AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ವಿವಾದ ಸೃಷ್ಟಿಸಿದ ಪಾಕಿಸ್ತಾನಿ ಧಾರಾವಾಹಿಗಳು; ನೆಟ್ಟಿಗರ ತೀವ್ರ ವಿರೋಧ

ಉಭಯ ದೇಶಗಳ ನಡುವಿನ ಉದ್ವಿಗ್ನತೆ, ನಿರ್ಬಂಧಗಳ ನಡುವೆಯೂ ಭಾರತದಲ್ಲಿ ಪಾಕಿಸ್ತಾನಿ ಕಾರ್ಯಕ್ರಮಗಳು ಚರ್ಚೆಗೆ ಒಳಗಾಗುತ್ತಿವೆ. ಎರಡು ಪಾಕಿಸ್ತಾನಿ ಶೋಗಳ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಶೋಗಳನ್ನು ಬೆಂಬಲಿಸುವ ಭಾರತೀಯರ ವಿರುದ್ಧ ಟೀಕೆ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ವಿವರ...

ಭಾರತದಲ್ಲಿ ವಿವಾದ ಸೃಷ್ಟಿಸಿದ ಪಾಕಿಸ್ತಾನಿ ಧಾರಾವಾಹಿಗಳು; ನೆಟ್ಟಿಗರ ತೀವ್ರ ವಿರೋಧ
Netflix
ಮದನ್​ ಕುಮಾರ್​
|

Updated on: Nov 25, 2026 | 5:07 PM

Share

2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಬಳಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯರು ಬಲಿಯಾಗಿದ್ದರು. ಈ ಭೀಕರ ಘಟನೆಯು ಭಾರತದಲ್ಲಿ ತೀವ್ರ ಪಾಕಿಸ್ತಾನ ವಿರೋಧಿ ಭಾವನೆಯನ್ನು ಹುಟ್ಟುಹಾಕಿದ್ದು, ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳು ಸಂಪೂರ್ಣವಾಗಿ ಕಡಿದುಹೋಗಲು ಕಾರಣವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಉದ್ವಿಗ್ನತೆ ತೀವ್ರಗೊಂಡ ಬೆನ್ನಲ್ಲೇ, ಭಾರತದಲ್ಲಿ ಪಾಕಿಸ್ತಾನಿ ಕಲಾವಿದರು ಮತ್ತು ಅವರ ಪ್ರಾಜೆಕ್ಟ್‌ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು.

ಇದೀಗ ಪಾಕಿಸ್ತಾನಿ ಮನರಂಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ವಿವಾದಗಳು ಇಂಟರ್‌ನೆಟ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತ್ತೆ ಅದೇ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದಿದೆ. ಒಂದು ನೆಟ್‌ಫ್ಲಿಕ್ಸ್‌ನ ‘ಜೋ ಬಚೇ ಹೈ ಸಂಗ್ ಸಮೇಟ್ ಲೋ’ ಸರಣಿಯದ್ದಾದರೆ, ಮತ್ತೊಂದು ಜನಪ್ರಿಯ ಎಆರ್‌ವೈ ಡಿಜಿಟಲ್ ಧಾರಾವಾಹಿ ‘ದರ್-ಎ-ನಿಜಾತ್’ ಅಭಿಮಾನಿ ಬಳಗ ಆಯೋಜಿಸಿದ್ದ ಪೇಯ್ಡ್ ವಾಚ್ ಪಾರ್ಟಿಗೆ ಸಂಬಂಧಿಸಿದ್ದಾಗಿದೆ.

ನೆಟ್‌ಫ್ಲಿಕ್ಸ್‌ನ ‘ಜೋ ಬಚೇ ಹೈ ಸಂಗ್ ಸಮೇಟ್ ಲೋ’ ಸರಣಿಯ ನಿಷೇಧಕ್ಕೆ ಆಗ್ರಹ:

