ಸಿಎಂ ಡಿಕೆಶಿ ಹೇಳಿ 20 ದಿನದ ಬಳಿಕ ಎಚ್ಚೆತ್ತ ಕೆಎಂಎಫ್, ಮೊಸರಿನ ದರ ಇಳಿಕೆ
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಬರೋಬ್ಬರಿ ರೂಪಾಯಿ ಏರಿಕೆ ಬೆನ್ನಲ್ಲೇ ಸದ್ದಿಲ್ಲದೇ ಕೆಎಂಎಫ್, ಮೊಸರಿನ ದರವೂ ಸಹ ಏರಿಕೆ ಮಾಡಿದ್ದು, ಪ್ರತಿ ಲೀಟರ್‌ಗೆ 14 ಮತ್ತು ಅರ್ಧ ಲೀಟರ್‌ಗೆ 6 ರೂ. ಹೆಚ್ಚಿಸಲಾಗಿತ್ತು. ಇದಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಿಎಂ ಡಿಕೆ ಶಿವಕುಮಾರ್ ಅವರು ಸ್ವಲ್ಪ ದರ ಇಳಕೆ ಮಾಡುವಮತೆ ಸೂಚನೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಕೆಎಂಎಫ್ ಮೊಸರಿನ ದರದಲ್ಲಿ ಕೊಂಚ ಇಳಿಕೆ ಮಾಡಿದೆ.

ಬೆಂಗಳೂರು,ನವೆಂಬರ್ 25: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊಸರಿನ ದರವನ್ನು ಕನಿಷ್ಠ 2 ರೂಪಾಯಿ ಕಡಿತಗೊಳಿಸುವಂತೆ ನಿರ್ದೇಶನ ನೀಡಿ 20 ದಿನವಾದ ಬಳಿಕ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ಎಚ್ಚೆತ್ತುಕೊಂಡಿದ್ದು, ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಲೀಟರ್ ಮೊಸರಿನ ದರದಲ್ಲಿ 2 ರೂಪಾಯಿ ಇಳಿಕೆ ಮಾಡಿದೆ. ಪ್ರತಿ ಕೆ.ಜಿ. ಮೊಸರಿಗೆ 2 ದರ ಇಳಿಕೆ ಮಾಡಲಾಗಿದೆ. ಇನ್ನು 500 ಗ್ರಾಂ ಮೊಸರಿನ ಪ್ಯಾಕ್‌ಗೆ 1 ಕಡಿತಗೊಳಿಸಲಾಗಿದ್ದು, ನವೆಂಬರ್ 29ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಏಕಾಏಕಿ ಸದ್ದಿಲ್ಲದೇ ಭಾರೀ ಪ್ರಮಾಣದಲ್ಲಿ ಮೊಸರಿನ ದರ ಏರಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಜನಾಕ್ರೋಶ ಹೆಚ್ಚಾಗಿತ್ತು. ಹೀಗಾಗಿ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿರುವ ದರದಲ್ಲಿ ಕನಿಷ್ಠ 2 ರೂ. ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದ್ರೆ, ಕೆಎಂಎಫ್ ಕ್ಯಾರೇ ಎಂದಿಲ್ಲ. ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸಿಎಂ ಸೂಚನೆ ನೀಡಿದ 20 ದಿನದ ಬಳಿಕ ಕೆಎಂಎಫ್, ಪ್ರತಿ ಲೀಟರ್ ಮೊಸರಿ ದರದಲ್ಲಿ 2 ರೂಪಾಯಿ ಕಡಿತ ಮಾಡಿದೆ.
ಕೊಬ್ಬಿನಾಂಶದ (Fat content) ಆಧಾರದ ಮೇಲೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಂದ 14ರೂ.ವರೆಗೆ ಹೆಚ್ಚಿಸಲಾಗಿತ್ತು. ಅದೇ ರೀತಿ ಮೊಸರಿನ ದರವನ್ನೂ ಪ್ರತಿ ಲೀಟರ್‌ಗೆ 14 ರೂ, ಮತ್ತು ಅರ್ಧ ಲೀಟರ್‌ಗೆ 6 ರೂ. ಹೆಚ್ಚಿಸಲಾಗಿತ್ತು. ಈ ಭಾರಿ ಬೆಲೆ ಏರಿಕೆಯ ವಿರುದ್ಧ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ, ಮೊಸರಿನ ದರವನ್ನು ಕನಿಷ್ಠ 2 ರೂ. ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದರು. ಆದರೆ, 20 ದಿನಗಳಾದರೂ ಯಾವುದೇ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ದೇವರು ವರ ಕೊಟ್ರೆ ಪೂಜಾರಿ ಕೊಡುತ್ತಿಲ್ಲ, ಸಿಎಂ ಮಾತಿಗೂ ಬೆಲೆ ಇಲ್ವಾ? ಅಂತೆಲ್ಲಾ ಚರ್ಚೆಗಳು ಆಗುತ್ತಿದ್ದವು. ಇದರ ಬೆನ್ನಲ್ಲೇ ಕೆಎಂಎಪ್ ಎಚ್ಚೆತ್ತುಕೊಂಡಿದೆ.
Published On - 8:59 pm, Wed, 25 November 26
