ಪಾಕ್ ಆಟಗಾರರ ಜೊತೆ ಹರ್ಷಿತ್ ರಾಣಾ ಕಿರಿಕ್: ಬಳಿಕ ಸತತ ಎರಡು ವಿಕೆಟ್..!
ಭಾರತ A vs ಪಾಕಿಸ್ತಾನ A ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಹರ್ಷಿತ್ ರಾಣಾ ಸ್ಲೆಡ್ಜಿಂಗ್ ತಂತ್ರ ಗಮನ ಸೆಳೆಯಿತು. ಆರಂಭಿಕವಾಗಿ ಪಾಕ್ ಬ್ಯಾಟರ್‌ಗಳು ಆಕ್ರಮಣಕಾರಿಯಾಗಿ ಆಡಿದರು. ಹರ್ಷಿತ್ ರಾಣಾ ಮಾತಿನ ಚಕಮಕಿ ತಂತ್ರವು ಪಾಕ್ ಬ್ಯಾಟರ್‌ಗಳ ಗಮನ ಬೇರೆಡೆ ಸೆಳೆಯಿತು. ಪ್ರಮುಖ ವಿಕೆಟ್‌ಗಳು ಪತನಗೊಂಡವು, ಭಾರತ A ತಂಡಕ್ಕೆ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾಯಿತು. ಈ ರೋಚಕ ಘಟನೆ ಆಟಕ್ಕೆ ಹೊಸ ತಿರುವು ನೀಡಿತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳು ಎಂದರೆ ಅಲ್ಲಿ ರೋಚಕತೆಗೆ ಯಾವುದೇ ಕೊರತೆಯಿರುವುದಿಲ್ಲ. ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಆಟಗಾರರ ನಡುವಿನ ಮಾತಿನ ಚಕಮಕಿಯೂ ಸಾಮಾನ್ಯ. ಹಿರಿಯರ ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ಇತ್ತೀಚೆಗೆ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲೂ ಆಟಗಾರರ ನಡುವೆ ವಾಗ್ವಾದ ನಡೆದಿತ್ತು. ಇದೀಗ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲೂ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಪಂದ್ಯದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ ಪಾಕಿಸ್ತಾನದ ಬ್ಯಾಟರ್‌ಗಳೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಮೈದಾನದಲ್ಲಿ ಕೆಲಕಾಲ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಆದರೆ ಹರ್ಷಿತ್ ರಾಣಾ ಅವರ ತಂತ್ರ ಕೊನೆಗೆ ಭಾರತ ಎ ತಂಡಕ್ಕೆ ಲಾಭ ತಂದುಕೊಟ್ಟಿತು.
ಪಾಕ್ ಬ್ಯಾಟರ್‌ಗಳ ಜೊತೆ ಹರ್ಷಿತ್ ವಾಗ್ವಾದ
ನವೆಂಬರ್ 22ರ ಭಾನುವಾರ ಕತಾರ್ ರಾಜಧಾನಿ ದೋಹಾದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವೆ ಈ ಪಂದ್ಯ ನಡೆಯಿತು. ಟಾಸ್ ಗೆದ್ದ ಪಾಕಿಸ್ತಾನ ಎ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರರಾದ ಶಮೀಲ್ ಹುಸೇನ್ ಮತ್ತು ಮಾಜ್ ಸದಾಕತ್ ಭಾರತದ ಬೌಲರ್‌ಗಳ ಮೇಲೆ ಆರಂಭದಿಂದಲೇ ಸವಾರಿ ಮಾಡಿದರು. ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಬೌಲಿಂಗ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ಪರಿಣಾಮ ಮೊದಲ ಆರು ಓವರ್‌ಗಳಲ್ಲೇ ಪಾಕಿಸ್ತಾನ 60ಕ್ಕೂ ಹೆಚ್ಚು ರನ್ ಗಳಿಸಿ ಭರ್ಜರಿ ಆರಂಭ ಪಡೆದುಕೊಂಡಿತು.
