AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಖಿಲೇಶ್ ಯಾದವ್ ಮುಕ್ತ ಪತ್ರದ ಮೂಲಕ ಕಾಂಗ್ರೆಸ್‌ಗೆ ಸಂದೇಶ, ಸೀಟು ಹಂಚಿಕೆ ಮಾತುಕತೆ ಮತ್ತಷ್ಟು ಕಗ್ಗಂಟು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್-ಸಮಾಜವಾದಿ ಪಕ್ಷದ ಮೈತ್ರಿ ಸೀಟು ಹಂಚಿಕೆ ಬಿಕ್ಕಟ್ಟಿನಲ್ಲಿದೆ. ಅಖಿಲೇಶ್ ಯಾದವ್ ಮುಕ್ತ ಪತ್ರ ಬರೆದು ಗೆಲುವಿನ ಆಧಾರದ ಮೇಲೆ ಕ್ಷೇತ್ರಗಳನ್ನು ಹಂಚಿಕೊಳ್ಳಲು ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ 110 ಕ್ಷೇತ್ರ ಕೇಳಿದರೆ, ಎಸ್‌ಪಿ 26 ಮಾತ್ರ ನೀಡಲು ಸಿದ್ಧವಿದೆ. ಅಭ್ಯರ್ಥಿ ಘೋಷಣೆಗಳಿಂದ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಬಿಜೆಪಿಗೆ ಲಾಭವಾಗುವ ಆತಂಕವಿದೆ.

ಅಖಿಲೇಶ್ ಯಾದವ್ ಮುಕ್ತ ಪತ್ರದ ಮೂಲಕ ಕಾಂಗ್ರೆಸ್‌ಗೆ ಸಂದೇಶ, ಸೀಟು ಹಂಚಿಕೆ ಮಾತುಕತೆ ಮತ್ತಷ್ಟು ಕಗ್ಗಂಟು
ಅಖಿಲೇಶ್ ಯಾದವ್ Image Credit source: PTI
ನಯನಾ ರಾಜೀವ್
|

Updated on: Nov 25, 2026 | 10:22 AM

Share

ಲಕ್ನೋ, ನವೆಂಬರ್ 25: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಮಾತುಕತೆ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಎರಡೂ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದರೂ, ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ. ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿದ್ದರೆ, ಸಮಾಜವಾದಿ ಪಕ್ಷ ಕಡಿಮೆ ಸ್ಥಾನಗಳನ್ನು ನೀಡಲು ಮುಂದಾಗಿದೆ. ಈ ನಡುವೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಂಗ್ರೆಸ್‌ಗೆ ಮುಕ್ತ ಪತ್ರ ಬರೆದು, ಗೆಲುವಿನ ಸಾಧ್ಯತೆ ಆಧರಿಸಿ ಕ್ಷೇತ್ರಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ಗೆ 110 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ

ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ ಆರಂಭದಲ್ಲಿ 181 ಕ್ಷೇತ್ರಗಳ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ನಂತರ ಈ ಪಟ್ಟಿಯನ್ನು 131ಕ್ಕೆ ಇಳಿಸಿತ್ತು. ಇತ್ತೀಚಿನ ಮಾತುಕತೆಯಲ್ಲಿ ಕಾಂಗ್ರೆಸ್ ತನ್ನ ಬೇಡಿಕೆಯನ್ನು ಮತ್ತೆ ಕಡಿತಗೊಳಿಸಿ 110 ಕ್ಷೇತ್ರಗಳ ಪಟ್ಟಿಯನ್ನು ಮುಂದಿಟ್ಟಿದೆ. ಆದರೆ ಸಮಾಜವಾದಿ ಪಕ್ಷ ಕಾಂಗ್ರೆಸ್‌ಗೆ 26 ಕ್ಷೇತ್ರಗಳನ್ನು ಮಾತ್ರ ನೀಡಲು ಪ್ರಸ್ತಾಪಿಸಿದೆ ಎನ್ನಲಾಗಿದೆ.

ಕಾಂಗ್ರೆಸ್‌ಗೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಸಿದ್ಧವಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ, ರಾಜ್ಯದಲ್ಲಿ ತನ್ನ ಪಕ್ಷವೇ ಹೆಚ್ಚು ಪ್ರಬಲವಾಗಿದೆ ಎಂಬ ಲೆಕ್ಕಾಚಾರ ಸಮಾಜವಾದಿ ಪಕ್ಷದ್ದಾಗಿದೆ.

