
ನವದೆಹಲಿ, ಮೇ 7: ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಐತಿಹಾಸಿಕ ಹೋರಾಟ ನಡೆಯುತ್ತಿತ್ತು. ಅದು ದೇಶದ ಅಧ್ಯಕ್ಷರು ವಿಧಿಸಿದ್ದ 4 ಟ್ರಿಲಿಯನ್ ಡಾಲರ್ ಸುಂಕದ ವಿರುದ್ಧದ ಸಮರ. ಪ್ರಬಲ ದೇಶದ ಪ್ರಬಲ ಅಧ್ಯಕ್ಷರ ವಿರುದ್ಧ ಕೇಸ್ ನಡೆಸುತ್ತಿದ್ದವರು ಭಾರತ ಮೂಲದ ನೀಲ್ ಕುಮಾರ್ ಕತ್ಯಾಲ್ (Neal Katyal) ಎನ್ನುವ ವಕೀಲ. 237 ವರ್ಷಗಳ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ಯಾವತ್ತೂ ಒಬ್ಬ ಅಧ್ಯಕ್ಷನ ಪ್ರಮುಖ ನಿರ್ಧಾರವನ್ನು ರದ್ದುಗೊಳಿಸಿರಲಿಲ್ಲ. ದೊಡ್ಡ ದೊಡ್ಡ ಕಾನೂನು ಪಂಡಿತರು, “ಇದು ಅಸಾಧ್ಯ, ನೀಲ್ ಸೋಲುವುದು ಖಚಿತ,” ಎಂದು ಭವಿಷ್ಯ ನುಡಿದಿದ್ದರು. ಆದರೆ, ಟ್ರಂಪ್ ಸುಂಕ ಕ್ರಮ ವಿರುದ್ಧ ಕೋರ್ಟ್ 6-3 ಅಂತರದಿಂದ ತೀರ್ಪು ಕೊಟ್ಟಿತು. ನೀಲ್ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಆದರೆ ನೀಲ್ ಕುಮಾರ್ ಕತ್ಯಾಲ್ ಈ ಕೇಸ್ ವೇಳೆ ಆತ್ಮವಿಶ್ವಾಸದಿಂದ ಇದ್ದರು. ಅದು ಮೊಂಡುತನವಾಗಿರಲಿಲ್ಲ. ಕೋರ್ಟ್‌ನಲ್ಲಿ ನೀಲ್ ವಾದಕ್ಕೆ ನ್ಯಾಯಾಧೀಶರು ಅಸ್ತು ಎಂದರು. ಟ್ರಂಪ್ ಆಡಳಿತದ ವಿರುದ್ಧ ಕೋರ್ಟ್ನಿಂದ ತೀರ್ಪು ಬರಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ. ಟ್ರಂಪ್ ವಿರುದ್ಧ ನೀಲ್ ಪ್ರಯತ್ನ ಫಲ ಕೊಡಲ್ಲ ಎಂದಿದ್ದ ಸಹೋದ್ಯೋಗಿಗಳಿಗೆಯೇ ಅಚ್ಚರಿ ಆಗಿತ್ತು. ನೀಲ್ ಅವರು ಈ ಕೇಸ್ ಗೆದ್ದ ಕಥೆ ನಿಜಕ್ಕೂ ಅಚ್ಚರಿ ತರುವಂಥದ್ದು. ತೀರ್ಪು ಬರುವ ಕೆಲ ತಿಂಗಳ ಹಿಂದೆಯೇ ಆರಂಭವಾದ ಕಥೆ ಅದು.
