
ನವದೆಹಲಿ, ಅಕ್ಟೋಬರ್ 8: ಭಾರತದಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಕೆಟ್ಟದಾಗಿದೆ. ಹಲವು ಪ್ರದೇಶಗಳಲ್ಲಿ ಇದೂವರೆಗೆ ಅಂತರ್ಜಾಲ ಸೌಲಭ್ಯವೇ ಸಿಕ್ಕಿಲ್ಲ. ಅನೇಕ ಬುಡಕಟ್ಟು ಜನರು ಇಂಟರ್ನೆಟ್ ಇಲ್ಲದೇ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಭಾರತಕ್ಕೆ ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವಿಸ್ ಬೇಕು ಎಂಬಂತಹ ಕೂಗುಗಳು ಅಂತರ್ಜಾಲದಲ್ಲಿ ಟ್ರೆಂಡ್ ಆಗತೊಡಗಿವೆ. ಸ್ಟಾರ್ಲಿಂಗ್ ಮುಖ್ಯಸ್ಥ ಇಲಾನ್ ಮಸ್ಕ್ ಅವರೂ ಕೂಡ ಈ ಕುರಿತು ಪೋಸ್ಟ್ಗಳನ್ನು ಹಾಕಿದ್ದು, ಭಾರತದ ಕೆಲ ಉದ್ಯಮಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಭಾರತದಲ್ಲಿ ಸ್ಟಾರ್ಲಿಂಗ್ ಸರ್ವಿಸ್ ಬೇಕು ಎನ್ನುವ ಕೂಗು ಕೇಳಿಬರುತ್ತದೆ ಎಂದು ಹಿಂದೆಯೇ ಎಕ್ಸ್ ಬಳಕೆದಾರರೊಬ್ಬರು ಎಚ್ಚರಿಸಿ ಟ್ವೀಟ್ ಮಾಡಿದ್ದರು.
‘ಭಾರತದಲ್ಲಿ ಕೆಟ್ಟ ಇಂಟರ್ನೆಟ್ ಇದೆ. ಭಾರತಕ್ಕೆ ಸ್ಟಾರ್ಲಿಂಕ್ ಯಾಕೆ ಬೇಕು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಪೋಸ್ಟ್ಗಳನ್ನು ಭಾರತೀಯರು ಕಾಣಲಿದ್ದಾರೆ. ಇಂಟರ್ನೆಟ್ ಸರ್ವಿಸ್ಗಳು ನಿಜವಾಗಿಯೂ ಹಾಳಾಗುವ ಸಾಧ್ಯತೆ ಇರುತ್ತದೆ. ಜನರಿಗೆ ತಾಳ್ಮೆಗೆಡುವಂತೆ ಮಾಡಿ ಸ್ಟಾರ್ಲಿಂಕ್ ಬೇಕು ಎನ್ನುವ ಮಟ್ಟಕ್ಕೆ ಒತ್ತಡ ಏರ್ಪಡುವಂತೆ ಮಾಡಬಹುದು’ ಎಂದು ಅರವಿಂದ್ ಎನ್ನುವ ಎಕ್ಸ್ ಬಳಕೆದಾರರೊಬ್ಬರು ಜೂನ್ 11ರಂದು ಪೋಸ್ಟ್ ಹಾಕಿದ್ದರು.
