AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಗೆಲ್ಲುತ್ತಾ? ಮ್ಯಾಚ್ ಡ್ರಾ ಆಗುತ್ತಾ? ಹೀಗಿರಲಿದೆ ರಣತಂತ್ರ

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ 5ನೇ ದಿನದಾಟ ಬ್ಯಾಟರ್‌ಗಳಿಗೆ ವರದಾನವಾಗಲಿದೆಯೇ ಅಥವಾ ಬೌಲರ್‌ಗಳಿಗೆ ನೆರವಾಗಲಿದೆಯೇ ಎಂಬ ಕುತೂಹಲ ಮೂಡಿದೆ. ಸದ್ಯದ ಸ್ಥಿತಿಯಲ್ಲಿ ಬೇಸಿನ್ ರಿಸರ್ವ್ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಿ ಬದಲಾಗಿದ್ದರೂ, ಕೊನೆಯ ದಿನದಾಟದಲ್ಲಿ ಪಿಚ್ ವರ್ತಿಸಲಿರುವ ರೀತಿಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಟೀಮ್ ಇಂಡಿಯಾ ಗೆಲ್ಲುತ್ತಾ? ಮ್ಯಾಚ್ ಡ್ರಾ ಆಗುತ್ತಾ? ಹೀಗಿರಲಿದೆ ರಣತಂತ್ರ
Team India Image Credit source: GettyImages
ಝಾಹಿರ್ ಯೂಸುಫ್
|

Updated on:Nov 22, 2026 | 2:13 PM

Share

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಅಂತಿಮ ಘಟ್ಟ ತಲುಪಿದೆ. ಕೊನೆಯ ದಿನದಾಟದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದ್ದು, ಈ ಹೋರಾಟದಲ್ಲಿ ಮೇಲುಗೈ ಸಾಧಿಸಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಲಿದೆಯಾ ಅಥವಾ ನ್ಯೂಝಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಿದೆಯಾ ಎಂಬುದೇ ಈಗಿರುವ ದೊಡ್ಡ ಕುತೂಹಲ.

ಏಕೆಂದರೆ ಅಂಕಿಅಂಶಗಳ ಪ್ರಕಾರ ಈ ಪಂದ್ಯ ಡ್ರಾ ಆಗುವ ಸಾಧ್ಯತೆ ಶೇ. 54.3 ರಷ್ಟಿದ್ದರೆ, ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ಶೇ. 45.1 ರಷ್ಟಿದೆ. ಇನ್ನು ನ್ಯೂಝಿಲೆಂಡ್ ಗೆಲ್ಲುವ ಸಾಧ್ಯತೆ ಕೇವಲ ಶೇ. 0.6 ರಷ್ಟು ಮಾತ್ರವಿದ್ದು, ಕೊನೆಯ ದಿನದ ಆಟವು ಭಾರತದ ಜಯ ಮತ್ತು ಕಿವೀಸ್‌ನ ಡ್ರಾ ಹೋರಾಟದ ನಡುವಿನ ನೇರ ಹಣಾಹಣಿಯಾಗಿದೆ.

ಐದನೇ ದಿನದಾಟವು ಗೆಲುವು ಮತ್ತು ಡ್ರಾ ನಡುವಿನ ನೇರ ಹೋರಾಟವಾಗಿದ್ದರೂ, ಟೀಮ್ ಇಂಡಿಯಾ ಬಳಿಯಿರುವ 5 ಪ್ರಮುಖ ಅಸ್ತ್ರಗಳು ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿವೆ. ಮೊದಲ ಇನ್ನಿಂಗ್ಸ್‌ನ 352 ರನ್‌ಗಳ ಬೃಹತ್ ಮುನ್ನಡೆ ಹಾಗೂ 5ನೇ ದಿನದಾಟದ ಪಿಚ್‌ನ ವರ್ತನೆ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಬಹುದು. ಅದರಂತೆ ಟೀಮ್ ಇಂಡಿಯಾ ಗೆಲುವಿಗೆ ಪೂರಕವಾಗಿರುವ ಪ್ರಮುಖ ಅಂಶಗಳು ಕೆಳಗಿನಂತಿವೆ…

