AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಂದ ಬರುವ ಹಣಕ್ಕಿಂತ ರೈಲ್ವೆ ಖರ್ಚು ಮಾಡುತ್ತಿರುವುದೇ ಹೆಚ್ಚು

Santosh Nair's article in 'Your India' series:ಭಾರತೀಯ ರೈಲ್ವೆಯು ಪ್ರಯಾಣಿಕರಿಂದ ಪಡೆಯುವ ಟಿಕೆಟ್ ಹಣಕ್ಕಿಂತ ಹೆಚ್ಚು ವೆಚ್ಚ ಮಾಡುತ್ತದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಸರಾಸರಿ 45% ಸಬ್ಸಿಡಿ ನೀಡಲಾಗುತ್ತದೆ. ಸರಕು ಸಾಗಣೆ ಆದಾಯದಿಂದ ಈ ಹೆಚ್ಚುವರಿ ವೆಚ್ಚವನ್ನು ಭರಿಸಲಾಗುತ್ತದೆ. ಅಗ್ಗದ ರೈಲು ಪ್ರಯಾಣವು ಲಕ್ಷಾಂತರ ಜನರಿಗೆ ಆಧಾರವಾಗಿದ್ದು, ಸಮಾಜ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ. ಸಬ್ಸಿಡಿ ಲಾಭ-ನಷ್ಟದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಇದು ಬಹುದೊಡ್ಡ ಸಾರ್ವಜನಿಕ ಸೇವೆಯಾಗಿದೆ.

ಪ್ರಯಾಣಿಕರಿಂದ ಬರುವ ಹಣಕ್ಕಿಂತ ರೈಲ್ವೆ ಖರ್ಚು ಮಾಡುತ್ತಿರುವುದೇ ಹೆಚ್ಚು
ರೈಲು Image Credit source: Getty Images
Santosh Nair
| Edited By: |

Updated on: Nov 21, 2026 | 5:44 PM

Share

ನವದೆಹಲಿ, ನವೆಂಬರ್ 21: ರೈಲಿನಲ್ಲಿ ಪ್ರಯಾಣ ಮಾಡುವಾಗ ನಾವು ಕೊಡುವ ಟಿಕೆಟ್ ಹಣವೇ ನಮ್ಮ ಪ್ರಯಾಣದ ಸಂಪೂರ್ಣ ವೆಚ್ಚ ಎಂದು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ರೈಲ್ವೆ ಖರ್ಚು ಮಾಡುವ ಹಣಕ್ಕೂ, ಪ್ರಯಾಣಿಕರು ಪಾವತಿಸುವ ಟಿಕೆಟ್ ದರಕ್ಕೂ ದೊಡ್ಡ ವ್ಯತ್ಯಾಸವಿದೆ. ಕೇವಲ 100 ರೂಪಾಯಿ ಟಿಕೆಟ್‌ನ ಪ್ರಯಾಣಕ್ಕೆ ರೈಲ್ವೆ ಬರೋಬ್ಬರಿ 182 ರೂಪಾಯಿ ಖರ್ಚು ಮಾಡುತ್ತಿದೆ. ಹಾಗಾದರೆ ಈ ಹೆಚ್ಚುವರಿ ವೆಚ್ಚವನ್ನು ಭರಿಸುವವರು ಯಾರು? ಅಗ್ಗದ ರೈಲು ಪ್ರಯಾಣದ ಹಿಂದಿರುವ ಲೆಕ್ಕಾಚಾರವೇನು? ಈ ಕುರಿತ ಮಾಹಿತಿ ಇಲ್ಲಿದೆ.

