ಕೊಳೆಯಾದ ಪ್ಲಾಸ್ಟಿಕ್ ಬಕೆಟ್‌ಗಳನ್ನು ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಪ್ರತಿಯೊಬ್ಬರ ಮನೆಯಲ್ಲಿಯೂ ಪ್ಲಾಸ್ಟಿಕ್ ಬಕೆಟ್ ಇದ್ದೇ ಇರುತ್ತದೆ. ಸ್ನಾನದಿಂದ ಹಿಡಿದು ಬಟ್ಟೆ ಒಗೆಯಲು, ನೆಲ ಒರೆಸಲು ಎಲ್ಲದಕ್ಕೂ ಪ್ಲಾಸ್ಟಿಕ್ ಬಕೆಟ್‌ಗಳನ್ನೇ ಬಳಸಲಾಗುತ್ತದೆ. ಆದರೆ ಇದರ ಸ್ವಚ್ಛತೆಯ ಬಗ್ಗೆ ಅಷ್ಟಾಗಿ ಯಾರೂ ಗಮನಹರಿಸುವುದಿಲ್ಲ. ಇದರಿಂದಾಗಿ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹಳದಿ ಕಲೆಗಳು, ಕೊಳಕು ಸಂಗ್ರಹವಾಗುತ್ತದೆ. ಈ ಕಲೆಗಳನ್ನು ತೆಗೆದುಹಾಕುವುದು ಅಷ್ಟೇನೂ ಕಷ್ಟಕರವಲ್ಲ. ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಅಂಟಿದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಸಾಮಾನ್ಯವಾಗಿ ಬಾತ್‌ರೂಮ್, ಟಾಯ್ಲೆಟ್‌ಗಳಲ್ಲಿ ಪ್ಲಾಸ್ಟಿಕ್ ಬಕೆಟ್‌ಗಳನ್ನೇ (plastic buckets) ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಬಟ್ಟೆ ಒಗೆಯುವಲ್ಲಿ, ನೆಲ ಒರೆಸುವಾಗ ಪ್ಲಾಸ್ಟಿಕ್ ಬಕೆಟ್‌ಗಳನ್ನೇ ಉಪಯೋಗಿಸಲಾಗುತ್ತದೆ. ಇವುಗಳನ್ನು ದಿನನಿತ್ಯ ಬಳಕೆ ಮಾಡುವ ಕಾರಣ ಸೋಪ್ ನಿಕ್ಷೇಪಗಳು, ನೀರಿನ ಗುರುತುಗಳು ಮತ್ತು ಇತರ ಮಾಲಿನ್ಯಕಾರಕಗಳು ಬಕೆಟ್ ಮೇಲೆ ಸಂಗ್ರಹವಾಗುತ್ತದೆ. ಈ ಕಲೆ, ಕೊಳೆ ಸಂಗ್ರಹವಾಗಿ ಬಕೆಟ್ ತುಂಬಾನೇ ಕೊಳಕಾಗಿ ಕಾಣಿಸಿಕೊಳ್ಳುತ್ತದೆ. ಬಕೆಟ್ ಮೇಲೆ ಅಂಟಿರುವ ಈ ಕಲೆಗಳನ್ನು ತೆಗೆದುಹಾಕಲು ಯಾವುದೇ ದುಬಾರಿ ಕ್ಲೀನರ್‌ಗಳು ಬೇಕಾಗಿಲ್ಲ, ಅಡುಗೆಮನೆಯಲ್ಲಿಯೇ ಲಭ್ಯವಿರುವ ಕೆಲವೊಂದು ವಸ್ತುಗಳ ಸಹಾಯದಿಂದ ಕೊಳೆಗಟ್ಟಿದ ಪ್ಲಾಸ್ಟಿಕ್ ಬಕೆಟ್‌ಗಳನ್ನು ಕ್ಲೀನ್ ಮಾಡಬಹುದು.
ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಅಂಟಿರುವ ಕಲೆಯನ್ನು ತೆಗೆದುಹಾಕುವುದು ಹೇಗೆ?
ಬಕೆಟ್ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ನಿಂಬೆ ಸಹಕಾರಿ:
ಪ್ಲಾಸ್ಟಿಕ್ ಬಕೆಟ್ ಮೇಲೆ ಹಳದಿ ಕಲೆಗಳು ಕಾಣಿಸಿಕೊಂಡರೆ, ಅದನ್ನು ನಿಂಬೆಹಣ್ಣಿನ ಸಹಾಯದಿಂದ ಸ್ವಚ್ಛಗೊಳಿಸಲು ಪ್ರಯತ್ನಿಸಿ. ಅರ್ಧ ನಿಂಬೆಹಣ್ಣನ್ನು ತೆಗೆದುಕೊಂಡು ಕಲೆ ಇರುವ ಜಾಗದ ಮೇಲೆ ನಿಧಾನವಾಗಿ ಉಜ್ಜಿ. ಕೆಲವು ನಿಮಿಷಗಳ ನಂತರ, ಬಕೆಟ್ ಅನ್ನು ನೀರಿನಿಂದ ತೊಳೆಯಿರಿ. ಇದಲ್ಲದೆ ನಿಂಬೆ ರಸದಲ್ಲಿ ಬ್ರಷ್ ಅನ್ನು ಅದ್ದಿ, ಅದರಿಂದ ಬಕೆಟ್ ಅನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಬಕೆಟ್ ಅನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಬಿಡಿ. ನಂತರ, ನೀರಿನಿಂದ ತೊಳೆಯಿರಿ ಇದು ಸಂಗ್ರಹವಾದ ಯಾವುದೇ ಕೊಳೆಯನ್ನು ತೆಗೆದುಹಾಕುತ್ತದೆ.
ಅಡುಗೆ ಸೋಡಾ ಕಲೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ:
ಅಡುಗೆ ಸೋಡಾವನ್ನು ಬಕೆಟ್ ಸ್ವಚ್ಛಗೊಳಿಸಲು ಬಲಸಬಹುದು. ಇದಕ್ಕಾಗಿ ಬಕೆಟ್ ಅನ್ನು ಸ್ವಲ್ಪ ತೇವಗೊಳಿಸಿ. ಅದರ ಮೇಲೆ ಅಡುಗೆ ಸೋಡಾ ಪುಡಿಯನ್ನು ಸಿಂಪಡಿಸಿ. ಅಡಿಗೆ ಸೋಡಾವನ್ನು ಅರ್ಧ ಗಂಟೆ ಬಕೆಟ್‌ನಲ್ಲಿ ಹಾಗೆಯೇ ಬಿಡಿ, ನಂತರ ಸ್ಪಾಂಜ್‌ನಿಂದ ನಿಧಾನಕ್ಕೆ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ.
ಬಕೆಟ್ ಸ್ವಚ್ಛಗೊಳಿಸಲು ಅಡಿಗೆ ಸೋಡಾ ಮತ್ತು ವಿನೆಗರ್ ಸಹಕಾರಿ:
ಬಕೆಟ್‌ಗಳ ಮೇಲಿನ ಹಳದಿ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಬಳಸಬಹುದು. ಬಕೆಟ್‌ಗೆ 2-3 ಟೀ ಚಮಚ ಅಡಿಗೆ ಸೋಡಾ ಸೇರಿಸಿ, ನಂತರ ಅರ್ಧ ಕಪ್ ವಿನೆಗರ್ ಸೇರಿಸಿ. ಮಿಶ್ರಣವನ್ನು 15 ನಿಮಿಷಗಳ ಕಾಲ ಬಿಡಿ. ಸಮಯ ಮುಗಿದ ನಂತರ, ಬಕೆಟ್ ಮತ್ತು ಮಗ್ ಅನ್ನು ಬ್ರಷ್ ಮತ್ತು ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ.