ಕಾಂಗ್ರೆಸ್‌ಗೆ ಅಖಿಲೇಶ್ ಯಾದವ್ ಮುಕ್ತ ಪತ್ರ

ಸೀಟು ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಅಖಿಲೇಶ್ ಯಾದವ್ ಮುಕ್ತ ಪತ್ರ ಬರೆದಿದ್ದಾರೆ. ಬಿಜೆಪಿ ವಿರುದ್ಧ ಹೋರಾಡಲು ಇದು ಐತಿಹಾಸಿಕ ಅವಕಾಶವಾಗಿದ್ದು, ಎರಡೂ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಮೈತ್ರಿಯ ಗೆಲುವಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕು ಎಂಬುದನ್ನು ಕೇವಲ ಸಂಖ್ಯೆಗಳ ಆಧಾರದಲ್ಲಿ ನಿರ್ಧರಿಸಬಾರದು. ಆ ಕ್ಷೇತ್ರದಲ್ಲಿ ಯಾರಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕೆಲಸಕ್ಕೆ ಬಾರದವರೆಂದು ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ, ವಿಡಿಯೋ ನೋಡಿ

ಕಾಂಗ್ರೆಸ್ ಈಗಾಗಲೇ ಗುರುತಿಸಿರುವ 26 ಕ್ಷೇತ್ರಗಳ ಜೊತೆಗೆ, ಗೆಲ್ಲುವ ಸಾಧ್ಯತೆಯಿರುವ ಇತರ ಕ್ಷೇತ್ರಗಳ ಪಟ್ಟಿಯನ್ನೂ ನೀಡುವಂತೆ ಕೇಳಿದ್ದಾರೆ. ನಂತರ ಎರಡೂ ಪಕ್ಷಗಳು ಒಟ್ಟಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬಹುದು ಎಂದು ತಿಳಿಸಿದ್ದಾರೆ.

ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಎಸ್‌ಪಿ

ಒಂದು ಕಡೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಮಾಜವಾದಿ ಪಕ್ಷ ಐದು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಹತ್, ಸಹರಾನ್‌ಪುರ, ಶಾಮ್ಲಿ, ಅಮ್ರೋಹಾ ಮತ್ತು ಲಲಿತ್‌ಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಈ ಪೈಕಿ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳನ್ನು ಕಾಂಗ್ರೆಸ್ ಕೂಡ ತನ್ನ ಬೇಡಿಕೆಯ ಪಟ್ಟಿಯಲ್ಲಿ ಸೇರಿಸಿತ್ತು ಎನ್ನಲಾಗಿದೆ. ಹೀಗಾಗಿ ಎಸ್‌ಪಿಯ ಈ ನಡೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಬೆಳವಣಿಗೆಯಿಂದ ಎರಡೂ ಪಕ್ಷಗಳ ನಡುವೆ ಸ್ನೇಹಪರ ಸ್ಪರ್ಧೆ ನಡೆಯುವ ಸಾಧ್ಯತೆಯೂ ಎದುರಾಗಿದೆ.

ಸ್ನೇಹಪರ ಸ್ಪರ್ಧೆ ಮೈತ್ರಿಗೆ ಅಪಾಯವೇ?

ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ವಿರೋಧ ಪಕ್ಷಗಳ ಮತಗಳು ವಿಭಜನೆಯಾಗಬಹುದು. ಇದರಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಅಖಿಲೇಶ್ ಯಾದವ್ ಕ್ಷೇತ್ರ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮೈತ್ರಿಕೂಟದೊಳಗೆ ಒಬ್ಬರ ಮೇಲೆ ಮತ್ತೊಬ್ಬರು ಅಭ್ಯರ್ಥಿಗಳನ್ನು ಹೇರಬಾರದು. ಇಬ್ಬರೂ ಪಕ್ಷಗಳು ಚರ್ಚಿಸಿ ಗೆಲ್ಲುವ ಸಾಮರ್ಥ್ಯವಿರುವ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಮಾತುಕತೆಯಲ್ಲಿ ಯಾವುದೇ ಪ್ರಗತಿ ಇಲ್ಲ

ಎರಡೂ ಪಕ್ಷಗಳ ನಡುವೆ ನಡೆದ ಸೀಟು ಹಂಚಿಕೆಯ ಎರಡನೇ ಸುತ್ತಿನ ಮಾತುಕತೆ ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದರೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಸಭೆಯಲ್ಲಿ ಕಾಂಗ್ರೆಸ್ ತನ್ನ ಬೇಡಿಕೆಯನ್ನು 110 ಕ್ಷೇತ್ರಗಳಿಗೆ ಇಳಿಸಿದರೆ, ಎಸ್‌ಪಿ 26 ಕ್ಷೇತ್ರಗಳ ಪ್ರಸ್ತಾಪವನ್ನು ಮುಂದಿಟ್ಟಿದೆ.

