ದಾಸವಾಳ ಹೂವಿನಿಂದ ತಯಾರಿಸಿದ ಈ ನ್ಯಾಚುರಲ್ ಶಾಂಪೂ ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಕಾರಿ
ಕೂದಲಿನ ಹೊಳಪನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ಸಿಗುವಂತಹ ತರಹೇವಾರಿ ಶಾಂಪೂಗಳನ್ನು ಹಾಕುತ್ತಾರೆ. ಆದರೆ ಈ ಶಾಂಪೂಗಳಲ್ಲಿ ರಾಸಾಯನಿಕಗಳಿರುವುದರಿಂದ ಇವು ಕೂದಲನ್ನು ದುರ್ಬಲಗೊಳಿಸುತ್ತವೆ. ಕೂದಲು ಉದರುರಲು ಕಾರಣವಾಗುತ್ತದೆ. ಹೀಗಿರುವಾಗ ಈ ಕೆಮಿಕಲ್‌ಯುಕ್ತ ಶಾಂಪೂಗಳನ್ನು ಬಳಸುವ ಬದಲು, ಕೂದಲಿಗೆ ಮನೆಯಲ್ಲಿಯೇ ತಯಾರಿಸಿದ ದಾಸವಾಳ ಹೂವಿನ ಈ ನೈಸರ್ಗಿಕ ಶಾಂಪೂವನ್ನು ಹಾಕಿ. ಈ ಶಾಂಪೂ ತಯಾರಿಸುವುದು ತುಂಬಾನೇ ಸುಲಭ.

ದಾಸವಾಳ (hibiscus) ಹೂವುಗಳು ಮತ್ತು ಅದರ ಎಲೆ ಕೂದಲಿನ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಪ್ರಯೋಜನಕಾರಿ. ದಾಸವಾಳದಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ಮತ್ತು ನೆತ್ತಿಯ ರಕ್ತಪರಿಚಲನೆಯನ್ನು ಸುಧಾರಿಸಲು ಸಹಕಾರಿ. ಅಲ್ಲದೆ ಇದರಲ್ಲಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಅಮೈನೋ ಆಮ್ಲಗಳಿದ್ದು, ದಾಸವಾಳದಲ್ಲಿರುವ ಈಅಮೈನೋ ಆಮ್ಲಗಳು ಕೆರಾಟಿನ್ ಅನ್ನು ಉತ್ಪಾದಿಸುತ್ತವೆ, ಕೂದಲು ಉದುರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ದಾಸವಾಳವನ್ನು ಬಳಸಿ ನೈಸರ್ಗಿಕ ಶಾಂಪೂವನ್ನು ತಯಾರಿಸಬಹುದು. ಹೌದು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಶಾಂಪೂಗಳನ್ನು ಬಳಸಿ ಕೂದಲನ್ನು ಹಾಳು ಮಾಡುವ ಬದಲು ದಾಸವಾಳದ ಈ ನೈಸರ್ಗಿಕ ಶಾಂಪೂವನ್ನು ಬಳಸುವ ಮೂಲಕ ಹೊಳೆಯುವ, ಆರೋಗ್ಯಕರ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.
ದಾಸವಾಳದ ಹೂವಿನ ಶಾಂಪೂ ತಯಾರಿಸಲು ಬೇಕಾಗುವ ಪದಾರ್ಥಗಳು:
- ನೀರು – 1-1/2 ಗ್ಲಾಸ್
- ಅಂಟುವಾಳ ಅಥವಾ ನೊರೆಕಾಯಿ ಪುಡಿ – 6 ಚಮಚ
- ಸೀಗೆಕಾಯಿ ಪುಡಿ – 6 ಟೀಸ್ಪೂನ್
- ನೆಲ್ಲಿಕಾಯಿ ಪುಡಿ – 6 ಚಮಚಗಳು
- ಅಲೋವೆರಾ ಜೆಲ್ – 2 ಟೀ ಚಮಚಗಳು
- ಅಗಸೆ ಬೀಜಗಳು – ಅರ್ಧ ಕಪ್
- ದಾಸವಾಳದ ಹೂವಿನ ಪುಡಿ – 3 ರಿಂದ 4 ಟೀ ಚಮಚಗಳು
ದಾಸವಾಳದ ಹೂವಿನ ಶಾಂಪೂ ತಯಾರಿಸುವುದು ಹೇಗೆ?
- ಮೊದಲು ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ನೀರಿಗೆ ಸೀಗೆಕಾಯಿ, ಅಂಟುವಾಳ ಮತ್ತು ನೆಲ್ಲಿಕಾಯಿಯ ಪುಡಿಯನ್ನು ಸೇರಿಸಿ. ಮತ್ತೊಂದೆಡೆ, ಅಗಸೆ ಬೀಜಗಳನ್ನು ಜೆಲ್ ರೂಪ ಪಡೆಯುವವರೆಗೆ ನೀರಿನಲ್ಲಿ ಕುದಿಯಲು ಬಿಡಿ.