ಪಾಕಿಸ್ತಾನದ ಮೊದಲ ನೆಟ್‌ಫ್ಲಿಕ್ಸ್ ಒರಿಜಿನಲ್ ಸರಣಿಯ ಪೋಸ್ಟರ್‌ಗಳು ಬಿಡುಗಡೆಯಾದ ಬೆನ್ನಲ್ಲೇ ಈ ವಿವಾದ ಆರಂಭವಾಗಿದೆ. ಪೋಸ್ಟರ್‌ಗಳ ಪ್ರಕಾರ, ಈ ಸರಣಿಯು 2026ರ ಡಿಸೆಂಬರ್ 4ರಂದು ಜಾಗತಿಕವಾಗಿ ಪ್ರೀಮಿಯರ್ ಆಗಲಿದೆ. ಅಹದ್ ರಜಾ ಮಿರ್, ಇಕ್ರಾ ಅಜೀಜ್, ಫವಾದ್ ಖಾನ್, ಮಹಿರಾ ಖಾನ್, ಸನಮ್ ಸಯೀದ್, ಹನಿಯಾ ಅಮೀರ್, ಹಮ್ಜಾ ಅಲಿ ಅಬ್ಬಾಸಿ, ಮಾಯಾ ಅಲಿ, ಬಿಲಾಲ್ ಅಶ್ರಫ್ ಮತ್ತು ಖುಷ್ಹಾಲ್ ಖಾನ್ ಅವರಂತಹ ಪಾಕಿಸ್ತಾನದ ಖ್ಯಾತ ತಾರೆಯರ ದೊಡ್ಡ ಬಳಗವೇ ಈ ಸರಣಿಯಲ್ಲಿದೆ.

ಭಾರತದಲ್ಲಿ ಪಾಕಿಸ್ತಾನಿ ಶೋಗಳ ಮೇಲಿರುವ ನಿರ್ಬಂಧಗಳು ಹಾಗೂ ಪಾಕಿಸ್ತಾನಿ ಮನರಂಜನಾ ಕಾರ್ಯಕ್ರಮಗಳ ಮೇಲಿನ ಕಾನೂನುಬದ್ಧ ನಿಷೇಧದ ಹಿನ್ನೆಲೆಯಲ್ಲಿ ಈ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸರಣಿಯು ಭಾರತದಲ್ಲಿ ಬಿಡುಗಡೆಯಾಗಲಿದೆಯೇ ಎಂಬ ಬಗ್ಗೆ ನೆಟ್‌ಫ್ಲಿಕ್ಸ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಸರಣಿಯ ಮುಖ್ಯ ಪೋಸ್ಟರ್ ಮತ್ತು ಪಾತ್ರಗಳ ಪರಿಚಯವನ್ನು ‘ನೆಟ್‌ಫ್ಲಿಕ್ಸ್ ಮೆನಾ’, ‘ನೆಟ್‌ಫ್ಲಿಕ್ಸ್ ಯುಕೆ’, ಮತ್ತು ‘ನೆಟ್‌ಫ್ಲಿಕ್ಸ್ ಗೋಲ್ಡನ್’ ಖಾತೆಗಳಲ್ಲಿ ಅನಾವರಣಗೊಳಿಸಲಾಗಿದೆ.

‘ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದಲ್ಲಿ ಈ ಸರಣಿಯ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿದೆ. ಪಹಲ್ಗಾಮ್ ದಾಳಿಯ ಬೆನ್ನಲ್ಲೇ 2025ರ ಮೇ 8ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ್ದ ಸಲಹೆಯನ್ನು ಅಸೋಸಿಯೇಷನ್ ಉಲ್ಲೇಖಿಸಿದೆ. ಪಾಕಿಸ್ತಾನ ಮೂಲದ ಕಂಟೆಂಟ್‌ಗಳೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಮತ್ತು ಅವುಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸಚಿವಾಲಯವು ಒಟಿಟಿ ವೇದಿಕೆಗಳಿಗೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ಪಹಲ್ಗಾಮ್ ದಾಳಿ ಪ್ರಸ್ತಾಪಿಸಿ ಜಾಗತಿಕ ವೇದಿಕೆಯಲ್ಲಿ ಪಾಕ್ ವಿರುದ್ಧ ಭಾರತ ನೇರ ವಾಗ್ದಾಳಿ

ಈ ಕುರಿತು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ‘ಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್‌ಗೆ ಅವಕಾಶ ನೀಡಬಾರದು. ನನಗೆ ಅವರ ಕಾರ್ಯಕ್ರಮಗಳ ಮೇಲೆ ದ್ವೇಷವಿಲ್ಲ, ಆದರೆ ಅದರ ಹಿಂದಿರುವ ಆರ್ಥಿಕ ಲಾಭದ ಪ್ರಶ್ನೆ ಇದೆ. ಯಾವುದೇ ಕಾರಣಕ್ಕೂ ಭಾರತೀಯ ವೀಕ್ಷಕರಿಂದ ಅವರ ಉದ್ಯಮ ಹಣ ಗಳಿಸಲು ಬಿಡಬಾರದು. ಅದೇ ರೀತಿ ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಪಂದ್ಯಗಳನ್ನೂ ನಿಲ್ಲಿಸಿ’ ಎಂದು ಕಿಡಿಕಾರಿದ್ದಾರೆ.

