ನಮ್ಮ ವಾಣಿಜ್ಯ ಲೋಕದಲ್ಲಿ ಬಹಳ ರಸವತ್ತಾದ ಮತ್ತು ಆಳಕ್ಕೆ ಹೋದಷ್ಟೂ ಬಗೆಬಗೆದು ಹಾಕುವಷ್ಟು ಕುತೂಹಲದ ಸಂಗತಿಗಳಿವೆ. ಅದರಲ್ಲೂ ಷೇರುಪೇಟೆ (Stock Market) ಎಂಬುದು ಬಹಳ ಸಂಕೀರ್ಣವಾದ ಮತ್ತು ಕಲರ್ ಕಲರ್ ಕನಸುಗಳನ್ನು ಕಟ್ಟಿಕೊಡುವ ಲೋಕ. ಷೇರುಪೇಟೆ ಬಹಳ ಮಂದಿಯಿಂದ ಬಹಳ ಮಂದಿ ಲಕ್ಷಾಧಿಪತಿಗಳಾಗಿದ್ದಾರೆ. ಲಕ್ಷಾಧಿಪತಿಗಳಾದವರು ಕೋಟ್ಯಾಧಿಪತಿಗಳಾಗಿದ್ದಾರೆ. ದಿವಂಗತ ರಮೇಶ್ ಜುಂಝುನವಾಲ ಅವರಂಥವರು ಸಾವಿರಾರು ಕೋಟಿ ರೂ ಷೇರುಸಂಪತ್ತು ಗಳಿಸಿದ್ದಾರೆ. ಈ ಸಾಧಕರ ಯಶಸ್ಸಿನ ಮಧ್ಯೆ ಷೇರುಗಳಿಂದ ನಷ್ಟಹೊಂದಿ ಬೀದಿಗೆ ಬಿದ್ದವರು ಎಲೆಮರೆಕಾಯಿಯಾಗಿ ಹೋಗಿರುತ್ತಾರೆ. ಮಲ್ಟಿಬ್ಯಾಗರ್ ಷೇರು ಎಂದು ಭಾವಿಸಿ ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಹಲವರು. ಒಂದು ವೇಳೆ ನಾವು ಷೇರಿನಲ್ಲಿ ಹೂಡಿಕೆ ಮಾಡಿದ ಕಂಪನಿ ದಿಢೀರನೇ ಮುಚ್ಚಿಹೋದರೆ, ಅಥವಾ ದಿವಾಳಿ ಅರ್ಜಿ (Filing Bankruptcy) ಹಾಕಿದರೆ ಏನಾಗುತ್ತದೆ? ಇಂಥ ರೀತಿಯ ಪ್ರಶ್ನೆ ಮತ್ತು ಸಂದೇಹಗಳನ್ನು ಗೂಗಲ್ ಸರ್ಚ್ನಲ್ಲಿ ಹೇರಳವಾಗಿ ಕೇಳಲಾಗುತ್ತಿರುವುದು ಬಹಳ ಕುತೂಹಲ.
ನಾವು ಷೇರು ಹೂಡಿಕೆ ಮಾಡಿರುವ ಕಂಪನಿ ದಿಢೀರನೇ ಮುಚ್ಚಿಹೋದರೆ ಆ ಕಂಪನಿ ಷೇರುಪೇಟೆಯಿಂದ ಡೀಲಿಸ್ಟ್ ಆಗುತ್ತದೆ. ಅದರ ಷೇರುಗಳಿಗೆ ಯಾವ ಮೌಲ್ಯವೂ ಇರುವುದಿಲ್ಲ. ಅದರ ಬೆಲೆ ಶೂನ್ಯವಾಗುತ್ತದೆ.
ಮುಚ್ಚಿಹೋದ ಆ ಕಂಪನಿಯ ಆಸ್ತಿಪಾಸ್ತಿಗಳನ್ನು ಸರ್ಕಾರ ಜಫ್ತಿ ಮಾಡಿ ಹರಾಜಿನ ಮೂಲಕ ಮಾರುತ್ತದೆ. ಅದರಿಂದ ಬಂದ ಹಣವನ್ನು ಸಾಲಗಾರರಿಗೆ ಹಂಚಲಾಗುತ್ತದೆ. ಆ ಕಂಪನಿಗೆ ಸಾಲ ಕೊಟ್ಟ ಬ್ಯಾಂಕ್ ಮೊದಲಾದ ಸಂಸ್ಥೆಗಳಿಗೆ ಈ ಹಣದಲ್ಲಿ ಆದ್ಯತೆ ಸಿಗುತ್ತದೆ. ಕಂಪನಿಯ ಪ್ರೊಮೋಟರುಗಳ ವಾರಸುದಾರರಿಗೆ ಒಂದಷ್ಟು ಹಣ ಹೋಗುತ್ತದೆ. ಇದು ಬಿಟ್ಟು ಇನ್ನಷ್ಟು ಹಣ ಉಳಿದಿದ್ದರೆ ಅದನ್ನು ಷೇರುದಾರರಿಗೆ ಸಮಾನವಾಗಿ ಹಂಚಲಾಗುತ್ತದೆ. ಆದರೆ, ಸಾಮಾನ್ಯವಾಗಿ ಷೇರುದಾರರಿಗೆ ಶೇ. 10ರಷ್ಟು ಹಣ ಸಿಗುವುದೂ ಕಷ್ಟವೇ.
