AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

39 ಓವರ್, 5 ವಿಕೆಟ್… ರೋಚಕ ಘಟ್ಟದತ್ತ ಭಾರತ-ನ್ಯೂಝಿಲೆಂಡ್ ಪಂದ್ಯ

ವೆಲ್ಲಿಂಗ್‌ಟನ್ ಟೆಸ್ಟ್‌ನ ಐದನೇ ದಿನದಾಟವು ಮಹಾ ರೋಚಕ ತಿರುವು ಪಡೆದುಕೊಂಡಿದೆ. ದಿನದ ಅಂತಿಮ ಸೆಷನ್‌ನಲ್ಲಿ ಕೇವಲ 39 ಓವರ್‌ಗಳ ಆಟ ಬಾಕಿ ಇದ್ದು, ಗೆಲುವಿನ ಹೊಸ್ತಿಲಲ್ಲಿರುವ ಟೀಮ್ ಇಂಡಿಯಾಗೆ 5 ವಿಕೆಟ್‌ಗಳ ಅವಶ್ಯಕತೆಯಿದೆ. ಮತ್ತೊಂದೆಡೆ, ಈ 39 ಓವರ್‌ಗಳನ್ನು ಕ್ರೀಸ್ ಕಚ್ಚಿ ಆಡುವ ಮೂಲಕ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಳ್ಳಲು ನ್ಯೂಝಿಲೆಂಡ್ ರಣತಂತ್ರ ರೂಪಿಸಿದೆ.

39 ಓವರ್, 5 ವಿಕೆಟ್... ರೋಚಕ ಘಟ್ಟದತ್ತ ಭಾರತ-ನ್ಯೂಝಿಲೆಂಡ್ ಪಂದ್ಯ
Ind Vs Nz Image Credit source: GettyImages
ಝಾಹಿರ್ ಯೂಸುಫ್
|

Updated on: Nov 23, 2026 | 8:26 AM

Share

ವೆಲ್ಲಿಂಗ್‌ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 5ನೇ ಹಾಗೂ ಅಂತಿಮ ದಿನದಾಟವು ರೋಚಕ ಘಟ್ಟ ತಲುಪಿದೆ. ದಿನದ ಮೂರನೇ ಸೆಷನ್‌ನ ಸುಮಾರು 39 ಓವರ್‌ಗಳ ಆಟ ಮಾತ್ರ ಬಾಕಿ ಉಳಿದಿದ್ದು, ಟೀಮ್ ಇಂಡಿಯಾ ಗೆಲುವು ಸಾಧಿಸಲು ಈ ಅವಧಿಯಲ್ಲಿ ಉಳಿದ 5 ವಿಕೆಟ್‌ಗಳನ್ನು ಕಬಳಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಒಂದು ವೇಳೆ ಆತಿಥೇಯ ನ್ಯೂಜಿಲೆಂಡ್ ತಂಡವು ಈ ಸುಮಾರು 39 ಓವರ್‌ಗಳವರೆಗೆ ಕ್ರೀಸ್‌ನಲ್ಲಿ ನೆಲೆಯೂರಿ ಆಡಿದರೆ, ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿ ಟೀಮ್ ಇಂಡಿಯಾದ ಗೆಲುವಿನ ಆಸೆಗೆ ತಣ್ಣೀರೆರಚಬಹುದು. ಹೀಗಾಗಿಯೇ ಉಭಯ ತಂಡಗಳ ಪಾಲಿಗೆ ಐದನೇ ದಿನದಾಟದ ಮೂರನೇ ಸೆಷನ್ ಅತ್ಯಂತ ನಿರ್ಣಾಯಕವಾಗಿ ಪರಿಣಮಿಸಿದೆ.

5ನೇ ದಿನದಾಟದ ಹೈಲೆಟ್ಸ್​:

ಮೊದಲ ಸೆಷನ್: 119/2 ರನ್‌ಗಳಿಂದ 5ನೇ ದಿನದಾಟ ಆರಂಭಿಸಿದ ನ್ಯೂಝಿಲೆಂಡ್‌ಗೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ವಾಷಿಂಗ್ಟನ್ ಸುಂದರ್ (1/44) ತಾಳ್ಮೆಯಿಂದ ಆಡುತ್ತಿದ್ದ ಡೆವೊನ್ ಕಾನ್ವೇ (65) ಅವರ ವಿಕೆಟ್ ಪಡೆದು 72 ರನ್‌ಗಳ ಜೊತೆಯಾಟವನ್ನು ಮುರಿದರು. ಇದರ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ (2/22) ಅಪಾಯಕಾರಿ ರಚಿನ್ ರವೀಂದ್ರ (37) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಎರಡನೇ ಸೆಷನ್‌: ಯುವ ವೇಗಿ ಅನ್ಶುಲ್ ಕಂಬೋಜ್ (1/38) ಟಾಮ್ ಬ್ಲಂಡೆಲ್ (15) ಅವರ ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನ ಆಸೆಯನ್ನು ಮತ್ತಷ್ಟು ಹೆಚ್ಚಿಸಿದರು. ಅಂಪೈರ್ ನಾಟೌಟ್ ನೀಡಿದ್ದರೂ, ನಾಯಕ ಶುಭ್​ಮನ್ ಗಿಲ್ ತೆಗೆದುಕೊಂಡ ನಿಖರವಾದ DRS ನಿರ್ಧಾರ ಭಾರತಕ್ಕೆ 5ನೇ ಯಶಸ್ಸು ತಂದುಕೊಟ್ಟಿತು.

ಕಿವೀಸ್ ಪಡೆಯ ಹೋರಾಟ: ಸದ್ಯ ಕ್ರೀಸ್‌ನಲ್ಲಿರುವ ಡ್ಯಾರಿಲ್ ಮಿಚೆಲ್ (24*) ಮತ್ತು ಗ್ಲೆನ್ ಫಿಲಿಪ್ಸ್ (19*) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಮೂರನೇ ಸೆಷನ್ ಮೂಲಕ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವ ಇರಾದೆಯಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಕಾರ್ಡ್​:

  • ನ್ಯೂಝಿಲೆಂಡ್ ಮೊದಲ ಇನಿಂಗ್ಸ್​: 368 ರನ್ಸ್
  • ಭಾರತ ಮೊದಲ ಇನಿಂಗ್ಸ್​: 720/9 ಡಿಕ್ಲೇರ್
  • ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್​: 206/5 (96)

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 352 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದ್ದು, ಈ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಐದನೇ ದಿನದಾಟದ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ. ಇನ್ನುಳಿದ 39 ಓವರ್‌ಗಳಲ್ಲಿ ಈ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ. ಅದರಂತೆ ಟೀಮ್ ಇಂಡಿಯಾಗೆ ಐತಿಹಾಸಿಕ ಗೆಲುವು ಒಲಿಯಲಿದೆಯಾ ಅಥವಾ ನ್ಯೂಝಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.

ಇದನ್ನೂ ಓದಿ: ಹೈಡ್ರಾಮಾ… ಹರ್ಷಿತ್​ ರಾಣಾರನ್ನು ಗುಂಪಾಗಿ ಗುರಿಯಾಗಿಸಿದ ಪಾಕ್ ಆಟಗಾರರು!

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್​ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್​ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More