ನೀಲ್ ಕತ್ಯಾಲ್ ಅವರು ಟೆಡ್ನಲ್ಲಿ ಈ ಎಲ್ಲವನ್ನೂ ಸವಿವರವಾಗಿ ಹಂಚಿಕೊಂಡಿದ್ದಾರೆ. ಇವತ್ತು (ಮೇ 7) ಟೆಡ್ನಲ್ಲಿ ಅವರ ಮಾತುಗಳು ಪ್ರಕಟವಾಗುತ್ತವೆ. ನಿನ್ನೆ ಅವರು ಈ ಸಂಬಂಧ ಟ್ವೀಟ್ ಮಾಡಿ, ಮುನ್ನೋಟ ನೀಡಿದ್ದಾರೆ. ತಮಗೆ ಕೇಸ್ ಗೆಲ್ಲಲು ಹೇಗೆ ಸಾಧ್ಯವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಎಐ ಕಾಲಘಟ್ಟದಲ್ಲಿ ಜಾಣ ಮನುಷ್ಯ ಜಾಣ ಯಂತ್ರವನ್ನು ಹೇಗೆಲ್ಲಾ ಉಪಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಾನವೀಯ ಸ್ಪರ್ಶ ಬೇಕೇ ಬೇಕು ಎಂದೆನ್ನುವ ಕೋರ್ಟ್ ಕಲಾಪದಲ್ಲಿ ಎಐ ಸ್ಪರ್ಶ ಇದ್ದರೆ ಹೇಗಿದ್ದೀತು ಎಂಬುದನ್ನು ನೀಲ್ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ
ನೀಲ್ ಈ ಕೇಸ್ ಗೆಲ್ಲಲು ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡಿದ್ದಾರೆ. ಸಹೋದ್ಯೋಗಿಗಳು, ಕಾನೂನು ಪರಿಣಿತರು, ಮಾನಸಿಕ ತಜ್ಞರು, ಮೆಡಿಟೇಶನ್ ತಜ್ಞರು ಮೊದಲಾದವರಿದ್ದಾರೆ. ಅವರ ಜೊತೆಗೆ ಹಾರ್ವೆ ಎನ್ನುವ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಅವರ ಬಳಿ ಇದ್ದ ಗುಪ್ತ ಅಸ್ತ್ರ ಹಾರ್ವೆ.
ನೀಲ್ ಅವರ ಎಕ್ಸ್ ಪೋಸ್ಟ್
Five months ago, I argued against the President’s $4 trillion tariffs at the Supreme Court.
In 237 years, the Court had never struck down a sitting President’s signature initiative. Legal scholars said it was impossible. Some of my own colleagues said it was impossible.
We won.… pic.twitter.com/g3O0mw99ny
— Neal Katyal (@neal_katyal) May 6, 2026
ಹಾರ್ವೆ ಒಬ್ಬ ಮನುಷ್ಯನಲ್ಲ, ಅದೊಂದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI). ಒಂದು ವರ್ಷದಲ್ಲಿ ಅಗಾಧ ದತ್ತಾಂಶದಿಂದ ಟ್ರೇನ್ ಆಗಿ ಪರಿಪಕ್ವಗೊಂಡ ಎಐ ಮಾಡಲ್ ಅದು. ಕಳೆದ 25 ವರ್ಷಗಳಲ್ಲಿ ಕೋರ್ಟ್ಗಳಲ್ಲಿ ನ್ಯಾಯಾಧೀಶರು ಕೇಳಿದ ಪ್ರತಿಯೊಂದು ಪ್ರಶ್ನೆ, ಅವರು ಬರೆದ ಪ್ರತಿಯೊಂದು ತೀರ್ಪನ್ನು ಹಾರ್ವೆಗೆ ಕಲಿಸಲಾಗಿತ್ತು. ವಾದ ಮಂಡನೆಗೂ ಮುನ್ನ ಹಾರ್ವೆ, ನ್ಯಾಯಾಧೀಶರು ಕೇಳಬಹುದಾದ ಪ್ರಶ್ನೆಗಳನ್ನು ನಿಖರವಾಗಿ ಊಹಿಸಿತ್ತು. ಅದು ದಣಿವಿಲ್ಲದ ಸಾಟಿಯಿಲ್ಲದ ಬುದ್ಧಿವಂತಿಕೆಯನ್ನು ಪ್ರದರ್ಶಿಸಿತ್ತು.
ನ್ಯಾಯಾಲಯದಲ್ಲಿ ವಾದ ಮಂಡಿಸುವ ಸಮಯ ಬಂದಾಗ, ನ್ಯಾಯಾಧೀಶರು ಹಾರ್ವೆ ಊಹಿಸಿದ ಪ್ರಶ್ನೆಗಳನ್ನೇ ಕೇಳಿದರು. ಆದರೆ, ಅಲ್ಲಿ ಒಂದು ವಿಷಯ ಮಾತ್ರ ಹಾರ್ವೆಗೆ ಮಾಡಲು ಸಾಧ್ಯವಾಗಲಿಲ್ಲ. ಅದುವೇ ‘ಭಾವನಾತ್ಮಕ ಸಂಬಂಧ’ (Connection).
