ಅಕ್ಸೆಂಚರ್​ನ ಎಲ್ಲಾ ಎಂಜಿನಿಯರುಗಳ ಕೆಲಸಗಳನ್ನೂ ಕ್ಲಾಡ್ ಕೋಡ್ ಕಲಿತ ಈ ಒಬ್ಬನೇ ವ್ಯಕ್ತಿ ಮಾಡಬಲ್ಲುನಂತೆ

Anthropic's Claude AI magic: ವೈ ಕಾಂಬಿನೇಟರ್​ನ ಟಾಮ್ ಬ್ಲಾಮ್​ಫೀಲ್ಡ್ ಅವರು ಕಳೆದ ವಾರ ಹಾಕಿದ ಪೋಸ್ಟ್ ಐಟಿ ಕ್ಷೇತ್ರವನ್ನು ತಲ್ಲಣಗೊಳಿಸಿದೆ. ಆಂಥ್ರೋಪಿಕ್​ನ ಕ್ಲಾಡ್ ಕೋಡ್ ಕಲಿತ 24 ವರ್ಷದ ಒಬ್ಬ ವ್ಯಕ್ತಿಯು ಅಕ್ಸೆಂಚರ್​ನ ಇಡೀ ಕೆಲಸಗಾರರನ್ನೂ ಮೀರಿಸುವಂತೆ ಕೆಲಸ ಮಾಡಬಲ್ಲುನಂತೆ. ಅಕ್ಸೆಂಚರ್​ನಲ್ಲಿ 7 ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಾರೆ.

ಅಕ್ಸೆಂಚರ್​ನ ಎಲ್ಲಾ ಎಂಜಿನಿಯರುಗಳ ಕೆಲಸಗಳನ್ನೂ ಕ್ಲಾಡ್ ಕೋಡ್ ಕಲಿತ ಈ ಒಬ್ಬನೇ ವ್ಯಕ್ತಿ ಮಾಡಬಲ್ಲುನಂತೆ
ಕ್ಲಾಡ್ ಎಐ

Updated on: Mar 09, 2026 | 3:27 PM

ಬೆಂಗಳೂರು, ಮಾರ್ಚ್ 9: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ನಾನಾ ರೀತಿಯ ಅಭಿಪ್ರಾಯಗಳು, ಭಯ, ಆತಂಕ, ಖುಷಿ ಎಲ್ಲಾ ವ್ಯಕ್ತವಾಗುತ್ತಿವೆ. ಆಂಥ್ರೋಪಿಕ್​ನ ಕ್ಲಾಡ್ ಎಐ ಬಿಡುಗಡೆಯಾದ ಬಳಿಕ ಎಲ್ಲಾ ಸಾಫ್ಟ್​ವೇರ್ ಕಂಪನಿಗಳು ಧೂಳೀಪಟವಾಗುತ್ತವೆ ಎನ್ನುವ ಸುದ್ದಿ ಇತ್ತೀಚೆಗೆ ಸಾಕಷ್ಟು ಕೇಳಿ ಬಂದಿತ್ತು. ಎಲ್ಲಾ ಹೊಸ ತಂತ್ರಜ್ಞಾನಗಳು ಬಂದರೆ ಇದೇ ರೀತಿ ಭಯ ಇರುತ್ತೆ. ಆದರೆ, ತಂತ್ರಜ್ಞಾನಗಳು ಮನುಷ್ಯನಿಗೆ ಬಲ ನೀಡುತ್ತವೆಯೇ ಹೊರತು ಅವನ ಸ್ಥಾನ ಕಿತ್ತುಕೊಳ್ಳುವುದಿಲ್ಲ ಎನ್ನುವ ಸಮಾಧಾನಕರ ಅಭಿಪ್ರಾಯಗಳೂ ಇವೆ. ಈ ಮಧ್ಯೆ ಟಾಮ್ ಬ್ಲಾಮ್​ಫೀಲ್ಡ್ (Tom Blomfield) ಎಂಬುವವರು ಹೊಸ ಎಐ ಬಾಂಬ್ ಸಿಡಿಸಿದ್ದಾರೆ. ಅವರ ಪ್ರಕಾರ ಕ್ಲಾಡ್ ಎಐ ಅದೆಷ್ಟು ಪ್ರಚಂಡವಾಗಿದೆ ಎಂದರೆ ಇಡೀ ಕಂಪನಿಯ ಎಲ್ಲಾ ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ಮಾಡಲು ಸಾಧ್ಯವಾಗುತ್ತದಂತೆ.

ವೈ ಕಾಂಬಿನೇಟರ್ ಎಂಬ ಸ್ಟಾರ್ಟಪ್ ಫಂಡಿಂಗ್ ಕಂಪನಿಯ ಪಾರ್ಟ್ನರ್ ಆಗಿರುವ ಟಾಮ್ ಬ್ಲಾಮ್​ಫೀಲ್ಡ್ ಅವರು ಎಕ್ಸ್​ನಲ್ಲಿ ಈ ಬಾಂಬ್ ಸಿಡಿಸಿ ಐಟಿ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ. ಅವರು ಮಾಡಿದ ಟ್ವೀಟ್ ಇಷ್ಟೇ… ‘ಕಳೆದ ಮಂಗಳವಾರ ಕ್ಲಾಡ್ ಕೋಡ್ ಕಲಿತ 24 ವರ್ಷದ ವ್ಯಕ್ತಿಯು ಇಡೀ ಅಕ್ಸೆಂಚರ್ ವರ್ಕ್​ಫೋರ್ಸ್ ಅನ್ನೇ ಮೀರಿಸಲಿದ್ದಾನೆ’ ಎಂಬುದು. ಮಾರ್ಚ್ 2ರಂದು ಮಾಡಿದ ಟ್ವೀಟ್ ಅದು.