 352 ರನ್‌ಗಳ ಬೃಹತ್ ಮುನ್ನಡೆಯ ಒತ್ತಡ: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 720/9 ಡಿಕ್ಲೇರ್ ಮಾಡಿ ಗಳಿಸಿದ 352 ರನ್‌ಗಳ ಮುನ್ನಡೆ ನ್ಯೂಝಿಲೆಂಡ್ ಮೇಲೆ ಭಾರಿ ಮಾನಸಿಕ ಒತ್ತಡ ಹೇರಿದೆ. ಕಿವೀಸ್ ಬ್ಯಾಟರ್‌ಗಳು ಇನ್ನೂ 233 ರನ್‌ಗಳ ಹಿನ್ನಡೆ ತಗ್ಗಿಸಲು ಕನಿಷ್ಠ ಎರಡು ಸೆಷನ್‌ಗಳ ಕಾಲ ರಕ್ಷಣಾತ್ಮಕವಾಗಿ ಆಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

5ನೇ ದಿನದ ಪಿಚ್: ಪಂದ್ಯದ ಆರಂಭದಲ್ಲಿದ್ದ ಹಸಿರು ಹುಲ್ಲು ಒಣಗಿದ್ದು, 5ನೇ ದಿನ ಪಿಚ್‌ನಲ್ಲಿ ಬಿರುಕುಗಳು ಹೆಚ್ಚಾಗಲಿವೆ. ಇದು ಭಾರತದ ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಅವರಿಗೆ ತಿರುವು ಮತ್ತು ಅಸಮತೋಲಿತ ಬೌನ್ಸ್ ಪಡೆಯಲು ನೆರವಾಗಲಿದೆ.

ಕಡಿಮೆ ಬೌನ್ಸ್: ಪಿಚ್ ಹಳೆಯದಾಗಿರುವುದರಿಂದ 5ನೇ ದಿನ ಚೆಂಡು ನಿರೀಕ್ಷಿತ ಮಟ್ಟದಲ್ಲಿ ಪುಟಿದೇಳುವುದಿಲ್ಲ. ಬ್ಯಾಟರ್‌ಗಳಿಗೆ ಈ ಕಡಿಮೆ ಬೌನ್ಸ್ ಅತಿ ದೊಡ್ಡ ಸವಾಲಾಗಲಿದ್ದು, ಎಲ್‌ಬಿಡಬ್ಲ್ಯೂ ಮತ್ತು ಬೌಲ್ಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಹೊಸ ಚೆಂಡಿನ ಮಾರಕ ದಾಳಿ: ನ್ಯೂಝಿಲೆಂಡ್ ತಂಡದ ಇನ್ನಿಂಗ್ಸ್‌ನಲ್ಲಿ ಈಗಾಗಲೇ 45 ಓವರ್‌ಗಳು ಮುಗಿದಿದ್ದು, ಇನ್ನು ಕೇವಲ 35 ಓವರ್‌ಗಳ ಬಳಿಕ (80ನೇ ಓವರ್‌ನಲ್ಲಿ) ಭಾರತಕ್ಕೆ ಎರಡನೇ ಹೊಸ ಚೆಂಡು ಲಭ್ಯವಾಗಲಿದೆ. ಹಳೆಯ ಪಿಚ್‌ನಲ್ಲಿ ಹೊಸ ಚೆಂಡಿನೊಂದಿಗೆ ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ರಿವರ್ಸ್ ಸ್ವಿಂಗ್ ಮತ್ತು ವೇಗದ ಮೂಲಕ ವಿಕೆಟ್ ಬೇಟೆಯಾಡಬಲ್ಲರು.

