ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್

Ideal time to enter workforce, says Jensen Huang to students: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಕೆಯಿಂದ ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆಂಥ್ರೋಪಿಕ್ ಸಿಇಒ ಡೇರಿಯೋ, ಇಲಾನ್ ಮಸ್ಕ್ ಮೊದಲಾದವರು ಹೇಳುತ್ತಲೇ ಬಂದಿದ್ದಾರೆ. ಆದರೆ, ಎನ್​ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ದಾರೆ. ಇವರ ಪ್ರಕಾರ ಎಐನಿಂದ ಕೆಲಸ ಹೋಗಲ್ಲ, ಆದರೆ, ಎಐ ಬಳಕೆ ಚೆನ್ನಾಗಿ ತಿಳಿದಿರುವವರಿಗೆ ಪ್ರಾಶಸ್ತ್ಯ ಸಿಗುತ್ತದಂತೆ.

ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್
ಜೆನ್ಸೆನ್ ಹುವಾಂಗ್
Image Credit source: PTI

Updated on: May 11, 2026 | 6:15 PM

ನವದೆಹಲಿ, ಮೇ 11: ಟೆಕ್ ಕಂಪನಿಗಳು ಕಳೆದ ಕೆಲ ತಿಂಗಳಿಂದ ಲಕ್ಷದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಕಳೆದ ಐದಾರು ವರ್ಷಗಳಿಂದಲೂ ಈ ಟ್ರೆಂಡ್ ಇದೆ. ಕೋವಿಡ್ ಕಾರಣವೊಡ್ಡಿ ಲೇ ಆಫ್ ಮಾಡಲಾಯಿತು, ಕಾಸ್ಟ್ ಕಟ್ಟಿಂಗ್ ಎಂದು ಹೇಳಿ ಮಾಡಲಾಯಿತು. ಈಗ ಎಐ ಕಾರಣ ನೀಡಲಾಗುತ್ತಿದೆ. ಎಐ ಪ್ರಬಲವಾಗಿ ಬೆಳೆಯುತ್ತಿರುವುದು ಹೌದು. ಆದರೆ, ಎಐನದ್ದೇ ಕಾರಣಕ್ಕೆ ಉದ್ಯೋಗಗಳು ನಶಿಸುತ್ತಿವೆಯಾ? ಟೆಕ್ ಪಂಡಿತರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಇಲಾನ್ ಮಸ್ಕ್ ಅವರಂತಹ ದೊಡ್ಡ ಟೆಕ್ ಉದ್ಯಮಿಗಳೇ ಎಐನಿಂದ ಕೆಲಸ ಹೋಗುತ್ತೆ ಎಂತಿದ್ದಾರೆ. ಆದರೆ, ಇನ್ನೂ ಕೆಲವರು, ಎಐನಿಂದ ಕೆಲಸ ಹೋಗೋದು ನಿಜ. ಆದರೆ, ಹೊಸ ರೀತಿಯ ಉದ್ಯೋಗಗಳ ಸೃಷ್ಟಿಯಾಗುತ್ತೆ ಎಂತಿದ್ದಾರೆ. ಈ ಎರಡನೇ ವರ್ಗದವರ ಮಾತಿಗೆ ಎನ್​ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ (NVidia founder Jensen Huang) ಧ್ವನಿಗೂಡಿಸಿದ್ದಾರೆ.

ಅಮೆರಿಕದ ಪಿನ್ಸೆಲ್ವಿನೇಯಾದ ಕಾರ್ನೆಜೀ ಮೆಲ್ಲಾನ್ ಯೂನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ತೈವಾನ್ ಮೂಲದ ಅಮೆರಿಕನ್ ಉದ್ಯಮಿ ಜೆನ್ಸೆನ್ ಹುವಾಂಗ್, ಯುವಜನರಿಗೆ ಕೆಲಸ ಮಾಡಲು ಇದು ಪ್ರಶಸ್ತ ಸಮಯ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

‘ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ. ಇದಕ್ಕಿಂತ ಹೆಚ್ಚು ಪ್ರಶಸ್ತ ಸಮಯ ಸಿಕ್ಕಲ್ಲ’ ಎಂದು ಶಕ್ತಿಶಾಲಿ ಜಿಪಿಯುಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ವರ್ಗಗಳ ಮಧ್ಯೆ ಇದ್ದ ತಂತ್ರಜ್ಞಾನ ಅಂತರವನ್ನು ಎಐ ತಗ್ಗಿಸುತ್ತಿದೆ ಎಂದು ಹೇಳಿದ ಹುವಾಂಗ್, ಎಲ್ಲಾ ರೀತಿಯ ಜನರು ಏನಾದರೂ ಉಪಯುಕ್ತವಾದುದನ್ನು ನಿರ್ಮಿಸಲು ಎಐ ಅವಕಾಶ ಕೊಡುತ್ತದೆ. ಇದರಿಂದ ಯುವಜನರಿಗೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಎಐನಿಂದ ನಿಮ್ಮ ಕೆಲಸ ಹೋಗೋದಿಲ್ಲ…

ಕಾರ್ನೆಜೀ ಮೆಲ್ಲೋನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜೆನ್ಸೆನ್ ಹುವಾಂಗ್, ಎಐ ನಿಮ್ಮ ಕೆಲಸ ಕಿತ್ತುಕೊಳ್ಳುವುದಿಲ್ಲ. ಆದರೆ, ನಿಮಗಿಂತ ಚೆನ್ನಾಗಿ ಎಐ ಅನ್ನು ಬಳಸುವವರು ನಿಮ್ಮ ಕೆಲಸ ಕಸಿಯುತ್ತಾರೆ ಎಂದು ಹುವಾಂಗ್ ಎಚ್ಚರಿಸಿದ್ದಾರೆ.

ಇದೇ ವೇಳೆ, ಎಐನಿಂದಾಗಿ ಯಾರಿಗೂ ಕೆಲಸವೇ ಇರುವುದಿಲ್ಲ ಎಂದು ಹೇಳುವ ಕೆಲ ಟೆಕ್ ನಾಯಕರ ಅನಿಸಿಕೆಗಳಿಗೆ ಜೆನ್ಸೆನ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮಾತುಗಳು ಸರಿಯಲ್ಲ. ನನ್ನಂತೆ ಸಿಇಒಗಳಾಗಿರುವವರಿಂದ ಈ ಮಾತುಗಳು ಬರುತ್ತಿವೆ. ಸಿಇಒ ಆದಾಕ್ಷಣ ದೇವರಾದರಂತೆ ತಿಳಿದುಬಿಡುತ್ತಾರೆ. ಒಂದು ವಿಚಾರ ತಿಳಿಯುವ ಮುನ್ನವೇ ಎಲ್ಲಾ ತಿಳಿದಿದೆ ಎಂದು ಭಾವಿಸಿಬಿಡುತ್ತಾರೆ ಎಂದು ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಲೇವಡಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us