ದೆಹಲಿಯ ಕೆಫೆಯಲ್ಲಿ ‘ದರ್-ಎ-ನಿಜಾತ್’ ಸ್ಕ್ರೀನಿಂಗ್ ವಿಡಿಯೋ ವೈರಲ್:

ಶೆಹೆರ್ಯಾರ್ ಮುನಾವರ್, ದುರೆಫಿಶಾನ್ ಸಲೀಮ್ ಮತ್ತು ನಮೀರ್ ನವಾಜ್ ಖಾನ್ ಅಭಿನಯದ ಮತ್ತೊಂದು ಪಾಕಿಸ್ತಾನಿ ಧಾರಾವಾಹಿ ‘ದರ್-ಎ-ನಿಜಾತ್’ ಕೂಡ ಆನ್‌ಲೈನ್ ಚರ್ಚೆಯ ಕೇಂದ್ರಬಿಂದುವಾಗಿದೆ. ಪಾಕಿಸ್ತಾನದ ಎಆರ್‌ವೈ ಡಿಜಿಟಲ್‌ನಲ್ಲಿ ಪ್ರಸಾರವಾದ ಈ ಧಾರಾವಾಹಿ ಯೂಟ್ಯೂಬ್‌ನಲ್ಲೂ ಲಭ್ಯವಿದ್ದು, ನಿರ್ಬಂಧಗಳ ನಡುವೆಯೂ ಭಾರತೀಯ ವೀಕ್ಷಕರು ಇದನ್ನು ವೀಕ್ಷಿಸುತ್ತಿದ್ದಾರೆ. ದೆಹಲಿಯ ಕೆಫೆಯೊಂದರಲ್ಲಿ ಈ ಧಾರಾವಾಹಿಯ ಅಭಿಮಾನಿಗಳ ವಾಚ್ ಪಾರ್ಟಿ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ತಾರಕಕ್ಕೇರಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಾಕಿಬ್ ಖಾನ್ ಅವರೊಂದಿಗೆ ವರ್ಚುವಲ್ ಸಂವಾದ ಕೂಡ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು, ‘ಪಾಕಿಸ್ತಾನಿ ಧಾರಾವಾಹಿ ‘ದರ್-ಎ-ನಿಜಾತ್’ ಅಭಿಮಾನಿಗಳ ಸಭೆ ದೆಹಲಿಯಲ್ಲಿ ನಡೆದಿದೆ. ಇಂತಹ ಕಾರ್ಯಕ್ರಮಗಳಿಗೆ ಭಾರತದಲ್ಲಿ ಏಕೆ ಅವಕಾಶ ನೀಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ಭಾರತದ ಜನರು ಎಲ್ಲವನ್ನೂ ಬಹಳ ಬೇಗ ಮರೆತುಬಿಡುತ್ತಾರೆ. ಹಲವಾರು ದಾಳಿಗಳಿಗೆ ಕಾರಣವಾದ ದೇಶವದು, ಆದರೂ ನಾವು ಎಲ್ಲವನ್ನೂ ನಿರ್ಲಕ್ಷಿಸುತ್ತೇವೆ. ಜನರು ಪಾಕಿಸ್ತಾನದ ಸಾಫ್ಟ್ ಪವರ್ ಅನ್ನು ಬೆಂಬಲಿಸುತ್ತಿರುವುದನ್ನು ನಂಬಲಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮಗೆ ನಾಚಿಕೆಯಾಗಬೇಕು. ನಮ್ಮ ದೇಶಕ್ಕೆ ಪಾಕಿಸ್ತಾನ ಏನು ಮಾಡುತ್ತಿದೆ ಎಂಬುದನ್ನು ಮತ್ತು ಅಲ್ಲಿನ ಸೆಲೆಬ್ರಿಟಿಗಳು ನಮ್ಮ ದೇಶವನ್ನು ಹೇಡಿ ಎಂದು ಕರೆದಿದ್ದನ್ನು ಇವರು ಹೇಗೆ ಮರೆತರು? ಇಂತಹ ವಿಡಿಯೋ ಮತ್ತು ಫೋಟೋಗಳನ್ನು ನೋಡಿದಾಗಲೆಲ್ಲ ನನ್ನ ಹೃದಯ ಒಡೆಯುತ್ತದೆ’ ಎಂದು ಮತ್ತೊಬ್ಬ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ‘ಭಾರತದಲ್ಲಿ ಪಾಕಿಸ್ತಾನದ ಪ್ರತಿಯೊಂದನ್ನೂ ನಿಷೇಧಿಸಿ’ ಎಂಬ ಆಗ್ರಹಗಳೂ ಕೇಳಿಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