ನವದೆಹಲಿ: ಕೇಂದ್ರ ಬಜೆಟ್ಗೆ (Budget 2023) ಇನ್ನು ಒಂದು ತಿಂಗಳಷ್ಟೇ ಬಾಕಿ ಇದ್ದು ತೆರಿಗೆದಾರರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೂಡ ಬಜೆಟ್ ಸಿದ್ಧತೆಯ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಬಜೆಟ್ನಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣ ದೊರೆಯುವುದರಿಂದ ಅದಕ್ಕನುಗುಣವಾಗಿಯೇ ಜನರೂ ತಮ್ಮ ಹೂಡಿಕೆ, ಉದ್ಯಮ ಹಣಕಾಸು ವ್ಯವಹಾರಗಳ ಬಗ್ಗೆ ಯೋಜನೆ ರೂಪಿಸುವುದು ಸಹಜ. ಈ ಬಾರಿಯ ಬಜೆಟ್ನಲ್ಲಿ ತೆರಿಗೆದಾರರು ನಿರೀಕ್ಷಿಸುವ ಕೆಲವು ಅಂಶಗಳು ಇಲ್ಲಿವೆ.
ಪ್ರಸ್ತುತ ಬಂಡವಾಳದಿಂದ ಗಳಿಸಿದ ಲಾಭಕ್ಕೆ ತೆರಿಗೆ ಪಾವತಿಸುವ ಅವಧಿ ಮತ್ತು ದರ ಭಿನ್ನವಾಗಿದೆ. ಇದನ್ನು ಸರಳಗೊಳಿಸುವ ಅಗತ್ಯವಿದೆ. ಉದಾಹರಣೆಗೆ; ಡೆಬ್ಟ್ ಫಂಡ್ ಮತ್ತು ಚಿನ್ನದ ಫಂಡ್ಗಳ ಮೇಲೆ 3 ವರ್ಷಗಳ ವರೆಗೆ ಮಾಡುವ ಹೂಡಿಕೆಯಿಂದ ಪಡೆಯುವ ಆದಾಯವನ್ನು ದೀರ್ಘಾವಧಿಯ ಬಂಡವಾಳ ಗಳಿಕೆ ಎಂದು ಪರಿಗಣಿಸಲಾಗುತ್ತಿದೆ. ಈಕ್ವಿಟಿ ಫಂಡ್ಗಳನ್ನು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇಟ್ಟುಕೊಂಡರೆ ಮತ್ತು ರಿಯಲ್ ಎಸ್ಟೇಟ್, ಅನ್ಲಿಸ್ಟೆಡ್ ಷೇರುಗಳನ್ನು 2 ವರ್ಷಗಳ ವರೆಗೆ ಇಟ್ಟುಕೊಂಡರೆ ಅದರಿಂದ ದೊರೆಯುವ ಆದಾಯವನ್ನು ದೀರ್ಘಾವಧಿಯ ಬಂಡವಾಳ ಗಳಿಕೆ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿ ತೆರಿಗೆ ದರದಲ್ಲಿಯೂ ವ್ಯತ್ಯಸಗಳಿವೆ. ಇದನ್ನು ಸರ್ಕಾರ ಸರಳಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ತೆರಿಗೆದಾರರು ಇದ್ದಾರೆ.
ಷೇರು ಮರುಖರೀದಿಯಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಟೆಂಡರ್ ಆಫರ್ ಮತ್ತು ಓಪನ್ ಮಾರ್ಕೆಟ್ ಆಫರ್. ಟೆಂಡರ್ ಆಫರ್ನಲ್ಲಿ ಕಂಪನಿಯು ನಿರ್ದಿಷ್ಟ ಬೆಲೆಯೊಂದಕ್ಕೆ ಷೇರು ಮರು ಖರೀದಿಸುವ ಬಗ್ಗೆ ಆಫರ್ ನೀಡುತ್ತದೆ. ಈ ಮಾದರಿಯ ಷೇರು ಮರು ಖರೀದಿಗೆ ಕಂಪನಿ ಶೇಕಡಾ 20 ಹಾಗೂ ಸರ್ಚಾರ್ಜ್ ಪ್ಲಸ್ ಸೆಸ್ ಶೇಕಡಾ 23.3 ಪಾವತಿಸಬೇಕಾಗುತ್ತದೆ. ಈ ವಿಧಾನದಲ್ಲಿ ಷೇರುದಾರ ಗಳಿಸಿದ ಬಂಡವಾಳಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ. ಓಪನ್ ಮಾರ್ಕೆಟ್ ಆಫರ್ ವಿಧಾನದ ಷೇರು ಮರು ಖರೀದಿ ವೇಳೆ ಕಂಪನಿ ಶೇಕಡಾ 23.3ರ ತೆರಿಗೆ ಪಾವತಿಸಬೇಕಾಗುತ್ತದೆ. ಷೇರುದಾರ ಕೂಡ ಬಂಡವಾಳದಿಂದ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಒಂದೇ ವ್ಯವಹಾರಕ್ಕೆ ಎರಡು ಬಾರಿ ತೆರಿಗೆ ವಿಧಿಸಿದಂತಾಗುತ್ತದೆ. ಷೇರು ಮರು ಖರೀದಿ ವಿಚಾರದಲ್ಲಿ ಎರಡೂ ವಿಧಾನದ ಮರು ಖರೀದಿಗೆ ಒಂದೇ ತೆರನಾದ ತೆರಿಗೆ ಇರಬೇಕು ಎಂಬುದು ತೆರಿಗೆದಾರರ ಬೇಡಿಕೆಯಾಗಿದೆ.
