ಮತ್ತೆ ಸುಂಕದ ಶಾಕ್ ಕೊಟ್ಟ ಟ್ರಂಪ್; ಭಾರತಕ್ಕೆ ಶೇ. 25, ಚೀನಾಗೆ ಶೇ. 40ರವರೆಗೆ ಟಾರಿಫ್ ವಿಧಿಸಲು ಅಮೆರಿಕ ಪ್ರಸ್ತಾಪ
ಭಾರತ ಸೇರಿದಂತೆ 7 ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅತಿಯಾದ ಕೈಗಾರಿಕಾ ಉತ್ಪಾದನೆ ಮತ್ತು ಅಸಮಂಜಸ ವ್ಯಾಪಾರ ನೀತಿಗಳನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಇಂದು ಈ ಮಹತ್ವದ ಸುಂಕ ಪ್ರಸ್ತಾವನೆಯನ್ನು ಪ್ರಕಟಿಸಿದೆ. ಈ ಹೊಸ ಯೋಜನೆಯಡಿ ಭಾರತದ ಸರಕುಗಳ ಮೇಲೆ ಶೇ. 25ರವರೆಗೆ ಆಮದು ಸುಂಕ ವಿಧಿಸಲು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಪ್ರಸ್ತಾಪಿಸಿದ್ದು, ಚೀನಾದ ಮೇಲೆ ಶೇ. 40ರವರೆಗೆ ಸುಂಕ ಹೇರುವ ಎಚ್ಚರಿಕೆ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ಚೀನಾದಲ್ಲಿ ಚೀನಾ ಅಧ್ಯಕ್ಷರ ಜೊತೆ ಮಹತ್ವದ ಮಾತುಕತೆ ನಡೆಸಿದ್ದ ಟ್ರಂಪ್ ಇದೀಗ ಚೀನಾಗೆ ಶೇ. 40ರಷ್ಟು ಸುಂಕ ವಿಧಿಸುವ ಪ್ರಸ್ತಾಪದ ಮೂಲಕ ಶಾಕ್ ನೀಡಿದ್ದಾರೆ.

ವಾಷಿಂಗ್ಟನ್, ನವೆಂಬರ್ 25: ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿನ ಅತಿಯಾದ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವನ್ನು ನಿಯಂತ್ರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಯತ್ನದ ಭಾಗವಾಗಿ, ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ. 25ರವರೆಗೆ ಆಮದು ಸುಂಕ ವಿಧಿಸಲು ಪ್ರಸ್ತಾಪಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯ (USTR) ಇತ್ತೀಚಿನ ಯೋಜನೆಯಡಿ ಪ್ರಸ್ತಾಪಿಸಲಾದ ಈ ಸುಂಕ ದರವನ್ನು ಎದುರಿಸುತ್ತಿರುವ 7 ದೇಶಗಳಲ್ಲಿ ಭಾರತವೂ ಒಂದಾಗಿದೆ. ಚೀನಾವು ಅತ್ಯಧಿಕ ಒಟ್ಟಾರೆ ಸುಂಕದ ಹೊರೆಯನ್ನು ಎದುರಿಸುವ ನಿರೀಕ್ಷೆಯಿದೆ.
ಒಟ್ಟು 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಟ್ರಂಪ್ ಆಡಳಿತ ಮುಂದಾಗಿದೆ. ಈ ಪೈಕಿ ಭಾರತ, ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥಾಯ್ಲೆಂಡ್ ಈ 7 ದೇಶಗಳ ಮೇಲೆ ಶೇ. 25ರವರೆಗೆ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ. ಇನ್ನು ಚೀನಾದ ಮೇಲೆ ಪ್ರಸ್ತುತ ಶೇ. 20ರಷ್ಟು ಸುಂಕ ಪ್ರಸ್ತಾಪಿಸಲಾಗಿದ್ದು, ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ವ್ಯಾಪಾರ ಮಾತುಕತೆ ವಿಫಲವಾದರೆ ಈ ದರವನ್ನು ಶೇ. 40ಕ್ಕೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಇದರೊಂದಿಗೆ ಬಾಂಗ್ಲಾದೇಶ, ಯುರೋಪಿಯನ್ ಒಕ್ಕೂಟ, ಜಪಾನ್, ಸಿಂಗಾಪುರ, ಸ್ವಿಟ್ಜರ್ಲೆಂಡ್ ಮತ್ತು ವಿಯೆಟ್ನಾಂ ದೇಶಗಳ ಮೇಲೂ ಸುಂಕ ವಿಧಿಸುವ ಪಟ್ಟಿಯಲ್ಲಿ ಸೇರಿವೆ.
