
ದುಬೈ, ಜುಲೈ 14: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಸರಣಿ ದಾಳಿಗಳು ಹಾಗೂ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ಪೂರ್ವ ಕರಾವಳಿಯಲ್ಲಿ ಹೊಸದೊಂದು ಬಂದರನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಯುಎಇ ಮೂಲದ ಜಾಗತಿಕ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆಯಾದ ಡಿಪಿ ವರ್ಲ್ಡ್ (DP World), ಯುಎಇಯ ಪೂರ್ವ ಕರಾವಳಿಯಲ್ಲಿರುವ ಫುಜೈರಾ (Fujairah) ಪ್ರಾಂತ್ಯದಲ್ಲಿ ಹೊಸದೊಂದು ಬಹೂಪಯೋಗಿ (multipurpose) ಬಂದರನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಇದರ ಜೊತೆಗೆ ಪ್ರಸ್ತುತ ಅಲ್ಲಿರುವ ಬಂದರಿನಲ್ಲಿ ಹೊಸ ಕಂಟೈನರ್ ಟರ್ಮಿನಲ್ ನಿರ್ಮಿಸುವ ಕುರಿತೂ ಮಾತುಕತೆ ನಡೆಸುತ್ತಿದೆ.
ಪ್ರಸ್ತುತ ದುಬೈನ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ‘ಜೆಬೆಲ್ ಅಲಿ’ (Jebel Ali) ಬಂದರಿಗೆ ಬರುವ ಹಡಗುಗಳು ಒಮಾನ್ ಮತ್ತು ಇರಾನ್ ನಡುವಿನ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗಬೇಕಾಗಿದೆ. ಆದರೆ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಫುಜೈರಾ ಬಂದರು ಒಮಾನ್ ಗಲ್ಫ್ (Gulf of Oman) ಭಾಗದಲ್ಲಿ ಬರಲಿದ್ದು, ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸದೆಯೇ ಯುಎಇ ತಲುಪಬಹುದು.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?
ಯುಎಇಯಲ್ಲಿ ರಸ್ತೆ ಮಾರ್ಗಗಳಲ್ಲಿ ಟ್ರಕ್ಗಳ ಮೂಲಕ ಸರಕುಗಳ ಸಾಗಣೆ ಮಾಡಬಹುದು. ಹಾರ್ಮುಜ್ ಜಲಸಂಧಿ ತಪ್ಪಿಸಲು ಇತರ ಕೊಲ್ಲಿ ದೇಶಗಳು ಕೂಡ ಈ ರಸ್ತೆ ಮಾರ್ಗಗಳನ್ನು ಬಳಸಲು ಅವಕಾಶ ಇರುತ್ತದೆ. ಫುಜೈರಾ ಬಂದರಿನಿಂದ ಹಡಗುಗಳು ಓಮನ್ ಗಲ್ಫ್ ಮೂಲಕ ಹೊರಗೆ ಸಾಗಬಹುದು. ಓಮನ್ ಗಲ್ಫ್ ಮಾರ್ಗವು ಹಾರ್ಮುಜ್ ಜಲಸಂಧಿಯಷ್ಟು ಕಿರಿದಾಗಿಲ್ಲ. ಹೀಗಾಗಿ, ಇರಾನ್ನಿಂದ ತಡೆ ಬರುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ಟಾಟಾ ಮೋಟಾರ್ಸ್ ‘ಕೌಶಲ್ಯ ಯೋಜನೆ’: 23,000ಕ್ಕೂ ಹೆಚ್ಚು ಯುವಕರಿಗೆ ತರಬೇತಿ, 5,000ಕ್ಕೂ ಅಧಿಕ ಮಂದಿಗೆ ಉದ್ಯೋಗ ಭಾಗ್ಯ
ಹೊಸ ಬಂದರು ನಿರ್ಮಾಣವಾದರೂ ದುಬೈನ ಜೆಬೆಲ್ ಅಲಿ ಬಂದರಿನ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲ ಎಂದು ಡಿಪಿ ವರ್ಲ್ಡ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಹೊಸ ಯೋಜನೆಗಳು ಕೇವಲ ಮುನ್ನೆಚ್ಚರಿಕಾ ಹಾಗೂ ಪರ್ಯಾಯ ವ್ಯವಸ್ಥೆಯಾಗಿದ್ದು, ಪರಿಸ್ಥಿತಿ ಕೈಮೀರಿದಾಗ ಮಾತ್ರ ಬಳಸಲು ಯೋಜಿಸಲಾಗಿದೆ. ಈ ಹೊಸ ಬಂದರನ್ನು ಅತ್ಯಂತ ವೇಗವಾಗಿ ಅಂದರೆ ಕೇವಲ ಒಂದೂವರೆ ವರ್ಷದಲ್ಲಿ ನಿರ್ಮಿಸಿ ಮುಗಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