ಇದನ್ನೂ ಓದಿ: ಇಲಾನ್ ಮಸ್ಕ್ ‘ಒಲಿಗಾರ್ಕ್’ ಆರೋಪಕ್ಕೆ ಭಾರತ ತಿರುಗೇಟು; ಸ್ಟಾರ್ಲಿಂಕ್ ವಿಳಂಬಕ್ಕೆ ನಿಯಮಗಳೇ ಕಾರಣವಲ್ಲ ಎಂದ ಸರ್ಕಾರ
ಈಗ ಸ್ಟಾರ್ಲಿಂಕ್ ಭಾರತದಲ್ಲಿ ಟ್ರೆಂಡಿಂಗ್ನಲ್ಲಿ ಇರುವುದರಿಂದ ಅರವಿಂದ್ ಅವರು ತಮ್ಮ ಹಿಂದಿನ ಟ್ವೀಟ್ ಅನ್ನು ನೆನಪು ಮಾಡಿದ್ದಾರೆ. ಹಾಗೆಯೇ, ಸ್ಟಾರ್ಲಿಂಕ್ ಪರ ಧ್ವನಿ ಎತ್ತಿರುವ ಕೆಲ ಎಕ್ಸ್ ಅಕೌಂಟ್ಗಳ ಸಾಚಾತನವನ್ನೂ ಎತ್ತಿ ತೋರಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಅಕೌಂಟ್ ತೆರೆದಿರುವ ಎಕ್ಸ್ ಬಳಕೆದಾರರು ದಿಢೀರನೇ ಭಾರತದಲ್ಲಿ ಇಂಟರ್ನೆಟ್ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಅರವಿಂದ್ ಅವರ ಎಕ್ಸ್ ಪೋಸ್ಟ್
ಹಾಗೆಯೇ, ನೈಜ ಇಂಟರ್ನೆಟ್ ಸರ್ವಿಸ್ ಭಂಗಗೊಳ್ಳುವಂತೆ ಮಾಡಬಲ್ಲ ಶಕ್ತಿಗಳ ಬಗ್ಗೆಯೂ ಕೆಲವರು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ 71 ಲಕ್ಷ ಜನರು ಇಂಟರ್ನೆಟ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಭಾರತದಲ್ಲಿ ಶೇ. 1ರಷ್ಟು ಜನಸಂಖ್ಯೆ ಮಾತ್ರ ಇಂಟರ್ನೆಟ್ ಕವರೇಜ್ ಹೊಂದಿಲ್ಲ ಎನ್ನುವ ಸಂಗತಿಯನ್ನೂ ಕೆಲವರು ಎತ್ತಿತೋರಿಸಿದ್ದಾರೆ.
ಸ್ಟಾರ್ಲಿಂಕ್ ಕಂಪನಿಯು ಸೆಟಿಲೈಟ್ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಆಕಾಶದಲ್ಲಿ ನಿರ್ದಿಷ್ಟ ಭೂಕಕ್ಷೆಯಾದ್ಯಂತ ನೂರಾರು ಸೆಟಿಲೈಟ್ಗಳ ಸಮೂಹವನ್ನು ಇರಿಸಿದೆ. ಇವುಗಳಿಂದ ಇಂಟರ್ನೆಟ್ ಪಡೆಯಬಹುದಾಗಿದೆ. ಫೈಬರ್ ಕೇಬಲ್ ತಲುಪಲು ಸಾಧ್ಯವಿಲ್ಲದ ಪ್ರದೇಶಗಳಲ್ಲೂ ಸ್ಯಾಟ್ಕಾಮ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯಲು ಸಾಧ್ಯ.
ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸ್ಯಾಟಿಲೈಟ್ ಇಂಟರ್ನೆಟ್ ಸೇವೆ ನೀಡುತ್ತಿದೆ. ಆದರೆ, ಭಾರತದಲ್ಲಿ ಸಾಮಾನ್ಯ ಜನರು ಪಡೆಯುತ್ತಿರುವ ಇಂಟರ್ನೆಟ್ನ ದರಕ್ಕಿಂತ ಹಲವು ಪಟ್ಟು ದುಬಾರಿ ಅದು. ಬಾಂಗ್ಲಾದೇಶದಲ್ಲಿ ಸ್ಟಾರ್ಲಿಂಕ್ ಇಂಟರ್ನೆಟ್ಗೆ ತಿಂಗಳಿಗೆ 4,200 ಟಾಕಾದಿಂದ 6,000 ಟಾಕಾವರೆಗೆ ಬೆಲೆ ಇದೆ. ಭಾರತೀಯ ರುಪಾಯಿಯಲ್ಲಿ 3,300 ರೂನಿಂದ 4,700 ರೂವರೆಗೆ ಪ್ಯಾಕೇಜ್ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Thu, 8 October 26