AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾಕಿಲ್ಲ ಅನುಮತಿ? ಸರ್ಕಾರ ಹೇಳೋದೇನು?

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೈಕ್ ಟ್ಯಾಕ್ಸಿಗಳಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ. ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯಲ್ಲಿ (SLP) ಸುರಕ್ಷತೆ, ಕಾನೂನು ಚೌಕಟ್ಟು ಹಾಗೂ ಪರಿಸರದ ಕಾಳಜಿಯನ್ನು ಪ್ರಮುಖ ಕಾರಣವಾಗಿ ನೀಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾಕಿಲ್ಲ ಅನುಮತಿ? ಸರ್ಕಾರ ಹೇಳೋದೇನು?
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾಕಿಲ್ಲ ಅನುಮತಿ?
ಪ್ರಸನ್ನ ಹೆಗಡೆ
|

Updated on:Aug 12, 2026 | 6:46 AM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನಿರಾಕರಣೆ
  • ತನ್ನ ನಿರ್ಧಾರಕ್ಕೆ ಹಲವು ಕಾರಣಗಳನ್ನು ಕೊಟ್ಟ ಸರ್ಕಾರ
  • ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ವಿಶೇಷ ಮೇಲ್ಮನವಿ

ಬೆಂಗಳೂರು, ಆಗಸ್ಟ್​​ 12: ಸಾರ್ವಜನಿಕ ಸಾರಿಗೆಯಲ್ಲಿನ ವಿಪರೀತ ದಟ್ಟಣೆ ಹಾಗೂ ಹೆಚ್ಚುತ್ತಿರುವ ಪ್ರಯಾಣ ದರಗಳ ಬಗ್ಗೆ ಪ್ರಯಾಣಿಕರ ಅಸಮಾಧಾನ ಹೆಚ್ಚುತ್ತಿರುವ ನಡುವೆಯೇ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸಲು ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮೋಟಾರ್‌ಸೈಕಲ್‌ಗಳಿಗೆ ಕಾಂಟ್ರಾಕ್ಟ್ ಕ್ಯಾರೇಜ್ (ಒಪ್ಪಂದದ ಆಧಾರಿತ ಸಾರಿಗೆ) ಪರವಾನಗಿ ನೀಡುವ ಅರ್ಜಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿ ಅರ್ಜಿ (SLP) ಸಲ್ಲಿಸಿದೆ. ವಾಣಿಜ್ಯ ಉದ್ದೇಶಕ್ಕಾಗಿ ಪ್ರಯಾಣಿಕರನ್ನು ಸಾಗಿಸುವುದು ನಿಯಂತ್ರಿತ ಚಟುವಟಿಕೆಯಾಗಿದ್ದು, ತಮ್ಮ ಮೋಟಾರ್‌ಸೈಕಲ್‌ಗಳನ್ನು ಟ್ಯಾಕ್ಸಿಯಾಗಿ ಬಳಸುವ ಸಹಜ ಹಕ್ಕು ಬೈಕ್ ಮಾಲೀಕರಿಗೆ ಇಲ್ಲ ಎಂದು ಸರ್ಕಾರ ವಾದಿಸಿದೆ.

ಮೋಟಾರ್‌ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನಿಯಂತ್ರಿಸುವ ಕಾನೂನು ಚೌಕಟ್ಟನ್ನು ಹೈಕೋರ್ಟ್ ಪರಿಗಣಿಸಿಲ್ಲ. ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಗಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವಂತೆ ನಿರ್ದೇಶಿಸುವ ಮೂಲಕ ರಾಜ್ಯ ಸರ್ಕಾರ ಮತ್ತು ಸಾರಿಗೆ ಪ್ರಾಧಿಕಾರಗಳಿಗೆ ಇರುವ ನಿಯಂತ್ರಣಾಧಿಕಾರವನ್ನು ಹೈಕೋರ್ಟ್ ಗಣನೀಯವಾಗಿ ಸೀಮಿತಗೊಳಿಸಿದೆ ಎಂದು ಸರ್ಕಾರ ತನ್ನ SLPಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಬೈಕ್ ಟ್ಯಾಕ್ಸಿಗಳಿಗೆ ಬಿಗ್ ಶಾಕ್; ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ರಾಜ್ಯ ಸರ್ಕಾರ

ಬೈಕ್ ಟ್ಯಾಕ್ಸಿಗಳಿಗೆ ಯಾಕಿಲ್ಲ ಅನುಮತಿ?