ಶುಕ್ರವಾರ ರಾತ್ರಿ, ದೂರದ ಪ್ರಯಾಣದ ರೈಲಿನ ಸಾಮಾನ್ಯ ಬೋಗಿಯಲ್ಲಿ ಐದು ಜನರಿರುವ ಒಂದು ಕುಟುಂಬ ಪ್ರಯಾಣಿಸುತ್ತಿದೆ. ಮೂವರು ಕುಳಿತುಕೊಳ್ಳಬಹುದಾದ ಸೀಟಿನಲ್ಲಿ ಐವರೂ ಕಷ್ಟಪಟ್ಟು ಕುಳಿತಿದ್ದಾರೆ. ತಂದೆ ತಮ್ಮ ಮೊಣಕಾಲುಗಳ ನಡುವೆ ಸ್ಟೀಲ್ ಟ್ರಂಕ್ ಇಟ್ಟುಕೊಂಡಿದ್ದಾರೆ. ತಾಯಿ ಮಡಿಲಲ್ಲಿ ಮಗುವನ್ನು ಎತ್ತಿಕೊಂಡಿದ್ದಾರೆ. ಕಾಲಿನ ಬಳಿ ರೊಟ್ಟಿ ಇರುವ ಚೀಲವಿದೆ. ಹತ್ತು ವರ್ಷದ ಹಿರಿಯ ಮಗ ಕಿಟಕಿಯ ಪಕ್ಕದಲ್ಲಿ ಕುಳಿತು ಹೊರಗೆ ನೋಡುತ್ತಿದ್ದಾನೆ.

ಅವರು ಸಂಬಂಧಿಕರ ಮದುವೆಗೆ ಹೋಗುತ್ತಿದ್ದಾರೆ. ಪ್ರಯಾಣಕ್ಕೆ 11 ಗಂಟೆ ಬೇಕು. ಅಂದೇ ಟಿಕೆಟ್ ಖರೀದಿಸಿರುವ ಅವರು, ತಮಗೆ ಸರಿಯಾದ ಬೆಲೆ ಕೊಟ್ಟು ಟಿಕೆಟ್ ಪಡೆದಿದ್ದೇವೆ ಎಂದುಕೊಂಡಿದ್ದಾರೆ. ಆದರೆ ತಮ್ಮ ಪ್ರಯಾಣದ ನಿಜವಾದ ವೆಚ್ಚದ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಹಣವನ್ನಷ್ಟೇ ಪಾವತಿಸಿದ್ದಾರೆ ಎಂಬುದು ಅವರಲ್ಲಿ ಯಾರಿಗೂ ತಿಳಿದಿಲ್ಲ.

ರೈಲು ಟಿಕೆಟ್ ನೋಡಲು ಸಾಮಾನ್ಯ ಬಿಲ್‌ನಂತೆ ಕಾಣುತ್ತದೆ. ಆದರೆ ನಾವು ಪಡೆಯುವ ಸೇವೆಯ ನಿಜವಾದ ವೆಚ್ಚಕ್ಕಿಂತ ಕಡಿಮೆ ಹಣ ಪಾವತಿಸುತ್ತಿದ್ದೇವೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

2023-24ನೇ ಸಾಲಿನಲ್ಲಿ ಪ್ರಯಾಣಿಕರನ್ನು ಸಾಗಿಸಲು ಭಾರತೀಯ ರೈಲ್ವೆಗೆ ತಗಲಿದ ವೆಚ್ಚ, ಟಿಕೆಟ್ ಮೂಲಕ ಸಂಗ್ರಹಿಸಿದ ಹಣಕ್ಕಿಂತ ಹೆಚ್ಚಾಗಿತ್ತು. ರೈಲ್ವೆ ಲೆಕ್ಕಪತ್ರಗಳ ಪ್ರಕಾರ, ಈ ವ್ಯತ್ಯಾಸದ ಮೊತ್ತ 60,466 ಕೋಟಿ ರೂಪಾಯಿ. ಇದನ್ನೇ ಪ್ರಯಾಣಿಕರಿಗೆ ನೀಡುವ ಸಬ್ಸಿಡಿ ಅಥವಾ ರಿಯಾಯಿತಿ ಎಂದು ಕರೆಯಲಾಗುತ್ತದೆ.

ಸರಾಸರಿಯಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ನಿಜವಾದ ವೆಚ್ಚಕ್ಕಿಂತ ಶೇ.45ರಷ್ಟು ಕಡಿಮೆ ಹಣ ಪಾವತಿಸುತ್ತಾರೆ. ಅಂದರೆ, ಪ್ರಯಾಣಿಕರು 100 ರೂಪಾಯಿ ಟಿಕೆಟ್ ಖರೀದಿಸಿದರೆ, ಆ ಪ್ರಯಾಣಕ್ಕೆ ರೈಲ್ವೆಗೆ ಸುಮಾರು 182 ರೂಪಾಯಿ ವೆಚ್ಚವಾಗುತ್ತದೆ. ಉಳಿದ ಹಣವನ್ನು ಬೇರೊಂದು ಮೂಲದಿಂದ ಭರಿಸಲಾಗುತ್ತದೆ.

