ಐಟಿ ಕಂಪನಿಗಳ ಕೈತಪ್ಪಿದ ಗ್ರೀನ್ ಕಾರ್ಡ್ ಪ್ರೋಗ್ರಾಮ್; ಎಚ್-1ಬಿ ವಿಸಾದಾರರನ್ನು ವಿದೇಶೀ ಜೀತದಾಳುಗಳೆಂದು ಜರಿದ ಜೆ.ಡಿ. ವಾನ್ಸ್

ಎಚ್-1ಬಿ ವೀಸಾ ನಿಯಮಗಳ ಉಲ್ಲಂಘನೆ ಮತ್ತು ವೀಸಾ ದುರುಪಯೋಗದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು 8 ಪ್ರಮುಖ ಐಟಿ ಸಂಸ್ಥೆಗಳನ್ನು ಗ್ರೀನ್ ಕಾರ್ಡ್ ಆಧಾರಿತ ಶಾಶ್ವತ ಉದ್ಯೋಗ ಪ್ರಮಾಣಪತ್ರ (PERM) ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಐಟಿ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಅದರಲ್ಲೂ ಮೈಕ್ರೋಸಾಫ್ಟ್ ಅನ್ನು ಸ್ಥಳೀಯ ಕಾರ್ಮಿಕರ ಪಾಲಿನ ವಿಲನ್ ಎಂದೇ ಪರೋಕ್ಷವಾಗಿ ಟೀಕಿಸಿದ್ದಾರೆ.

ಐಟಿ ಕಂಪನಿಗಳ ಕೈತಪ್ಪಿದ ಗ್ರೀನ್ ಕಾರ್ಡ್ ಪ್ರೋಗ್ರಾಮ್; ಎಚ್-1ಬಿ ವಿಸಾದಾರರನ್ನು ವಿದೇಶೀ ಜೀತದಾಳುಗಳೆಂದು ಜರಿದ ಜೆ.ಡಿ. ವಾನ್ಸ್
ಎಚ್​1ಬಿ ವಿಸಾ
Image Credit source: Getty Images

Updated on: Oct 09, 2026 | 11:48 AM

ನವದೆಹಲಿ, ಅಕ್ಟೋಬರ್ 9: ಅಮೆರಿಕದ ಕಾರ್ಮಿಕ ಇಲಾಖೆ ಹಾಗೂ ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ನಿರ್ಧಾರವೊಂದರಲ್ಲಿ, ಎಚ್-1ಬಿ (H-1B) ವೀಸಾ ನಿಯಮಗಳ ಉಲ್ಲಂಘನೆ ಮತ್ತು ಸ್ಥಳೀಯ ಕಾರ್ಮಿಕರ ಹಕ್ಕುಗಳ ತುಳಿತದ ಆರೋಪದ ಮೇಲೆ 8 ಪ್ರಮುಖ ಐಟಿ ಸೇವಾನಿರತ ಸಂಸ್ಥೆಗಳನ್ನು ಗ್ರೀನ್ ಕಾರ್ಡ್‌ಗೆ ಆಧಾರವಾಗಿರುವ PERM (Green Card Visa Program) ಪ್ರಕ್ರಿಯೆಯಿಂದ ಅಮಾನತುಗೊಳಿಸಲಾಗಿದೆ.

ಅಮೆರಿಕದ ‘ಲೇಬರ್ ಕಂಡಿಷನ್ ಅಪ್ಲಿಕೇಷನ್’ (LCA) ಮತ್ತು ವಿದೇಶಿ ನೌಕರರ ನೇಮಕಾತಿ ನಿಯಮಾವಳಿಗಳನ್ನು ಈ ಕಂಪನಿಗಳು ಸಿಸ್ಟಮ್ಯಾಟಿಕ್ ಆಗಿ ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನುವ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