ಇದಲ್ಲದೆ, ಕಾಂಗ್ರೆಸ್ ಕೇವಲ ಕ್ಷೇತ್ರಗಳನ್ನಷ್ಟೇ ಅಲ್ಲದೆ ಅಭ್ಯರ್ಥಿಗಳ ಹೆಸರನ್ನೂ ಹಂಚಿಕೊಳ್ಳಬೇಕು ಎಂದು ಎಸ್‌ಪಿ ಕೇಳಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಇದಕ್ಕೆ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ. ಮುಂದಿನ ಎರಡು ಸುತ್ತಿನ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆಯನ್ನು ಎರಡೂ ಪಕ್ಷಗಳ ನಾಯಕರು ವ್ಯಕ್ತಪಡಿಸಿದ್ದಾರೆ.

ಈ ಬಿಕ್ಕಟ್ಟಿನ ಹಿಂದೆ ಚುನಾವಣಾ ಲೆಕ್ಕಾಚಾರವೂ ಇದೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 399 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 2 ಸ್ಥಾನಗಳನ್ನು ಗೆದ್ದಿತ್ತು. ಹೀಗಾಗಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ನೀಡಲು ಎಸ್‌ಪಿ ಹಿಂದೇಟು ಹಾಕುತ್ತಿದೆ.

ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿತ್ತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 33 ಸ್ಥಾನಗಳಿಗೆ ಇಳಿದಿತ್ತು. ಈ ಫಲಿತಾಂಶವೇ ವಿರೋಧ ಪಕ್ಷಗಳ ಮೈತ್ರಿಗೆ ಹೊಸ ಬಲ ನೀಡಿತ್ತು.

ಬಿಜೆಪಿ ವಿರುದ್ಧ ಒಂದಾಗಿ ಹೋರಾಡಬೇಕಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಈಗಲೇ ಸೀಟು ಹಂಚಿಕೆಯ ಕಿತ್ತಾಟ ಶುರುವಾಗಿದೆ. ಈ ಭಿನ್ನಾಭಿಪ್ರಾಯವನ್ನು ನಾಯಕರು ಹೇಗೆ ಬಗೆಹರಿಸುತ್ತಾರೆ ಎಂಬುದು 2027ರ ಉತ್ತರ ಪ್ರದೇಶ ಚುನಾವಣೆಯ ಮೈತ್ರಿ ರಾಜಕಾರಣಕ್ಕೆ ನಿರ್ಣಾಯಕವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
‘ಆಪರೇಷನ್ ಗಜ’ ಕಾರ್ಯಾಚರಣೆಗೆ ವ್ಯಾಪಕ ವಿರೋಧ: ಮೂಡಿಗೆರೆ ಬಂದ್‌
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಸಿಎಂ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಇಂದು ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಸಂಕಷ್ಟ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
ಕಲಬುರ್ಗಿಯಲ್ಲಿ ನಾಳೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಸರಿ ಕಹಳೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
‘ಕಂಠೀಹಾರ ಕೊಡಲು ಆಗಲ್ಲ’: ನರೇಂದ್ರಸ್ವಾಮಿ ಹೇಳಿಕೆಗೆ ರಮ್ಯಾ ಖಂಡನೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ
ಹಿರಿಯೂರು ಬೈ ಎಲೆಕ್ಷನ್ ಟಿಕೆಟ್ ಫೈಟ್:ನಿಲುವು ಪ್ರಕಟಿಸಿದ ಹೆಚ್​​ಡಿಕೆ
ಹಾಸನ ಪೊಲೀಸ್ ನೋಟಿಸ್​​​ಗೆ ಕುಮಾರಸ್ವಾಮಿ ಕೆಂಡಾಮಂಡಲ
ಹಾಸನ ಪೊಲೀಸ್ ನೋಟಿಸ್​​​ಗೆ ಕುಮಾರಸ್ವಾಮಿ ಕೆಂಡಾಮಂಡಲ
‘ಆಶಾ ಕಾರ್ಯಕರ್ತೆಯರು ಕೇಳುವುದರಲ್ಲಿ ಏನೂ ತಪ್ಪಿಲ್ಲ’: ರಮ್ಯಾ
‘ಆಶಾ ಕಾರ್ಯಕರ್ತೆಯರು ಕೇಳುವುದರಲ್ಲಿ ಏನೂ ತಪ್ಪಿಲ್ಲ’: ರಮ್ಯಾ
ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳ ನೋಟಿಸ್ ಬಂದ್ರೆ ಏನು ಮಾಡಬೇಕು?
ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳ ನೋಟಿಸ್ ಬಂದ್ರೆ ಏನು ಮಾಡಬೇಕು?