ಭಾರತೀಯ ರೈಲ್ವೆಯನ್ನು ಅವಲಂಬಿಸಿರುವ ಕೋಟ್ಯಂತರ ಜನರು

ಭಾರತೀಯ ರೈಲ್ವೆ ವರ್ಷಕ್ಕೆ 720 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತದೆ. ಅನೇಕ ಕುಟುಂಬಗಳಿಗೆ ದೂರದ ಪ್ರಯಾಣ ಮಾಡಲು ರೈಲ್ವೆಯೇ ಅತ್ಯಂತ ಕೈಗೆಟುಕುವ ಸಾರಿಗೆ ವ್ಯವಸ್ಥೆಯಾಗಿದೆ.

ರೈಲ್ವೆಯಲ್ಲಿರುವ ಸುಮಾರು ಶೇ.70ರಷ್ಟು ಬೋಗಿಗಳು ಮತ್ತು ಶೇ.78ರಷ್ಟು ಆಸನಗಳು ಎಸಿ ರಹಿತವಾಗಿವೆ. 2024-25ನೇ ಸಾಲಿನಲ್ಲಿ ಸುಮಾರು 651 ಕೋಟಿ ಜನರು ಸಾಮಾನ್ಯ ಅಥವಾ ಕಾಯ್ದಿರಿಸದ ಟಿಕೆಟ್‌ಗಳ ಮೂಲಕ ಪ್ರಯಾಣಿಸಿದ್ದಾರೆ.

ಅಂದರೆ, ಹೆಚ್ಚಿನ ಪ್ರಯಾಣಗಳು ಅತ್ಯಂತ ಕಡಿಮೆ ದರದ ಸಾಮಾನ್ಯ ಬೋಗಿಗಳಲ್ಲೇ ನಡೆಯುತ್ತವೆ. ಬೇರೆ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಸಾಧ್ಯವಾಗದ ಜನರು ರೈಲ್ವೆಯನ್ನು ಅವಲಂಬಿಸಿದ್ದಾರೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು, ಹಬ್ಬಕ್ಕೆ ಊರಿಗೆ ತೆರಳುವ ಕಾರ್ಮಿಕರು, ಮದುವೆಗೆ ಪ್ರಯಾಣಿಸುವ ಕುಟುಂಬಗಳು ಹೀಗೆ ಕೋಟ್ಯಂತರ ಜನರು ಕಡಿಮೆ ದರದ ರೈಲು ಪ್ರಯಾಣವನ್ನು ಅವಲಂಬಿಸಿದ್ದಾರೆ.

ಪ್ರಯಾಣದ ವೆಚ್ಚದ ಉಳಿದ ಹಣವನ್ನು ಯಾರು ಭರಿಸುತ್ತಾರೆ?

ರೈಲ್ವೆಯಲ್ಲಿ ಪ್ರಯಾಣಿಕರ ಟಿಕೆಟ್‌ನಿಂದ ಬರುವ ಆದಾಯವು ಪ್ರಯಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಿಲ್ಲ. ಹಾಗಾದರೆ ಉಳಿದ ಹಣ ಎಲ್ಲಿಂದ ಬರುತ್ತದೆ?

ರೈಲ್ವೆ ಹಣಕಾಸು ಕ್ಷೇತ್ರದ ತಜ್ಞರ ಪ್ರಕಾರ, ಸರಕು ಸಾಗಣೆ ರೈಲುಗಳಿಂದ ಬರುವ ಆದಾಯವು ಇದಕ್ಕೆ ನೆರವಾಗುತ್ತದೆ. ಕಲ್ಲಿದ್ದಲು, ಧಾನ್ಯ, ಸಿಮೆಂಟ್ ಮತ್ತು ಉಕ್ಕಿನಂತಹ ವಸ್ತುಗಳನ್ನು ಸಾಗಿಸುವ ರೈಲುಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತವೆ. ಈ ಹೆಚ್ಚುವರಿ ಆದಾಯವನ್ನು ಪ್ರಯಾಣಿಕರ ರೈಲುಗಳ ವೆಚ್ಚಕ್ಕೆ ಬಳಸಲಾಗುತ್ತದೆ ಎಂಬ ಅಭಿಪ್ರಾಯವಿದೆ.

