Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

| Updated By: Digi Tech Desk

Updated on: Apr 07, 2021 | 1:23 PM

ಪೇಮೆಂಟ್ಸ್ ಬ್ಯಾಂಕ್​ಗಳನ್ನು ಉತ್ತೇಜಿಸಬೇಕು ಎಂಬ ಉದ್ದೇಶದಿಂದ ವೈಯಕ್ತಿಕ ಗ್ರಾಹಕರು ದಿನದ ಕೊನೆಗೆ ಇಡಬಹುದಾದ ಗರಿಷ್ಠ ಬ್ಯಾಲೆನ್ಸ್ ಅನ್ನು ಈ ಹಿಂದೆ ಇದ್ದ 1 ಲಕ್ಷ ರೂಪಾಯಿಯಿಂದ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ.

Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ
ಪೇಟಿಎಮ್​ (ಪ್ರಾತಿನಿಧಿಕ ಚಿತ್ರ)
Follow us on

ದೇಶದಲ್ಲಿ ಡಿಜಿಟಲ್ ಪಾವತಿ ಬ್ಯಾಂಕ್ ಉತ್ತೇಜಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್​ಬಿಐ) ಬುಧವಾರ ಘೋಷಣೆ ಮಾಡಿರುವ ಪ್ರಕಾರ, ಪೇಮೆಂಟ್ ಬ್ಯಾಂಕ್​​ಗಳ ಗ್ರಾಹಕರಿಗೆ ದಿನದ ಕೊನೆಗೆ ಈ ಹಿಂದೆ ಇದ್ದ ಗರಿಷ್ಠ ಬ್ಯಾಲೆನ್ಸ್ ಮಿತಿಯಾದ 1 ಲಕ್ಷ ರೂಪಾಯಿಯನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಠೇವಣಿ ಮೊತ್ತದ ಮಿತಿಯನ್ನು ಏರಿಕೆ ಮಾಡಬೇಕು ಎಂದು ಪೇಮೆಂಟ್ ಬ್ಯಾಂಕ್​ಗಳು ಬಹಳ ಸಮಯದಿಂದ ಕೇಳುತ್ತಿದ್ದವು. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸುತ್ತೋಲೆಯನ್ನು ಹೊರಡಿಸಿದೆ. ನವೆಂಬರ್ 27, 2014ರಂದು ಪೇಮೆಂಟ್ಸ್ ಬ್ಯಾಂಕ್​ಗಳಿಗೆ ವಿತರಿಸಿದ ಲೈಸೆನ್ಸಿಂಗ್ ಮಾರ್ಗದರ್ಶಿ ಸೂತ್ರದ ಪ್ರಕಾರ, ವೈಯಕ್ತಿಕ ಗ್ರಾಹಕರು ಪೇಮೆಂಟ್ಸ್ ಬ್ಯಾಂಕ್​ಗಳಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ಇರಿಸಿಕೊಳ್ಳಬಹುದು.

ಆದರೆ, ಪೇಮೆಂಟ್ಸ್ ಬ್ಯಾಂಕ್​ಗಳ ಕಾರ್ಯನಿರ್ವಹಣೆ ರೀತಿಯನ್ನು ಪರಿಶೀಲನೆ ಮಾಡಿದ ಮೇಲೆ, ಅವುಗಳ ಶ್ರಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಆರ್​ಬಿಐ ಮುಂದಾಗಿದೆ. ಎಂಎಸ್​ಎಂಇಗಳು, ಸಣ್ಣ ವ್ಯಾಪಾರಿಗಳು ಮತ್ತು ವರ್ತಕರಿಗೆ ಸೇರಿದಂತೆ ಗ್ರಾಹಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ವೃದ್ಧಿ ಆಗಲಿ ಎಂಬ ಅಂಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ದಿನದ ಕೊನೆಗೆ ವೈಯಕ್ತಿಕ ಗ್ರಾಹಕರು ಇರಿಸಿಕೊಳ್ಳಬಹುದಾದ ಗರಿಷ್ಠ ಬ್ಯಾಲೆನ್ಸ್ ಅನ್ನು 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ವಿಸ್ತರಿಸಲಾಗಿದೆ. ಈ ಸಂಬಂಧವಾಗಿ ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿ ಆರ್​ಬಿಐ ಹೇಳಿಕೆ ನೀಡಿದೆ.