  • ವೇತನ ಶೋಷಣೆ: ಎಚ್-1ಬಿ ವೀಸಾದಡಿ ಕರೆಸಿಕೊಳ್ಳುವ ವಿದೇಶಿ ನೌಕರರಿಗೆ ಅಮೆರಿಕದ ಸ್ಥಳೀಯ ಅರ್ಹ ನೌಕರರಿಗೆ ನೀಡಬೇಕಾದ ‘ಚಾಲ್ತಿ ವೇತನ’ಕ್ಕಿಂತ (Prevailing Wage) ತೀರಾ ಕಡಿಮೆ ವೇತನ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
  • ಸ್ಥಳೀಯರಿಗೆ ಅವಕಾಶ ನಿರಾಕರಣೆ: ಸ್ಥಳೀಯ ಅಮೆರಿಕನ್ ನಾಗರಿಕರಿಗೆ ಸೂಕ್ತ ಉದ್ಯೋಗಾವಕಾಶ ನೀಡದೆ, ಕೃತಕವಾಗಿ ಅಭ್ಯರ್ಥಿಗಳ ಕೊರತೆಯಿದೆ ಎಂದು ತೋರಿಸಿ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ (PERM Stage) ಅರ್ಜಿ ಸಲ್ಲಿಸುತ್ತಿದ್ದುದು ಸಾಬೀತಾಗಿದೆ.
  • ಬೆಂಚ್ ಪೇ ಉಲ್ಲಂಘನೆ: ಪ್ರಾಜೆಕ್ಟ್ ಇಲ್ಲದಿರುವ ಸಮಯದಲ್ಲಿ ನೌಕರರಿಗೆ ವೇತನ ನೀಡದೆ ‘ಅನ್‌ಪೇಡ್ ಲೀವ್’ ಮೇಲೆ ಕಳುಹಿಸುವ ಅಕ್ರಮ ಪದ್ಧತಿಯನ್ನು ಈ ಸಂಸ್ಥೆಗಳು ಅನುಸರಿಸುತ್ತಿದ್ದವು.

ಇದನ್ನೂ ಓದಿ: ಟೆಕ್ಕಿಗಳಿಗೆ ಟ್ರಂಪ್ ಶಾಕ್; ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಇನ್ಫೋಸಿಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳನ್ನು ಕೈಬಿಟ್ಟ ಅಮೆರಿಕ

ಈ ಎಲ್ಲಾ ಲೋಪಗಳ ಹಿನ್ನೆಲೆಯಲ್ಲಿ, ಅಮೆರಿಕನ್ ಕಾರ್ಮಿಕರ ಹಿತಾಸಕ್ತಿ ಕಾಯಲು ಮತ್ತು ವೀಸಾ ಅಕ್ರಮಗಳಿಗೆ ತಡೆಹಾಕಲು ಈ ಸಂಸ್ಥೆಗಳಿಗೆ ಗ್ರೀನ್ ಕಾರ್ಡ್ ಸ್ಪಾನ್ಸರ್‌ಶಿಪ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ.

PERM ವ್ಯವಸ್ಥೆ ಹೇಗಿದೆ?

PERM ಎಂದರೆ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ ಪ್ರೋಗ್ರಾಮ್. ಅಮೆರಿಕದಲ್ಲಿರುವ ಕಂಪನಿಯೊಂದು ಒಂದು ಉದ್ಯೋಗಕ್ಕೆ ಅರ್ಹರಾಗಿರುವ ಅಥವಾ ಕೆಲಸ ಮಾಡಲು ಇಷ್ಟ ಇಲ್ಲದೇ ಇರುವ ಅಮೆರಿಕನ್ ವ್ಯಕ್ತಿಗಳು ಲಭ್ಯ ಇಲ್ಲದಿದ್ದರೆ ಕಾರ್ಮಿಕ ಇಲಾಖೆಯಿಂದ PERM ಪ್ರಮಾಣ ಪತ್ರವು ಆ ಕಂಪನಿಗೆ ಕೊಡಲಾಗುತ್ತದೆ. ಆ ಕಂಪನಿಯು ಆ ಉದ್ಯೋಗಕ್ಕೆ ವಿದೇಶದಿಂದ ಕಾರ್ಮಿಕರನ್ನು ಕರೆತರಬಹುದು. ಅವರಿಗೆ ಗ್ರೀನ್ ಕಾರ್ಡ್ ಸ್ಪಾನ್ಸರ್ ಮಾಡಬಹುದು.

PERM ಎಂಬುದು ಒಂದು ರೀತಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್​ಗಳನ್ನು ಒದಗಿಸಲು ಇರುವ ಪ್ರಮುಖ ಹೆಜ್ಜೆ. ಗ್ರೀನ್ ಕಾರ್ಡ್ ಪಡೆದವರು ಅಮೆರಿಕದ ನಾಗರಿಕರಾಗಬಹುದು. ಅಂದರೆ, ವಿದೇಶೀ ಕಾರ್ಮಿಕರು ಅಮೆರಿಕದ ಪೌರತ್ವ ಪಡೆಯಲು PERM ಒಂದು ದಾರಿ ಒದಗಿಸುತ್ತದೆ.

