AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಬೆಲೆ ಭಾರೀ ಇಳಿಕೆ: ಬೆಂಗಳೂರಿನಲ್ಲಿ ಆಭರಣ ಖರೀದಿಗೆ ಮುಗಿಬಿದ್ದ ಜನ, ಗ್ರಾಹಕರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ

Gold Price in Bengaluru: ಮದುವೆ ಸೀಸನ್ ನಡುವೆಯೇ ಚಿನ್ನದ ಬೆಲೆಯಲ್ಲಿ 10 ದಿನಗಳಲ್ಲಿ 10 ಗ್ರಾಂಗೆ 14,720 ರೂಪಾಯಿ ಇಳಿಕೆಯಾಗಿದ್ದು, ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ. ಇದೇ ವೇಳೆ, ಚಿನ್ನ ಖರೀದಿಸುವ ಮುನ್ನ HUID ಕೋಡ್, ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಚಿನ್ನದ ಬೆಲೆ ಭಾರೀ ಇಳಿಕೆ: ಬೆಂಗಳೂರಿನಲ್ಲಿ ಆಭರಣ ಖರೀದಿಗೆ ಮುಗಿಬಿದ್ದ ಜನ, ಗ್ರಾಹಕರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ
ಬೆಂಗಳೂರಿನಲ್ಲಿ ಆಭರಣ ಖರೀದಿಗೆ ಮುಗಿಬಿದ್ದ ಜನ (ಸಾಂದರ್ಭಿಕ ಚಿತ್ರ)
ವಿನಯ್​ ಕಾಶಪ್ಪನವರ್​
| Edited By: |

Updated on:Nov 23, 2026 | 9:09 AM

Share

ಮುಖ್ಯಾಂಶಗಳು

  • ಹತ್ತು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
  • ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳ
  • ಚಿನ್ನ ಖರೀದಿಸುವ ಮುನ್ನ HUID, ಬಿಲ್ ಪರಿಶೀಲಿಸಿ

ಬೆಂಗಳೂರು, ನವೆಂಬರ್ 23: ಮದುವೆ ಸೀಸನ್ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಬಂಗಾರದ ದರ ಕುಸಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ 15ರವರೆಗೆ ಮದುವೆಗಳ ಸಂಭ್ರಮ ಮುಂದುವರಿಯಲಿದ್ದು, ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಬೆಲೆ ಇಳಿಕೆಯ ಲಾಭ ಪಡೆಯಲು ಮುಂದಾಗಿರುವ ಗ್ರಾಹಕರು ಚಿನ್ನದ ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕೇವಲ 10 ದಿನಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,720 ರೂಪಾಯಿ ಇಳಿಕೆಯಾಗಿದೆ. ಇದರಿಂದ ಮದುವೆ ಖರೀದಿಗೆ ಚಿನ್ನ ಕೊಳ್ಳಲು ಕಾಯುತ್ತಿದ್ದ ಗ್ರಾಹಕರಿಗೆ ಅನುಕೂಲವಾಗಿದೆ. ಬೆಲೆ ಕಡಿಮೆಯಾಗಿರುವುದರಿಂದ ಮದುವೆ ಮನೆಗಳಲ್ಲಿ ಆಭರಣ ಖರೀದಿಯ ಸಂಭ್ರಮ ಹೆಚ್ಚಾಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿಯೂ ವಹಿವಾಟು ಚುರುಕಾಗಿದೆ.

ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಏರಿಕೆ

ಡಿಸೆಂಬರ್ 15ರವರೆಗೆ ಮದುವೆಗಳ ಅಬ್ಬರ ಇರಲಿದ್ದು, ಈ ನಡುವೆ ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಡಬಲ್ ಖುಷಿ ನೀಡಿದೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.

2026ರಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಚಿನ್ನದ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಮದುವೆಗಾಗಿ ಆಭರಣ ಖರೀದಿಸುವುದರ ಜೊತೆಗೆ, ಹೂಡಿಕೆಯ ಉದ್ದೇಶದಿಂದಲೂ ಜನರು ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಬೆಲೆ ಇಳಿಕೆಯ ಲಾಭ ಪಡೆಯಲು ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಖರೀದಿಗೆ ಮುಂದಾಗಿರುವುದಾಗಿ ಗ್ರಾಹಕರೂ ಸಂತಸ ವ್ಯಕ್ತಪಡಿಸಿದ್ದಾರೆ.

