ನ.27ಕ್ಕೆ ತೆರೆಗೆ ಬರುತ್ತಿದೆ ಸಂಚಾರಿ ಕುರಿಗಾಹಿಗಳ ಕಥೆಯಿರುವ ಸಿನಿಮಾ ‘ಅನಂತ ಪಯಣ’
ನವೆಂಬರ್ 27ರಂದು ಬಿಡುಗಡೆ ಆಗಲಿರುವ ‘ಅನಂತ ಪಯಣ’ ಸಿನಿಮಾ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಸಂತೋಷ ಅಶೋಕ್ ಹೆಗಡೆ ಹಾಗೂ ಸಾಗರ್ ಬಿ. ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶ್ರೀ ಕಾಕಾ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ.

ವರ್ಷಾಂತ್ಯಕ್ಕೆ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಪೈಕಿ ನವೆಂಬರ್ 27ಕ್ಕೆ ಶ್ರೀ ಕಾಕಾ ನಿರ್ದೇಶನದ ‘ಅನಂತ ಪಯಣ’ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಕುರಿಗಾಹಿಗಳ ಕಥೆ ಹೊಂದಿರುವ ಈ ಸಿನಿಮಾ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ಜೀವನವೇ ಒಂದು ರೀತಿಯ ಪಯಣ. ನಾವು ಎಲ್ಲಿ ಹುಟ್ಟಿ ಬೆಳೆದು ಕೊನೆಗೆ ಎಲ್ಲಿ ಸೇರುತ್ತೇವೆ ಎಂಬುದನ್ನು ಊಹಿಸುವುದು ಸುಲಭವಲ್ಲ. ನಮ್ಮ ವಿಧಿ ಎತ್ತ ಕರೆದುಕೊಂಡು ಹೋಗುತ್ತದೋ ಆ ದಿಕ್ಕಿನಲ್ಲಿ ಸಾಗುವುದು ಅಷ್ಟೇ ನಮ್ಮ ಕೆಲಸವಾಗಿರುತ್ತದೆ. ಈ ರೀತಿಯ ಒಂದು ಕಥೆಯನ್ನು ಇಟ್ಟುಕೊಂಡು ‘ಅನಂತ ಪಯಣ’ ಸಿನಿಮಾ ಸಿದ್ಧವಾಗಿದೆ.
ಶ್ರೀ ಕಾಕಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ ಅವರು, ‘ನಾನು ಮೂಲತಃ ಬೆಳಗಾವಿಯವನು. ಚಿತ್ರರಂಗಕ್ಕೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡುತ್ತ, ಹಲವು ಆಲ್ಬಂ ಸಾಂಗ್ ಜವಾಬ್ದಾರಿಯನ್ನು ವಹಿಸಿಕೊಂಡೆ. ನಂತರ 2 ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದೆ. ಈಗ ಅನಂತ ಪಯಣ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗುವುದರ ಜೊತೆಗೆ ಹೀರೋ ಆಗಿ ನಟಿಸಿದ್ದೇನೆ’ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ಈ ಚಿತ್ರವನ್ನು ಸಂತೋಷ ಅಶೋಕ್ ಹೆಗಡೆ ಮತ್ತು ಸಾಗರ್ ಬಿ. ನಿರ್ಮಾಣ ಮಾಡಿದ್ದಾರೆ. ಗೆಳೆಯರ ಸಹಕಾರವು ಸಿಕ್ಕಿದೆ. ಇದೊಂದು ಸಂಚಾರಿ ಕುರಿಗಾಹಿಗಳ ಕಥೆ ಆಧಾರಿತ ಸಿನಿಮಾ. ನಾನು ಸವದತ್ತಿ ಯಲ್ಲಮ್ಮ ದರ್ಶನ ಪಡೆದು ಬರುವಾಗ ಕುರಿಗಾಹಿಗಳನ್ನ ಕಂಡು ಅವರ ಬಗ್ಗೆ ಸಿನಿಮಾ ಮಾಡಲು ನಿರ್ಧರಿಸಿದೆ’ ಎಂದಿದ್ದಾರೆ.
‘ಊರಿಂದ ಊರಿಗೆ ಅಲೆಯುವ ಕುರಿಗಾಹಿಗಳ ಬದುಕು-ಬವಣೆ, ಒಂದು ನೆಲೆ ಕಾಣದೇ ಪರದಾಡುವ ಪರಿಸ್ಥಿತಿಯ ಸುತ್ತ ಈ ಕಥೆ ಸಾಗಲಿದೆ. ರಿಯಲ್ ಆಗಿ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದು , ಇದರಲ್ಲೊಂದು ಪ್ರೀತಿಯ ಎಳೆ ಸಹ ಇದೆ. ಈ ಸಿನಿಮಾವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಲ್ಲಿ 45 ದಿನ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿದೆ. ಕರ್ನಾಟಕದಲ್ಲಿ ‘ಬಾಗುರ್ ಫಿಲ್ಮ್ಸ್’ ಮೂಲಕ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ತೆರೆಗೆ ತರುವ ಆಲೋಚನೆ ಇದೆ’ ಎಂದು ಶ್ರೀ ಕಾಕಾ ಹೇಳಿದ್ದಾರೆ.
ಇದನ್ನೂ ಓದಿ: ‘ಅನಂತ ಪಯಣ’ ಸಿನಿಮಾದ ಟ್ರೇಲರ್ ನೋಡಿ ಮೆಚ್ಚಿದ ಸಿ.ಟಿ. ರವಿ, ಎಚ್.ಎಂ. ರೇವಣ್ಣ
ಈ ಸಿನಿಮಾದಲ್ಲಿ ನಾಯಕಿಯಾಗಿ ನಿವಿಷ್ಕಾ ಪಾಟೀಲ್ ನಟಿಸಿದ್ದಾರೆ. ಬಾಲ ರಾಜ್ವಾಡಿ, ಲಕ್ಷ್ಮಿ ಸಿದ್ದಯ್ಯ, ಅಪೂರ್ವ, ಪ್ರಶಾಂತ್ ಸಿದ್ದಿ, ಮಂಜುನಾಥ ಹೆಗಡೆ, ಸಂದೀಪ್ ನೀನಾಸಂ, ಅನನ್ಯ, ಸಂಗೀತಾ ಭಟ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಆಕಾಶ ಪರ್ವ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




