ಸಿದ್ದರಾಮಯ್ಯ ನಿವಾಸಕ್ಕೆ ಮಹದೇವಪ್ಪ ದಿಢೀರ್ ಭೇಟಿ: ಮುನಿಸು ಮರೆತು ಮತ್ತೆ ಒಂದಾದ ದೋಸ್ತಿ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸಿದ್ದರಾಮಯ್ಯನವರ ಸರ್ಕಾರದಲ್ಲಿದ್ದ ಸುಮಾರು ಸಚಿವರಿಗೆ ಸ್ಥಾನ ಸಿಕ್ಕಿರಲಿಲ್ಲ. ಈ ಪೈಕಿ, ಮಾಜಿ ಸಿಎಂನವರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾ. ಮಹದೇವಪ್ಪನವರು ಕೂಡಾ. ಹೀಗಾಗಿ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದರು. ಆದ್ರೆ, ಕೆಲ ನಾಯಕರು ನಡೆಸಿದ ನಿರಂತರ ಕಸರತ್ತಿನಿಂದ ಅಂತಿಮವಾಗಿ ಮಹದೇವಪ್ಪನವರು ಸಮಾಧಾನಗೊಂಡಿದ್ದು, ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ.

ಮೈಸೂರು, ನವೆಂಬರ್ 25: ನಾನೊಂದು ತೀರ ನೀನೊಂದು ಎನ್ನುವಂತಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಕೊನೆಗೂ ಒಂದಾಗಿದ್ದಾರೆ. ಹೌದು…ಮಹದೇವಪ್ಪನವರು ಮುನಿಸು ಮರೆತು ಇಂದು (ನವೆಂಬರ್ 25) ಮೈಸೂರಿನ ಕುವೆಂಪುನಗರದಲ್ಲಿರುವ ಹೊಸ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ಮಾಡಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಈ ಇಬ್ಬರು ನಾಯಕರು ಮುಖಾಮುಖಿ ಭೇಟಿಯಾಗಿರುವುದು ಇದೇ ಮೊದಲು. ಇದರೊಂದಿಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮ್ಮದ್ ಸೇರಿಕೊಂಡು ಮಹದೇವಪ್ಪನವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುನಿಸು ಮರೆತು ಒಂದಾದ ದೋಸ್ತಿ
ನಿವಾಸಕ್ಕೆ ಆಗಮಿಸಿದ ಹೆಚ್.ಸಿ.ಮಹದೇವಪ್ಪನವರಿಗೆ ಸಚಿವ ಯತೀಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದ್ದು, ಬಳಿಕ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹದೇವಪ್ಪ ಅವರ ಈ ದಿಢೀರ್ ಭೇಟಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಲ್ಕು ತಿಂಗಳ ಬಳಿಕ ಇಬ್ಬರೂ ನಾಯಕರು ಮುಖಾಮುಖಿಯಾಗಿ ಚರ್ಚಿಸುತ್ತಿರುವುದು, ಮತ್ತೆ ಅಹಿಂದ ಗ್ಯಾಂಗ್ ಒಂದಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ನಾಳೆ (ನವೆಂಬರ್ 26 ಮೈಸೂರಿನಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮವು ಅಹಿಂದ ಮತ್ತು ದಲಿತ-ಶೋಷಿತ ವರ್ಗಗಳ ರಾಜಕಾರಣಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯಕ್ರಮದ ಮುನ್ನಾದಿನವೇ ಇಬ್ಬರೂ ಹಿರಿಯ ನಾಯಕರು ಒಂದಾಗಿರುವುದು, ಮುಂದಿನ ದಿನಗಳಲ್ಲಿ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮುನ್ಸೂಚನೆ ನೀಡಿದೆ.