ಚಿನ್ನ ಖರೀದಿಸುವ ಮುನ್ನ ಎಚ್ಚರಿಕೆ: ಗೋಲ್ಡ್ ಅಸೋಸಿಯೇಷನ್ ಸೂಚನೆ

ಚಿನ್ನದ ಬೆಲೆ ಇಳಿಕೆಯಿಂದ ಖರೀದಿ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಗ್ರಾಹಕರು ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಸೂಚಿಸಿದೆ. ಚಿನ್ನದ ತೂಕ ಹೆಚ್ಚಿಸುವ ಉದ್ದೇಶದಿಂದ ರೀನಿಯಂ, ಇರಿಡಿಯಂನಂತಹ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಜಿಎಸ್‌ಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ನೋಡಿ

ಚಿನ್ನ ಖರೀದಿಸುವ ಮುನ್ನ ಹಾಲ್‌ಮಾರ್ಕ್ ಜೊತೆಗೆ HUID ಕೋಡ್ ಪರಿಶೀಲಿಸುವುದು ಮುಖ್ಯ. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್‌ಮಾರ್ಕ್‌ಗೆ ಸಂಬಂಧಿಸಿದ ವಿವರಗಳನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಲ್ ಇಲ್ಲದೆ ಚಿನ್ನ ಖರೀದಿಸಬಾರದು. ಜಿಎಸ್‌ಟಿ ಪಾವತಿಸಿದರೂ ಅಧಿಕೃತ ಬಿಲ್ ಪಡೆಯುವುದು ಅಗತ್ಯ ಎಂದು ಅಸೋಸಿಯೇಷನ್ ಸಲಹೆ ನೀಡಿದೆ.

ಬಿಲ್‌ನಲ್ಲಿ ನಮೂದಿಸಿರುವ ಚಿನ್ನದ ತೂಕ ಮತ್ತು ಆಭರಣದ ನೈಜ ತೂಕವನ್ನು ತಾಳೆ ಮಾಡಬೇಕು. ಅದೇ ರೀತಿ, ಖರೀದಿಸುತ್ತಿರುವ ಆಭರಣ 18 ಕ್ಯಾರೆಟ್ ಅಥವಾ 22 ಕ್ಯಾರೆಟ್ ಎಂಬ ಶುದ್ಧತೆಯ ವಿವರ ಬಿಲ್‌ನಲ್ಲಿ ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಧ್ಯವಾದರೆ ಕ್ಯಾರೆಟ್ ಮೀಟರ್ ಮೂಲಕ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿದ ಬಳಿಕವೇ ಖರೀದಿಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಮೋದಿಯ ಚಿನ್ನದಂಥ ಆಶಯದಿಂದ 7 ತಿಂಗಳಲ್ಲಿ ಭಾರತಕ್ಕಾಯ್ತು ದೊಡ್ಡ ಅನುಕೂಲ; ಬಂಗಾರದ ಬೆಲೆ ಇಳಿಯಲು ಪ್ರಮುಖ ಕಾರಣಗಳಿವು

ಒಟ್ಟಿನಲ್ಲಿ, ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಆಭರಣ ಖರೀದಿದಾರರಿಗೆ ಉತ್ತಮ ಅವಕಾಶ ಒದಗಿಸಿದೆ. ಆದರೆ, ಕಡಿಮೆ ಬೆಲೆಗೆ ಚಿನ್ನ ಸಿಗುತ್ತಿದೆ ಎಂಬ ಕಾರಣಕ್ಕೆ ಆತುರದ ಖರೀದಿ ಮಾಡದೆ, ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವುದು ಅತ್ಯಗತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Mon, 23 November 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
ಇಂದು ವೈಕುಂಠ ಚತುರ್ದಶಿ; ಯಾವೆಲ್ಲಾ ರಾಶಿಗಳಿಗೆ ಶುಭ?
ಇಂದು ವೈಕುಂಠ ಚತುರ್ದಶಿ; ಯಾವೆಲ್ಲಾ ರಾಶಿಗಳಿಗೆ ಶುಭ?
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