30 ಕೋಟಿ ರೂ. ಜಾಕ್‌ಪಾಟ್ ಗೆದ್ದ ಅದೃಷ್ಟಶಾಲಿ ಯಾರು ಗೊತ್ತಾ?: ಕೇರಳ ‘ತಿರುವೋಣಂ ಬಂಪರ್’ ಲಾಟರಿ ಫಲಿತಾಂಶ ಪ್ರಕಟ

ಕೇರಳದ ಬಹುನಿರೀಕ್ಷಿತ ತಿರುವೋಣಂ ಬಂಪರ್ 2026 ಲಾಟರಿ ಫಲಿತಾಂಶ ಪ್ರಕಟವಾಗಿದೆ. TL 360615 ಟಿಕೆಟ್‌ಗೆ 30 ಕೋಟಿ ರೂ. ಮೊದಲ ಬಹುಮಾನ ದೊರೆತಿದೆ. ದ್ವಿತೀಯ ಬಹುಮಾನವಾಗಿ ತಲಾ 1 ಕೋಟಿ ರೂ. 20 ವಿಜೇತರಿಗೆ ಸಿಕ್ಕಿದೆ. ವಿಜೇತರಿಗೆ ತೆರಿಗೆ ಕಡಿತದ ನಂತರ ನಿವ್ವಳ 15-17 ಕೋಟಿ ರೂ. ದೊರೆಯಲಿದೆ. ಲಾಟರಿ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ 450 ಕೋಟಿ ರೂ. ಆದಾಯ ಬಂದಿದೆ.

30 ಕೋಟಿ ರೂ. ಜಾಕ್‌ಪಾಟ್ ಗೆದ್ದ ಅದೃಷ್ಟಶಾಲಿ ಯಾರು ಗೊತ್ತಾ?: ಕೇರಳ ತಿರುವೋಣಂ ಬಂಪರ್ ಲಾಟರಿ ಫಲಿತಾಂಶ ಪ್ರಕಟ
ಕೇರಳ ಲಾಟರಿ
Image Credit source: Google

Updated on: Sep 28, 2026 | 12:47 PM

ತಿರುವನಂತಪುರಂ, ಸೆ.28: ಕೇರಳ ರಾಜ್ಯದ ಅತ್ಯಂತ ಜನಪ್ರಿಯ ಹಾಗೂ ಬಹುನಿರೀಕ್ಷಿತ ‘ತಿರುವೋಣಂ ಬಂಪರ್ 2026’ (BR-111) ಲಾಟರಿ ಡ್ರಾ ಫಲಿತಾಂಶ ಶನಿವಾರ ಮಧ್ಯಾಹ್ನ ಪ್ರಕಟಗೊಂಡಿದ್ದು, TL 360615 ಸಂಖ್ಯೆಯ ಟಿಕೆಟ್‌ಗೆ ಬರೋಬ್ಬರಿ 30 ಕೋಟಿ ರೂಪಾಯಿಗಳ ಮೊದಲ ಮಹಾ ಬಹುಮಾನ ಒಲಿದಿದೆ. ತಿರುವನಂತಪುರಂನ ಗೋರ್ಕಿ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆದ ಅಧಿಕೃತ ಡ್ರಾ ಪ್ರಕ್ರಿಯೆಯಲ್ಲಿ ಅದೃಷ್ಟಶಾಲಿ ಸಂಖ್ಯೆಯನ್ನು ಆಯ್ಕೆ ಮಾಡಲಾಯಿತು. ಕಣ್ಣೂರಿನ ‘ಮುತ್ತು ಲಾಟರಿ ಏಜೆನ್ಸಿ’ಯಿಂದ ಈ ಟಿಕೆಟ್ ಮಾರಾಟವಾಗಿದ್ದು, ಬಹುಮಾನ ಗೆದ್ದ ವಿಜೇತನ ವಿವರ ಇನ್ನೂ ಗೌಪ್ಯವಾಗಿದೆ.

ಮೊದಲ ಬಹುಮಾನ ಮಾತ್ರವಲ್ಲದೆ, ದ್ವಿತೀಯ ಬಹುಮಾನವಾಗಿ ತಲಾ 1 ಕೋಟಿ ರೂಪಾಯಿಗಳನ್ನು 20 ಲಾಟರಿ ಟಿಕೆಟ್‌ಗಳಿಗೆ ನೀಡಲಾಗಿದೆ. ದ್ವಿತೀಯ ಬಹುಮಾನ ಪಡೆದ ಟಿಕೆಟ್ ಸಂಖ್ಯೆಗಳ ವಿವರ ಇಲ್ಲಿದೆ. TA 957486, TB 642974, TC 810428, TD 305900, TE 328611, TG 805847, TH 902375, TJ 150990, TK 375661, TL 888018, TA 300530, TB 439962, TC 952340, TD 279706, TE 970611, TG 355002, TH 192282, TJ 978616, TK 976006, TL 792519. ತೃತೀಯ ಬಹುಮಾನ ಹಾಗೂ ಸಮಾಧಾನಕರ ಬಹುಮಾನಗಳ ಪೂರ್ಣ ಪಟ್ಟಿಯನ್ನು ಲಾಟರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

