
ನವದೆಹಲಿ, ಅಕ್ಟೋಬರ್ 9: ಅಮೆರಿಕದಲ್ಲಿ ಮೈಕ್ರೋಸಾಫ್ಟ್, ಅಡೋಬ್, ಕಾಗ್ನಿಸೆಂಟ್ ಮತ್ತು ಭಾರತದ ದೈತ್ಯ ಐಟಿ ಸಂಸ್ಥೆಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ ಹಾಗೂ ಎಚ್‌ಸಿಎಲ್ ಕಂಪನಿಗಳಿಗೆ ಗ್ರೀನ್ ಕಾರ್ಡ್‌ಗೆ ಆಧಾರವಾಗಿರುವ ‘ಶಾಶ್ವತ ಕಾರ್ಮಿಕ ಪ್ರಮಾಣೀಕರಣ’ (PERM Process) ಪ್ರಕ್ರಿಯೆಯನ್ನು ಅಮಾನತುಗೊಳಿಸಿರುವ ಅಮೆರಿಕ ಸರ್ಕಾರದ ಕ್ರಮವನ್ನು ಭಾರತೀಯ ಐಟಿ ಉದ್ಯಮಗಳ ಒಕ್ಕೂಟವಾದ ನಾಸ್ಕಾಮ್ ತೀವ್ರವಾಗಿ ಖಂಡಿಸಿದೆ.
ಅಮೆರಿಕ ಸರ್ಕಾರದ ನಿರ್ಧಾರಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ನಾಸ್ಕಾಮ್, “ವಲಸೆ (Immigration) ಮತ್ತು ಜಾಗತಿಕ ಕುಶಲ ತಂತ್ರಜ್ಞರ ಸಂಚಾರ (Skilled Talent Mobility) ಎನ್ನುವುದು ಸಂಪೂರ್ಣವಾಗಿ ಎರಡು ವಿಭಿನ್ನ ಆಯಾಮಗಳು. ಇವೆರಡನ್ನೂ ಒಂದೇ ಕಣ್ಣಿನಿಂದ ನೋಡುವುದು ಸರಿಯಲ್ಲ” ಎಂದು ಪುನರುಚ್ಚರಿಸಿದೆ.
ಅಮೆರಿಕದ ಆರ್ಥಿಕತೆಗೆ ಅಗತ್ಯವಿರುವ ಕೌಶಲ್ಯ ಕೊರತೆಯನ್ನು ನೀಗಿಸಲು ಎಚ್-1ಬಿ ಹಾಗೂ ಗ್ರೀನ್ ಕಾರ್ಡ್ ವ್ಯವಸ್ಥೆಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಐಟಿ ಕಂಪನಿಗಳ ಕೈತಪ್ಪಿದ ಗ್ರೀನ್ ಕಾರ್ಡ್ ಪ್ರೋಗ್ರಾಮ್; ಎಚ್-1ಬಿ ವಿಸಾದಾರರನ್ನು ವಿದೇಶೀ ಜೀತದಾಳುಗಳೆಂದು ಜರಿದ ಜೆ.ಡಿ. ವಾನ್ಸ್
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ತಂತ್ರಜ್ಞಾನ ಕಂಪನಿಗಳು ಅಮೆರಿಕದಲ್ಲಿ ಎಚ್-1ಬಿ ವೀಸಾಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಿವೆ ಮತ್ತು ಅಮೆರಿಕದ ಒಳಗಡೆಯೇ ಸ್ಥಳೀಯ ಪೌರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದನ್ನು (Local Hiring) ಹೆಚ್ಚಿಸಿವೆ ಎಂದು ನಾಸ್ಕಾಮ್ ಉಲ್ಲೇಖಿಸಿದೆ.
ನಾಸ್ಕಾಮ್ ಹೇಳಿಕೆ
India’s Industry body Nasscom issues statement on US suspending Indian IT firms Cognizant, TCS, Wipro, HCL from Green Card filings: https://t.co/GABKtoI1ft
— Sidhant Sibal (@sidhant) October 9, 2026
ಭಾರತದ ಐಟಿ ಕಂಪನಿಗಳು ಅಮೆರಿಕದ ಫಾರ್ಚೂನ್ 500 ಕಂಪನಿಗಳೊಂದಿಗೆ ಕೆಲಸ ಮಾಡುತ್ತಾ ಅವನ್ನು ಬಲಪಡಿಸುತ್ತಿವೆ. ಈ ಫಾರ್ಚೂನ್ ಕಂಪನಿಗಳು ನಾವೀನ್ಯತೆ ಹೆಚ್ಚಿಸಲು ಮತ್ತು ಬೆಳೆಯಲು ಹೆಚ್ಚು ಅವಕಾಶ ಸಿಗುತ್ತದೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳು ಕೂಡ ಹೆಚ್ಚುತ್ತವೆ ಎಂದು ನಾಸ್ಕಾಮ್ ಭಾರತದ ಐಟಿ ಕಂಪನಿಗಳು ಅಮೆರಿಕಕ್ಕೆ ನೀಡುತ್ತಿರುವ ಕೊಡುಗೆಗಳ ಮಹತ್ವ ವಿವರಿಸಿದೆ.
ಇದನ್ನೂ ಓದಿ: ಟೆಕ್ಕಿಗಳಿಗೆ ಟ್ರಂಪ್ ಶಾಕ್; ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಇನ್ಫೋಸಿಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳನ್ನು ಕೈಬಿಟ್ಟ ಅಮೆರಿಕ
PERM ಪ್ರಕ್ರಿಯೆ ಮೂಲಕ ಅಮೆರಿಕದ ಕಂಪನಿಗಳು ಎಚ್-1ಬಿ ವೀಸಾದಾರರಿಗೆ ಅಮೆರಿಕದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತಿವೆ ಎಂಬುದು ಅಮೆರಿಕದ ಸರ್ಕಾರದ ಆರೋಪ. ಆದರೆ, ನಾಸ್ಕಾಮ್ ಈ ಅಭಿಪ್ರಾಯವನ್ನು ಅಲ್ಲಗಳೆದಿದೆ. ಎಚ್-1ಬಿ ವೀಸಾದಿಂದ PERM ಪ್ರಕ್ರಿಯೆ ಮೂಲಕ ಖಾಯಂ ನಿವಾಸಿ ಸೌಲಭ್ಯ ಪಡೆಯುವವರ ಸಂಖ್ಯೆ ಬಹಳ ಸೀಮಿತ ಎಂದು ಭಾರತದ ಐಟಿ ಕಂಪನಿಗಳ ಒಕ್ಕೂಟವು ಅಭಿಪ್ರಾಯಪಟ್ಟಿದೆ.
ಇನ್ನು, ಭಾರತದ ತಂತ್ರಜ್ಞಾನ ಕಂಪನಿಗಳು 80ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲೆಡೆಯೂ ಸ್ಥಳೀಯ ಕಾನೂನು ಮತ್ತು ಕಟ್ಟಳೆಗಳನ್ನು ಪಾಲಿಸುತ್ತಾ ಬಂದಿವೆ. ಅಮೆರಿಕದ ಕಾನೂನುಗಳನ್ನೂ ಈ ಕಂಪನಿಗಳು ಪಾಲಿಸುವ ವಿಶ್ವಾಸ ನಮಗಿದೆ ಎಂದು ನಾಸ್ಕಾಮ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