ಕೃಷಿ
ನವದೆಹಲಿ, ಫೆಬ್ರುವರಿ 13: ನರೇಂದ್ರ ಮೋದಿ ಪ್ರಧಾನಿಯಾಗಿ ದೇಶದ ಜನತೆಗೆ ನೀಡಿದ ಭರವಸೆಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಒಂದು. ರೈತರ ಆದಾಯ (farmers income) ಬೆಳೆದಿದೆಯಾದರೂ ದ್ವಿಗುಣಗೊಂಡಿಲ್ಲ ಎನ್ನುವುದು ವಾಸ್ತವ. ಆದರೆ, ಕೃಷಿ ಕ್ಷೇತ್ರ ಹಾಗೂ ರೈತರಿಗೆ ಉತ್ತೇಜನ ಕೊಡಲು ಸರ್ಕಾರದಿಂದ ಪ್ರಯತ್ನಗಳಂತೂ ನಡೆದಿವೆ. ಹೊಸ ತಂತ್ರಜ್ಞಾನ ಮತ್ತು ಬಂಡವಾಳ ಕೃಷಿ ಕ್ಷೇತ್ರಕ್ಕೆ ಹರಿದುಬರುವಂತೆ ಮಾಡಲಾಗುತ್ತಿದೆ. ಖಾಸಗಿ ವಲಯ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದೆ.
ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಮತ್ತು ರೈತರ ಆದಾಯ ಹೆಚ್ಚಿಸಲು ನೆರವಾಗುವಂತಹ ಕೆಲ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಇಂಥ ಯೋಜನೆಗಳ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರ ರೈತರಿಗಾಗಿ ಕೈಗೊಂಡಿರುವ ಯೋಜನೆಗಳಿವು
- ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಜಮೀನು ಹೊಂದಿರುವ ಪ್ರತಿಯೊಬ್ಬ ರೈತರಿಗೂ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ.
- ಬೆಳೆ ವಿಮೆ ಯೋಜನೆ: ಪಿಎಂ ಫಸಲ್ ಬಿಮಾ ಯೋಜನೆ ಮೂಲಕ ರೈತರ ಬೆಳೆಗೆ ಬಹಳ ಕಡಿಮೆ ದರದಲ್ಲಿ ಬೆಳೆ ವಿಮೆಯ ಸೇವೆ ಒದಗಿಸಲಾಗುತ್ತಿದೆ.
- ನೀರಾವರಿ ಯೋಜನೆ: ಪಿಎಂ ಕೃಷಿ ಸಂಚಯ ಯೋಜನೆ (ಪಿಎಂ ಕೆಎಸ್ವೈ) ಅಡಿಯಲ್ಲಿ ರೈತರಿಗೆ ನೀರಾವರಿ ಸೌಲಭ್ಯ ನೀಡಲಾಗುತ್ತದೆ.
ಇದನ್ನೂ ಓದಿ: ಸೂರ್ಯೋದಯ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್
- ಸೌಕರ್ಯ ಅಭಿವೃದ್ಧಿ: ಒಂದು ಲಕ್ಷ ಕೋಟಿ ರೂ ಮೊತ್ತದ ಕೃಷಿ ಇನ್ಫ್ರಾಸ್ಟ್ರಕ್ಚರ್ ಫಂಡ್ ಮೂಲಕ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ.
- ಕ್ರೆಡಿಟ್ ಕಾರ್ಡ್: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಾಲ ಸೌಲಭ್ಯ
- ರೈತ ಉತ್ಪಾದಕರ ಸಂಘಟನೆ: ದೇಶಾದ್ಯಂತ ಹತ್ತು ಸಾವಿರ ಎಫ್ಪಿಒಗಳ (fpo) ಮೂಲಕ ರೈತರನ್ನು ಆರ್ಥಿಕವಾಗಿ ಬಲಪಡಿಸುವ ಮತ್ತು ಮಾರುಕಟ್ಟೆ ಬೆಳೆಸುವ ಆಶಯ ಇದೆ.
- ಸುಸ್ಥಿರ ಕೃಷಿ: ರಾಷ್ಟ್ರೀಯ ಸುಸ್ಥಿರ ಕೃಷಿಗಾರಿಕೆ ಯೋಜನೆ ಮೂಲಕ ಬದಲಾದ ಹವಾಮಾನಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ತಂತ್ರಗಾರಿಕೆ ರೂಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
- ಡ್ರೋನ್ ಬಳಕೆ: ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಮಾಡಲು ಸರ್ಕಾರ ಗಮನ ಕೊಡುತ್ತಿದೆ. ಇದು ಈ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆ ತರುವ ನಿರೀಕ್ಷೆ ಇದೆ.
- ಜೇನು ಸಾಕಾಣಿಕೆ ಯೋಜನೆ, ರಾಷ್ಟ್ರೀಯ ಗೋಕುಲ ಯೋಜನೆ, ನೀಲಿ ಕ್ರಾಂತಿ, ಬಡ್ಡಿ ಸಬ್ಸಿಡಿ ಯೋಜನೆ, ಕೃಷಿ ಅರಣ್ಯಗಾರಿಕೆ, ಬಿದಿರು ಮರುರಚನೆ ಯೋಜನೆ, ಜಲಾನಯನ ಅಭಿವೃದ್ಧಿ ಯೋಜನೆ ಇತ್ಯಾದಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