AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್‌ನಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್‌ಗೆ ಡಿಕ್ಕಿಯಾಗಿ 2 ತುಂಡಾದ ಕಾರು, 3 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿ ಸಾವು

ಗುಜರಾತ್‌ನ ಕಛ್​ ಜಿಲ್ಲೆಯ ಭುಜ್‌-ಖಾವ್ಡಾ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಎರಡು ತುಂಡಾಗಿದ್ದು, ಮೂರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರು ಉತ್ತರಾಖಂಡದಿಂದ ಕಛ್​ಸಗೆ ಪ್ರವಾಸಕ್ಕೆ ಬಂದಿದ್ದ ಸೇನಾ ಕುಟುಂಬದವರು ಎನ್ನಲಾಗಿದೆ.

ಗುಜರಾತ್‌ನಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್‌ಗೆ ಡಿಕ್ಕಿಯಾಗಿ 2 ತುಂಡಾದ ಕಾರು, 3 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿ ಸಾವು
ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದು
ಗಣಪತಿ ಶರ್ಮಾ
|

Updated on: Nov 22, 2026 | 8:55 AM

Share

ಮುಖ್ಯಾಂಶಗಳು

  • ಟ್ರಕ್‌ಗೆ ಕಾರು ಮುಖಾಮುಖಿ ಡಿಕ್ಕಿ
  • ಮೂರು ತಿಂಗಳ ಹಸುಗೂಸು ಸೇರಿ ಏಳು ಮಂದಿ ಸಾವು
  • ಡಿಕ್ಕಿಯ ರಭಸಕ್ಕೆ ಎರಡು ತುಂಡಾದ ಕಾರು

ಗುಜರಾತ್, ನವೆಂಬರ್ 22: ಗುಜರಾತ್‌ನ ಕಛ್ ಜಿಲ್ಲೆಯ ಭುಜ್‌-ಖಾವ್ಡಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿದೆ. ಶನಿವಾರ (ನವೆಂಬರ್ 21) ರಾತ್ರಿ ಸುಮಾರು 9.30ರ ವೇಳೆಗೆ ಈ ದುರಂತ ಸಂಭವಿಸಿದೆ.

ಉತ್ತರಾಖಂಡದಿಂದ ಕಛ್​ಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಸದಸ್ಯರು ಕಾರಿನಲ್ಲಿ ಭುಜ್ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಖಾವ್ಡಾ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ಟ್ರೇಲರ್ ಟ್ರಕ್ ಎದುರಿನಿಂದ ಬಂದಿದೆ. ನಿರ್ಜನ ಪ್ರದೇಶದ ರಸ್ತೆಯಲ್ಲಿ ಎರಡೂ ವಾಹನಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಎರಡು ಭಾಗಗಳಾಗಿ ಸೀಳಿಹೋಗಿದೆ.

ಹಸುಗೂಸು ಸೇರಿ ಏಳು ಮಂದಿ ದುರ್ಮರಣ

ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಸೌರವ್‌ಸಿಂಗ್ ಜಸ್ಪಾಲ್‌ಸಿಂಗ್ ನೇಗಿ (32), ಅವರ ಪತ್ನಿ ಸವಿತಾ ಮತ್ತು ಮೂರು ತಿಂಗಳ ಮಗಳು ಶಿವಿಕಾ ಎಂದು ಗುರುತಿಸಲಾಗಿದೆ. ರಿಂಕಿ ನಿತಿನ್ ಗುನ್ಸಾಯಿ ಮತ್ತು ಅವರ ಮಗಳು ವಾಮಿಕಾ, ರಾಜೇಶ್ ಸಿಂಗ್ ರಾವತ್ ಹಾಗೂ ಅವರ ಏಳು ವರ್ಷದ ಮಗಳು ರಕ್ಷಿತಾ ಕೂಡ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಅಧಿಕಾರಿಗಳು ಹಲವು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಿದ್ದು, ಏಳು ಮಂದಿಯ ಮೃತದೇಹಗಳನ್ನು ಭುಜ್‌ನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಸೇನಾ ಕುಟುಂಬಕ್ಕೆ ಸೇರಿದವರು ಎಂಬ ಮಾಹಿತಿ

ಮೃತರು ಸೇನಾ ಕುಟುಂಬಕ್ಕೆ ಸೇರಿದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ಮಾಹಿತಿ ತಿಳಿದ ಕೂಡಲೇ ಭಾರತೀಯ ಸೇನೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಭಾರತದ ರಸ್ತೆ ಸುರಕ್ಷತಾ ಬಿಕ್ಕಟ್ಟು: ‘ಅಪಘಾತ’ದ ಆಚೆ – ಅಂಕಿಅಂಶಗಳು ಮತ್ತು ಪರಿಹಾರಗಳು

ಇದೇ ಖಾವ್ಡಾ ಪ್ರದೇಶದ ರಸ್ತೆಯಲ್ಲಿ ಅಕ್ಟೋಬರ್ 9ರಂದು ಮತ್ತೊಂದು ಭೀಕರ ಅಪಘಾತ ಸಂಭವಿಸಿತ್ತು. ಖಾವ್ಡಾ ರಿನ್ಯೂವಬಲ್ ಎನರ್ಜಿ ಪಾರ್ಕ್ ರಸ್ತೆಯಲ್ಲಿ ನಡೆದಿದ್ದ ಆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಅದೇ ಭಾಗದಲ್ಲಿ ಏಳು ಜನರು ಅಸುನೀಗಿರುವುದು ಆತಂಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More