AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಂತರ ಚುನಾವಣೆ ಬಳಿಕ ಇರಾನ್ ದಾಳಿ ಹೆಚ್ಚಿಸಿದೆ, ಹೊಸ ವರ್ಷದ ನಂತರ ಮತ್ತೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಟ್ರಂಪ್

ಅಮೆರಿಕ ಮಧ್ಯಂತರ ಚುನಾವಣೆ ಬಳಿಕ ಇರಾನ್ ದಾಳಿಗಳನ್ನು ಹೆಚ್ಚಿಸಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಡೆಮೋಕ್ರಾಟ್‌ಗಳು ದುರ್ಬಲರು ಎಂದು ಇರಾನ್ ಭಾವಿಸಿದೆ ಎಂದು ಅವರು ಹೇಳಿದ್ದಾರೆ. ಇರಾನ್ ಜೊತೆಗಿನ ಮಾತುಕತೆ ವಿಫಲವಾದರೆ, ಹೊಸ ವರ್ಷದ ಬಳಿಕ ಮಿಲಿಟರಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಿಸಿದೆ.

ಮಧ್ಯಂತರ ಚುನಾವಣೆ ಬಳಿಕ ಇರಾನ್ ದಾಳಿ ಹೆಚ್ಚಿಸಿದೆ, ಹೊಸ ವರ್ಷದ ನಂತರ ಮತ್ತೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಟ್ರಂಪ್
ಡೊನಾಲ್ಡ್​ ಟ್ರಂಪ್ Image Credit source: PTI
ನಯನಾ ರಾಜೀವ್
|

Updated on:Nov 23, 2026 | 9:16 AM

Share

ವಾಷಿಂಗ್ಟನ್, ನವೆಂಬರ್ 23: ಅಮೆರಿಕದ ಮಧ್ಯಂತರ ಚುನಾವಣೆಯ ಬಳಿಕ ಇರಾನ್ ತನ್ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಹೆಚ್ಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದ ಬಳಿಕ ಇರಾನ್ ಹೆಚ್ಚು ಆಕ್ರಮಣಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಇರಾನ್ ಜೊತೆಗಿನ ಮಾತುಕತೆ ವಿಫಲವಾದರೆ ಹೊಸ ವರ್ಷದ ಬಳಿಕ ಮತ್ತೆ ಮಿಲಿಟರಿ ದಾಳಿ ನಡೆಸಲಿದ್ದಾರೆಂದು ಟ್ರಂಪ್ ಎಚ್ಚರಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ ಇರಾನ್ ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ನಡೆಸಿದಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ಅವರು ಹೇಳಿದ್ದಾರೆ. ಆದರೆ, ಆ ದಾಳಿಗಳನ್ನೆಲ್ಲ ಅಮೆರಿಕದ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇರಾನ್‌ಗೆ ಡೆಮೋಕ್ರಾಟ್‌ಗಳು ದುರ್ಬಲವಾಗಿ ಕಾಣುತ್ತಿದ್ದಾರೆ: ಟ್ರಂಪ್

ಮಧ್ಯಂತರ ಚುನಾವಣೆಗೆ ಮುನ್ನ ತಾವು ಎರಡು ಭವಿಷ್ಯವಾಣಿಗಳನ್ನು ಮಾಡಿದ್ದಾಗಿ ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ. ಡೆಮೋಕ್ರಾಟ್‌ಗಳು ಗೆದ್ದರೆ ಷೇರು ಮಾರುಕಟ್ಟೆ ಕುಸಿಯಲಿದೆ ಮತ್ತು ಇರಾನ್ ತನ್ನ ದಾಳಿಗಳನ್ನು ತೀವ್ರಗೊಳಿಸಲಿದೆ ಎಂದು ಹೇಳಿದ್ದೆ. ಈಗ ಎರಡೂ ಘಟನೆಗಳು ನಡೆದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇರಾನ್ ನಾಯಕರು ಡೆಮೋಕ್ರಾಟ್‌ಗಳನ್ನು ದುರ್ಬಲರು ಮತ್ತು ನಿಷ್ಪರಿಣಾಮಕಾರಿಗಳು ಎಂದು ಭಾವಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕದ ಆರ್ಥಿಕತೆ ಮತ್ತು ಭದ್ರತೆಯನ್ನು ದುರ್ಬಲಗೊಳಿಸಲು ಡೆಮೋಕ್ರಾಟ್‌ಗಳು ಹಾಗೂ ಇರಾನ್ ಒಟ್ಟಾಗಿ ಪ್ರಯತ್ನಿಸುತ್ತಿವೆ ಎಂಬರ್ಥದಲ್ಲಿ ಅವರು ಟೀಕಿಸಿದ್ದಾರೆ.