ಡಿಟರ್ಜೆಂಟ್ ಮತ್ತು ಬಿಸಿನೀರಿನಿಂದ ಬಕೆಟ್ ಕ್ಲೀನ್ ಮಾಡಿ:
ಬಕೆಟ್ ಸ್ವಚ್ಛಗೊಳಿಸಲು ನೀವು ಡಿಟರ್ಜೆಂಟ್ ಮತ್ತು ಬಿಸಿನೀರನ್ನು ಸಹ ಬಳಸಬಹುದು. ಮೊದಲು, ಬಕೆಟ್ ಅನ್ನು ಬಿಸಿ ನೀರಿನಿಂದ ತುಂಬಿಸಿ ಮತ್ತು ನಂತರ 2-3 ಟೀ ಚಮಚ ಡಿಟರ್ಜೆಂಟ್ ಸೇರಿಸಿ. ಅರ್ಧ ಗಂಟೆ ಹಾಗೆಯೇ ಬಿಟ್ಟ ನಂತರ, ಬ್ರಷ್ ನಿಂದ ಸ್ಕ್ರಬ್ ಮಾಡಿ ಬಕೆಟ್ ಸ್ವಚ್ಛಗೊಳಿಸಿ.
ಇದನ್ನೂ ಓದಿ: ಇಮ್ಮರ್ಶನ್ ವಾಟರ್ ಹೀಟರ್ ಬಳಸುವಾಗ ತೆಗೆದುಕೊಳ್ಳಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಬಿಳಿ ವಿನೆಗರ್ ಬಳಸಿ ಬಕೆಟ್ ಕ್ಲೀನ್ ಮಾಡಿ:
ಬಕೆಟ್ ನಿಂದ ನೀರಿನ ಕಲೆಗಳನ್ನು ತೆಗೆದುಹಾಕಲು ಬಿಳಿ ವಿನೆಗರ್ ಅನ್ನು ಬಳಸಬಹುದು. ಬಿಳಿ ವಿನೆಗರ್ ನೊಂದಿಗೆ ನೀರನ್ನು ಬೆರೆಸಿ ಬಕೆಟ್‌ಗೆ ಹಚ್ಚಿ 5 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ನೀರಿನ ಕಲೆಗಳನ್ನು ತೆಗೆದುಹಾಕಲು ತುಂಬಾನೇ ಸಹಕಾರಿ.
ಈ ವಿಷಯಗಳ ಬಗ್ಗೆಯೂ ಗಮನ ಹರಿಸಿ:
- ಪ್ಲಾಸ್ಟಿಕ್ ಬಕೆಟ್ ಸ್ವಚ್ಛಗೊಳಿಸಲು ಸ್ಟೀಲ್ ಸ್ಕ್ರಬ್ಬರ್‌ಗಳನ್ನು ಬಳಸಬೇಡಿ. ಇದು ಬಕೆಟ್‌ನಲ್ಲಿ ಗೀರು ಬೀಳಲು ಕಾರಣವಾಗಬಹುದು. ಯಾವಾಗಲೂ ಮೃದುವಾದ ಸ್ಪಾಂಜುಗಳನ್ನೇ ಬಳಸಿ.
- ಪ್ರತಿ ಬಳಕೆಯ ನಂತರ ಬಕೆಟ್‌ಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಸೋಪ್ ಅಥವಾ ಇತರ ಶುಚಿಗೊಳಿಸುವ ಉತ್ಪನ್ನಗಳು ಸಂಗ್ರಹವಾಗಲು ಬಿಡಬೇಡಿ.
- ತೊಳೆದ ನಂತರ, ನೀರು ಹೊರಗೆ ಬರುವಂತೆ ಬಕೆಟ್ ಅನ್ನು ತಲೆಕೆಳಗಾಗಿ ಇರಿಸಿ ಒಣಗಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