2 ಲಕ್ಷ ರೂಪಾಯಿಗೆ ಗರಿಷ್ಠ ಮಿತಿ ಹೆಚ್ಚಳ
ಆರ್​ಬಿಐ ಹಣಕಾಸು ನೀತಿ ಘೋಷಣೆ ವೇಳೆ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಮಾತನಾಡಿ, ಇನ್ನಷ್ಟು ಹಣಕಾಸು ಒಳಗೊಳ್ಳುವಿಕೆ ವಿಸ್ತರಣೆಗೆ ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆ ಒದಗಿಸಲು ಪೇಮೆಂಟ್ಸ್ ಬ್ಯಾಂಕ್​ಗಳ ಸಾಮರ್ಥ್ಯ ವೃದ್ಧಿಗಾಗಿ ಸದ್ಯಕ್ಕೆ ಇರುವ 1 ಲಕ್ಷ ರೂಪಾಯಿ ದಿನದ ಕೊನೆಯ ಗರಿಷ್ಠ ಮೊತ್ತದ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ. ಅಂದಹಾಗೆ ಆರ್ಥಿಕ ಒಳಗೊಳ್ಳುವಿಕೆ ಹೆಚ್ಚಾಗಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಬ್ಯಾಂಕ್​ನಿಂದ ಪೇಮೆಂಟ್ಸ್ ಬ್ಯಾಂಕ್ ಪರಿಚಯಿಸಲಾಗಿದೆ. ಇದರ ಗುರಿ ಏನೆಂದರೆ, ಸಣ್ಣ ಉಳಿತಾಯ ಖಾತೆಗಳು, ವಲಸಿಗ ಕಾರ್ಮಿಕರಿಗೆ, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ಉದ್ಯಮಗಳು, ಇತರ ಅಸಂಘಟಿತ ವಲಯಗಳ ಸಂಸ್ಥೆಗಳು ಮತ್ತು ಇತರ ಬಳಕೆದಾರರಿಗೆ ಪಾವತಿ ಹಾಗೂ ಹಣ ವರ್ಗಾವಣೆ ಸೇವೆ ಒದಗಿಸುವುದು.

2015ರ ಆಗಸ್ಟ್​ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 11 ಸಂಸ್ಥೆಗಳಿಗೆ ಪೇಮೆಂಟ್ಸ್ ಬ್ಯಾಂಕ್​ಗಳಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ದೇಶದಲ್ಲಿ ಮೊದಲ ಬಾರಿಗೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಿತು. 2017ರ ಜನವರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಎರಡು ಶಾಖೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮತ್ತು ಫಿನೋ ಪೇಮೆಂಟ್ಸ್ ಬ್ಯಾಂಕ್ ಕೂಡ ಜನಪ್ರಿಯವಾಗಿವೆ. ಪೇಮೆಂಟ್ಸ್ ಬ್ಯಾಂಕ್​ಗಳು ಈಗ ಇನ್ನಷ್ಟು ಹಣಕಾಸು ಒಳಗೊಳ್ಳುವಿಕೆ ಗುರಿ ಹೊಂದಿವೆ. ಅದರಲ್ಲೂ ವಿಶೇಷವಾಗಿ ಉಳಿತಾಯ ಖಾತೆ ಮತ್ತು ಪಾವತಿ ಸೇವೆಗಳ ಮೂಲಕ ವ್ಯಾಪಿಸುತ್ತಿವೆ. ಈ ಬ್ಯಾಂಕ್​ಗಳು ಇತರ ಬ್ಯಾಂಕ್​ಗಳ ರೀತಿಯಲ್ಲೇ ಬಡ್ಡಿ ದರವನ್ನು ನೀಡುತ್ತಿವೆ.

NEFT ಹಾಗೂ RTGS ಸೌಲಭ್ಯ ವಿಸ್ತರಣೆ
ಆರ್​ಬಿಐ ಮಾರ್ಗದರ್ಶಿ ಸೂತ್ರದ ಪ್ರಕಾರ, ಪೇಮೆಂಟ್ ಬ್ಯಾಂಕ್​ಗಳು ಫಿಕ್ಸೆಡ್ ಅಥವಾ ರೆಕರಿಂಗ್ ಡೆಪಾಸಿಟ್ ಸ್ವೀಕರಿಸುವಂತಿಲ್ಲ. ಜತೆಗೆ ಪೇಮೆಂಟ್ಸ್ ಬ್ಯಾಂಕ್​ಗಳು ಯಾವುದೇ ಸಾಲ ಅಥವಾ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ, ಏಕೆಂದರೆ ಅದು ಕೂಡ ಒಂದು ಬಗೆಯ ಅನ್​ಸೆಕ್ಯೂರ್ಡ್ ಪರ್ಸನಲ್ ಲೋನ್ ಆಗುತ್ತದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲ್​ಮೆಂಟ್ (RTGS) ಅನ್ನು ಡಿಜಿಟಲ್ ಪೇಮೆಂಟ್ಸ್ ಸಂಸ್ಥೆಗಳಿಗೂ ವಿಸ್ತರಿಸುತ್ತಿದೆ. ಈ ತನಕ ಬ್ಯಾಂಕ್​ಗಳಲ್ಲಿ ಮಾತ್ರ ಆರ್​ಟಿಜಿಎಸ್ ಮತ್ತು ಎನ್​ಇಎಫ್​ಟಿ ಸೌಕರ್ಯ ಇದ್ದವು.

ಇದನ್ನೂ ಓದಿ: RBI Monetary Policy Highlights: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು

( Individual customers can maintain end of the day maximum balance up to Rs 2 lakhs in payments bank, announced by RBI.)

Published On - 1:21 pm, Wed, 7 April 21