ಒಂದು ಕಂಪನಿಯು ಸಾಲಗಾರರ ಕಾಟ ತಾಳಲಾಗದೇ ಪ್ರಾಧಿಕಾರದ ಬಳಿ ಬ್ಯಾಂಕ್ರಪ್ಸಿ ಅರ್ಜಿ ಸಲ್ಲಿಸುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಷೇರುಬೆಲೆ ತೀರಾ ಪ್ರಪಾತಕ್ಕೆ ಬೀಳುವುದು ಸಹಜ. ಬ್ಯಾಂಕ್ರಪ್ಸಿ ಅರ್ಜಿ ಅಂದರೆ ತಾನು ಸಾಲ ತೀರಿಸುವಷ್ಟು ಹಣಕಾಸು ಬಲ ಸದ್ಯಕ್ಕೆ ಹೊಂದಿಲ್ಲ. ಸಮಯಾವಕಾಶ ಕೊಟ್ಟರೆ ಹಂತ ಹಂತವಾಗಿ ಸಾಲ ತೀರಿಸುತ್ತೇನೆ ಎಂಬಿತ್ಯಾದಿ ಕೋರಿಕೆ ಮಾಡಲಾಗುತ್ತದೆ. ಇದಕ್ಕೆ ಪ್ರಾಧಿಕಾರ ಒಪ್ಪಿದರೆ ಆ ಕಂಪನಿ ಮತ್ತೆ ಚೇತರಿಸಿಕೊಳ್ಳಲು ಯತ್ನಿಸಬಹುದು.
ಇಂತಹ ಸಂದರ್ಭದಲ್ಲಿ ಕೆಲ ಕಂಪನಿಗಳು ಹಳೆಯ ಷೇರುಗಳನ್ನು ರದ್ದು ಮಾಡಿ ಹೊಸ ಷೇರು ಬಿಡುಗಡೆ ಮಾಡಬಹುದು. ಆಗ ಹಳೆದ ಷೇರುಗಳನ್ನು ಖರೀದಿಸಿದ್ದವರಿಗೆ ಏನೂ ದೊರಕುವುದಿಲ್ಲ.
ಇದನ್ನೂ ಓದಿ: RBI: ಮೊಬೈಲ್ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್ಗೂ ಬರಲಿದೆಯಾ? ಆರ್ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?
ಇನ್ನೂ ಕೆಲ ಕಂಪನಿಗಳು ದಿವಾಳಿತನದಿಂದ ಚೇತರಿಸಿಕೊಳ್ಳುವಾಗ ಷೇರುಗಳನ್ನು ಹಾಗೇ ಮುಂದುವರಿಸಬಹುದು. ಆಗ ಷೇರುಬೆಲೆ ಕ್ರಮೇಣವಾಗಿ ಮೇಲೇರಿ ಷೇರುದಾರರಿಗೆ ನಿರಾಳತೆ ತರಲೂಬಹುದು.
ಬೇರೆ ಬೇರೆ ಕಾರಣಗಳಿಗೆ ಕೆಲ ಕಂಪನಿಗಳು ಷೇರುಪೇಟೆಯಿಂದ ಡೀಲಿಸ್ಟ್ ಆಗಬಹುದು. ಸ್ಟಾಕ್ ಮಾರ್ಕೆಟ್ನಿಂದ ಡೀಲಿಸ್ಟ್ ಆಗುವ ಷೇರಿಗೆ ಯಾವುದೇ ಮೌಲ್ಯ ಇರುವುದಿಲ್ಲ. ಈ ಸಂದರ್ಭದಲ್ಲಿ ಷೇರುದಾರರು ತಮ್ಮ ಪಾಲಿನ ಷೇರುಗಳನ್ನು ಕಂಪನಿಗೆ ಮಾರಲು ಪ್ರಯತ್ನಿಸಬಹುದು. ಅದೂ ಕಂಪನಿ ಅದನ್ನು ಖರೀದಿಸಲು ಒಪ್ಪಿದರೆ ಷೇರುದಾರರ ಅದೃಷ್ಟ.
ಯಾವುದೇ ಕಂಪನಿಯ ಷೇರಿನ ಮೇಲೆ ಹಣ ಹೂಡಿಕೆ ಮಾಡುವ ಮೊದಲು ಆ ಕಂಪನಿಯ ವ್ಯವಹಾರ ಎಷ್ಟಿದೆ, ಅದು ಇರುವ ಕ್ಷೇತ್ರದ ಭವಿಷ್ಯ ಹೇಗಿದೆ, ಕಂಪನಿಯ ಆಡಳಿತವರ್ಗ ಯಾವುದು ಇವೇ ಮುಂತಾದ ಅಂಶಗಳನ್ನು ಗಮನಿಸುವುದು ಬಹಳ ಉತ್ತಮ ಎನ್ನುತ್ತಾರೆ ಹೂಡಿಕೆತಜ್ಞರು. ಇಂಥವನ್ನು ಅವಲೋಕಿಸಲೆಂದೇ ಏಜೆನ್ಸಿಗಳಿರುತ್ತವೆ. ಇವುಗಳ ಸಹಾಯ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Thu, 6 July 23