
ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಫಾಸ್ಟ್‌ಟ್ಯಾಗ್ (FASTag) ವ್ಯವಸ್ಥೆ ತಂದಾಗ ಹೆದ್ದಾರಿಗಳಲ್ಲಿನ ಟೋಲ್ ಬೂತ್ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ಬಹಳಷ್ಟು ಕಡಿಮೆ ಆಗಿದೆ. ವಾಹನಗಳು ಟೋಲ್ ಬೂತ್ಗಳಲ್ಲಿ ನಿಲ್ಲುವ ಸಮಯ ತೀರಾ ಕಡಿಮೆಗೊಂಡಿದೆ. ಇತ್ತೀಚೆಗಷ್ಟೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್ಗಾಗಿ ವಾರ್ಷಿಕ ಪಾಸ್ ಬಿಡುಗಡೆ ಮಾಡಿದೆ. ಆರಂಭದಲ್ಲಿ 3,000 ರೂ ಇದ್ದ ಈ ವಾರ್ಷಿಕ ಪಾಸ್‌ನ ದರ ಇತ್ತೀಚೆಗೆ 3,075 ರೂಗೆ ಪರಿಷ್ಕರಿಸಲಾಗಿದೆ. ಆದರೂ ದೇಶಾದ್ಯಂತ ಲಕ್ಷಾಂತರ ವಾಹನ ಸವಾರರಿಗೆ ಈ ವಾರ್ಷಿಕ ಪಾಸ್ ಬಹಳ ಉಪಯುಕ್ತ ಎನಿಸಿರುವುದು ಹೌದು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ (NH) ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ಕಾರು, ಜೀಪ್ ಮತ್ತು ವ್ಯಾನ್‌ಗಳಂತಹ ಖಾಸಗಿ (ವಾಣಿಜ್ಯೇತರ) ವಾಹನಗಳ ಮಾಲೀಕರಿಗಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಸೌಲಭ್ಯವನ್ನು ಪರಿಚಯಿಸಿದೆ. ಇದು ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲದೇ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.
ಈ ವಾರ್ಷಿಕ ಪಾಸ್‌ನ ಪ್ರಸ್ತುತ ದರ ₹3,075 ಆಗಿದೆ. ಈ ಪಾಸ್ ಪಾವತಿ ಮಾಡಿದ ದಿನದಿಂದ ಒಂದು ವರ್ಷದ ಅವಧಿಗೆ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ (ಯಾವುದು ಮೊದಲೋ ಅದು) ಮಾನ್ಯವಾಗಿರುತ್ತದೆ. ಒಂದು ಟೋಲ್ ಕ್ರಾಸ್ ಮಾಡಲು ಸುಮಾರು ₹15-16 ಆಗಬಹುದು. ವರ್ಷಕ್ಕೆ ಕನಿಷ್ಠ 200 ಟೋಲ್ ಬೂತ್ಗಳನ್ನು ಕ್ರಾಸ್ ಮಾಡಬೇಕಾದ ಅನಿವಾರ್ಯತೆ ಇರುವವರಿಗೆ ಈ ವಾರ್ಷಿಕ ಪಾಸ್ ಬಹಳ ಉಪಯುಕ್ತ ಎನಿಸುತ್ತದೆ.
ಇದನ್ನೂ ಓದಿ: ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು
ವಾಹನ ಸವಾರರು NHAI ನ ಅಧಿಕೃತ ‘ರಾಜಮಾರ್ಗ ಯಾತ್ರಾ’ (Rajmarg Yatra) ಮೊಬೈಲ್ ಆ್ಯಪ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಪಾಸ್‌ಗೆ ಅರ್ಜಿ ಸಲ್ಲಿಸಬಹುದು.