ಇದನ್ನೂ ನೋಡಿ: ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ನೆಪದಲ್ಲಿ ಬೃಹತ್ ಸಮಾವೇಶ
ಮುನಿಸು ಮರೆಸಿದ ಸಂವಿಧಾನ ದಿನಾಚರಣೆ
ಮಹದೇವಪ್ಪನವರು ಸಿದ್ದರಾಂಯ್ಯನವರಿಂದ ಅಂತರ ಕಾಯ್ದುಕೊಂಡು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಆಯೋಜನೆ ಮಾಡಿದ್ದರು. ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದೇ ಮಹದೇವಪ್ಪನವರ ಮೈಸೂರಿನಲ್ಲಿ ಸಭೆಗಳ ಮೇಲೆ ಸಭೆ ಮಾಡಿದ್ದರು. ಹೀಗಾಗಿ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯಲೆಂದೇ ಮಹದೇವಪ್ಪನವರು ಸಂವಿಧಾನ ದಿನಾಚರಣೆ ಆಯೊಜಿಸಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಆದ್ರೆ, ಇದೀಗ ಕಾರ್ಯಕ್ರಮಕ್ಕೆ ಒಂದು ದಿನದ ಮುನ್ನವೇ ಇಬ್ಬರು ಸ್ನೇಹಿತರನ್ನು ಸಂವಿಧಾನ ದಿನಾಚರಣೆ ಒಂದಾಗಿಸಿದ್ದು, ನಾಳೆಯ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಲಿದ್ದಾರೆ. ಅಲ್ಲದೇ ಕಾರ್ಯಕ್ರಮದ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸುವ ಸಾಧ್ಯತೆಗಳಿವೆ
ಮೈಸೂರು ಭಾಗದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ಜೋಡಿ ದಶಕಗಳಿಂದ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿದೆ. ಕಳೆದ ನಾಲ್ಕು ತಿಂಗಳಿನಿಂದ ಈ ಇಬ್ಬರು ನಾಯಕರ ನಡುವಿನ ಅಂತರದಿಂದಾಗಿ ಸ್ಥಳೀಯ ಕಾರ್ಯಕರ್ತರಲ್ಲೂ ಗೊಂದಲ ಮೂಡಿತ್ತು. ಈಗಿನ ಭೇಟಿಯಿಂದ ಹಳೇ ಮೈಸೂರು ಭಾಗದಲ್ಲಿ ‘ಕೈ’ ಪಾಳಯಕ್ಕೆ ಹೊಸ ಹುರುಪು ಬಂದಂತಾಗಿದೆ.
ಇಬ್ಬರು ನಾಯಕರು ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಡಿಕೆ ಶಿವಕುಮಾರ್ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಬಳಿ ಲಾಬಿ ಮಾಡಿಲ್ಲ ಎನ್ನುವ ಸಿಟ್ಟು ಮಹದೇವಪ್ಪನವರಿಗೆ ಇದೆ. ಹೀಗಾಗಿ ಅವರು ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡಿದ್ದು, ಅಂದಿನಿಂದ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಇಬ್ಬರ ಸ್ನೇಹದಲ್ಲಿ ಬಿರುಕು ಉಂಟಾಗಿದ್ದು, ಅಹಿಂದ ಒಡೆದ ಮನೆಯಂತಾಗಿದೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು.
ಯತೀಂದ್ರ ಸಿದ್ದರಾಮಯ್ಯ ಸಂಧಾನ ಸಕ್ಸಸ್
ಇಬ್ಬರು ಹಿರಿಯ ನಾಯಕರ ನಡುವಿನ ಅಸಮಾಧಾನ ಶಮನಗೊಳಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ನಡೆಸಿದ ಸಂಧಾನ ಪ್ರಯತ್ನ ಬಹುತೇಕ ಯಶಸ್ವಿಗಿದೆ. ಕಳೆದ ನಾಲ್ಕು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದ ಮಹದೇವಪ್ಪನವರನ್ನು ಮನವೊಲಿಸಲು ಯತೀಂದ್ರ ಸಿದ್ದರಾಮಯ್ಯ ಸಾಕಷ್ಟು ಕಸರತ್ತು ನಡೆಸಿದ್ದರು. ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್ , ರಾಜಣ್ಣ ಸೇರಿದಂತೆ ಹಲವು ನಾಯಕರ ಮೂಲಕ ಮಹದೇವಪ್ಪನವರ ಮನವೊಲಿಕೆಗೆ ಕಸರತ್ತು ಮಾಡಿದ್ದರು. ಸಾಲದಕ್ಕೆ ಸ್ವತಃ ಯತೀಂದ್ರ, ಮಹದೇವಪ್ಪನವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಇದೀಗ ಅಂತಿಮವಾಗಿ ಯತೀಂದ್ರ ಹೋರಾಟಕ್ಕೆ ಫಲ ಸಿಕ್ಕಿದ್ದು, ದೋಸ್ತಿಗಳು ಮತ್ತೆ ಒಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 pm, Wed, 25 November 26
