AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸೂಚನೆ ನೀಡಿ 20 ದಿನ ಕಳೆದರೂ ಇಳಿಕೆಯಾಗಿಲ್ಲ ನಂದಿನಿ ಮೊಸರು ಬೆಲೆ: ಇನ್ನೂ ನಿರ್ಧಾರ ಕೈಗೊಳ್ಳದ ಕೆಎಂಎಫ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊಸರಿನ ಬೆಲೆಯನ್ನು ಕನಿಷ್ಠ 2 ರೂಪಾಯಿ ಇಳಿಸುವಂತೆ ಸೂಚನೆ ನೀಡಿ 20 ದಿನಗಳಿಗೂ ಹೆಚ್ಚು ಕಾಲ ಕಳೆದರೂ ಕೆಎಂಎಫ್ ಇನ್ನೂ ದರ ಕಡಿತ ಮಾಡಿಲ್ಲ. ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಚರ್ಚೆ ನಡೆಯುತ್ತಿದ್ದು, ಒಮ್ಮತಕ್ಕೆ ಬಂದಿಲ್ಲ ಎಂದು ಕೆಎಂಎಫ್ ಆಡಳಿತಾಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.

ಸಿಎಂ ಸೂಚನೆ ನೀಡಿ 20 ದಿನ ಕಳೆದರೂ ಇಳಿಕೆಯಾಗಿಲ್ಲ ನಂದಿನಿ ಮೊಸರು ಬೆಲೆ: ಇನ್ನೂ ನಿರ್ಧಾರ ಕೈಗೊಳ್ಳದ ಕೆಎಂಎಫ್
ನಂದಿನಿ ಮೊಸರು (ಸಾಂದರ್ಭಿಕ ಚಿತ್ರ)
ಗಣಪತಿ ಶರ್ಮಾ
|

Updated on: Nov 25, 2026 | 10:30 AM

Share

ಮುಖ್ಯಾಂಶಗಳು

  • ಸಿಎಂ ಸೂಚನೆ ಬಳಿಕವೂ ಇಳಿಕೆಯಾಗದ ಮೊಸರು ಬೆಲೆ
  • ಹಾಲು, ಮೊಸರು ಬೆಲೆ ಏರಿಕೆಗೆ ಗ್ರಾಹಕರ ಅಸಮಾಧಾನ
  • ಜಿಲ್ಲಾ ಹಾಲು ಒಕ್ಕೂಟಗಳ ಜೊತೆ ಕೆಎಂಎಫ್ ಚರ್ಚೆ

ಬೆಂಗಳೂರು, ನವೆಂಬರ್ 25: ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ವಿಚಾರವಾಗಿ ಗ್ರಾಹಕರ ಅಸಮಾಧಾನ ಮುಂದುವರಿದಿದೆ. ಮೊಸರಿನ ಬೆಲೆಯನ್ನು ಕನಿಷ್ಠ 2 ರೂಪಾಯಿ ಇಳಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರೂ, ಅದಾಗಿ 20 ದಿನಗಳಿಗೂ ಹೆಚ್ಚು ಕಾಲ ಕಳೆದರೂ ಕೆಎಂಎಫ್ ಬೆಲೆ ಇಳಿಕೆ ಮಾಡಿಲ್ಲ. ಹಾಲಿನ ಕೊಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ಇತ್ತೀಚೆಗೆ ಪ್ರತಿ ಲೀಟರ್‌ಗೆ 8ರಿಂದ 14 ರೂಪಾಯಿವರೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಇದರ ಜೊತೆಗೆ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 14 ರೂಪಾಯಿ ಹಾಗೂ ಅರ್ಧ ಲೀಟರ್‌ಗೆ 6 ರೂಪಾಯಿ ಹೆಚ್ಚಿಸಲಾಗಿತ್ತು. ಭಾರೀ ಬೆಲೆ ಏರಿಕೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊಸರಿನ ಬೆಲೆಯನ್ನು ಕನಿಷ್ಠ 2 ರೂಪಾಯಿ ಕಡಿತಗೊಳಿಸುವಂತೆ ಸಿಎಂ ಸೂಚಿಸಿದ್ದರು. ಆದರೆ, ಈವರೆಗೆ ಬೆಲೆ ಇಳಿಕೆ ಜಾರಿಯಾಗಿಲ್ಲ.