- ಈಗ ನೀವು ಒಣ ದಾಸವಾಳದ ಹೂವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿಮಾಡಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್‌ಗೆ ಮೊದಲೇ ತಯಾರಿಸಿಟ್ಟ ಸೀಗೆಕಾಯಿ, ಅಂಟುವಾಳ, ನೆಲ್ಲಿಕಾಯಿ ಪೇಸ್ಟ್ ಹಾಕಿ ಜೊತೆಗೆ ಅಲೋವೆರಾ ಜೆಲ್ ಸೇರಿಸಿ.
- ಈಗ ನೀವು ಅಗಸೆ ಬೀಜದ ಜೆಲ್ ಅನ್ನು ಫಿಲ್ಟರ್ ಮಾಡಿ ಶಾಂಪೂ ಮಿಶ್ರಣಕ್ಕೆ ಸೇರಿಸಬೇಕು. ತಯಾರಾದ ಈ ಶಾಂಪೂವನ್ನು ಶೋಧಿಸಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ನೀವು ಇದನ್ನು ಒಂದು ತಿಂಗಳು ಬಳಸಬಹುದು ಮತ್ತು ಇದು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ದಾಸವಾಳ ಹೂವಿನ ಶಾಂಪೂ ತಯಾರಿಸುವ ಮತ್ತೊಂದು ವಿಧಾನ:
ಮೊದಲು, ಒಂದು ಪಾತ್ರೆಗೆ ನೀರನ್ನು ಸೇರಿಸಿ ಅದಕ್ಕೆ ದಾಸವಾಳದ ಹೂವುಗಳು ಮತ್ತು ಎಲೆಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಸುಮಾರು 5-7 ನಿಮಿಷಗಳ ಕಾಲ ಕುದಿಸಿ. ಸ್ವಲ್ಪ ನೀರು ಸ್ವಲ್ಪ ದಪ್ಪವಾಗುತ್ತಾ ಬಂದಂತೆ ಒಲೆಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ, ಹೂವುಗಳು ಮತ್ತು ಎಲೆಗಳನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ, ಅದನ್ನು ಸೋಸಿ ಇಟ್ಟುಕೊಳ್ಳಿ. ಅದಕ್ಕೆ 2 ಟೀ ಚಮಚ ಸೀಗೆಕಾಯಿ ಪುಡಿ, ಒಂದು ಟೀ ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ದಾಸವಾಳದ ಶಾಂಪೂ ಸಿದ್ಧ.
ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ತಾವರೆ ಗಿಡವನ್ನು ಬೆಳೆಯಬಹುದು; ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ
ಮನೆಯಲ್ಲಿ ತಯಾರಿಸಿದ ಈ ನೈಸರ್ಗಿಕ ಶಾಂಪೂವಿನ ಪ್ರಯೋಜನಗಳೇನು?
- ದಾಸವಾಳದ ಹೂವುಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ, ಆದ್ದರಿಂದ ನೀವು ಅವುಗಳನ್ನು ಶಾಂಪೂ ಆಗಿ ಬಳಸಬಹುದು.
- ದಾಸವಾಳದ ಹೂವುಗಳು ಮತ್ತು ಎಲೆಗಳಿಂದ ತಯಾರಿಸಿದ ಶಾಂಪೂ ಬಳಸುವುದರಿಂದ ಕೂದಲು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.
- ಅಂಟುವಾಳ ಒಂದು ನೈಸರ್ಗಿಕ ಕ್ಲೆನ್ಸರ್ ಆಗಿದ್ದು, ಇದು ಕೂದಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ, ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
- ಸೀಗೆಕಾಯಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಒಣಗುವುದನ್ನು ತಡೆಯುತ್ತದೆ.
- ನೆಲ್ಲಿಯಲ್ಲಿ ವಿಟಮಿನ್ ಸಿ ಇದ್ದು, ಇದು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಕೂದಲನ್ನು ದಪ್ಪವಾಗಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
- ಅಲೋವೆರಾ ಜೆಲ್ ಕೂದಲಿಗೆ ತೇವಾಂಶ ನೀಡುವುದಲ್ಲದೆ, ನೆತ್ತಿಯ ತುರಿಕೆಯನ್ನು ತಡೆಯುತ್ತದೆ.
- ಅಗಸೆ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿಯೊಬ್ಬರ ಕೂದಲು ಮತ್ತು ನೆತ್ತಿಯ ಅಗತ್ಯತೆಗಳು ವಿಭಿನ್ನವಾಗಿವೆ. ಆದ್ದರಿಂದ, ಈ ಶಾಂಪೂವನ್ನು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಅವಶ್ಯಕ. ಇದಕ್ಕಾಗಿ ನಿಮ್ಮ ಚರ್ಮದ ಮೇಲೆ ಸ್ವಲ್ಪ ಪ್ರಮಾಣದ ಶಾಂಪೂ ಹಾಕಿ ಪರೀಕ್ಷಿಸಿ. ನೀವು ಕಿರಿಕಿರಿ, ತುರಿಕೆ ಅಥವಾ ಅಲರ್ಜಿಯ ಪ್ರತಿಕ್ರಿಯೆಯನ್ನು ಅನುಭವಿಸಿದರೆ, ಇದನ್ನು ಬಳಕೆ ಮಾಡಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
