AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾನ್ಸಿ ಸ್ಟೋರ್‌ನಲ್ಲಿ ನಶೆ ಮಾತ್ರೆಗಳ ಅಕ್ರಮ ಮಾರಾಟ: ಕಿಕ್​ಗಾಗಿ ಮಾತ್ರೆ, ಇಂಜೆಕ್ಷನ್ ಮೊರೆ ಹೋಗ್ತಿರುವ ಯುವಕರು!

ಅದೊಂದು ಫ್ಯಾನ್ಸಿ ಸ್ಟೋರ್. ಆದರೆ ಅಲ್ಲಿ ಮಾರಾಟ ಮಾಡುತ್ತಿದ್ದುದು ಮಾತ್ರೆಗಳನ್ನು! ನಶೆಗಾಗಿ ಅದನ್ನು ತೆಗೆದುಕೊಳ್ಳುತ್ತಿದ್ದ ಕೆಲವು ಯುವಕರು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಿದ್ದರು. ಅಲ್ಲದೆ, ಮಾತ್ರೆಯನ್ನು ಪುಡಿ ಮಾಡಿ ಇಂಜೆಕ್ಷನ್ ಮೂಲಕ ನೇರ ನರಕ್ಕೇ ಚುಚ್ಚಿಸಿಕೊಳ್ಳುತ್ತಿದ್ದರು. ಯುವಕನೊಬ್ಬ ಅಸ್ವಸ್ಥಗೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಫ್ಯಾನ್ಸಿ ಸ್ಟೋರ್ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫ್ಯಾನ್ಸಿ ಸ್ಟೋರ್‌ನಲ್ಲಿ ನಶೆ ಮಾತ್ರೆಗಳ ಅಕ್ರಮ ಮಾರಾಟ: ಕಿಕ್​ಗಾಗಿ ಮಾತ್ರೆ, ಇಂಜೆಕ್ಷನ್ ಮೊರೆ ಹೋಗ್ತಿರುವ ಯುವಕರು!
ಗಂಗಾವತಿ ನಗರದ ಫ್ಯಾನ್ಸಿ ಸ್ಟೋರ್​ಗೆ ಪೊಲೀಸರ ದಾಳಿImage Credit source: tv9
ಶಿವಕುಮಾರ್ ಪತ್ತಾರ್
| Edited By: |

Updated on: Mar 15, 2026 | 8:08 AM

Share

ಕೊಪ್ಪಳ, ಮಾರ್ಚ್ 15: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ನಗರದ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ನಶೆ ನೀಡುವ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಗಂಗಾವತಿ ನಗರದ ದುರ್ಗಾದೇವಿ ಗುಡಿ ಸಮೀಪದಲ್ಲಿರುವ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ನಲ್ಲಿ ನೋವು ನಿವಾರಕ ಮಾತ್ರೆ ಎಂದು ಹೇಳಿ ನಶೆ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಅಂಗಡಿಯ ಮಾಲೀಕ ಕಿಶನ್ ಕುಮಾರ್ ಕೇವಲ ಎರಡು ಮಾತ್ರೆಗಳಿಗೆ ಸುಮಾರು 300 ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಈ ಮಾತ್ರೆಗಳನ್ನು ಖರೀದಿಸಿ ಸೇವಿಸುತ್ತಿದ್ದ ಕೆಲ ಯುವಕರು ಬಳಿಕ ಹೆಚ್ಚು ‘ಕಿಕ್’ ಪಡೆಯಲು ಅವನ್ನು ಪುಡಿ ಮಾಡಿ ಇಂಜೆಕ್ಷನ್ ಮೂಲಕ ನೇರವಾಗಿ ನರಗಳಿಗೆ ಹಾಕಿಕೊಳ್ಳಲು ಆರಂಭಿಸಿದ್ದರೆಂಬ ಸಂಗತಿ ಬಹಿರಂಗವಾಗಿದೆ. ಇಂತಹ ಇಂಜೆಕ್ಷನ್ ಬಳಕೆಯಿಂದ ಒಬ್ಬ ಯುವಕನ ಆರೋಗ್ಯ ಹದಗೆಟ್ಟಿದ್ದು, ಆತನೇ ಪೊಲೀಸರಿಗೆ ದೂರು ನೀಡಿದ್ದಾನೆ.

ಲಕ್ಷ್ಮಿ ಕ್ಯಾಂಪ್ ನಿವಾಸಿ ಸಂಗನಗೌಡ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಗಂಗಾವತಿ ನಗರದ ಕೃಷ್ಣಾ ಫ್ಯಾನ್ಸಿ ಸ್ಟೋರ್ ಮೇಲೆ ದಾಳಿ ಮಾಡಿದ್ದಾರೆ. ಯುವಕರಿಗೆ ನಶೆ ಮಾತ್ರೆ ಪೂರೈಸುತ್ತಿದ್ದ ಆರೋಪದ ಮೇಲೆ ಅಂಗಡಿ ಮಾಲೀಕ ಕಿಶನ್ ಕುಮಾರ್ ಅನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಹಿಂದೆ ಸ್ಥಳೀಯ ಮೆಡಿಕಲ್ ಸ್ಟೋರ್ ಮಾಲೀಕರ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ನಶೆ ಮಾತ್ರೆಗಳ ಜಾಲದಲ್ಲಿ ಸಿಲುಕಿ ಗಂಗಾವತಿ ನಗರದ ಅನೇಕ ಯುವಕರು ತಮ್ಮ ಬದುಕನ್ನು ಹಾಳು ಮಾಡಿಕೊಂಡಿರುವ ಆತಂಕ ವ್ಯಕ್ತವಾಗುತ್ತಿದೆ. ನಶೆ ಮಾಫಿಯಾದ ಅಸಲಿ ಕಿಂಗ್‌ಪಿನ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us