ಟಾಮ್ ಬ್ಲಾಮ್​ಫೀಲ್ಡ್ ಮಾಡಿದ ಟ್ವೀಟ್

ಕ್ಲಾಡ್ ಎಐ ಅಭಿವೃದ್ಧಿಪಡಿಸಿದ ಆಂಥ್ರೋಪಿಕ್ ಕಂಪನಿಯ ಸಹ-ಸಂಸ್ಥಾಪಕ ಜ್ಯಾಕ್ ಕ್ಲಾರ್ಕ್ ಅವರು ಇತ್ತೀಚೆಗೆ ಟಿವಿ ಶೋವೊಂದರಲ್ಲಿ ಕ್ಲಾಡ್​ನ ಉಪಯುಕ್ತತೆ ಬಗ್ಗೆ ಒಂದು ಮಾಹಿತಿ ಹೊರಗೆಡವಿದ್ದರು. ಕಂಪನಿಯ ಹೆಚ್ಚಿನ ಇಂಟರ್ನಲ್ ಕೋಡ್ ಅನ್ನು ಕ್ಲಾಡ್ ಬರೆಯಬಲ್ಲುದಂತೆ. ಈ ವರ್ಷಾಂತ್ಯದೊಳಗೆ ಸಂಪೂರ್ಣ ಎಲ್ಲಾ ಕೋಡ್ ಅನ್ನೂ ಈ ಎಐ ಸ್ವತಂತ್ರವಾಗಿ ನಿಭಾಯಿಸಬಲ್ಲುದಂತೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲಿ ಏರಬೇಕಿದ್ದ ಚಿನ್ನದ ಬೆಲೆ ಕಡಿಮೆ ಕಡಿಮೆ ಆಗುತ್ತಿರುವುದು ಯಾಕೆ? ಇಲ್ಲಿವೆ ಇಂಟರೆಸ್ಟಿಂಗ್ ಕಾರಣಗಳು

ಕ್ಲಾಡ್​ನಿಂದ ಅಕ್ಸೆಂಚರ್ ಗತಿ ಏನು?

ಟಾಮ್ ಬ್ಲಾಮ್​ಫೀಲ್ಡ್ ಅವರ ಆ ಟ್ವೀಟ್​ಗೆ ನಾನಾ ಪ್ರತಿಕ್ರಿಯೆಗಳು ಬಂದಿವೆ. ಅಕ್ಸೆಂಚರ್ ಕಂಪನಿ ಹೇಗೆ ಈ ಕ್ಲಾಡ್ ಎಸೆತವನ್ನು ಆಡಬಲ್ಲುದು ಎಂಬುದನ್ನು ಒಬ್ಬಾತ ವಿವರಿಸಿದ್ದಾರೆ. ಏಳು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ಕಂಪನಿ ಕಳೆದ ವರ್ಷ ಆಂಥ್ರೋಪಿಕ್ ಜೊತೆ ಒಪ್ಪಂದ ಮಾಡಿಕೊಂಡು, ತನ್ನ 30,000 ಎಂಜಿನಿಯರುಗಳಿಗೆ ಕ್ಲಾಡ್​ನ ಟ್ರೈನಿಂಗ್ ಕೊಡಿಸಿತು. ಎಐ ವರ್ಕ್​ಫ್ಲೋ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅಕ್ಸೆಂಚರ್ ಇಟ್ಟ ಹೆಜ್ಜೆ ಇದು. ಇದೀಗ ಅಕ್ಸೆಂಚರ್ ಕಂಪನಿಯು ಡಿಸ್ಟ್ರಿಬ್ಯೂಶನ್ ಲೇಯರ್ ಆಗಿರುತ್ತದೆ. ಕ್ಲಾಡ್ ಕಲಿತ 24 ವರ್ಷದ ವ್ಯಕ್ತಿ ಡೆಮೋ ಕೊಡಬಹುದು. ಆದರೆ, ಅನುಷ್ಠಾನ, ಮ್ಯಾನೇಜ್ಮೆಂಟ್ ಬದಲಾವಣೆ, ಡಾಟಾ ಮೈಗ್ರೇಶನ್, ಮಲ್ಟಿ ಇಯರ್ ಕಾಂಟ್ರಾಕ್ಟ್ ಇತ್ಯಾದಿಯನ್ನು ಅಕ್ಸೆಂಚರ್ ಕಂಪನಿ ನಿಯಂತ್ರಿಸುತ್ತದೆ ಎಂದು ಅವರು ತಮ್ಮ ಟ್ವೀಟ್​ನಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Mon, 9 March 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us