ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ

Kotak Mahindra Founder Uday Kotak Predicts India's Economic Shock: ಉದಯ್ ಕೋಟಕ್ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ತೈಲ ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಗೆ ದೊಡ್ಡ ಆಘಾತ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್ ತಲುಪಿ, ಹಣದುಬ್ಬರ ಮತ್ತು ಆಮದು ವೆಚ್ಚ ಹೆಚ್ಚಿಸಲಿದೆ. ಮುಂಚಿತವಾಗಿ ಸಿದ್ಧತೆ ಮತ್ತು ಆರ್ಥಿಕ ಶಿಸ್ತು ಅತ್ಯಗತ್ಯ ಎಂದು ಅವರು ಸರ್ಕಾರ ಹಾಗೂ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ
ಉದಯ್ ಕೋಟಕ್
Image Credit source: PTI

Updated on: May 12, 2026 | 8:23 PM

ನವದೆಹಲಿ, ಮೇ 12: ಪ್ರಖ್ಯಾತ ಉದ್ಯಮಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸ್ಥಾಪಕ ಉದಯ್ ಕೋಟಕ್ (Uday Kotak) ಅವರು ಪಶ್ಚಿಮ ಏಷ್ಯಾದಲ್ಲಿ (ವಿಶೇಷವಾಗಿ ಅಮೆರಿಕ ಮತ್ತು ಇರಾನ್ ನಡುವೆ) ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಭೀಕರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿನಗರಿಯಲ್ಲಿ ನಡೆದ ‘ಸಿಐಐ ವಾರ್ಷಿಕ ಸಮ್ಮೇಳನ 2026’ರಲ್ಲಿ ಮಾತನಾಡಿದ ಅವರು, ಭಾರತಕ್ಕೆ ದೊಡ್ಡ ಮಟ್ಟದ ಆರ್ಥಿಕ ಆಘಾತ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆ ಅಷ್ಟಾಗಿ ಕಂಡಿಲ್ಲ. ಆದರೆ, “ನಿಜವಾದ ಆಘಾತ ಈಗ ಬರಲಿದೆ ಮತ್ತು ಅದು ಬಹಳ ದೊಡ್ಡದಾಗಿರಲಿದೆ” ಎಂದು ಕೋಟಕ್ ಹೇಳಿದ್ದಾರೆ. ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಅಸ್ಥಿರತೆ ಶೀಘ್ರದಲ್ಲೇ ಜನಸಾಮಾನ್ಯರಿಗೆ ತಟ್ಟಲಿದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: I4C ಮತ್ತು RBIH ಮಧ್ಯೆ ಒಪ್ಪಂದ; ಭಾರತೀಯರಿಗೆ ಅತ್ಯಾಧುನಿಕ ಸೈಬರ್ ರಕ್ಷಾ ಕವಚ: ಅಮಿತ್ ಶಾ ಘೋಷಣೆ

ತೈಲ ಬೆಲೆ ಬ್ಯಾರಲ್​ಗೆ 60 ಡಾಲರ್ ಇದ್ದಾಗ ಚಾಲ್ತಿ ಖಾತೆ ಕೊರತೆ ಕಡಿಮೆ ಇತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪುವ ಸಾಧ್ಯತೆಯಿದೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿ, ಹಣದುಬ್ಬರಕ್ಕೆ (ಬೆಲೆ ಏರಿಕೆ) ಕಾರಣವಾಗಲಿದೆ. ಸಾಮಾನ್ಯ ಜನರ ದೈನಂದಿನ ಖರ್ಚುಗಳು ಇದರಿಂದ ಹೆಚ್ಚಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಷ್ಟದ ಕಾಲ ಬರುವ ಮುನ್ನವೇ ನಾವು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

“ಸಂಕಷ್ಟ ಬಂದ ಮೇಲೆ ಪ್ರತಿಕ್ರಿಯಿಸುವುದಕ್ಕಿಂತ, ಅದು ಬರುವ ಮೊದಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ” ಎಂದು ಅವರು ಉದ್ಯಮಿಗಳಿಗೆ ಮತ್ತು ಸರ್ಕಾರಕ್ಕೆ ಸೂಚಿಸಿದ್ದಾರೆ.

ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ

ವಿಶ್ವವು ಈಗ ಸಹಕಾರದ ಬದಲು ತಮ್ಮ ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಡುವ ‘ಬುಡಕಟ್ಟು’ (Tribal) ಮನಸ್ಥಿತಿಗೆ ಮರಳುತ್ತಿದೆ. ವ್ಯಾಪಾರ ಮಾರ್ಗಗಳ ನಿಯಂತ್ರಣಕ್ಕಾಗಿ ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿರುವುದು ಭಾರತದಂತಹ ಆಮದು ಅವಲಂಬಿತ ದೇಶಗಳಿಗೆ ಸವಾಲಾಗಿದೆ. ಇಂಥ ಹೊತ್ತಲ್ಲಿ ಉದಯ್ ಕೋಟಕ್ ಅವರ ಈ ಎಚ್ಚರಿಕೆಯ ಮಾತುಗಳು ಕೇಳಿಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಷೇರುಬಜಾರು ಅಲುಗಾಟ, 4-5 ದಿನದಲ್ಲಿ ಹೂಡಿಕೆದಾರರಿಗೆ 11 ಲಕ್ಷ ಕೋಟಿ ರೂ ನಷ್ಟ; ಬೇರೆ ದೇಶಗಳಲ್ಲಿ ಹೆಚ್ಚಿದರೂ ಭಾರತದಲ್ಲಿ ಕುಸಿತ ಯಾಕೆ?

ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಇಂಧನ ಬಳಕೆಯನ್ನು ಕಡಿಮೆ ಮಾಡಲು, ಸಾರ್ವಜನಿಕ ಸಾರಿಗೆ ಬಳಸಲು ಮತ್ತು ವಿದೇಶಿ ಪ್ರವಾಸಗಳನ್ನು ಮುಂದೂಡಲು ನಾಗರಿಕರಲ್ಲಿ ಮನವಿ ಮಾಡಿದ್ದರು. ಉದಯ್ ಕೋಟಕ್ ಅವರು ಈ ಆರ್ಥಿಕ ಶಿಸ್ತಿನ ಕರೆಯನ್ನು ಬೆಂಬಲಿಸಿದ್ದು, ದೇಶವು ತನ್ನ ಶಕ್ತಿಯ ಮೀರಿ ಖರ್ಚು ಮಾಡಬಾರದು ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us