ನ್ಯಾಯಾಧೀಶರು ಕೇಳುವ ಪದಗಳ ಹಿಂದೆ ಅವರದೊಂದು ಆತಂಕವಿರುತ್ತದೆ, ಒಂದು ಕಾಳಜಿಯಿರುತ್ತದೆ. ಆ ಆತಂಕವನ್ನು ಅರ್ಥಮಾಡಿಕೊಳ್ಳುವುದು, ಅವರ ಕಣ್ಣುಗಳನ್ನು ನೋಡಿ ಪರಿಸ್ಥಿತಿಯನ್ನು ಅರಿಯುವುದು ಮತ್ತು ಆ ಕ್ಷಣಕ್ಕೆ ಸ್ಪಂದಿಸುವುದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರ ಸಾಧ್ಯ. ನೀಲ್ ಅವರು ನ್ಯಾಯಾಧೀಶರ ಪ್ರಶ್ನೆ ಮಾತ್ರವನ್ನು ಉತ್ತರಿಸಲಿಲ್ಲ, ಅವರ ಮನಸ್ಸಿನಲ್ಲಿದ್ದ ಆತಂಕಕ್ಕೆ ಸಮಾಧಾನ ನೀಡಿದರು. ನ್ಯಾಯಾಧೀಶರಿಗಿದ್ದ ಅನುಮಾನಗಳನ್ನು ನಿವಾರಿಸಿದರು. ಪರಿಣಾಮವಾಗಿ ಕೇಸ್ ಅನ್ನು 6-3 ಅಂತರದಿಂದ ಗೆಲ್ಲಲು ಸಾಧ್ಯವಾಯಿತು.
ಇದನ್ನೂ ಓದಿ: ಬ್ಯಾಂಕ್ಗಳಲ್ಲಿ ಕೆಟ್ಟ ಸಾಲಗಳು; ಆರ್ಬಿಐನಿಂದ ಹೊಸ ನಿಯಮಗಳ ಪ್ರಸ್ತಾಪ; ಏನಿವು ರೂಲ್ಸ್?
AI ಮಾಹಿತಿಯನ್ನು ವಿಶ್ಲೇಷಿಸಬಹುದು, ಭವಿಷ್ಯವನ್ನು ಊಹಿಸಬಹುದು. ಆದರೆ ಅದು ಮನುಷ್ಯನ ಸಂವೇದನೆ, ಸಹಾನುಭೂತಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಮಿಡಿಯುವ ಗುಣವನ್ನು (Human Touch) ಎಂದಿಗೂ ಮೀರಲಾರದು.
ತಂತ್ರಜ್ಞಾನದ ಈ ಯುಗದಲ್ಲಿ ನಾವು ಯಂತ್ರಗಳಿಗಿಂತ ವೇಗವಾಗಿ ಓಡುವುದಕ್ಕಿಂತ ಹೆಚ್ಚಾಗಿ, ಯಂತ್ರಗಳಿಗೆ ಸಾಧ್ಯವಿಲ್ಲದ ‘ಮಾನವೀಯ ಕೌಶಲ’ಗಳನ್ನು (Empathy and Connection) ಬೆಳೆಸಿಕೊಳ್ಳುವುದೇ ನಮ್ಮ ನಿಜವಾದ ಶಕ್ತಿ. ನೀಲ್ ಕುಮಾರ್ ಕತ್ಯಾಲ್ ಅವರು ಟೆಡ್ ಟಾಕ್ನಲ್ಲಿ ಈ ಅಂಶದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಅದು ಇವತ್ತೇ ಪ್ರಸಾರವಾಗಲಿದೆ. ಇವತ್ತು ಗುರುವಾರ ರಾತ್ರಿ 8:30-9:00 ಸಮಯದಲ್ಲಿ ಇದು ಪ್ರಕಟವಾಗಬಹುದು, ಗಮನಿಸುತ್ತಿರಿ. ಅದರ ಲಿಂಕ್ ಇಲ್ಲಿದೆ: www.ted.com/talks/178367
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Thu, 7 May 26