ಕದ್ದ ಚಿನ್ನವನ್ನು ಗುಜರಿಗೆ ಹಾಕಿದ ಮುಗ್ಧ ಕಳ್ಳನ ರೋಚಕ ಕಥೆ ಇಲ್ಲಿದೆ!

| Updated By: ಸಾಧು ಶ್ರೀನಾಥ್​

Updated on: Apr 05, 2023 | 1:10 PM

ಬಂಗಾರ ಸಿಕ್ಕಿದ ಖುಷಿಯಲ್ಲಿ ರಸ್ತೆಯಲ್ಲೇ ಬಂಗಾರವನ್ನು ತೂಕ ಮಾಡಿಸಿದ್ದಾನೆ ಐನಾತಿ ಆಸಾಮಿ! ಇಷ್ಟೆಲ್ಲಾ ಆದ ಮೇಲೆ ಕದ್ದ ಚಿನ್ನವನ್ನು ಎಲ್ಲಿ ಮಾರಬೇಕು ಎಂಬುದನ್ನೂ ತಿಳಿಯದೇ ಅದನ್ನೂ ಸೀದಾ ಹೊತ್ತೊಯ್ದು ಗುಜರಿಗೆ ಹಾಕಿಬಿಟ್ಟಿದ್ದಾನೆ!

ಬೆಂಗಳೂರು: ಇದು ಕದ್ದ ಚಿನ್ನವನ್ನು ಗುಜರಿಗೆ ಹಾಕಿದ ಮುಗ್ಧ ಕಳ್ಳನೊಬ್ಬನ (Thief) ರೋಚಕ ಕಥೆ! ನಿರುದ್ಯೋಗದ ಬಾಣಲೆಯಲ್ಲಿ ಬೆಂದು, ಕೆಲಸ ಅರಸಿ ಬೆಂಗಳೂರಿಗೆ ಬಂದವನು ಕಳ್ಳನಾಗಿದ್ದ! ಆರು‌ ತಿಂಗಳ ಹಿಂದೆಯೇ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದು, ಇಲ್ಲಿ ಕಳ್ಳತನವನ್ನು ಕಸುಬಾಗಿಸಿಕೊಂಡಿದ್ದ ಖದೀಮ ಅವನು. ಯಶವಂತಪುರ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಸದರಿ ಕಳ್ಳ ತನ್ನ ಕೈಚಳಕ ತೋರಿಸುತ್ತಿದ್ದ. ಕದ್ದ ಮಾಲನ್ನು ಗುಜರಿಗೆ (Scrap) ಹಾಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಆ ಆಸಾಮಿಗೆ ಅದೊಂದು ದಿನ ಕಬ್ಬಿಣದ ನಲ್ಲಿ (ಕೊಳಾಯಿ) ಮೇಲೆ ಕಣ್ಣು ಬಿದ್ದಿದೆ. ಕದಿಯಲು ಹೋಗಿದ್ದಾಗ ಒಂದಷ್ಟು ಹಣವೂ ಸಿಕ್ಕಿದೆ. ಜೊತೆಗೆ ಬಂಗಾರವನ್ನೂ (Gold) ಕದ್ದಿದ್ದಾನೆ. ಬಂಗಾರ ಸಿಕ್ಕಿದ ಖುಷಿಯಲ್ಲಿ ರಸ್ತೆಯಲ್ಲೇ ಬಂಗಾರವನ್ನು ತೂಕ ಮಾಡಿಸಿದ್ದಾನೆ ಐನಾತಿ ಆಸಾಮಿ!

ಅದಾಗಲೇ ‘ಗುಜರಿ’ ಅಡ್ಡ ಹೆಸರು ಸಂಪಾದಿಸಿರುವ ಆರೋಪಿ!

ಇಷ್ಟೆಲ್ಲಾ ಆದ ಮೇಲೆ ಕದ್ದ ಚಿನ್ನವನ್ನು ಎಲ್ಲಿ ಮಾರಬೇಕು ಎಂಬುದನ್ನೂ ತಿಳಿಯದೇ ಅದನ್ನೂ ಸೀದಾ ಹೊತ್ತೊಯ್ದು ಗುಜರಿಗೆ ಹಾಕಿಬಿಟ್ಟಿದ್ದಾನೆ! 7 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನವನ್ನು ಗುಜರಿಗೆ ಹಾಕಿ ಬಡಪಾಯಿ ಕೇವಲ 30 ಸಾವಿರ ರೂಪಾಯಿ ಪಡೆದಿದ್ದ.

ಇದನ್ನೂ ಓದಿ:  Devanahalli: ಬ್ಯೂಟಿ ಪಾರ್ಲರ್ ಆಂಟಿಗಾಗಿ ಪತ್ನಿಯನ್ನೆ ಕೊಲೆ ಮಾಡಿದನಾ ಗಂಡ? ಮದುವೆಯಾಗಿ ಮಗುವಿದ್ದರೂ ಗಂಡನಿಗೆ ಬೇರೊಂದು ಲವ್ವಿಡವ್ವಿ!

ಸದ್ಯ ಆರೋಪಿ ಸುಬ್ರತೋ ಮಂಡಲ್ ಅಲಿಯಾಸ್ ಗುಜರಿ (Gujari) ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕಳ್ಳತನ ಮಾಡಿದ್ದ 130 ಗ್ರಾಂ ಚಿನ್ನ ಮತ್ತು ನಗದು ಸೀಜ್ ಮಾಡಿದ್ದಾರೆ. ಯಶವಂತಪುರ ಪೊಲೀಸರು (Yeshwanthpur Police) ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Wed, 5 April 23