ನವದೆಹಲಿ: ಸಾಲ ಬಿಕ್ಕಟ್ಟು ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್ಲೈನ್ಸ್ ವಿರುದ್ಧ ಸಪ್ಲೈ ಚೈನ್ ಆಪರೇಟಿಂಗ್ ಕಂಪನಿ ಡೆಲಿವೆರಿ (Delhivery) ವಂಚನೆ ದೂರು ದಾಖಲಿಸಿದೆ. ಈ ದೂರಿನ ಮೇರೆಗೆ ಈ ಪ್ರಕರಣದಲ್ಲಿ ಗೋ ಫಸ್ಟ್ (Go First Airlines) ಪರವಾಗಿ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಐಆರ್ಪಿ ಅಭಿಷೇಕ್ ಲಾಲ್ ಅವರಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ನೋಟೀಸ್ ನೋಡಿದೆ. ಕರ್ನಾಟಕ ಮೂಲದ ಅಭಿಷೇಕ್ ಲಾಲ್ ಈ ಆರೋಪದ ಬಗ್ಗೆ ಎರಡು ವಾರದಲ್ಲಿ ಉತ್ತರಿಸಬೇಕಾಗಿದೆ.
ಗೋಫಸ್ಟ್ ಏರ್ಲೈನ್ಸ್ ತನ್ನ ಹಣಕಾಸು ಬಿಕ್ಕಟ್ಟು ಪರಿಹಾರಕ್ಕಾಗಿ ಸಲ್ಲಿಸಿರುವ ಇನ್ಸಾಲ್ವೆನ್ಸಿ ಅರ್ಜಿ ಬರೇ ನಾಟಕ. ಅಂದು ಇನ್ಸಾಲ್ವೆನ್ಸಿಗೆ ಮೊರೆ ಹೋಗುವ ದಿನವೇ ತನ್ನಿಂದ ಹಣ ಪಡೆಯಲಾಗಿತ್ತು. ದುರುದ್ದೇಶಪೂರ್ವಕವಾಗಿ ತನ್ನಿಂದ ಹಣ ಪಡೆದಿದೆ ಎಂದು ಸರಕು ಸರಬರಾಜು ಸಂಸ್ಥೆಯಾದ ಡೆಲಿವರಿಯ ಆರೋಪ.
ನ್ಯಾಯಮಂಡಳಿಗೆ ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸುವ ಮುನ್ನ ಸರಕು ವಸ್ತುಗಳನ್ನು ಕಾರ್ಗೊ ವಿಮಾನದಲ್ಲಿ ಸಾಗಿಸುವ ಸಂಬಂಧ ಗೋಫಸ್ಟ್ ತನ್ನಿಂದ ಸುಮಾರು 1.58 ಕೋಟಿ ರೂ ಹಣ ಪಡೆದಿತ್ತು. ಆದರೆ, ಯಾವ ಸರಕನ್ನೂ ಸಾಗಿಸಿಲ್ಲ. ಗೋಫಸ್ಟ್ ಮೇ 2ರಂದು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಅದೇ ದಿನ ಅರ್ಜಿಗೆ ಮುನ್ನ ತನ್ನಿಂದ 57 ಲಕ್ಷ ರೂ ಪಡೆದಿತ್ತು ಎಂದು ಡೆಲಿವರಿ ತನ್ನ ದೂರಿನಲ್ಲಿ ಆರೋಪ ಮಾಡಿದೆ.
ಇದನ್ನೂ ಓದಿ: ED Raid: ಎಸ್ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್ಫ್ರಾ ಕಂಪನಿ ಮೇಲೆ ಇಡಿ ರೇಡ್
ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಇಬ್ಬರು ನ್ಯಾಯಾಧೀಶರಿರುವ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇನ್ಸಾಲ್ವೆನ್ಸಿ ಸಮಸ್ಯೆಗೆ ಪರಿಹಾರ ಹುಡುಕಲು ಗೋಫಸ್ಟ್ ಪರವಾಗಿ ಐಆರ್ಪಿಯಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಲಾಲ್ ಅವರಿಗೆ ನೋಟೀಸ್ ಕೊಡಲಾಗಿದೆ. ಜುಲೈ 24ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.
ದುರುದ್ದೇಶಪೂರ್ವಕವಾಗಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ (ಐಬಿಸಿ) ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ 1 ಲಕ್ಷದಿಂದ 1 ಕೋಟಿ ರೂವರೆಗೆ ದಂಡ ವಿಧಿಸಲಾಗುವ ಅವಕಾಶ ಇದೆ.
ಇದನ್ನೂ ಓದಿ: ChatGPT Maker With Modi: ಮೋದಿ ಭೇಟಿ ಮಾಡಿದ ಆಲ್ಟ್ಮ್ಯಾನ್; ಪ್ರಧಾನಿಗಳ ಉತ್ತರಕ್ಕೆ ಖುಷಿಗೊಂಡರಾ ಎಐ ಟ್ರೆಂಡ್ಸೆಟ್ಟರ್?
ಗೋಫಸ್ಟ್ ಏರ್ಲೈನ್ಸ್ ಸಂಸ್ಥೆಯ ಅರ್ಧದಷ್ಟು ವಿಮಾನಗಳು ತಾಂತ್ರಿಕ ತೊಂದರೆಯಿಂದಾಗಿ ಹಾರಾಟವಾಗದೇ ನಿಂತಿದ್ದವು. ಇದರಿಂದ ತನ್ನ ಆದಾಯ ನಿಂತುಹೋಗಿ ಸಾಲ ಮರುಪಾವತಿಯೂ ಸಾಧ್ಯವಾಗುತ್ತಿಲ್ಲ. ತನ್ನ ಸಾಲದ ಮರುರಚನೆ ಮಾಡಲಾಗುವಂತೆ ಗೋಫಸ್ಟ್ ಅರ್ಜಿ ಹಾಕಿತ್ತು.
ಗೋಫಸ್ಟ್ ಒಟ್ಟು 11,463 ಕೋಟಿ ರೂ ಸಾಲ ಹೊಂದಿರುವುದು ತಿಳಿದುಬಂದಿದೆ. ಇದರಲ್ಲಿ ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್ ಮತ್ತು ಡ್ಯೂಷೆ ಬ್ಯಾಂಕುಗಳಿಗೆ 6,521 ರೂ ಕೊಡಬೇಕು ಎಂದು ಗೋಫಸ್ಟ್ ತನ್ನ ಇನ್ಸಾಲ್ವೆನ್ಸಿ ಫೈಲಿಂಗ್ ವೇಳೆ ತಿಳಿಸಿದೆ. ಗೋ ಫಸ್ಟ್ ಏರ್ಲೈನ್ಸ್ಗೆ ವಿಮಾನಗಳನ್ನು ಗುತ್ತಿಗೆಗೆ ಕೊಟ್ಟಿರುವ ಸಂಸ್ಥೆಗಳು ಇದೀಗ ವಿಮಾನ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಇದನ್ನು ಗೋಫಸ್ಟ್ ವಿರೋಧಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