ಎಚ್​1ಬಿ ವಿಸಾದಾರರನ್ನು ಪರದೇಸಿ ಜೀತದಾಳುಗಳೆಂದು ಕರೆದರಾ ಜೆ.ಡಿ. ವ್ಯಾನ್ಸ್?

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಎಚ್-1ಬಿ ವೀಸಾ ವ್ಯವಸ್ಥೆ ಹಾಗೂ ಜಾಗತಿಕ ಔಟ್‌ಸೋರ್ಸಿಂಗ್ ಕಂಪನಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಎಚ್-1ಬಿ ಮೂಲಕ ಕರೆಸಿಕೊಳ್ಳುವ ವಿದೇಶಿ ನೌಕರರನ್ನು “ವಿದೇಶಿ ಗೇಣಿಯಾಳುಗಳು” ಅಥವಾ “ಆಧುನಿಕ ಜೀತದಾಳುಗಳು” (Foreign Indentured Servants) ಎಂದು ಅವರು ಬಣ್ಣಿಸಿದ್ದಾರೆ.

Indentured Servant ಎಂಬುದು ಸುಧಾರಿತ ಗುಲಾಮಗಿರಿ ರೂಪ. ಇಲ್ಲಿ ವಿದೇಶಗಳಿಂದ ಕಾರ್ಮಿಕರು ಒಂದು ದೇಶದ ಪೌರತ್ವಕ್ಕೋಸ್ಕರ ನಿರ್ದಿಷ್ಟ ವರ್ಷಗಳ ಕಾಲ ಯಾವ ಸಂಬಳಾಪೇಕ್ಷೆಯೂ ಇಲ್ಲದೆ ಕೆಲಸ ಮಾಡುತ್ತಾರೆ. ಈ ಅವಧಿಯಲ್ಲಿ ಅವರಿಗೆ ಕೇವಲ ಊಟ, ಬಟ್ಟೆ, ವಸತಿ ಇತ್ಯಾದಿ ಮೂಲಭೂತ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಅಮೆಜಾನ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್; ಭಾರತವೂ ಸೇರಿ ಜಾಗತಿಕವಾಗಿ ಸಾವಿರ ನೌಕರರಿಗೆ ಹೋಯ್ತು ಕೆಲಸ

ಭಾರತೀಯ ನೌಕರರ ಮೇಲೆ ಇದರ ಪರಿಣಾಮವೇನು?

ಈ ನಿರ್ಧಾರವು ಭಾರತೀಯ ಐಟಿ ವಲಯ ಮತ್ತು ಅಮೆರಿಕದಲ್ಲಿರುವ ಭಾರತೀಯ ತಂತ್ರಜ್ಞರ ಮೇಲೆ ದ್ವಿಮುಖ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಮಾನತುಗೊಂಡಿರುವ ಈ 8 ಕಂಪನಿಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಹಾಗೂ ಗ್ರೀನ್ ಕಾರ್ಡ್ ಹಂತದಲ್ಲಿದ್ದ ಉದ್ಯೋಗಿಗಳ PERM ಸರ್ಟಿಫಿಕೇಶನ್ ತತ್​ಕ್ಷಣಕ್ಕೆ ರದ್ದಾಗುವುದಿಲ್ಲ. ಆದರೆ, ಎಚ್1ಬಿ ವೀಸಾ ಅವಧಿ ವಿಸ್ತರಣೆಗೆ ತೊಡಕಾಗಬಹುದು.

PERM ಹೊಸ ಕ್ರಮದಿಂದ ತನಗೆ ತೊಂದರೆ ಇಲ್ಲ ಎಂದ ಟಿಸಿಎಸ್

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಅಮೆರಿಕ ಸರ್ಕಾರ PERM ಯೋಜನೆಯನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ತನಗೆ ಯಾವ ಸಮಸ್ಯೆಯೂ ಆಗದು ಎಂದಿದೆ. ಕಳೆದ ಎರಡು ವರ್ಷದಲ್ಲಿ PERM ಪ್ರೋಗ್ರಾಮ್ ಮೂಲಕ ಬೆರಳೆಣಿಕೆಯಷ್ಟು ಮಾತ್ರ ನೇಮಕಾತಿ ಮಾಡಿಕೊಂಡಿದ್ದೇವೆ. ಅಮೆರಿಕದ ಸ್ಥಳೀಯ 15,000 ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ತನ್ನ ಯೋಜನೆ ನೆರವೇರಲಿದೆ ಎಂದು ಟಿಸಿಎಸ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us