2.5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಇಪಿಎಫ್ ಹೂಡಿಕೆಗೆ ನೀಡಲಾಗುವ ಬಡ್ಡಿಗೆ ತೆರಿಗೆ ಇದೆ. ಆದರೆ ಈ ತೆರಿಗೆಯನ್ನು ಮೊತ್ತ ಸಂಚಯವಾಗುತ್ತಿರುವ ಆಧಾರದಲ್ಲಿ ವಿಧಿಸುತ್ತಾರೆಯೇ ಅಥವಾ ಮೊತ್ತವನ್ನು ಹಿಂಪಡೆಯುವಾಗ ಪಡೆಯಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮೊತ್ತ ಹಿಂಪಡೆಯುವ ಸಂದರ್ಭದಲ್ಲಿ ತೆರಿಗೆ ಪಡೆಯುವುದು ಉತ್ತಮ ಎಂಬುದು ತೆರಿಗೆದಾರರ ಬೇಡಿಕೆಯಾಗಿದೆ.
ನಿರ್ಮಾಣ ಹಂತದಲ್ಲಿ ತೆಗೆದುಕೊಂಡ ವಸತಿ ಸಾಲದ ಮೇಲಿನ ಬಡ್ಡಿಗೆ ಗೃಹ ನಿರ್ಮಾಣ ಪೂರ್ತಿಯಾದ ನಂತರದ ವರ್ಷದಿಂದ ಐದು ಸಮಾನ ಕಂತುಗಳಲ್ಲಿ ಕಡಿತಗೊಳಿಸಿ ತೆರಿಗೆ ವಿನಾಯಿತಿ ಪಡೆಯಲು ಸದ್ಯ ಅನುಮತಿಸಲಾಗಿದೆ. ನಿರ್ಮಾಣ ಸ್ಥಿತಿ ಏನೇ ಇದ್ದರೂ ಸಾಲ ಪಡೆದ ವ್ಯಕ್ತಿ ಇಎಂಐ ಪಾವತಿಸುತ್ತಿರುವುದರಿಂದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿಗೂ ಪಾವತಿಯ ವರ್ಷವನ್ನೇ ಪರಿಗಣಿಸಬೇಕು ಎಂಬ ಬೇಡಿಕೆ ಇದೆ.
ಇಷ್ಟೇ ಅಲ್ಲದೆ, ಸೆಕ್ಷನ್ 16ರ ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ ವಿಧಿಸಲಾಗುವ ತೆರಿಗೆ ವಿಧಾನದಲ್ಲಿ ಬದಲಾವಣೆ, ಸೆಕ್ಷನ್ 80ಸಿ ಅಡಿ ವಿನಾಯಿತಿ ಮಿತಿ ಹೆಚ್ಚಳ, ಆರೋಗ್ಯ ವಿಮೆ ಪ್ರೀಮಿಯಂ ಮೇಲಿನ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳು, ನಿರೀಕ್ಷೆಗಳು ತೆರಿಗೆದಾರರಲ್ಲಿವೆ. ಈ ಪೈಕಿ ಕೆಲವು ಅಂಶಗಳ ವಿಚಾರವಾಗಿ ವಿವಿಧ ಸಮಿತಿಗಳೂ ಸರ್ಕಾರದ ಗಮನ ಸೆಳೆದಿವೆ. ಇವುಗಳಲ್ಲಿ ಯಾವುದನ್ನೆಲ್ಲ ಸರ್ಕಾರ ಈಡೇರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 11:07 am, Fri, 30 December 22