ಪಾಕ್ ಬ್ಯಾಟರ್‌ಗಳು ಅದರಲ್ಲೂ ವಿಶೇಷವಾಗಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ರನ್ ಚಚ್ಚುತ್ತಿದ್ದರು. ಇದರಿಂದ ಸಿಟ್ಟಾದ ಹರ್ಷಿತ್, ಎದುರಾಳಿ ಬ್ಯಾಟರ್‌ಗಳನ್ನು ಕೆಣಕಲು ಆರಂಭಿಸಿದರು. ಸ್ಲೆಡ್ಜಿಂಗ್ ಮೂಲಕ ಬ್ಯಾಟರ್‌ಗಳ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದರು. ಮಾಜ್ ಸದಾಕತ್ ಹರ್ಷಿತ್ ಮಾತುಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡದಿದ್ದರೂ, ಶಮೀಲ್ ಹುಸೇನ್ ಮಾತ್ರ ಸುಮ್ಮನಿರಲಿಲ್ಲ. ಇಬ್ಬರ ನಡುವೆ ಎರಡು-ಮೂರು ಬಾರಿ ಮಾತಿನ ಚಕಮಕಿ ನಡೆಯಿತು. ಆದರೆ ಹರ್ಷಿತ್ ಅವರ ಈ ತಂತ್ರ ಕೊನೆಗೆ ಭಾರತ ತಂಡಕ್ಕೆ ನೆರವಾಯಿತು.
Can someone please tell me what Harshit Rana is even saying? 😭💀
#INDAvPAKA https://t.co/laVItgyA5U
— Vansh Arora (@BeelzebubJagga) November 22, 2026
ಹರ್ಷಿತ್ ತಂತ್ರಕ್ಕೆ ಬಲಿಯಾದ ಪಾಕ್ ಬ್ಯಾಟರ್‌ಗಳು
ಆರಂಭದ ಏಳು ಓವರ್‌ಗಳವರೆಗೆ ಭಾರತ ಎ ತಂಡಕ್ಕೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಹರ್ಷಿತ್ ರಾಣಾ ಅವರ ಸ್ಲೆಡ್ಜಿಂಗ್ ತಂತ್ರ ಫಲ ನೀಡಿತು. ಎಂಟನೇ ಓವರ್‌ನಲ್ಲಿ ಸ್ಪಿನ್ನರ್ ಆಯುಷ್ ಬದೋನಿ ಬೌಲಿಂಗ್‌ನಲ್ಲಿ ಶಮೀಲ್ ಹುಸೇನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ ಚೆಂಡನ್ನು ಸರಿಯಾಗಿ ಸಂಪರ್ಕಿಸಲು ವಿಫಲರಾದ ಅವರು ಥರ್ಡ್ ಮ್ಯಾನ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ ಈ ಕ್ಯಾಚ್ ಹಿಡಿದಿದ್ದು ಹರ್ಷಿತ್ ರಾಣಾ. ವಿಕೆಟ್ ಪಡೆದ ಖುಷಿಯಲ್ಲಿ ಅವರು ಶಮೀಲ್ ಹುಸೇನ್‌ಗೆ ಪೆವಿಲಿಯನ್‌ನತ್ತ ಹೋಗುವಂತೆ ಸನ್ನೆ ಮಾಡಿದರು.
Shamyl Hussain dismissed for 33 runs. https://t.co/1Sqw1rwnWg
— CricFlick (@CricFlick_pk) November 22, 2026
ಇಷ್ಟಕ್ಕೇ ಸುಮ್ಮನಾಗದ ಹರ್ಷಿತ್, ಮುಂದಿನ ಓವರ್‌ನಲ್ಲೇ ಮತ್ತೆ ಬೌಲಿಂಗ್‌ಗೆ ಮರಳಿದರು. ಈ ಬಾರಿ ಹೊಸದಾಗಿ ಕ್ರೀಸ್‌ಗೆ ಬಂದಿದ್ದ ರೋಹೈಲ್ ನಜೀರ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದರು. ಹೀಗೆ ಹರ್ಷಿತ್ ರಾಣಾ ಅವರ ತಂತ್ರ ಹಾಗೂ ಬೌಲಿಂಗ್ ದಾಳಿಗೆ ಪಾಕಿಸ್ತಾನದ ಆರಂಭಿಕ ಅಬ್ಬರಕ್ಕೆ ಕಡಿವಾಣ ಬಿತ್ತು. ಮೊದಲ ಆರು ಓವರ್‌ಗಳಲ್ಲೇ 60ಕ್ಕೂ ಹೆಚ್ಚು ರನ್ ಗಳಿಸಿದ್ದ ಪಾಕಿಸ್ತಾನ ತಂಡ, 15ನೇ ಓವರ್ ವೇಳೆಗೆ 100 ರನ್‌ಗಳ ಗಡಿ ತಲುಪಲಷ್ಟೇ ಸಾಧ್ಯವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sun, 22 November 26




