ನಾನು ಆದಾಯ ಕರದಲ್ಲಿ 12 ಲಕ್ಷ ಬಿಟ್ಟೆ..ನೀವು ಉದ್ಯೋಗಿಗಳ ತಿಂಗಳ ಪಗಾರು ಏರಿಸಿದ್ರಾ? ನರೇಂದ್ರ ಮೋದಿ ಪ್ರಶ್ನೆ

ಪ್ರಧಾನಿ ಮೋದಿ FICCI ಶತಮಾನೋತ್ಸವದಲ್ಲಿ ಕಾರ್ಪೊರೇಟ್ ತೆರಿಗೆ ಕಡಿತದ ನಂತರ ಉದ್ಯೋಗ ಸೃಷ್ಟಿ ಬಗ್ಗೆ ಉದ್ಯಮಿಗಳನ್ನು ಪ್ರಶ್ನಿಸಿದರು. ಭಾರತದ ವೇಗದ ಆರ್ಥಿಕ ಪ್ರಗತಿ ಮತ್ತು ವಿಶ್ವಬ್ಯಾಂಕ್ ವರದಿ ಪ್ರಕಾರ 50 ಕೋಟಿ ಬಡವರು ಬಡತನದಿಂದ ಹೊರಬಂದಿರುವುದನ್ನು ಒತ್ತಿ ಹೇಳಿದರು. ಫಾರ್ಮಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸಲು ಹಾಗೂ ಹೊಸ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಳ್ಳಲು ಕೈಗಾರಿಕೆಗಳಿಗೆ ಕರೆ ನೀಡಿದರು.

ನಾನು ಆದಾಯ ಕರದಲ್ಲಿ 12 ಲಕ್ಷ ಬಿಟ್ಟೆ..ನೀವು ಉದ್ಯೋಗಿಗಳ ತಿಂಗಳ ಪಗಾರು ಏರಿಸಿದ್ರಾ? ನರೇಂದ್ರ ಮೋದಿ ಪ್ರಶ್ನೆ
ನರೇಂದ್ರ ಮೋದಿ
Image Credit source: Narendra Modi's Youtube

Updated on: Nov 19, 2026 | 12:27 PM

ನವದೆಹಲಿ, ನವೆಂಬರ್ 19: ‘ನಾವು ಕಾರ್ಪೊರೇಟ್ ಟ್ಯಾಕ್ಸ್ ಅನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿದೆವು. ಆದರೆ, ನೀವು ಉದ್ಯೋಗಿಗಳ ಸಂಖ್ಯೆ ಎಷ್ಟು ಹೆಚ್ಚಿಸಿದಿರಿ? ಉದ್ಯೋಗಿಗಳಿಗೆ ಸಂಬಳ ಎಷ್ಟು ಹೆಚ್ಚಿಸಿದಿರಿ?’ ಎಂದು ದೇಶದ ಕೈಗಾರಿಕೆಗಳಿಗೆ ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ. ದೆಹಲಿಯ ಭಾರತ್ ಮಂಟಪಂನಲ್ಲಿ ಎಫ್​ಐಸಿಸಿಐನ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತ ಹಲವು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಭಾರತೀಯ ಉದ್ಯಮಗಳಿಗೆ ಹೆಚ್ಚು ಮಾರುಕಟ್ಟೆ ಅವಕಾಶ ಸಿಗುತ್ತದೆ. ಇದರಿಂದ ಹೆಚ್ಚು ಲಾಭ ಆಗುವುದು ಕೈಗಾರಿಕೆಗಳಿಗೆಯೇ ಎಂದು ಸಭೆಯಲ್ಲಿ ನೆರೆದಿದ್ದ ಉದ್ಯಮಿಗಳಿಗೆ ಪ್ರಧಾನಿಗಳು ತಿಳಿಸಿದರು.

Loading...

ಭಾರತದ ಪ್ರಗತಿಯಿಂದ ಉದ್ಯಮಗಳಿಗೆ ಹೊಸ ಅವಕಾಶ

ಭಾರತ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಫಿಚ್, ಮೂಡೀಸ್, ಎಸ್ ಅಂಡ್ ಪಿ ಗ್ಲೋಬಲ್ ಇತ್ಯಾದಿ ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಮೇಲ್ಮುಖವಾಗಿ ಪರಿಷ್ಕರಿಸುತ್ತಿವೆ. ಭಾರತದ ಪ್ರಗತಿಯಿಂದ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಅವಕಾಶಗಳನ್ನು ನಮ್ಮ ಕೈಗಾರಿಕೆಗಳು ಸ್ವೀಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳಿಗೆ 6 ತಿಂಗಳಲ್ಲಿ ಲಕ್ಷ ಕೋಟಿ ರೂ ಲಾಭ; ಪಿಎಸ್​ಯುಗಳು ನಾಲಾಯಕ್ಕೆನ್ನುವವರ ಕಣ್ತೆರೆಸುವ ಸುದ್ದಿ

