ತಿಲಕ್ ವರ್ಮಾ ಶತಕ ವ್ಯರ್ಥ; ಪಾಕ್ ಎದುರು ಭಾರತಕ್ಕೆ ಸೋಲಿನ ಆಘಾತ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಎ ತಂಡ ಪಾಕಿಸ್ತಾನ ಎ ವಿರುದ್ಧ 48 ರನ್‌ಗಳ ಸೋಲು ಕಂಡಿದೆ. ಪಾಕಿಸ್ತಾನ ಎ 313 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ ಎ ತಂಡಕ್ಕೆ ತಿಲಕ್ ವರ್ಮಾ ಅಜೇಯ ಶತಕ (100) ಬಾರಿಸಿದರೂ ಇತರ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗದೆ 265 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಎ ತಂಡ ಪಾಕ್‌ಗೆ ಶರಣಾಯಿತು.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ವಿರುದ್ಧ ಸೋಲು ಎದುರಾಗಿದೆ. ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ 314 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ಎ ತಂಡ 265 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಪಾಕ್ ಬ್ಯಾಟರ್‌ಗಳ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡಕ್ಕೆ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಶಮೀಮ್ ಹುಸೇನ್ ಕೇವಲ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 33 ರನ್ ಸಿಡಿಸಿದರು. ಮತ್ತೊಂದೆಡೆ ಮಾಜ್ ಸದಾಕತ್ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 59 ರನ್ ಗಳಿಸಿ ಅರ್ಧಶತಕ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 7.5 ಓವರ್‌ಗಳಲ್ಲಿ 66 ರನ್ ಕಲೆಹಾಕಿತು.
ನಂತರ ರೋಹೆಲ್ ನಜೀರ್ ಬೇಗನೆ ಔಟಾದರೂ ಹಸನ್ ನವಾಜ್ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಆಟವಾಡಿದ ಅವರು 82 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 79 ರನ್ ಸಿಡಿಸಿದರು. ತಂಡದ ನಾಯಕ ಅಬ್ದುಲ್ ಸಮದ್ 35 ಎಸೆತಗಳಲ್ಲಿ 28 ರನ್ ಗಳಿಸಿದರು. ಕೊನೆಯಲ್ಲಿ ಫರ್ಹಾನ್ ಯೂಸುಫ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 48 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 56 ರನ್ ಬಾರಿಸಿದರು. ಮೊಹಮ್ಮದ್ ಇಮ್ರಾನ್ ಕೂಡ ಕೇವಲ 14 ಎಸೆತಗಳಲ್ಲಿ 23 ರನ್ ಸಿಡಿಸಿ ತಂಡದ ಮೊತ್ತವನ್ನು 313ಕ್ಕೆ ತಲುಪಿಸಿದರು.
ಭಾರತ ಎ ಪರ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಸೂರ್ಯಾಂಶ್ ಶೆಡ್ಜ್ ಹಾಗೂ ವಿಪ್ರಜ್ ನಿಗಮ್ ತಲಾ ಎರಡು ವಿಕೆಟ್ ಪಡೆದುಕೊಂಡರು. ಆದರೆ ಪಾಕ್ ಬ್ಯಾಟರ್‌ಗಳ ರನ್ ಅಬ್ಬರಕ್ಕೆ ಕಡಿವಾಣ ಹಾಕಲು ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.
ತಿಲಕ್ ವರ್ಮಾ ಶತಕಕ್ಕೂ ಸಿಗದ ಗೆಲುವು
314 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಒಂದೆಡೆ ನಿರಂತರವಾಗಿ ವಿಕೆಟ್‌ಗಳು ಉರುಳುತ್ತಿದ್ದರೂ ನಾಯಕ ತಿಲಕ್ ವರ್ಮಾ ಮಾತ್ರ ಕೊನೆಯವರೆಗೂ ಹೋರಾಟ ಮುಂದುವರಿಸಿದರು. ತಾಳ್ಮೆಯ ಆಟವಾಡಿದ ತಿಲಕ್ ವರ್ಮಾ 149 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 100 ರನ್ ಗಳಿಸಿದರು.
ಮತ್ತೊಂದೆಡೆ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 49 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 56 ರನ್ ಸಿಡಿಸಿ ತಂಡದ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ಭಾರತ ಎ ತಂಡಕ್ಕೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 265 ರನ್‌ಗಳಿಗೆ ಆಲೌಟ್ ಆಗುವ ಮೂಲಕ 48 ರನ್‌ಗಳ ಸೋಲು ಅನುಭವಿಸಿತು.




