ಐಪಿಎಲ್ ಮಿನಿ ಹರಾಜು: 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ 29 ಆಟಗಾರರಿವರು
ಐಪಿಎಲ್ 2027ರ ಮಿನಿ ಹರಾಜಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಈ ಪ್ರಮುಖ ಹರಾಜಿನಲ್ಲಿ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಸೇರಿದಂತೆ ಹಲವು ಸ್ಟಾರ್ ಆಟಗಾರರು 2 ಕೋಟಿ ರೂ. ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಶ್ಚರ್ಯಕರವಾಗಿ, ಈ ಅತಿ ಹೆಚ್ಚು ಬೆಲೆಯ ವಿಭಾಗದಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಒಟ್ಟು 1220 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ, ಫ್ರಾಂಚೈಸಿಗಳ ಆಯ್ಕೆ ಕುತೂಹಲ ಮೂಡಿಸಿದೆ.

ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆ ಜೋರಾಗಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಆಟಗಾರರ ಹರಾಜಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿ ಹಲವು ಸ್ಟಾರ್ ಕ್ರಿಕೆಟಿಗರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಎಂದು ನಿಗದಿಪಡಿಸಿಕೊಂಡು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್, ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, 2 ಕೋಟಿ ರೂ. ಮೂಲ ಬೆಲೆಯ ವಿಭಾಗದಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.
ಸ್ಟೋಕ್ಸ್ ಕಮ್‌ಬ್ಯಾಕ್, ವಾರ್ನರ್‌ಗೆ ಮತ್ತೊಂದು ಅವಕಾಶ
2 ಕೋಟಿ ರೂ. ಮೂಲ ಬೆಲೆಯ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹೆಸರು ವಿಶೇಷ ಗಮನ ಸೆಳೆಯುತ್ತಿದೆ. 2025ರ ಮೆಗಾ ಹರಾಜಿನಿಂದ ದೂರ ಉಳಿದಿದ್ದ ಸ್ಟೋಕ್ಸ್, ಐಪಿಎಲ್ ನಿಯಮಗಳ ಕಾರಣದಿಂದ ಮುಂದಿನ ಮಿನಿ ಹರಾಜಿನಲ್ಲೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದೀಗ 2027ರ ಹರಾಜಿನ ಮೂಲಕ ಮತ್ತೆ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 45 ಪಂದ್ಯಗಳನ್ನಾಡಿರುವ ಸ್ಟೋಕ್ಸ್ 935 ರನ್ ಗಳಿಸಿದ್ದು, 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಕೊನೆಯದಾಗಿ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.
ಇನ್ನು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿರುವ ಹಾಗೂ ನಾಯಕತ್ವದ ಅನುಭವ ಹೊಂದಿರುವ ವಾರ್ನರ್ ಮೇಲೆ ಫ್ರಾಂಚೈಸಿಗಳು ಎಷ್ಟು ಆಸಕ್ತಿ ತೋರಿಸಲಿವೆ ಎಂಬುದು ಕುತೂಹಲ ಮೂಡಿಸಿದೆ.
2 ಕೋಟಿ ರೂ. ಮೂಲ ಬೆಲೆಯ ಪಟ್ಟಿ
ಈ ವಿಭಾಗದಲ್ಲಿ ಭಾರತಕ್ಕಿಂತ ವಿದೇಶಿ ಆಟಗಾರರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
- ಭಾರತ: ಆವೇಶ್ ಖಾನ್, ದೀಪಕ್ ಚಹಾರ್
- ಇಂಗ್ಲೆಂಡ್: ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಸೋನಿ ಬೇಕರ್, ಟಾಮ್ ಕರನ್
- ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಜೇ ರಿಚರ್ಡ್ಸನ್, ಮಹ್ಲಿ ಬಿಯರ್ಡ್‌ಮನ್, ಸ್ಪೆನ್ಸರ್ ಜಾನ್ಸನ್
- ನ್ಯೂಜಿಲೆಂಡ್: ಆಡಮ್ ಮಿಲ್ನೆ, ಬೆನ್ ಸಿಯರ್ಸ್, ಬೆವನ್ ಜೇಕಬ್ಸ್, ಡ್ಯಾರಿಲ್ ಮಿಚೆಲ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಟ್ರೆಂಟ್ ಬೌಲ್ಟ್, ವಿಲಿಯಂ ಒ’ರೂರ್ಕ್
- ಅಫ್ಘಾನಿಸ್ತಾನ: ಫಜಲ್‌ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್, ರಹಮಾನುಲ್ಲಾ ಗುರ್ಬಾಜ್
- ದಕ್ಷಿಣ ಆಫ್ರಿಕಾ: ಅನ್ರಿಚ್ ನೋಕಿಯಾ, ಜೆರಾಲ್ಡ್ ಕೋಟ್ಜಿ
- ಶ್ರೀಲಂಕಾ: ಮಥೀಶ ಪತಿರಾನ, ವನಿಂದು ಹಸರಂಗ
- ವೆಸ್ಟ್ ಇಂಡೀಸ್: ಶಾಯ್ ಹೋಪ್, ಶಿಮ್ರಾನ್ ಹೆಟ್ಮೈರ್.
ಐಪಿಎಲ್‌ಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ; ಪಿಎಸ್‌ಎಲ್ ತಂಡವನ್ನೇ ಮಾರಾಟ ಮಾಡಲು ಮುಂದಾದ ಮಾಲೀಕ
ಮೂಲ ಬೆಲೆಗೆ ಆಟಗಾರರು ಮಾರಾಟವಾಗುತ್ತಾರಾ?
ಐಪಿಎಲ್ ಹರಾಜಿನಲ್ಲಿ ಆಟಗಾರನ ಮೂಲ ಬೆಲೆ ಎಂದರೆ ಆತ ಪಡೆಯಬಹುದಾದ ಕನಿಷ್ಠ ಬಿಡ್ ಮೊತ್ತವಷ್ಟೇ. ಫ್ರಾಂಚೈಸಿಗಳ ನಡುವೆ ಪೈಪೋಟಿ ಹೆಚ್ಚಾದರೆ ಆಟಗಾರನ ಬೆಲೆ ಹಲವು ಪಟ್ಟು ಏರಿಕೆಯಾಗಬಹುದು. ಅದೇ ರೀತಿ ಯಾವುದೇ ತಂಡ ಆಸಕ್ತಿ ತೋರಿಸದಿದ್ದರೆ ಆಟಗಾರ ಮಾರಾಟವಾಗದೆ ಉಳಿಯುವ ಸಾಧ್ಯತೆಯೂ ಇರುತ್ತದೆ.
ಈ ಬಾರಿ ಒಟ್ಟು 1,220 ಆಟಗಾರರು ಐಪಿಎಲ್ ಹರಾಜಿಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹತ್ತು ಫ್ರಾಂಚೈಸಿಗಳ ಬಳಿ ಒಟ್ಟು 66 ಆಟಗಾರರ ಸ್ಥಾನಗಳು ಖಾಲಿಯಿದ್ದು, ಈ ಪೈಕಿ 25 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿರುವ ಎಲ್ಲ ಆಟಗಾರರಿಗೂ ಹರಾಜಿನಲ್ಲಿ ಅವಕಾಶ ಸಿಗುತ್ತದೆ ಎಂದೇನಿಲ್ಲ. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರರ ಭವಿಷ್ಯ ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ನಿರ್ಧಾರವಾಗಲಿದೆ.