ಕಳೆದ 12 ವರ್ಷದಲ್ಲಿ 50 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ

ಪ್ರಧಾನಿ ನರೇಂದ್ರ ಮೋದಿ, ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ ಕಳೆದ 12-13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಮುಕ್ತರಾಗಿದ್ದಾರೆ ಮತ್ತು ದೇಶದ ಆರ್ಥಿಕತೆಯಲ್ಲಿ ಮಹತ್ವದ ಪರಿವರ್ತನೆಯಾಗಿದೆ ಎಂದು ಹೇಳಿದರು

ಭಾರತದ ಆರ್ಥಿಕ ಪರಿವರ್ತನೆಯ ಪಯಣ

ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಹಲವು ಹಂತಗಳನ್ನು ಕಂಡಿದ್ದು, ‘ಲೈಸೆನ್ಸ್ ಕೋಟಾ ರಾಜ್’, ರಾಷ್ಟ್ರೀಕರಣದ ವಿಫಲ ಪ್ರಯೋಗಗಳು ಮತ್ತು 21ನೇ ಶತಮಾನದಲ್ಲಿ ‘ಫ್ರಜೈಲ್ 5’ (Fragile 5) ಆರ್ಥಿಕತೆಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ದಿನಗಳನ್ನು ಪ್ರಧಾನಿ ಸ್ಮರಿಸಿದರು.

ಕಳೆದ 12 ವರ್ಷಗಳಲ್ಲಿ ಯುವಜನತೆ, ರೈತರು, ಕಾರ್ಮಿಕರು ಮತ್ತು ಉದ್ಯಮ ನಾಯಕರ ಕಠಿಣ ಪರಿಶ್ರಮದಿಂದ ಈ ಪರಿಸ್ಥಿತಿ ಬದಲಾಗಿದೆ ಎಂದು ಅವರು ಶ್ಲಾಘಿಸಿದರು.

ಫಾರ್ಮಾ ಸೆಕ್ಟರ್​ಗೆ ಪ್ರಧಾನಿಗಳ ಕರೆ

ಫಾರ್ಮಾ ಸೆಕ್ಟರ್​ನಲ್ಲಿ ಭಾರತ ಸಾಕಷ್ಟು ರಫ್ತು ಮಾಡುತ್ತದೆ. ಆದರೆ, ಔಷಧ ತಯಾರಿಸಲು ಬೇಕಾದ ಎಪಿಐಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಇದೆ. ಈ ಸೆಕ್ಟರ್​ನಲ್ಲಿ ಸ್ವಾವಲಂಬನೆ ಹೇಗೆ ಸಾಧಿಸುವುದು? ಯಾವ ಎಪಿಐಗಳನ್ನು ಇಲ್ಲಿ ತಯಾರಿಸಬಹುದು ಎಂದು ಯೋಚಿಸಬೇಕು ಎಂದು ಈ ವಲಯದ ಉದ್ಯಮಿಗಳಿಗೆ ಕಿವಿಮಾತು ಹೇಳಿದರು ಪ್ರಧಾನಿಗಳು.

ಇದೇ ವೇಳೆ, ಕೃಷಿ ಕ್ಷೇತ್ರದಲ್ಲಿ ರಫ್ತು ಕಡಿಮೆ ಇರುವುದಕ್ಕೆ ಅವರು ಆತಂಕ ವ್ಯಕ್ತಪಡಿಸಿದರು. ಜನಸಾಮಾನ್ಯರ ತೆರಿಗೆ ಹೊರೆ ತಗ್ಗಿಸಲು 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಕೊಟ್ಟಿರುವುದನ್ನು ಅವರು ವಿವರಿಸಿದರು.

ಇದನ್ನೂ ಓದಿ: ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್, 2027ರ ಚುನಾವಣೆವರೆಗೆ ಪಾವತಿ ಶುಲ್ಕ ಜಾರಿ ವಿಳಂಬ ಸಾಧ್ಯತೆ

ಎಫ್​ಐಸಿಸಿಐ ಶತಮಾನೋತ್ಸವದ ಮಹತ್ವ

1927ರ ಏಪ್ರಿಲ್ 7ರಂದು ಸ್ಥಾಪನೆಯಾದ ಫಿಕ್ಕಿ ಸಂಸ್ಥೆಯು (FICCI) 100 ವರ್ಷಗಳನ್ನು ಪೂರೈಸುತ್ತಿದ್ದು, 2026-27ನೇ ಸಾಲನ್ನು ಅದರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಎಫ್ಐಸಿಸಿಐನ ವಾರ್ಷಿಕ ಸಭೆಯನ್ನು ಉದ್ಘಾಟಿಸಿದರು. ದೇಶದ 2047ರ ಅಭಿವೃದ್ಧಿ ಯೋಜನೆಯನ್ನು ಚರ್ಚಿಸಲು 2,500ಕ್ಕೂ ಹೆಚ್ಚು ನಿಯೋಗಗಳು ಒಂದೇ ವೇದಿಕೆಯಲ್ಲಿ ಸಮ್ಮಿಳನಗೊಂಡಿದ್ದ ಸಭೆ ಅದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Thu, 19 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us