ನಿಮ್ಮ ಫಾಸ್ಟ್‌ಟ್ಯಾಗ್ ಲಿಂಕ್ ಆಗಿರುವ ಖಾತೆಗೆ ಲಾಗಿನ್ ಆಗಿ, ವಾಹನದ ವಿವರಗಳನ್ನು ನೀಡಿ UPI, ನೆಟ್ ಬ್ಯಾಂಕಿಂಗ್ ಅಥವಾ ಕಾರ್ಡ್‌ಗಳ ಮೂಲಕ ಪಾವತಿ ಮಾಡಬಹುದು. ಒಮ್ಮೆ ಹಣ ಪಾವತಿಸಿದ ನಂತರ 2 ರಿಂದ 24 ಗಂಟೆಗಳ ಒಳಗೆ ಪಾಸ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.
ರಾಜ್ಯ ಹೆದ್ದಾರಿಗಳಲ್ಲಿರುವ ಟೋಲ್ ಬೂತ್ಗಳಲ್ಲಿ ಈ ಪಾಸ್ ಅನ್ವಯ ಆಗಲ್ಲ. ಸ್ಥಳೀಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ನಿರ್ವಹಿಸುವ ಎಕ್ಸ್ಪ್ರೆಸ್ವೇ ಮತ್ತು ಟೋಲ್ ಬೂತ್ಗಳಲ್ಲಿ ಇವುಗಳನ್ನು ಬಳಸಲು ಆಗಲ್ಲ. ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಪ್ರಾಧಿಕಾರ ನಿಯಂತ್ರಿಸುವ ನ್ಯಾಷನಲ್ ಹೈವೇಗಳಲ್ಲಿನ ಟೋಲ್ ಬೂತ್ಗಳಿಗೆ ಈ ವಾರ್ಷಿಕ ಪಾಸ್ ಅನ್ವಯ ಆಗುತ್ತದೆ.
ಇತರ ಟೋಲ್ ಬೂತ್ಗಳಲ್ಲಿ ಫಾಸ್ಟ್ಯಾಗ್ ಎಂದಿನಂತೆ ಕೆಲಸ ಮಾಡುತ್ತದೆ. ಅಂದರೆ, ಟೋಲ್ ಹಣ ಕಡಿತ ಆಗುತ್ತದೆ.
ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್, ಹೂಡಿಕೆದಾರರಿಗೆ ಉಪಯುಕ್ತವಾಗುವ ಕೆಲ ಪರಿಕರಗಳು
ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳಿಗಾಗಿ NHAI ‘ಡಿಜಿಟಲ್ ಲೋಕಲ್ ಪಾಸ್’ ಸೌಲಭ್ಯವನ್ನೂ ನೀಡುತ್ತಿದ್ದು, ತಿಂಗಳಿಗೆ ಸರಿಸುಮಾರು ₹340 ರಿಂದ ₹350 ಪಾವತಿಸಿ ಅನ್‌ಲಿಮಿಟೆಡ್ ಪ್ರಯಾಣದ ಮಾಸಿಕ ಪಾಸ್ ಪಡೆಯಬಹುದಾಗಿದೆ.
ಬಳಕೆಯ ಅಂಕಿ-ಅಂಶ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ, ದೇಶಾದ್ಯಂತ ಲಕ್ಷಾಂತರ ಖಾಸಗಿ ವಾಹನ ಸವಾರರು ಈ ವಾರ್ಷಿಕ ಪಾಸ್ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದು, ಹೆದ್ದಾರಿ ಟೋಲ್ ಕ್ಯೂಗಳನ್ನು ತಪ್ಪಿಸಲು ಇದು ಸಹಕಾರಿಯಾಗಿದೆ.
ಹೆದ್ದಾರಿಗಳಲ್ಲಿ ಹೆಚ್ಚು ಪ್ರಯಾಣಿಸುವ ಖಾಸಗಿ ವಾಹನ ಸವಾರರಿಗೆ ಈ ವಾರ್ಷಿಕ ಪಾಸ್ ವೆಚ್ಚ ಮತ್ತು ಸಮಯ ಎರಡನ್ನೂ ಉಳಿಸಲು ಉತ್ತಮ ಆಯ್ಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