AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಡೆತ್ತಿದ ಭಾರತೀಯರು… ಜೇಕಬ್ ಡಫಿ ‘ಡಬಲ್ ಸೆಂಚುರಿ’!

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ದ್ವಿಶತಕ ಬಾರಿಸುವುದು ಸಾಮಾನ್ಯ, ಆದರೆ ಬೌಲರ್ ಒಬ್ಬ ತನ್ನ ಬೌಲಿಂಗ್‌ನಲ್ಲೇ 'ದ್ವಿಶತಕ' ಬಾರಿಸುವುದು ಅತ್ಯಂತ ವಿರಳ ಹಾಗೂ ಯಾವುದೇ ಬೌಲರ್ ಬಯಸದ ಕಹಿ ದಾಖಲೆ! ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ರನ್ ಸುನಾಮಿಗೆ ಸಿಲುಕಿದ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ, ಅಕ್ಷರಶಃ ದಿಕ್ಕು ತೋಚದಂತಾಗಿದ್ದಾರೆ.

ಬೆಂಡೆತ್ತಿದ ಭಾರತೀಯರು... ಜೇಕಬ್ ಡಫಿ 'ಡಬಲ್ ಸೆಂಚುರಿ'!
Jacob DuffyImage Credit source: GettyImages
ಝಾಹಿರ್ ಯೂಸುಫ್
|

Updated on: Nov 22, 2026 | 9:04 AM

Share

ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಅಬ್ಬರಕ್ಕೆ ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ಅಕ್ಷರಶಃ ತತ್ತರಿಸಿದ್ದಾರೆ. ಕೇವಲ 33 ಓವರ್‌ಗಳಲ್ಲಿ 201 ರನ್‌ಗಳನ್ನು ಬಿಟ್ಟುಕೊಟ್ಟು 1 ವಿಕೆಟ್ ಪಡೆಯುವ ಮೂಲಕ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 200ಕ್ಕೂ ಹೆಚ್ಚು ರನ್ ನೀಡಿದ ನ್ಯೂಝಿಲೆಂಡ್​ನ ಮೊದಲ ವೇಗಿ ಹಾಗೂ ವಿಶ್ವದ ಆರನೇ ವೇಗದ ಬೌಲರ್ ಎಂಬ ಅನಪೇಕ್ಷಿತ ದಾಖಲೆಗೆ ಡಫಿ ಪಾತ್ರರಾಗಿದ್ದಾರೆ.

ಟೀಮ್ ಇಂಡಿಯಾ ಬ್ಯಾಟರ್‌ಗಳ ಅಬ್ಬರ:

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಝಿಲೆಂಡ್ ಗಳಿಸಿದ್ದ 368 ರನ್‌ಗಳಿಗೆ ಉತ್ತರವಾಗಿ ಭಾರತ ಬೃಹತ್ ಮೊತ್ತ ಪೇರಿಸಿದೆ. ಕೆ.ಎಲ್. ರಾಹುಲ್ (136) ಮತ್ತು ರಿಷಭ್ ಪಂತ್ (128) ಅವರ ಭರ್ಜರಿ ಶತಕಗಳು ಹಾಗೂ ನಾಯಕ ಶುಭ್​ಮನ್ ಗಿಲ್ (98), ಯಶಸ್ವಿ ಜೈಸ್ವಾಲ್ (85), ದೇವದತ್ ಪಡಿಕ್ಕಲ್ (80) ಮತ್ತು ಧ್ರುವ್ ಜುರೆಲ್ (78) ಅವರ ಅರ್ಧಶತಕಗಳ ನೆರವಿನಿಂದ ಭಾರತ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಈ ರನ್ ಪ್ರವಾಹದ ನಡುವೆ ಭಾರತದ ಬ್ಯಾಟರ್‌ಗಳು ಡಫಿ ಬೌಲಿಂಗ್ ಅನ್ನು ನಿರ್ದಯವಾಗಿ ದಂಡಿಸಿದರು. ಪ್ರತಿ ಓವರ್‌ಗೆ 6.09 ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟ ಡಫಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್‌ಗೆ 6ಕ್ಕೂ ಹೆಚ್ಚು ಎಕಾನಮಿಯಲ್ಲಿ 200+ ರನ್ ನೀಡಿದ ವಿಶ್ವದ ಕೇವಲ ಎರಡನೇ ಬೌಲರ್ ಎನಿಸಿಕೊಂಡರು.

  • ಜೇಕಬ್ ಡಫಿ RCB ತಂಡದ ಆಟಗಾರ.
  • 2026ರ ಐಪಿಎಲ್​ನಲ್ಲಿ 6 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದರು.
  • ಜೋಶ್ ಹೇಝಲ್‌ವುಡ್ ಅನುಪಸ್ಥಿತಿಯಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು.
  • ಈ ಬಾರಿ ಕೂಡ ಜೇಕಬ್ ಡಫಿಯನ್ನು ಆರ್​ಸಿಬಿ ರಿಟೈನ್ ಮಾಡಿಕೊಂಡಿದೆ.

ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ವೇಗಿಗಳು:

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಜೇಕಬ್ ಡಫಿ ಇದೀಗ ಆಸ್ಟ್ರೇಲಿಯಾದ ದಿಗ್ಗಜ ಬ್ರೆಟ್ ಲೀ ಅವರೊಂದಿಗೆ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಬೌಲರ್ ತಂಡ ನೀಡಿದ ರನ್ ವಿಕೆಟ್ ಎದುರಾಳಿ ತಂಡ ವರ್ಷ
ಖಾನ್ ಮಹಮೂದ್ ಪಾಕಿಸ್ತಾನ್ 259 0 ವೆಸ್ಟ್ ಇಂಡೀಸ್ 1958
ಫಝಲ್ ಮಹಮೂದ್ ಪಾಕಿಸ್ತಾನ್ 247 2 ವೆಸ್ಟ್ ಇಂಡೀಸ್ 1958
ಕಪಿಲ್ ದೇವ್ ಭಾರತ 220 7 ಪಾಕಿಸ್ತಾನ್ 1983
ಇಯಾನ್ ಬೋಥಮ್ ಇಂಗ್ಲೆಂಡ್ 217 3 ಪಾಕಿಸ್ತಾನ್ 1987
ಬ್ರೆಟ್ ಲೀ ಆಸ್ಟ್ರೇಲಿಯಾ 201 4 ಭಾರತ 2004
ಜೇಕಬ್ ಡಫಿ ನ್ಯೂಝಿಲೆಂಡ್ 201 1 ಭಾರತ 2026

ಅತ್ಯಂತ ದುಬಾರಿ ಬೌಲಿಂಗ್:

ಈ ದುಬಾರಿ ಸ್ಪೆಲ್‌ನೊಂದಿಗೆ ಜೇಕಬ್ ಡಫಿ, ನ್ಯೂಝಿಲೆಂಡ್ ಟೆಸ್ಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಡೇನಿಯಲ್ ವೆಟ್ಟೋರಿ 200 ರನ್ ನೀಡಿದ್ದರು. ಇದೀಗ ಈ ಹೀನಾಯ ದಾಖಲೆಯನ್ನು ಡಫಿ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2027: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಜೋಶ್ ಹೇಝಲ್​ವುಡ್​!

ಕುತೂಹಲಕಾರಿ ವಿಷಯವೆಂದರೆ, ಕೆಲವೇ ತಿಂಗಳುಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ನಡೆದ 3 ಪಂದ್ಯಗಳ ತವರಿನ ಟೆಸ್ಟ್ ಸರಣಿಯಲ್ಲಿ ಜೇಕಬ್ ಡಫಿ ಅಕ್ಷರಶಃ ಬೆಂಕಿಯುಂಡೆಯಂತೆ ಬೌಲಿಂಗ್ ಮಾಡಿದ್ದರು. ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗವನ್ನು ಏಕಾಂಗಿಯಾಗಿ ಮುನ್ನಡೆಸಿದ್ದ ಡಫಿ, ಆ ಸರಣಿಯೊಂದರಲ್ಲೇ ಮೂರು ‘5 ವಿಕೆಟ್ ಗೊಂಚಲು’ ಸೇರಿದಂತೆ ಒಟ್ಟು 23 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಭರ್ಜರಿ ಪ್ರದರ್ಶನದೊಂದಿಗೆ 2025ರ ಕ್ಯಾಲೆಂಡರ್ ವರ್ಷದಲ್ಲಿ (ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ) ಒಟ್ಟು 81 ವಿಕೆಟ್ ಪಡೆದ ಅವರು, 1985ರಲ್ಲಿ ನ್ಯೂಝಿಜಿಲೆಂಡ್ ದಿಗ್ಗಜ ಸರ್ ರಿಚರ್ಡ್ ಹ್ಯಾಡ್ಲಿ ನಿರ್ಮಿಸಿದ್ದ 79 ವಿಕೆಟ್‌ಗಳ 40 ವರ್ಷಗಳ ಸಾರ್ವಕಾಲಿಕ ದಾಖಲೆಯನ್ನು ಧೂಳೀಪಟ ಮಾಡಿದ್ದರು. ಅಂದು ಕಿವೀಸ್ ಕ್ರಿಕೆಟ್‌ನ ಹೀರೋ ಆಗಿ ಮೆರೆದಿದ್ದ ಅದೇ ಡಫಿ, ಇದೀಗ ಭಾರತೀಯ ಬ್ಯಾಟರ್‌ಗಳ ಅಬ್ಬರದ ಮುಂದೆ ಮಂಕಾಗಿರುವುದು ವಿಪರ್ಯಾಸವೇ ಸರಿ!

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More