ರಕ್ಷಣಾತ್ಮಕ ಆಟವೇ ಮುಳುವಾಗಬಹುದು: ಪಂದ್ಯ ಉಳಿಸಿಕೊಳ್ಳಲು ನ್ಯೂಝಿಲೆಂಡ್ ಪ್ರತಿ ಓವರ್‌ಗೆ ಕೇವಲ 2.64 ರನ್ ವೇಗದಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ರನ್ ಗಳಿಸುವ ಉದ್ದೇಶವಿಲ್ಲದೆ ಕೇವಲ ಡಿಫೆನ್ಸ್ ಆಡಲು ಹೋದಾಗ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಾಗಿ, ಒಂದೇ ಒಂದು ಉತ್ತಮ ಎಸೆತ ಅಥವಾ ಸಣ್ಣ ತಪ್ಪು ಸತತ ವಿಕೆಟ್ ಪತನಕ್ಕೆ ದಾರಿ ಮಾಡಿಕೊಡುತ್ತದೆ.

ಆಕ್ರಮಣಕಾರಿ ಫೀಲ್ಡ್ ಸೆಟ್: ಭಾರತದ ಬಳಿ ರನ್‌ಗಳ ಭದ್ರ ಕೋಟೆ ಇರುವುದರಿಂದ, ನಾಯಕ ಶುಭ್‌ಮನ್ ಗಿಲ್ ಎದುರಾಳಿ ಬ್ಯಾಟರ್‌ಗಳ ಸುತ್ತಲೂ ಆಕ್ರಮಣಕಾರಿ ಫೀಲ್ಡಿಂಗ್ ನಿಯೋಜಿಸಬಹುದು. ಈ ಮೂಲಕ ಕಿವೀಸ್ ಬ್ಯಾಟರ್‌ಗಳ ರಕ್ಷಣಾತ್ಮಕ ಆಟಕ್ಕೂ ತೀವ್ರ ಒತ್ತಡ ಹೇರುವುದು ಖಚಿತ.

ಇನ್ನೂ ಓದಿ: ನಿಖಿಲ್ ಸಿಡಿಲಬ್ಬರ: ಆಸ್ಟ್ರೇಲಿಯಾಗೆ ರೋಚಕ ಜಯ!

ಈ ಎಲ್ಲಾ ಒತ್ತಡಗಳ ನಡುವೆ ಪಂದ್ಯವನ್ನು ಉಳಿಸಿಕೊಳ್ಳಲು ನ್ಯೂಝಿಲೆಂಡ್ ಬ್ಯಾಟರ್‌ಗಳು ಕ್ರೀಸ್ ಕಚ್ಚಿ ನಿಂತು ಪೂರ್ಣ 90 ಓವರ್‌ಗಳ ಕಾಲ ಆಲೌಟ್ ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಆದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕಿವೀಸ್ ಪಡೆಯನ್ನು 352 ರನ್‌ಗಳೊಳಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರೆ ಭರ್ಜರಿ ಇನ್ನಿಂಗ್ಸ್ ಜಯ ಸಾಧಿಸುವುದು ಖಚಿತ.

ಮತ್ತೊಂದೆಡೆ, ನ್ಯೂಝಿಲೆಂಡ್ ಸಂಪೂರ್ಣ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿರುವುದರಿಂದ ಅಂತಿಮ ದಿನದಾಟದಲ್ಲಿ ಬೃಹತ್ ಮೊತ್ತ ದಾಖಲಾಗುವ ನಿರೀಕ್ಷೆಯಿಲ್ಲ. ಹೀಗಾಗಿ ತಾಂತ್ರಿಕವಾಗಿ ಮತ್ತು ಪಂದ್ಯದ ಸನ್ನಿವೇಶದ ಲೆಕ್ಕಾಚಾರದಲ್ಲೂ ಟೀಮ್ ಇಂಡಿಯಾಗೆ ಗೆಲುವಿನ ಅವಕಾಶವೇ ಹೆಚ್ಚಿದೆ. ಅದರಂತೆ ಬರೋಬ್ಬರಿ 17 ವರ್ಷಗಳ ಬಳಿಕ ಕಿವೀಸ್ ನೆಲದಲ್ಲಿ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವನ್ನು ನಿರೀಕ್ಷಿಸಬಹುದು.

Published On - 2:12 pm, Sun, 22 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More