ಯಂತ್ರೋಪಕರಣ ತಯಾರಿಕೆ ಉತ್ತೇಜಿಸಲು 11,000 ಕೋಟಿ ರೂ ಸ್ಕೀಮ್ಗೆ ಅನುಮೋದನೆ; ಚೀನಾಗೆ ಸೆಡ್ಡು ಹೊಡೆಯುತ್ತಿರುವ ಭಾರತ
ರೈಲ್ವೆ ಕಾಮಗಾರಿ, ರಸ್ತೆ ನಿರ್ಮಾಣ ಕಾಮಗಾರಿ ಇತ್ಯಾದಿ ಮೂಲಸೌಕರ್ಯ ಕ್ಷೇತ್ರದಲ್ಲಿ ಬಳಕೆಯಾಗುವ ಟಿಬಿಎಂ, ಎಕ್ಸ್ಕವೇಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಭಾರತದಲ್ಲೇ ತಯಾರಿಸಲು ಸರ್ಕಾರ ಯೋಜನೆ ಹಾಕಿದೆ. ಈ ಸ್ಕೀಮ್ಗೆ ಕೇಂದ್ರ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಈ ಯಂತ್ರೋಪಕರಣಗಳಿಗಾಗಿ ಚೀನಾ ಮೇಲಿನ ಆಮದನ್ನು ತಪ್ಪಿಸುವುದು ಮಾತ್ರವಲ್ಲ, ರಫ್ತು ಕೂಡ ಮಾಡುವ ಗುರಿ ಇಡಲಾಗಿದೆ.

ನವದೆಹಲಿ, ನವೆಂಬರ್ 25: ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಬಳಕೆಯಾಗುವ ಯಂತ್ರೋಪಕರಣಗಳನ್ನು ತಯಾರಿಸುವ ಉದ್ಯಮಕ್ಕೆ ಉತ್ತೇಜಿಸಲು ಸರ್ಕಾರ 11,000 ಕೋಟಿ ರೂ ಯೋಜನೆ ಹಾಕಿಕೊಂಡಿದೆ. ಕೇಂದ್ರ ಸಚಿವ ಸಂಪುಟದಿಂದ ಇವತ್ತು ಬುಧವಾರ ಆ ಸ್ಕೀಮ್ಗೆ ಅನುಮೋದನೆ ಕೂಡ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಪ್ರಮುಖ ಯಂತ್ರೋಪಕರಣಗಳಿಗೆ ಚೀನಾ ಮೇಲೆ ವಿಪರೀತ ಅವಲಂಬನೆ ಇದೆ. ಭಾರತದಲ್ಲೇ ಈ ಉಪಕರಣಗಳ ತಯಾರಿಕೆ ಶುರುವಾದರೆ ಆ ಅವಲಂಬನೆ ಕಡಿಮೆ ಆಗುತ್ತದೆ.
ಕೇಂದ್ರ ಸರ್ಕಾರದ ಈ ಸ್ಕೀಮ್ 2026-27ರಿಂದ 2033-34ರವರೆಗೆ ಎಂಟು ವರ್ಷಗಳ ಅವಧಿಯವರೆಗೆ ಚಾಲನೆಯಲ್ಲಿರುತ್ತದೆ. ಕಟ್ಟಡ ನಿರ್ಮಾಣ ಉಪಕರಣ ತಯಾರಿಕೆಯ ಇಕೋಸಿಸ್ಟಂ ಬಲಪಡಿಸುವುದು ಮಾತ್ರವಲ್ಲ, ಯಂತ್ರೋಪಕರಣಗಳ ಆಮದು ಕಡಿಮೆ ಮಾಡಿ, ರಫ್ತು ಹೆಚ್ಚಿಸುವ ಗುರಿ ಈ ಸ್ಕೀಮ್ಗೆ ಇದೆ.
