ ಬಹಳ ಸಂಸ್ಥೆಗಳು ಸಕಾರಾತ್ಮಕವಾಗಿ ಅಭಿಪ್ರಾಯ ನೀಡಿವೆ. ಅಂತಾರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಹೆಚ್ಚಾಗಲಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಐಎಂಎಫ್ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್, 2028ರಲ್ಲಿ ವಿಶ್ವ ಬೆಳವಣಿಗೆಯಲ್ಲಿ ಭಾರತದ ಪಾಲು (India’s contribution to global growth) ಶೇ. 18ರಷ್ಟಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲಿರುವುದು ಶೇ. 16ರಷ್ಟು. ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ಆಗಲಿರುವುದರ ಸೂಚನೆ ಇದು.
ಜಾಗತಿಕ ಬೆಳವಣಿಗೆಯಲ್ಲಿ ಚೀನಾದ್ದು ಸಿಂಹಪಾಲಿದೆ. 2023 ಮತ್ತು 2024ರ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಚೀನಾ ಮತ್ತು ಭಾರತದ್ದಾಗಿತ್ತು. ಚೀನಾದ ಪ್ರಾಬಲ್ಯವು ಮುಂದಿನ ಐದು ವರ್ಷವೂ ಮುಂದುವರಿಯಲಿದೆ. ಐಎಂಎಫ್ ಅಂದಾಜು ಪ್ರಕಾರ 2028ರಷ್ಟರಲ್ಲಿ ಚೀನಾದ ಜಿಡಿಪಿ 23.61 ಟ್ರಿಲಿಯನ್ ಡಾಲರ್ಗೆ ಏರಲಿದೆ. ಭಾರತದ ಜಿಡಿಪಿ 5.95 ಟ್ರಿಲಿಯನ್ ಡಾಲರ್ಗೆ ಏರಲಿದೆ.
ಭಾರತದ ಜಿಡಿಪಿ ವೃದ್ಧಿದರ ಚೀನಾಗಿಂತಲೂ ಹೆಚ್ಚಿದೆಯಾದರೂ ಆರ್ಥಿಕತೆಯ ಬೆಳವಣಿಗೆಯ ಪ್ರಮಾಣದಲ್ಲಿ ಚೀನಾಗಿಂತ ಭಾರತ ಬಹಳ ಹಿಂದಿದೆ. ಚೀನಾದ ಆರ್ಥಿಕತೆ ಬಹಳ ದೊಡ್ಡದಿರುವುದರಿಂದ ಮತ್ತು ಜಾಗತಿಕ ಹೂಡಿಕೆಯಲ್ಲಿ ಹೆಚ್ಚು ಪಾಲಿರುವುದರಿಂದ ಭಾರತವು ಚೀನಾವನ್ನು ಸರಿಗಟ್ಟುವ ದಿನ ಬಹಳ ದೂರ ಇದೆ ಎಂಬುದು ಹಲವು ಆರ್ಥಿಕ ತಜ್ಞರ ಅಭಿಮತ.
ಆದರೆ, ಇನ್ನು 50 ವರ್ಷದಲ್ಲಿ ಭಾರತದ ಆರ್ಥಿಕತೆಯು ಚೀನಾದ ಸಮಕ್ಕೆ ಬರಬಹುದು ಎಂಬ ಅನಿಸಿಕೆಯಂತೂ ತಜ್ಞರು ವ್ಯಕ್ತಪಡಿಸಿರುವುದುಂಟು. ಭಾರತದ ಆರ್ಥಿಕತೆಯ ವೇಗ ಸ್ಥಿರವಾಗಿ ಸಾಗಿದರೆ ಮಾತ್ರ ಇದು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