ಬೆಲೆ ಕಡಿತದ ವಿಳಂಬಕ್ಕೆ ಗ್ರಾಹಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸೂಚನೆಗೂ ಇಲಾಖೆಗಳು ಮಹತ್ವ ನೀಡುತ್ತಿಲ್ಲ ಎಂದು ದೂರಿದ್ದಾರೆ. ಬೆಂಗಳೂರಿನಲ್ಲಿ ಸೇರಿದಂತೆ ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.

ಮೊಸರು ದೈನಂದಿನ ಅಗತ್ಯ ವಸ್ತುಗಳಾಗಿದ್ದು, ಕುಟುಂಬದ ಆರೋಗ್ಯದ ದೃಷ್ಟಿಯಿಂದ ಅವುಗಳ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಗೃಹಿಣಿಯರು ಹೇಳಿದ್ದಾರೆ. ಹಿಂದಿನಂತೆ ಏಕರೂಪದ ಬೆಲೆ ಏರಿಕೆ ಮಾಡದೆ, ವಿಭಿನ್ನ ಪ್ರಮಾಣದಲ್ಲಿ ದರ ಹೆಚ್ಚಿಸಿರುವುದರಿಂದ ಕುಟುಂಬಗಳ ಖರ್ಚಿನ ಹೊರೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಸರ್ಕಾರದ ವಿರುದ್ಧ ಜನಾಕ್ರೋಶ

ಬೆಲೆ ಕಡಿತದ ಭರವಸೆ ನೀಡಿದ ಬಳಿಕವೂ ಅದನ್ನು ಜಾರಿಗೊಳಿಸದಿರುವುದು, ಜನರು ಈ ಬೆಲೆ ಏರಿಕೆಗೆ ಒಗ್ಗಿಕೊಂಡು ಸುಮ್ಮನಾಗುತ್ತಾರೆ ಎಂಬ ಸರ್ಕಾರದ ಭಾವನೆಗೆ ಸಾಕ್ಷಿಯಾಗಿದೆ ಎಂದು ಗೃಹಿಣಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿರುವುದನ್ನೂ ವರದಿ ಉಲ್ಲೇಖಿಸಿದೆ. ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿ ಆರ್ಥಿಕ ಹೊರೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜನಾಕ್ರೋಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮೊಸರಿನ ದರ ಇಳಿಕೆಗೆ ಸಿಎಂ ಸೂಚನೆ

ಬೆಲೆ ಕಡಿತದ ಭರವಸೆ ನೀಡಿದ ಬಳಿಕವೂ ಅದನ್ನು ಜಾರಿಗೊಳಿಸದಿರುವುದು, ಜನರು ಈ ಬೆಲೆ ಏರಿಕೆಗೆ ಒಗ್ಗಿಕೊಂಡು ಸುಮ್ಮನಾಗುತ್ತಾರೆ ಎಂಬ ಸರ್ಕಾರದ ಭಾವನೆಗೆ ಸಾಕ್ಷಿಯಾಗಿದೆ ಎಂದು ಮತ್ತೊಬ್ಬ ಗೃಹಿಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿ ಆರ್ಥಿಕ ಹೊರೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಕೆಎಂಎಫ್ ಆಡಳಿತಾಧಿಕಾರಿ ಹೇಳಿದ್ದೇನು?

ಮೊಸರಿನ ಬೆಲೆ ಕಡಿತ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಬೆಲೆ ಇಳಿಕೆ ಕುರಿತು ಈವರೆಗೆ ಒಮ್ಮತಕ್ಕೆ ಬರಲಾಗಿಲ್ಲ. ಚರ್ಚೆಗಳು ಪೂರ್ಣಗೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More