ಇದನ್ನೂ ಓದಿ: ಮತ್ತೆ ಸುಂಕದ ಶಾಕ್ ಕೊಟ್ಟ ಟ್ರಂಪ್; ಭಾರತಕ್ಕೆ ಶೇ. 25, ಚೀನಾಗೆ ಶೇ. 40ರವರೆಗೆ ಟಾರಿಫ್ ವಿಧಿಸಲು ಅಮೆರಿಕ ಪ್ರಸ್ತಾಪ
ಮೂಲಸೌಕರ್ಯ ಯೋಜನೆಗಳಿಂದಾಗಿ ಯಂತ್ರೋಪಕರಣಗಳಿಗೆ ಹೆಚ್ಚಿದೆ ಬೇಡಿಕೆ
ಭಾರತದಲ್ಲಿ ಜಿಡಿಪಿ ವೇಗವಾಗಿ ಬೆಳೆಯುತ್ತಿರುವಂತೆಯೇ ಮೂಲಸೌಕರ್ಯ ಯೋಜನೆಗಳು ಅಗಾಧವಾಗಿ ಹೆಚ್ಚುತ್ತಿವೆ. ಮೆಟ್ರೋ ಮತ್ತು ರೈಲ್ವೆ ಯೋಜನೆಗಳಿಗೆ ಸುರಂಗಗಳನ್ನು ಕೊರೆಯುವ ಟನಲ್ ಬೋರಿಂಗ್ ಮೆಷಿನ್ ಅಥವಾ ಟಿಬಿಎಂಗಳ ಅವಶ್ಯತೆ ಬಹಳ ಇದೆ. ರಸ್ತೆ ನಿರ್ಮಾಣ ಕಾರ್ಯಗಳಿಗೆ ಎಕ್ಸ್ಕವೇಟರ್, ರೋಡ್ ರೋಲರ್ ಇತ್ಯಾದಿ ವಿವಿಧ ಯಂತ್ರೋಪಕರಣಗಳ ಅವಶ್ಯತೆ ಬಹಳ ಇದೆ. ಇವುಗಳಲ್ಲಿ ಹೆಚ್ಚಿನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಟನಲ್ ಬೋರಿಂಗ್ ಮೆಷಿನ್ಗಂತೂ ಚೀನಾ ಮೇಲೆ ಅವಲಂಬನೆ ಇದೆ. ಈ ಮೆಷೀನ್ಗಳಿಲ್ಲದೇ ಸುರಂಗ ಕೊರೆಯುವುದು ಕಷ್ಟ.
ಬಿಸಿಜಿ ಮತ್ತು ಸಿಐಐನ ವರದಿಯೊಂದರ ಪ್ರಕಾರ, ಗಣಿಗಾರಿಕೆ ಮತ್ತು ನಿರ್ಮಾಣ ಯಂತ್ರೋಪಕರಣಳಿಗೆ 2025ರಲ್ಲಿ ಭಾರತದಲ್ಲಿ ಇದ್ದ ಬೇಡಿಕೆ 17 ಬಿಲಿಯನ್ ಡಾಲರ್. ಪ್ರತೀ ವರ್ಷ ಇವುಗಳಿಗೆ ಇರುವ ಬೇಡಿಕೆ ಶೇ. 10-12ರಷ್ಟು ಹೆಚ್ಚುತ್ತಿದೆ. ಈ ಯಂತ್ರೋಪಕರಣಗಳಿಗೆ ಇರುವ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 2.5ರಷ್ಟು ಇದ್ದದ್ದು ಶೇ. 4ಕ್ಕೆ ಏರಿದೆ. ಮುಂದಿನ ಐದು ವರ್ಷದಲ್ಲಿ ಇದು ಶೇ. 6.5ಕ್ಕೆ ಏರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ
ಪ್ರಮುಖ ಯಂತ್ರಗಳ ರಫ್ತನ್ನು ನಿರ್ಬಂಧಿಸಿರುವ ಚೀನಾ
ಚೀನಾ ಬಹಳಷ್ಟು ಯಂತ್ರೋಪಕರಣಗಳ ರಫ್ತು ಮಾಡುತ್ತದೆ. ಆದರೆ, ಇತ್ತೀಚೆಗೆ ಕೆಲ ಬೃಹತ್ ಯಂತ್ರೋಪಕರಣಗಳ ರಫ್ತಿಗೆ ಚೀನಾ ನಿರ್ಬಂಧ ಹಾಕಿದೆ. ಮೊದಲೇ ತಿಳಿಸಿದಂತೆ ಟನಲ್ ಬೋರಿಂಗ್ ಮೆಷಿನ್, ವಾಕಿಂಗ್ ಎಕ್ಸ್ಕವೇಟರ್, ವೆಟ್ ಶಾಟ್ಕ್ರೀಟ್ ಮೆಷೀನ್ಗಳು, ಹಾಗೂ ಕೆಲ ಬಿಡಿಭಾಗಗಳ ರಫ್ತನ್ನು ಅದು ನಿರ್ಬಂಧಿಸಿದೆ.
ಈಗ ಈ ಯಂತ್ರೋಪಕರಣಗಳನ್ನು ಭಾರತದಲ್ಲೇ ತಯಾರಿಸಲಾಗುವಂತೆ ದೇಶೀಯ ಕಂಪನಿಗಳಿಗೆ ಉತ್ತೇಜಿಸುವಂತಹ ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಈ ಕ್ಷೇತ್ರದ ಉದ್ಯಮವು ಈ ಕ್ರಮವನ್ನು ಸ್ವಾಗತಿಸಿದೆ. ಅಷ್ಟೇ ಅಲ್ಲ, ಯಂತ್ರೋಪಕರಣಗಳ ತಯಾರಿಕೆಗೆ ಬಳಸುವ ಬಿಡಿಭಾಗಗಳನ್ನು ಸ್ಥಳೀಯವಾಗಿ ತಯಾರಿಸುವ ಒಂದು ಪ್ರಬಲ ಇಕೋಸಿಸ್ಟಂ ನಿರ್ಮಿಸುವ ಬೇಡಿಕೆಯೂ ಇದೆ. ಈ ಸ್ಕೀಮ್ನಲ್ಲಿ ಅದನ್ನೂ ಒಳಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
