‘ರಿಷಬ್ ಶೆಟ್ಟಿ ಮ್ಯೂಸಿಕ್’ ತೆಕ್ಕೆಗೆ ‘ಸಮುದ್ರ ಮಂಥನ’ ಆಡಿಯೋ ಹಕ್ಕು; ಶೀಘ್ರದಲ್ಲೇ ಸಿನಿಮಾ ರಿಲೀಸ್
ಸಸ್ಪೆನ್ಸ್ ಥ್ರಿಲ್ಲರ್ ‘ಸಮುದ್ರ ಮಂಥನ’ ಸಿನಿಮಾದ ಆಡಿಯೋ ಹಕ್ಕುಗಳನ್ನು ‘ರಿಷಬ್ ಶೆಟ್ಟಿ ಮ್ಯೂಸಿಕ್’ ಖರೀದಿಸಿದೆ. ಸಚಿನ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ವಂತ್ ಕುಮಾರ್ ಹಾಗೂ ಮಂದಾರ ಬಟ್ಟಲಹಳ್ಳಿ ನಟಿಸಿದ್ದು, ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳು ಮತ್ತು ಬಿಡುಗಡೆ ದಿನಾಂಕ ಹೊರಬೀಳಲಿದೆ.

‘ಒಂದು ಶಿಕಾರಿಯ ಕಥೆ’ ಸಿನಿಮಾದ ಮೂಲಕ ಗಮನ ಸೆಳೆದವರು ನಿರ್ದೇಶಕ ಸಚಿನ್ ಶೆಟ್ಟಿ. ಈಗ ಅವರು ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಅವರು ರೆಡಿ ಆಗಿದ್ದಾರೆ. ಸಚಿನ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ‘ಸಮುದ್ರ ಮಂಥನ’ ಸಿನಿಮಾದ ಆಡಿಯೋ ಹಕ್ಕುಗಳನ್ನು ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆ ಖರೀದಿಸಿದೆ. ಸದಭಿರುಚಿಯ ಚಿತ್ರಗಳ ಜೊತೆಗೆ ಗುಣಮಟ್ಟದ ಸಂಗೀತಕ್ಕೆ ಸಾಥ್ ನೀಡುವ ರಿಷಬ್ ಶೆಟ್ಟಿ ಬ್ಯಾನರ್, ಈ ಸಿನಿಮಾದ ಹಾಡುಗಳನ್ನು ದೊಡ್ಡ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.
ಐದು ವಿಭಿನ್ನ ಗೀತೆಗಳ ಸಂಗಮ
ನಿಶಾಂತ್ ಮಧುಗಿರಿ ಮತ್ತು ಮನೋಜ್ ಚಂದ್ರಕಾಂತ್ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು, ಒಟ್ಟು ಐದು ಹಾಡುಗನ್ನು ಕಂಪೋಸ್ ಮಾಡಿದೆ. ಈ ಎಲ್ಲಾ ಗೀತೆಗಳಿಗೆ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಮೈಮ್ ರಾಮದಾಸ್, ಅನಿರುದ್ಧ್ ಶಾಸ್ತ್ರಿ, ಐರಾ ಉಡುಪಿ ಹಾಗೂ ಕರಿಬಸವ ತಡಕಲ್ ಹಾಡುಗಳನ್ನು ಹಾಡಿದ್ದು, ಆದಷ್ಟು ಬೇಗ ಆಡಿಯೋ ರಿಲೀಸ್ ಆಗಲಿದೆ.
ಯುವ ತಾರಾಗಣ ಮತ್ತು ನಿರ್ಮಾಣ
‘ಸಮುದ್ರ ಮಂಥನ’ ಚಿತ್ರದಲ್ಲಿ ಯುವ ನಟ ಯಶ್ವಂತ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಈ ಮೊದಲು ಅವರು ‘ನಂದ ಗೋಕುಲ’ ಸೀರಿಯಲ್ನಲ್ಲಿ ಕೇಶವನಾಗಿ ಮಿಂಚಿದ್ದರು. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ಈ ಚಿತ್ರಕ್ಕೆ ನಾಯಕಿ. ರಫ್ ಕಟ್ ಪ್ರೊಡಕ್ಷನ್ಸ್, ಎ ಸ್ಕ್ವೇರ್ ಮತ್ತು ಆರುಷ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಚಿತ್ರ ಸಿದ್ಧಗೊಂಡಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ. ಇದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ನಂದ ಗೋಕುಲ ಧಾರಾವಾಹಿ ಬಿಟ್ಟಿದ್ದಕ್ಕೆ ಅಸಲಿ ಕಾರಣ ಹೇಳಿದ ಯಶ್ವಂತ್ ಕುಮಾರ್
ಸೆನ್ಸಾರ್ ಅಂಗಳದಲ್ಲಿ ಸಿನಿಮಾ:
ಸದ್ಯ ಸಮುದ್ರ ಮಂಥನ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಅಂತಿಮ ಹಂತಕ್ಕೆ ತಲುಪಿವೆ. ಈಗಾಗಲೇ ಸಿನಿಮಾ ಸೆನ್ಸಾರ್ ಮಂಡಳಿಯ ಮುಂದಿದ್ದು, ಪ್ರಮಾಣಪತ್ರ ಸಿಕ್ಕ ತಕ್ಷಣ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ. ಇನ್ನೇನು ಕೆಲವೇ ತಿಂಗಳಲ್ಲಿ ‘ಸಮುದ್ರ ಮಂಥನ’ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




