ನವದೆಹಲಿ: ಷೇರುಪೇಟೆ ವಹಿವಾಟು, ಬ್ಯಾಂಕ್ ವಹಿವಾಟು, ಇನ್ಷೂರೆನ್ಸ್, ಯುಪಿಐ, ಕ್ರೆಡಿಟ್ ಕಾರ್ಡ್ ಇತ್ಯಾದಿ ಹಣಕಾಸು ಸೇವೆಗಳನ್ನು (Financial Services) ಮಹಿಳೆಯರು ಬಳಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಆದರೆ, ಒಟ್ಟಾರೆ ಹಣಕಾಸು ಸೇವೆಗಳನ್ನು ಮಹಿಳೆಯರು (Women) ಬಳಸುತ್ತಿರುವ ಪ್ರಮಾಣ ಶೇ. 1ಕ್ಕಿಂತಲೂ ಕಡಿಮೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಅಂಗಸಂಸ್ಥೆ ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ (Reserve Bank Innovation Hub Study) ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರ ಹಣಕಾಸು ಸೇವೆ ಬಳಕೆಯ ಪ್ರವೃತ್ತಿಯನ್ನು ಅಧ್ಯಯನ ಮಾಡಲಾಗಿದೆ. ಹಣಕಾಸು ಸೇವೆಗಳನ್ನು ಒದಗಿಸುವ 5,000 ರೀಟೇಲ್ ಸ್ಟೋರ್ಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.
ಈ ಸಮೀಕ್ಷಾ ವರದಿ ಪ್ರಕಾರ, ಇಂಥ ರೀಟೇಲ್ ಸ್ಟೋರ್ಗಳಲ್ಲಿ ಸಿಗುವ ಹಣಕಾಸು ಸೇವೆಗಳ ಪೈಕಿ ಮಹಿಳೆಯರು ಅತಿ ಹೆಚ್ಚು ಉಪಯೋಗಿಸುವುದು ಕ್ಯಾಶ್ ವಿತ್ಡ್ರಾವಲ್, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ ಸೇವೆಗಳನ್ನಂತೆ. ಎಂಟರ್ಟೈನ್ಮೆಂಟ್ ಸೇವೆಗಳನ್ನೂ ಹೆಚ್ಚು ಉಪಯೋಗಿಸುತ್ತಾರೆ. ಹಾಗೆಯೇ, ಪ್ಯಾನ್ ಕಾರ್ಡ್ ಅಪ್ಲಿಕೇಶನ್, ಇ–ಕಾಮರ್ಸ್, ಪ್ರವಾಸ ಸೇವೆಗಳಿಗೂ ಮಹಿಳೆಯರು ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.
ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರಮುಖ ಮತ್ತು ಅತಿದೊಡ್ಡ ಕಾರಣ ಮಕ್ಕಳ ಶಿಕ್ಷಣ. ಶೇ. 68ರಷ್ಟು ಮಹಿಳೆಯರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗೆಯೇ, ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸಲು ಮತ್ತು ಮನೆಗೆ ಎಲೆಕ್ಟ್ರಾನಿಕ್ ಐಟಂಗಳನ್ನು ತರುವುದು ಮಹಿಳೆಯರ ಹಣ ಉಳಿತಾಯಕ್ಕೆ ಇತರ ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ: Meta Layoffs- ಫೇಸ್ಬುಕ್ಗೆ ಶೇ.13ರಷ್ಟು ಲೇ ಆಫ್ ಸಾಕಾಗಿಲ್ಲ, ಮತ್ತೊಂದು ಸುತ್ತಿನ ಫೈರಿಂಗ್ಗೆ ಮೆಟಾ ಅಣಿ
18ರಿಂದ 40 ವರ್ಷ ವಯೋಮಾನದ ಮಹಿಳೆಯರು ಇದೀಗ ಡಿಜಿಟಲ್ ತಂತ್ರಜ್ಞಾನಕ್ಕೆ ಚೆನ್ನಾಗಿಯೇ ಒಗ್ಗಿಹೋಗಿದ್ದಾರೆ. ಶೇ. 60ರಷ್ಟು ಮಹಿಳೆಯರ ಕೈಯಲ್ಲಿ ಸ್ಮಾರ್ಟ್ಫೋನ್ಗಳಿವೆ. ಬಹಳ ಮಂದಿ ಕೈಯಲ್ಲಿ ಯುಪಿಐ ವಾಲಟ್ ಆ್ಯಪ್ಗಳೂ ಇವೆ. ಆದರೆ, ನಿತ್ಯದ ಹಣಕಾಸು ವಹಿವಾಟಿಗೆ ಯುಪಿಐ ಬಳಕೆ ಮಾಡುವ ಮಹಿಳೆಯರ ಪ್ರಮಾಣ ಶೇ. 5ರಿಂದ 20 ಇರಬಹುದು. ಶೇ. 48ರಷ್ಟು ಮಹಿಳೆಯರು ನಗದು ವಹಿವಾಟಿಗೇ ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು ಅಧ್ಯಯನದಿಂದ ಗೊತ್ತಾಗುತ್ತದೆ.
ಇನ್ನು, ಬ್ಯಾಂಕ್ ಮತ್ತು ಎಟಿಎಂಗಳಿಗೆ ಹೋಗುವ ಮಹಿಳೆಯರ ಪೈಕಿ ಶೇ. 78ರಷ್ಟು ಮಂದಿ ಕ್ಯಾಷ್ ವಿತ್ಡ್ರಾ ಮಾಡಲು ಮಾತ್ರ ಹೋಗುತ್ತಾರಂತೆ. ರಿಸರ್ವ್ ಬ್ಯಾಂಕ್ ಇನೋವೇಶನ್ ಹಬ್ನ ಈ ಸಮೀಕ್ಷೆ ಪ್ರಕಾರ ಶೇ. 74ರಷ್ಟು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸುತ್ತಾರೆ. ಆದರೆ, ಅವರ ವಹಿವಾಟು ಏನಿದ್ದರೂ ಕ್ಯಾಷ್ ಹಿಂಪಡೆಯುವುದು ಅಥವಾ ಕ್ಯಾಷ್ ಡೆಪಾಸಿಟ್ ಮಾಡುವುದು ಇವೇ ಹೆಚ್ಚಾಗಿರುತ್ತವೆ. ಕುತೂಹಲದ ಸಂಗತಿ ಎಂದರೆ ಶೇ. 20ಕ್ಕಿಂತಲೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳನ್ನು ಅವರ ಗಂಡಂದಿರೇ ನಿರ್ವಹಿಸುತ್ತಾರಂತೆ.
ಇನ್ನು, ಇನ್ಷೂರೆನ್ಸ್ ಪಾಲಿಸಿಗಳಿಗೆ ಮಹಿಳೆಯರು ಆದ್ಯತೆ ಕೊಡುತ್ತಾರಾದರೂ ಅದು ಜೀವ ವಿಮೆ ಮತ್ತು ಮೆಡಿಕಲ್ ಇನ್ಷೂರೆನ್ಸ್ಗಳಿಗೆ ಮಾತ್ರ. ಬೇರೆ ರೀತಿಯ ವಿಮೆಗಳ ಬಗ್ಗೆ ಮಹಿಳೆಯರಿಗೆ ಹೆಚ್ಚು ಆಸಕ್ತಿ ಇಲ್ಲ.