ಹೊಸ ಸುಂಕ ವಿಧಿಸಲು ಕಾರಣವೇನು?:
ಅಮೆರಿಕದ ವಾಣಿಜ್ಯ ಮತ್ತು ದೇಶೀಯ ಉದ್ಯಮಗಳಿಗೆ ಹೊರೆಯಾಗುವ ರೀತಿಯಲ್ಲಿ ಈ ದೇಶಗಳು ಮಾರುಕಟ್ಟೆ ಬೇಡಿಕೆಗಿಂತ ಹೆಚ್ಚಿನ ಕೈಗಾರಿಕಾ ಉತ್ಪಾದನೆಗೆ ಉತ್ತೇಜನ ನೀಡುತ್ತಿವೆ ಎಂದು ಅಮೆರಿಕ ಆರೋಪಿಸಿದೆ. 16 ವ್ಯಾಪಾರ ಪಾಲುದಾರರ ವಿರುದ್ಧ ಸೆಕ್ಷನ್ 301ರ ಅಡಿಯಲ್ಲಿ 8 ತಿಂಗಳ ಕಾಲ ನಡೆಸಿದ ತನಿಖೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಟ್ರಂಪ್ ಸುಂಕದ ಹೊಸ ಅಸ್ತ್ರ: ಭಾರತದ ಮೇಲೂ ಬೀಳುತ್ತಾ ಹೆಚ್ಚುವರಿ ತೆರಿಗೆ?
ಭಾರತದ ಮೇಲೆ ಪ್ರಸ್ತಾವಿತ ಶೇ. 25ರಷ್ಟು ಸುಂಕವು ತಕ್ಷಣವೇ ಜಾರಿಗೆ ಬರುವುದಿಲ್ಲ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ನಂತರ ಮುಂದಿನ ವರ್ಷದ ಜನವರಿಯಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ. ವಿಶೇಷವೆಂದರೆ, ಭಾರತ ಮತ್ತು ಅಮೆರಿಕ ನಡುವೆ ಔಪಚಾರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದರೆ, ಭಾರತದ ಮೇಲಿನ ಈ ಸುಂಕದ ದರವು ಶೇ. 25ರಿಂದ ಶೇ. 17ಕ್ಕೆ ಇಳಿಕೆಯಾಗಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಭಾರತ ಮತ್ತು ಅಮೆರಿಕ ನಡುವೆ ಮಾರುಕಟ್ಟೆ ಪ್ರವೇಶ ಮತ್ತು ಸುಂಕ ಕಡಿತದ ಕುರಿತು ಮಹತ್ವದ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಪ್ರಸ್ತಾವನೆ ಹೊರಬಿದ್ದಿರುವುದು, ಭಾರತದ ರಫ್ತುದಾರರಿಗೆ ಹಾಗೂ ವ್ಯಾಪಾರ ಸಂಧಾನಕಾರರಿಗೆ ಹೊಸ ಒತ್ತಡವನ್ನು ತಂದೊಡ್ಡಿದೆ.
ಇದನ್ನೂ ಓದಿ: ಮಧ್ಯಂತರ ಚುನಾವಣೆ ಬಳಿಕ ಇರಾನ್ ದಾಳಿ ಹೆಚ್ಚಿಸಿದೆ, ಹೊಸ ವರ್ಷದ ನಂತರ ಮತ್ತೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಟ್ರಂಪ್
ಯಾವ ವಲಯಗಳಿಗೆ ವಿನಾಯಿತಿ?:
ಈ ಹೊಸ ಪ್ರಸ್ತಾವಿತ ಸುಂಕವು ಬಹುತೇಕ ಎಲ್ಲಾ ರಫ್ತು ಸರಕುಗಳಿಗೆ ಅನ್ವಯವಾಗಲಿದ್ದರೂ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಈಗಾಗಲೇ ಪ್ರತ್ಯೇಕ ಸುಂಕಕ್ಕೆ ಒಳಪಟ್ಟಿರುವ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್ ಉತ್ಪನ್ನಗಳನ್ನು ಇದರಿಂದ ಹೊರಗಿಡುವ ಸಾಧ್ಯತೆಯಿದೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ನಂತರ ಈ ಹೊಸ ದರಗಳು ಜಾರಿಗೆ ಬರಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