30 ಕೋಟಿ ಮೊತ್ತದ ಮೊದಲ ಬಹುಮಾನ ಟಿಎಲ್ 360615 ಟಿಕೆಟ್‌

ವಿಜೇತ ಟಿಕೆಟ್ ಅನ್ನು ಕಣ್ಣೂರಿನ ಚಕ್ಕರಕ್ಕಲ್‌ನಲ್ಲಿ ಮಾರಾಟ ಮಾಡಲಾಯಿತು , ಲಾಟರಿ ಏಜೆಂಟ್ ಅನೀಶ್ ಟಿಕೆಟ್ ಮಾರಾಟ ಮಾಡಿದರು. ಜಾಕ್‌ಪಾಟ್ ಗೆದ್ದ ವಿಜೇತನಿಗೆ ಇಡೀ ₹30 ಕೋಟಿ ಮೊತ್ತ ಕೈಗೆ ಸಿಗುವುದಿಲ್ಲ. ಭಾರತೀಯ ಆದಾಯ ತೆರಿಗೆ ಕಾಯ್ದೆಯಡಿ ಲಾಟರಿ ಬಹುಮಾನಗಳು ‘ಇತರ ಮೂಲಗಳ ಆದಾಯ’ ವ್ಯಾಪ್ತಿಗೆ ಬರುತ್ತವೆ.ಬಹುಮಾನದ ಒಟ್ಟು ಮೊತ್ತದಿಂದ ಶೇಕಡಾ 30% ರಷ್ಟು ಟಿಡಿಎಸ್ (TDS) ಮೊತ್ತವನ್ನು ಮೂಲದಲ್ಲೇ ಕಡಿತಗೊಳಿಸಲಾಗುತ್ತದೆ. ಟಿಕೆಟ್ ಮಾರಾಟ ಮಾಡಿದ ಏಜೆಂಟ್‌ಗೆ ಶೇ. 10ರಷ್ಟು ಕಮಿಷನ್ ನೀಡಲಾಗುತ್ತದೆ. ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಸೆಸ್ ಹಾಗೂ ಸರ್ಚಾರ್ಜ್‌ಗಳು ಅನ್ವಯಿಸುತ್ತವೆ. ಎಲ್ಲಾ ಶಾಸನಬದ್ಧ ತೆರಿಗೆ ಕಡಿತಗಳ ನಂತರ ವಿಜೇತನ ಬ್ಯಾಂಕ್ ಖಾತೆಗೆ ಸುಮಾರು 15 ರಿಂದ 17 ಕೋಟಿ ರೂಪಾಯಿಗಳಷ್ಟು ನಿವ್ವಳ ಮೊತ್ತ ಜಮೆಯಾಗಲಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಭರ್ಜರಿ ಕುಸಿತ; ಬೆಳ್ಳಿ ಬೆಲೆಯೂ ಇಳಿಕೆ

ಕೇರಳ ಸರ್ಕಾರವು ಈ ಬಾರಿಯ ಓಣಂ ಬಂಪರ್‌ಗಾಗಿ ಒಟ್ಟು 90 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿತ್ತು. ಒಂದು ಟಿಕೆಟ್‌ಗೆ 500 ರೂಪಾಯಿ ಬೆಲೆ ನಿಗದಿಪಡಿಸಲಾಗಿದ್ದು, ಎಲ್ಲಾ 90 ಲಕ್ಷ ಟಿಕೆಟ್‌ಗಳೂ ಸಂಪೂರ್ಣವಾಗಿ ಮಾರಾಟವಾಗಿವೆ. ಇದರಿಂದಾಗಿ ಕೇರಳ ಸರ್ಕಾರಕ್ಕೆ ಲಾಟರಿ ಮಾರಾಟದಿಂದ ಬರೋಬ್ಬರಿ 450 ಕೋಟಿ ರೂಪಾಯಿಗಳ ಆದಾಯ ಹರಿದುಬಂದಿದೆ. ದೇಶದಲ್ಲೇ ಅತ್ಯಂತ ಯಶಸ್ವಿ ರಾಜ್ಯ ಲಾಟರಿ ಮಾದರಿ ಹೊಂದಿರುವ ಕೇರಳ ಸರ್ಕಾರ, ಈ ಹಣದ ಬಹುಪಾಲನ್ನು ಅಭಿವೃದ್ಧಿ ಹಾಗೂ ಉಚಿತ ಆರೋಗ್ಯ ಯೋಜನೆಗಳಿಗೆ ಬಳಸಿಕೊಳ್ಳುತ್ತದೆ. ನಿಗದಿತ ಅವಧಿಯೊಳಗೆ ವಿಜೇತರು ತಮ್ಮ ಮೂಲ ಟಿಕೆಟ್, ಆಧಾರ್ ಕಾರ್ಡ್ ಹಾಗೂ ಪಾನ್‌ಕಾರ್ಡ್ ದಾಖಲೆಗಳನ್ನು ಲಾಟರಿ ಇಲಾಖೆಗೆ ಸಲ್ಲಿಸಿ ಬಹುಮಾನದ ಮೊತ್ತವನ್ನು ಕ್ಲೈಮ್ ಮಾಡಿಕೊಳ್ಳಬೇಕಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:30 pm, Mon, 28 September 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us