
ನವದೆಹಲಿ, ಅಕ್ಟೋಬರ್ 9: ಅಮೆರಿಕದ ಕಾರ್ಮಿಕ ಇಲಾಖೆಯು ಎಂಟು ಐಟಿ ಸಂಸ್ಥೆಗಳ ‘ಶಾಶ್ವತ ಕಾರ್ಮಿಕ ಪ್ರಮಾಣೀಕರಣ’ (PERM / Green Card) ಪ್ರಕ್ರಿಯೆಯನ್ನು ಅಮಾನತುಗೊಳಿಸಿರುವ ಕುರಿತು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಮೆರಿಕದ ಈ ಕ್ರಮದಿಂದ ಹಾಲಿ ಎಚ್-1ಬಿ ವೀಸಾ ಹೊಂದಿರುವ ಭಾರತೀಯರಿಗೆ ತತ್ಕ್ಷಣಕ್ಕೆ ಸಮಸ್ಯೆ ಇಲ್ಲ ಎಂದಿರುವ ಸಚಿವಾಲಯವು, ಅಮೆರಿಕದ ಉಪಾಧ್ಯಕ್ಷರ ಅಗ್ಗದ ಹೇಳಿಕೆಗಳಿಗೆ ಅತೀವ ಅಸಮಾಧಾನ ವ್ಯಕ್ತಪಡಿಸಿದೆ.
ಅಮೆರಿಕ ಉಪಾಧ್ಯಕ್ಷರಾದ ಜೆ.ಡಿ. ವ್ಯಾನ್ಸ್ (J.D. Vance) ಅವರು ಎಚ್-1ಬಿ ವೀಸಾದಾರರನ್ನು ವಿದೇಶೀ ಜೀತದಾಳುಗಳೆಂಬ ಅರ್ಥದಲ್ಲಿ ಲೇವಡಿ ಮಾಡಿದ್ದರು. ವ್ಯಾನ್ಸ್ ಅವರ ಈ ಹೇಳಿಕೆಗೆ ಭಾರತ ಬಲವಾಗಿ ಆಕ್ಷೇಪಿಸಿದೆ. ಅವರ ಈ ಹೇಳಿಕೆ ಅನವಶ್ಯಕವಾಗಿತ್ತು. ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಉನ್ನತ ಮಟ್ಟದ ವಿದ್ಯಾವಂತರಾಗಿದ್ದು, ಆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಐತಿಹಾಸಿಕವಾಗಿ ಅಮೆರಿಕವನ್ನು ರೂಪಿಸಿರುವುದು ವಲಸಿಗರೇ ಆಗಿದ್ದಾರೆ. ವಸಾಹತುಷಾಹಿ ವ್ಯವಸ್ಥೆ ಮತ್ತು ನೋವಿನ ಇತಿಹಾಸವನ್ನು ನೆನಪಿಸುವ ಪದಬಳಕೆ ಮಾಡಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವಾಲಯವು ತನ್ನ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅಮೆರಿಕದ ಗ್ರೀನ್ ಕಾರ್ಡ್ ವ್ಯವಸ್ಥೆ ರದ್ದತಿಗೆ ನಾಸ್ಕಾಮ್ ಆಕ್ಷೇಪ; ವಲಸೆ ಬೇರೆ, ಕುಶಲ ತಂತ್ರಜ್ಞರ ಹರಿವು ಬೇರೆ ಎಂದ ನಾಸ್ಕಾಮ್
ಭಾರತೀಯ ತಂತ್ರಜ್ಞರ ನೈಪುಣ್ಯತೆಯು ಅಮೆರಿಕನ್ ಕಂಪನಿಗಳಿಗೆ ನಾವೀನ್ಯತೆ (Innovation), ಸಂಶೋಧನೆ, ಉತ್ಪಾದಕತೆ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಿದೆ. ಈ ಪ್ರತಿಭಾವಂತರ ಹರಿವು ಎರಡೂ ದೇಶಗಳ ಆರ್ಥಿಕತೆಗೆ ಭಾರಿ ಮೌಲ್ಯವರ್ಧನೆ ಮಾಡುತ್ತದೆ. ಅಮೆರಿಕ ಕೈಗೊಂಡಿರುವ ಈ ಏಕಪಕ್ಷೀಯ ಕ್ರಮವು ಉಭಯ ದೇಶಗಳ ಹಂಚಿಕೆಯ ಆಕಾಂಕ್ಷೆಗಳಿಗೆ ಪೂರಕವಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ.
ಭಾರತದ ಹೇಳಿಕೆಯ ಪೋಸ್ಟ್
PERM ಪ್ರಕ್ರಿಯೆ ಮತ್ತು ಎಚ್-1ಬಿ ವೀಸಾ ಕಾರ್ಯಕ್ರಮಗಳು ಸಂಪೂರ್ಣವಾಗಿ ವಿಭಿನ್ನವಾದವು. PERM ಅರ್ಜಿಗಳ ಅಮಾನತಿನಿಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಸಿಂಧುತ್ವಕ್ಕಾಗಲಿ ಅಥವಾ ಎಚ್-1ಬಿ ವೀಸಾದಾರರು ಮತ್ತು ಅವರ ಅವಲಂಬಿತರ (Dependents) ಕಾನೂನುಬದ್ಧ ಸ್ಥಿತಿಗತಿಯ ಮೇಲಾಗಲಿ ಯಾವುದೇ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಐಟಿ ಕಂಪನಿಗಳ ಕೈತಪ್ಪಿದ ಗ್ರೀನ್ ಕಾರ್ಡ್ ಪ್ರೋಗ್ರಾಮ್; ಎಚ್-1ಬಿ ವಿಸಾದಾರರನ್ನು ವಿದೇಶೀ ಜೀತದಾಳುಗಳೆಂದು ಜರಿದ ಜೆ.ಡಿ. ವಾನ್ಸ್
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂಬರುವ ಎಲ್ಲಾ ಬೆಳವಣಿಗೆಗಳನ್ನು ಭಾರತ ಸರ್ಕಾರವು ತೀವ್ರವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ದೆಹಲಿಯಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಸಚಿವಾಲಯ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Fri, 9 October 26