
ನವದೆಹಲಿ, ಏಪ್ರಿಲ್ 17: ಇರಾನ್ ಯುದ್ಧ ಭೀತಿ ಸ್ವಲ್ಪ ತಗ್ಗುತ್ತಿದ್ದಂತೆಯೇ ವಿವಿಧ ಮಾರುಕಟ್ಟೆಗಳು ಸಮಾಧಾನದ ಉಸಿರು ಬಿಡುತ್ತಿವೆ. ಡಾಲರ್ ಎದುರು ಉಸಿರುಗಟ್ಟುತ್ತಿದ್ದ ರುಪಾಯಿಗೆ ಸ್ವಲ್ಪ ಜೀವ ಸಿಕ್ಕಿದೆ. ಶುಕ್ರವಾರದ ಬೆಳಗಿನ ಟ್ರೇಡಿಂಗ್ನಲ್ಲಿ ಡಾಲರ್ ಎದುರು ರುಪಾಯಿ 39 ಪೈಸೆ ಹೆಚ್ಚಿದೆ. ಟ್ರೇಡಿಂಗ್ನ ಒಂದು ಹಂತದಲ್ಲಿ ರುಪಾಯಿ ಮೌಲ್ಯ 92.75 ಮಟ್ಟದಲ್ಲಿತ್ತು.
ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ನಿನ್ನೆ ಗುರುವಾರ ಒಂದು ಡಾಲರ್ಗೆ ರುಪಾಯಿ 93ಕ್ಕಿಂತ ಹೆಚ್ಚು ಇತ್ತು. ಇವತ್ತು 92.91ರಲ್ಲಿ ವಹಿವಾಟು ಆರಂಭ ಕಂಡ ರುಪಾಯಿ 92.75ರವರೆಗೆ ಏರಿದೆ. ಡಾಲರ್ ಎದುರು ರುಪಾಯಿ ಸತತ ಎರಡನೇ ದಿನ ಏರಿಕೆ ಕಂಡಿರುವುದು ವಿಶೇಷ. ನಿನ್ನೆ 19 ಪೈಸೆ ಹೆಚ್ಚಿದರೆ ಇವತ್ತು 39 ಪೈಸೆಯಷ್ಟು ಬಲಪಡೆದಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಯುದ್ಧ ಭೀತಿ ಕಡಿಮೆ ಆಗಿ ಶಾಂತಿ ಮರಳುವ ಸಾಧ್ಯತೆ ಕಾಣುತ್ತಿದೆ. ಇದು ರುಪಾಯಿ ವೃದ್ಧಿಗೆ ಪ್ರಮುಖ ಕಾರಣವಿರಬಹುದು ಎಂದು ಭಾವಿಸಲಾಗಿದೆ.
ಇಸ್ರೇಲ್ ಮತ್ತು ಲೆಬನಾನ್ ಮಧ್ಯೆ 10 ದಿನದ ಕದನ ವಿರಾಮ ಏರ್ಪಟ್ಟಿರುವುದು; ಇರಾನ್ ಮತ್ತು ಅಮೆರಿಕದ ಮಧ್ಯೆ ಮಾತುಕತೆ ಪುನಾರಂಭಗೊಳ್ಳುವುದು ಸೇರಿದಂತೆ ವಿವಿಧ ಪೂರಕ ವಿದ್ಯಮಾನಗಳು ಮಾರುಕಟ್ಟೆ ಅಪಾಯವನ್ನು ಕಡಿಮೆಗೊಳಿಸಿವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ತಲೆನೋವಾಗಿದ್ದ ಹಾರ್ಮುಜ್ ಜಲಸಂಧಿ ತಡೆಯೂ ನಿವಾರಣೆಯಾಗುವ ಆಶಯ ಇದೆ. ಹಾರ್ಮುಜ್ನಲ್ಲಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಇರಾನ್ಗೆ ಚೀನಾ ಮನವಿ ಮಾಡಿಕೊಂಡಿರುವುದು ದೊಡ್ಡ ವಿಚಾರವಾಗಿದೆ.
ಇದನ್ನೂ ಓದಿ: ಎನ್ಬಿಎಫ್ಸಿಗಳಿಗೆ ಆರ್ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ
ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 100 ಡಾಲರ್ಗಿಂತ ಕೆಳಗೆ ಇಳಿದಿದೆ. ತೈಲ ಬೆಲೆ ಕಡಿಮೆ ಆದರೆ ಭಾರತದ ಆಮದು ವೆಚ್ಚವೂ ಕಡಿಮೆ ಆಗುತ್ತದೆ. ಇನ್ನೊಂದು ಸಂಗತಿ ಎಫ್ಐಐಗಳದ್ದು. ಈ ವಿದೇಶೀ ಸಾಂಸ್ಥಿಕ ಹೂಡಿಕೆಗಳ ಒಳಹರಿವು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿರುವುದು ಕೂಡ ರುಪಾಯಿ ಕರೆನ್ಸಿಗೆ ಬಲ ಸಿಗಲು ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