AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್ ವಿದೇಶಾಂಗ ರಾಜ್ಯ ಸಚಿವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಮಾತುಕತೆ: ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ

ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೋಕಿಯೊದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ ಕರ್ನಾಟಕ-ಜಪಾನ್ ಸಹಕಾರ ವಿಸ್ತರಣೆ ಕುರಿತು ಚರ್ಚಿಸಿದ್ದಾರೆ. 2027ರ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗವನ್ನು ಆಹ್ವಾನಿಸಿ, ವಿಶೇಷ ಜಪಾನ್ ಪೆವಿಲಿಯನ್ ಸ್ಥಾಪಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ.

ಜಪಾನ್ ವಿದೇಶಾಂಗ ರಾಜ್ಯ ಸಚಿವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಮಾತುಕತೆ: ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ
ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾದ ಸಿಎಂ ಡಿಕೆಶಿ
ಗಣಪತಿ ಶರ್ಮಾ
|

Updated on: Nov 25, 2026 | 10:55 AM

Share

ಮುಖ್ಯಾಂಶಗಳು

  • ಟೋಕಿಯೊದಲ್ಲಿ ಜಪಾನ್ ವಿದೇಶಾಂಗ ರಾಜ್ಯ ಸಚಿವರ ಭೇಟಿಯಾದ ಡಿಕೆಶಿ
  • 2027ರ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗಕ್ಕೆ ಸಿಎಂ ಆಹ್ವಾನ
  • ಕರ್ನಾಟಕದ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ಸಹಕಾರ ಕೋರಿಕೆ

ಬೆಂಗಳೂರು, ನವೆಂಬರ್ 25: ಜಪಾನ್ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕ ಮತ್ತು ಜಪಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ಕರ್ನಾಟಕ ಮತ್ತು ಜಪಾನ್ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಹತ್ವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಿಹೇಳಿದ್ದಾರೆ. ರಾಜ್ಯದಲ್ಲಿ ಜಪಾನ್ ಹೂಡಿಕೆಗಳನ್ನು ಹೆಚ್ಚಿಸುವಂತೆ ಆಹ್ವಾನಿಸಿದ ಅವರು, 2027ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ, ಸಮಾವೇಶದಲ್ಲಿ ಜಪಾನ್‌ಗಾಗಿ ವಿಶೇಷ ‘ಕಂಟ್ರಿ ಪೆವಿಲಿಯನ್’ ಸ್ಥಾಪಿಸುವ ಪ್ರಸ್ತಾವವನ್ನೂ ಮುಂದಿಟ್ಟಿದ್ದಾರೆ.

ಬೆಂಗಳೂರು ಮೂಲಸೌಕರ್ಯಕ್ಕೆ ಜಪಾನ್ ಬೆಂಬಲಕ್ಕೆ ಸಿಎಂ ಕೃತಜ್ಞತೆ

ಬೆಂಗಳೂರು ಮೆಟ್ರೋ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುವಂತೆ ಜಪಾನ್ ಸಚಿವರನ್ನು ಕೋರಿದ್ದಾರೆ.

ಮುಖ್ಯಮಂತ್ರಿ ನೇತೃತ್ವದ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸಿದ ಜಪಾನ್ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ, ಭಾರತ ಮತ್ತು ಜಪಾನ್ ನಡುವಿನ ಬಲವಾದ ಹಾಗೂ ದೀರ್ಘಕಾಲದ ಸ್ನೇಹ ಸಂಬಂಧವನ್ನು ಶ್ಲಾಘಿಸಿದ್ದಾರೆ. ಜಪಾನ್ ಹೂಡಿಕೆಗಳಿಗೆ ಕರ್ನಾಟಕ ಪ್ರಮುಖ ತಾಣವಾಗಿರುವುದನ್ನು ಅವರು ಒತ್ತಿಹೇಳಿದ್ದು, ರಾಜ್ಯದೊಂದಿಗೆ ನಿರಂತರ ಸಹಕಾರ ಮತ್ತು ಸಂಪರ್ಕವನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಟೋಕಿಯೊ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಿಎಂ ಡಿಕೆಶಿ ಪ್ಲ್ಯಾನ್: ಜಪಾನ್ ತಂತ್ರಜ್ಞಾನ, ಹೂಡಿಕೆ ಮೇಲೆ ಕಣ್ಣು

ಈ ಭೇಟಿಯು ಜಪಾನ್‌ನೊಂದಿಗೆ ಕರ್ನಾಟಕದ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಹಾಗೂ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನದ ಭಾಗವಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More