  • ಮೋಟಾರ್‌ಸೈಕಲ್‌ಗಳನ್ನು ‘ಪ್ರಯಾಣಿಕರ ಸಾರಿಗೆ ವಾಹನ’ಗಳಾಗಿ ಬಳಸಲು ಸಮಗ್ರ ನಿಯಂತ್ರಣ ವ್ಯವಸ್ಥೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಇಂತಹ ಕಾನೂನು ಚೌಕಟ್ಟಿನ ಅನುಪಸ್ಥಿತಿ ಪರವಾನಗಿ ನಿರಾಕರಿಸಲು ಸಮರ್ಥನೀಯ ಹಾಗೂ ವಿಶೇಷ ಕಾರಣವಾಗಿದೆ ಎಂದು ಸರ್ಕಾರ ವಾದಿಸಿದೆ. 1989ರ ಕೇಂದ್ರ ಮೋಟಾರು ವಾಹನ ನಿಯಮಗಳು ವಾಹನಗಳನ್ನು ಅವುಗಳ ಬಳಕೆ ಮತ್ತು ಕಾರ್ಯನಿರ್ವಹಣೆಯ ಉದ್ದೇಶದ ಆಧಾರದ ಮೇಲೆ ವರ್ಗೀಕರಿಸುತ್ತವೆ. ಈ ನಿಯಮಗಳಲ್ಲಿ ಮೋಟಾರ್‌ಸೈಕಲ್‌ಗಳನ್ನು ಪ್ರಯಾಣಿಕರ ಸಾಗಣೆ ವಾಹನಗಳ ವರ್ಗದಿಂದ ಹೊರಗಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಮೋಟಾರ್‌ಸೈಕಲ್‌ನಲ್ಲಿ ಹಿಂಬದಿ ಸವಾರನನ್ನು ಕೂರಿಸಬಹುದಾದ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಅದನ್ನು ಕಾನೂನುಬದ್ಧವಾಗಿ ಪ್ರಯಾಣಿಕರನ್ನು ಸಾಗಿಸುವ ವಾಹನವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.
  • ಮೋಟಾರ್‌ಸೈಕಲ್‌ಗಳು ಅಪಘಾತಗಳ ಸಂದರ್ಭದಲ್ಲಿ ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಆಟೋರಿಕ್ಷಾ ಮತ್ತು ಕ್ಯಾಬ್‌ಗಳಂತಹ ಪ್ರಯಾಣಿಕ ವಾಹನಗಳಲ್ಲಿ ಲಭ್ಯವಿರುವ ಕೆಲವು ಸುರಕ್ಷತಾ ಸೌಲಭ್ಯಗಳು ದ್ವಿಚಕ್ರ ವಾಹನಗಳಲ್ಲಿ ಇರುವುದಿಲ್ಲ ಎಂದು ಸರ್ಕಾರ ವಾದಿಸಿದೆ. ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆ ಕುರಿತಂತೆ ಸುಪ್ರೀಂ ಕೋರ್ಟ್ ಸಮಿತಿ ಉಲ್ಲೇಖಿಸಿರುವ ಅಪಘಾತ ಸಾವಿನ ಅಂಕಿಅಂಶಗಳನ್ನು ಸರ್ಕಾರ ತನ್ನ ವಾದಕ್ಕೆ ಆಧಾರವಾಗಿ ನೀಡಿದೆ.
  • ದೊಡ್ಡ ಪ್ರಮಾಣದಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುವುದರಿಂದ ನಗರಗಳಲ್ಲಿ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯ ಹೆಚ್ಚಾಗಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ. ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ಬಂಧಿಸುವುದರಿಂದ ವಾರ್ಷಿಕವಾಗಿ ಸುಮಾರು 14 ಲಕ್ಷ ಟನ್‌ಗಳಷ್ಟು CO₂ ಹೊರಸೂಸುವಿಕೆಯನ್ನು ತಪ್ಪಿಸಬಹುದು ಎಂಬ ಅಂದಾಜನ್ನೂ ಸರ್ಕಾರ ಉಲ್ಲೇಖಿಸಿದೆ.
  • ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಸಮರ್ಪಕ ವಿಮಾ ರಕ್ಷಣೆ ಲಭ್ಯವಿಲ್ಲದಿರುವುದನ್ನೂ ಸರ್ಕಾರ ಪ್ರಮುಖ ಸಮಸ್ಯೆಯಾಗಿ ಉಲ್ಲೇಖಿಸಿದೆ. ಈಗಿರುವ ಬಿಳಿ ಬೋರ್ಡ್ ಮೋಟಾರ್‌ಸೈಕಲ್‌ಗಳನ್ನು ಹಳದಿ ಬೋರ್ಡ್ ವಾಹನಗಳಾಗಿ ಪರಿವರ್ತಿಸಲು ಕರ್ನಾಟಕದ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹಾಗೆಯೇ ದ್ವಂದ್ವ ನೋಂದಣಿ (dual registration) ಎಂಬ ಪರಿಕಲ್ಪನೆಯೂ ಇಲ್ಲ. ಇದರಿಂದ ಅಪಘಾತದ ಸಂದರ್ಭದಲ್ಲಿ ವಿಮೆ ಪರಿಹಾರ ಮತ್ತು ಅದರ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
  • ಬೈಕ್ ಟ್ಯಾಕ್ಸಿಗಳ ಮೇಲಿನ ನಿರ್ಬಂಧದಿಂದ ಮೋಟಾರ್‌ಸೈಕಲ್ ಮಾಲೀಕರ ಜೀವನೋಪಾಯ ಸಂಪೂರ್ಣವಾಗಿ ನಿರ್ಬಂಧಿತವಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಮೋಟಾರ್‌ಸೈಕಲ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದರ ಮೇಲೆ ರಾಜ್ಯ ಸರ್ಕಾರ ಸಂಪೂರ್ಣ ನಿಷೇಧ ಹೇರಿಲ್ಲ. ಪ್ರಯಾಣಿಕರನ್ನು ಸಾಗಿಸಲು ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮೋಟಾರ್‌ಸೈಕಲ್ ಸವಾರರು ವಿವಿಧ ಪ್ಲಾಟ್‌ಫಾರ್ಮ್‌ಗಳ ಡೆಲಿವರಿ ಮತ್ತು ಲಾಜಿಸ್ಟಿಕ್ಸ್ ಸೇವೆಗಳಲ್ಲಿ, ಕೊರಿಯರ್ ಸೇವೆಗಳಲ್ಲಿ ಹಾಗೂ ಕಾನೂನುಬದ್ಧವಾಗಿ ಅನುಮತಿಸಲಾದ ಇತರ ಚಟುವಟಿಕೆಗಳಲ್ಲಿ ಮುಂದುವರಿದು ಕೆಲಸ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:37 am, Wed, 12 August 26

Follow Us