ತೈಲ ಬೆಲೆಗಳನ್ನು ಸಾಧ್ಯವಾದಷ್ಟು ಕಾಲ ಹೆಚ್ಚಾಗಿಯೇ ಉಳಿಸಲು ಇರಾನ್ ಮತ್ತು ಡೆಮೋಕ್ರಾಟ್‌ಗಳು ಪ್ರಯತ್ನಿಸಿದ್ದವು ಎಂದೂ ಟ್ರಂಪ್ ಆರೋಪಿಸಿದ್ದಾರೆ. ಆದರೆ ಚುನಾವಣೆಯ ನಂತರ ತೈಲ ಬೆಲೆಗಳು ಗಣನೀಯವಾಗಿ ಕುಸಿದಿವೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, ಮತದಾರರು ಮತ ಚಲಾಯಿಸುವ ಮೊದಲು ಈ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ. ಚುನಾವಣೆಯನ್ನು ‘ವಿಚಿತ್ರ’ ಎಂದು ಬಣ್ಣಿಸಿರುವ ಅವರು, ಕೊನೆಗೆ ಅಮೆರಿಕವೇ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ಭಾರತದ ಆರ್ಥಿಕತೆ ಬಗ್ಗೆ ಶ್ಲಾಘಿಸಿದ ಡೊನಾಲ್ಡ್ ಟ್ರಂಪ್

ಹೊಸ ವರ್ಷದ ಬಳಿಕ ಇರಾನ್ ಮೇಲೆ ಮತ್ತೆ ದಾಳಿ?

ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಇರಾನ್ ಜೊತೆ ಒಪ್ಪಂದ ಸಾಧ್ಯವಾಗದಿದ್ದರೆ ಹೊಸ ವರ್ಷದ ಬಳಿಕ ಮತ್ತೆ ಮಿಲಿಟರಿ ದಾಳಿ ನಡೆಸುವ ಒಲವು ಹೊಂದಿರುವುದಾಗಿ ಹೇಳಿದ್ದಾರೆ.

ಇರಾನ್ ಜೊತೆ ಪರೋಕ್ಷ ಮಾತುಕತೆಗಳು ನಡೆಯುತ್ತಿವೆ. ಆದರೆ, ಮಾತುಕತೆಯಲ್ಲಿ ಇರಾನ್ ಯಾವುದೇ ಸ್ಪಷ್ಟ ಪ್ರಗತಿ ಸಾಧಿಸುತ್ತಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇರಾನ್ ಪ್ರತಿನಿಧಿಗಳನ್ನು ‘ವೃತ್ತಿಪರ ಟ್ಯಾಪ್ ಡ್ಯಾನ್ಸರ್‌ಗಳು’ ಎಂದು ಕರೆದ ಅವರು, ಮಾತುಕತೆ ಮುಂದುವರಿಸುತ್ತಿದ್ದಾರೆಯೇ ಹೊರತು ನಿರ್ಧಾರಕ್ಕೆ ಬರುತ್ತಿಲ್ಲ ಎಂದು ಟೀಕಿಸಿದ್ದಾರೆ.

ಅಮೆರಿಕದ ನೌಕಾ ದಿಗ್ಬಂಧನವನ್ನು ಇರಾನ್ ಹಡಗುಗಳು ಉಲ್ಲಂಘಿಸಲು ಪ್ರಯತ್ನಿಸಿದರೆ ಅವುಗಳನ್ನು ಮುಳುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇರಾನ್‌ನ ತೈಲ ಟ್ಯಾಂಕರ್‌ಗಳು ದಿಗ್ಬಂಧನವನ್ನು ಪರೀಕ್ಷಿಸಲು ಮುಂದಾದರೆ ಅವುಗಳಿಗೂ ಪರಿಣಾಮ ಎದುರಾಗಲಿದೆ ಎಂದು ಹೇಳಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷದಲ್ಲಿ ಮುಂದುವರಿದ ಉದ್ವಿಗ್ನತೆ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈ ವರ್ಷದ ಫೆಬ್ರವರಿಯಲ್ಲಿ ಆರಂಭವಾಗಿದ್ದು, ಬಳಿಕ ಎರಡೂ ದೇಶಗಳ ನಡುವೆ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಪ್ರತಿದಾಳಿಗಳು ನಡೆದಿವೆ. ಜೂನ್‌ನಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದ ಚೌಕಟ್ಟು ಒಪ್ಪಂದದ ಬಗ್ಗೆ ಮಾತುಕತೆ ನಡೆದಿದ್ದರೂ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ.

ಇದೀಗ ಅಮೆರಿಕ ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇರಾನ್ ಕೂಡ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಮಿಲಿಟರಿ ಕಾರ್ಯಾಚರಣೆ ನಡೆಸಬಹುದು ಎಂಬ ಟ್ರಂಪ್ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸಂಘರ್ಷದ ಆತಂಕವನ್ನು ಹೆಚ್ಚಿಸಿದೆ. ಆದರೆ, ಹೊಸ ದಾಳಿ ನಡೆಸುವ ಕುರಿತು ಅಮೆರಿಕ ಅಧಿಕೃತ ಆದೇಶ ಹೊರಡಿಸಿಲ್ಲ. ಸದ್ಯಕ್ಕೆ ಇದು ಟ್ರಂಪ್ ವ್ಯಕ್ತಪಡಿಸಿರುವ ಒಲವು ಮತ್ತು ಎಚ್ಚರಿಕೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:11 am, Mon, 23 November 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More