
ಕೆಲವರು ದುಡಿದ ದುಡ್ಡನ್ನೆಲ್ಲಾ ಖರ್ಚು ಮಾಡ್ತಾರೆ. ಆದ್ರೆ, ಉಳಿತಾಯ (saving) ಮಾಡುವುದು ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು. ಇದು ಭವಿಷ್ಯದ ಸುರಕ್ಷತೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿಯಾಗಿದೆ. ತುರ್ತು ಪರಿಸ್ಥಿತಿಗಳಿಗೆ ಆಧಾರವಾಗಿದ್ದು, ಸಾಲ ಪಡೆಯಬೇಕಾದ ಸಂದರ್ಭ ಎದುರಾದರೆ ಕೈಯಲ್ಲಿದ್ದ ಉಳಿತಾಯ ಹಣವನ್ನೇ ಬಳಸಿಕೊಳ್ಳಬಹುದು. ಈ ಕೆಲ ಟಿಪ್ಸ್ ಗಳನ್ನು ಅನುಸರಿಸಿದ್ರೆ ಆದಾಯ ಇಂತಿಷ್ಟು ಭಾಗವನ್ನು ಉಳಿಸಲು ಸಾಧ್ಯ.
ಆದಾಯದ ಇಂತಿಷ್ಟು ಭಾಗ ಎತ್ತಿಡಿ: ತಿಂಗಳ ಆದಾಯವನ್ನು ಮೂರು ಭಾಗಗಳಾಗಿ ವಿಂಗಡಿಸುವುದು ಮುಖ್ಯ. ಮೂಲಭೂತ ಅವಶ್ಯಕತೆಗಳಿಗೆ ಶೇ 50 ರಷ್ಟು ಭಾಗ, ಶೇ. 30 ರಷ್ಟು ವೈಯುಕ್ತಿಕ ಖರ್ಚುಗಳಿಗೆ ಹಾಗೂ ಶೇ 20 ರಷ್ಟು ಉಳಿತಾಯಕ್ಕೆ ಹಣವನ್ನು ಎತ್ತಿಡಿ. ಹೀಗೆ ಮಾಡುವುದರಿಂದ ಖರ್ಚು ವೆಚ್ಚ ಹಾಗೂ ಉಳಿತಾಯ ಸರಿದೂಗಿಸಿಕೊಂಡು ಹೋಗಲು ಸಾಧ್ಯ.
ಖರ್ಚುಗಳನ್ನು ಟ್ರ್ಯಾಕ್ ಮಾಡಿ: ಖರ್ಚು ವೆಚ್ಚಗಳ ಲೆಕ್ಕವನ್ನು ಇಟ್ಟುಕೊಳ್ಳುವುದು ಮುಖ್ಯ. ಹೀಗೆ ಮಾಡಿದ್ರೆ ನಿಮ್ಮ ತಿಂಗಳ ಖರ್ಚು ಎಷ್ಟು ಆಗುತ್ತದೆ ಎಂದು ತಿಳಿಯುತ್ತದೆ. ಬೇಕಾಬಿಟ್ಟಿ ದುಡ್ಡು ವ್ಯಯಗಳಿಗೆ ಕಡಿವಾಣ ಹಾಕಬಹುದು.
ಸಂಬಳದಲ್ಲಿ ಮೊದಲ ಆದ್ಯತೆ ಉಳಿತಾಯಕ್ಕಿರಲಿ: ಕೆಲವರು ಅನಗತ್ಯ ಖರ್ಚುಗಳಿಗೆ ಮೊದಲು ಒತ್ತು ನೀಡಿ ಉಳಿದದ್ದನ್ನು ಉಳಿತಾಯವೆಂದು ಎತ್ತಿಡುತ್ತಾರೆ. ಆದರೆ ತಿಂಗಳ ಸಂಬಳ ನಿಮ್ಮ ಖಾತೆಗೆ ಜಮಾ ಆದ ಕೂಡಲೇ ಇಂತಿಷ್ಟು ಹಣವನ್ನು ಉಳಿತಾಯಕ್ಕೆಂದು ಇಟ್ಟುಕೊಳ್ಳಿ ಅಥವಾ ಬೇರೆ ಖಾತೆಗೆ ವರ್ಗಾಯಿಸಿ.
ತುರ್ತು ನಿಧಿ ಇರಲಿ: ಅಗತ್ಯ ಖರ್ಚುಗಳನ್ನು ಹೊರತು ಪಡಿಸಿ ಸ್ವಲ್ಪಹಣವನ್ನು ತುರ್ತು ನಿಧಿಯಾಗಿ ಮೀಸಲಿಡಿ.ಈ ಹಣವು ಅನಿರೀಕ್ಷಿತ ಆರೋಗ್ಯ ಸಮಸ್ಯೆ ಅಥವಾ ಜಾಬ್ ಕಳೆದುಕೊಂಡ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ.
ಬೇಕಾಬಿಟ್ಟಿ ಶಾಪಿಂಗ್ ಮಾಡ್ಬೇಡಿ: ಕೆಲವರು ಬೇರೆಯವರ ಬಳಿ ದುಬಾರಿ ವಸ್ತುಗಳಿವೆ ಎಂದು ತಾವೂ ಕೂಡ ಖರೀದಿ ಮಾಡುತ್ತಾರೆ. ಆದರೆ ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ರೆ ನೀವು ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ನಿಮಗೆ ಅದರ ಅವಶ್ಯಕತೆ ಇದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಿ. ಒಂದು ವೇಳೆ ಖರೀದಿಸಲೇಬೇಕು ಅಂತಿದ್ರೆ ಆನ್ಲೈನ್‌ನಲ್ಲಿ ಆಫರ್ ಇದೆಯೇ ಎಂದು ನೋಡಿ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಹಣದುಬ್ಬರ ಶೇ. 6.09; ಆರ್ಬಿಐನ ತಾಳಿಕೆ ಮಿತಿ ದಾಟಿದ ಬೆಲೆ ಏರಿಕೆ ದರ
ಮನೆಯ ಊಟಕ್ಕೆ ಮೊದಲ ಆದ್ಯತೆ ಇರಲಿ: ಹೊರಗಡೆ ಊಟ ತಿಂಡಿಗಾಗಿ ಹೆಚ್ಚು ಖರ್ಚು ಮಾಡ್ಬೇಡಿ. ಮನೆಯ ಊಟಕ್ಕೆ ಮೊದಲ ಆದ್ಯತೆ ನೀಡಿ. ಪದೇ ಪದೇ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವುದು ನಿಮ್ಮ ಕೈಯಲ್ಲಿದ್ದ ಹಣ ಖಾಲಿಯಾಗಲು ಮೊದಲ ದಾರಿಯಾಗುತ್ತದೆ. ಅಗತ್ಯವಿದ್ದರೆ ಮಾತ್ರ ಹೊರಗಡೆ ಊಟ ಮಾಡುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Thu, 12 November 26