ಅಂದರೆ, ಸರಕು ಸಾಗಣೆ ರೈಲುಗಳಿಂದ ಬರುವ ಆದಾಯವು ಸಾಮಾನ್ಯ ಜನರ ರೈಲು ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರೈಲ್ವೆಯ ಲೆಕ್ಕಪತ್ರಗಳಲ್ಲಿನ ತಪ್ಪಲ್ಲ. ಸರಕು ಸಾಗಣೆಯಿಂದ ಬರುವ ಆದಾಯವನ್ನು ಜನರ ಪ್ರಯಾಣಕ್ಕೆ ಬಳಸುವ ಒಂದು ವ್ಯವಸ್ಥೆಯಾಗಿದೆ.

ಪ್ರಯಾಣಿಕರ ಟಿಕೆಟ್ ದರವನ್ನು ಕಡಿಮೆ ಇಡುವುದರ ಬಗ್ಗೆ ಎರಡು ವಿಭಿನ್ನ ಅಭಿಪ್ರಾಯಗಳಿವೆ. ಕಡಿಮೆ ದರವನ್ನು ಬೆಂಬಲಿಸುವವರ ಪ್ರಕಾರ, ರೈಲ್ವೆ ಕೇವಲ ಲಾಭ ಗಳಿಸುವ ಸಂಸ್ಥೆಯಲ್ಲ. ಅದು ಸಾರ್ವಜನಿಕ ಸೇವೆಯಾಗಿದೆ. ಹಳ್ಳಿಗಳನ್ನು ನಗರಗಳಿಗೆ ಸಂಪರ್ಕಿಸುತ್ತದೆ. ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೋಗಲು ನೆರವಾಗುತ್ತದೆ. ಟಿಕೆಟ್ ದರವನ್ನು ನಿಜವಾದ ವೆಚ್ಚಕ್ಕೆ ಸಮನಾಗಿ ಹೆಚ್ಚಿಸಿದರೆ, ಬಡವರಿಗೆ ರೈಲು ಪ್ರಯಾಣ ದುಬಾರಿಯಾಗಬಹುದು.

ಆದರೆ ಕಡಿಮೆ ದರದಿಂದ ರೈಲ್ವೆಗೆ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುವವರೂ ಇದ್ದಾರೆ. ಪ್ರಯಾಣಿಕರ ರೈಲುಗಳಿಂದ ಸಾಕಷ್ಟು ಆದಾಯ ಬರದಿದ್ದರೆ, ಹೊಸ ಹಳಿಗಳ ನಿರ್ಮಾಣ, ಸುರಕ್ಷಿತ ಸಿಗ್ನಲ್ ವ್ಯವಸ್ಥೆ ಮತ್ತು ಹೆಚ್ಚುವರಿ ಬೋಗಿಗಳ ವ್ಯವಸ್ಥೆಗೆ ಹಣದ ಕೊರತೆ ಉಂಟಾಗಬಹುದು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಬೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಜನದಟ್ಟಣೆ ಹೆಚ್ಚಾಗುತ್ತದೆ.

ಪ್ರಯಾಣಿಕರ ನಷ್ಟವನ್ನು ಸರಿದೂಗಿಸಲು ಸರಕು ಸಾಗಣೆ ದರ ಹೆಚ್ಚಿಸಿದರೆ, ಸರಕುಗಳ ಬೆಲೆಯೂ ಹೆಚ್ಚಾಗಬಹುದು. ಆಗ ವ್ಯಾಪಾರಿಗಳು ರೈಲಿನ ಬದಲು ಲಾರಿಗಳ ಮೂಲಕ ಸರಕು ಸಾಗಿಸಲು ಮುಂದಾಗಬಹುದು. ಇದರಿಂದ ರೈಲ್ವೆಗೆ ಬರುವ ಆದಾಯವೂ ಕಡಿಮೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರೈತನಿಗೆ ಕಡಿಮೆ ಬೆಲೆ, ಗ್ರಾಹಕನಿಗೆ ದುಬಾರಿ ಬೆಲೆ; ಆಹಾರ ಪೂರೈಕೆ ಸರಪಳಿಯಲ್ಲಿ ಲಾಭ ಗಳಿಸುತ್ತಿರೋದು ಯಾರು?

ಕಡಿಮೆ ದರದ ಪ್ರಯಾಣ, ಜನದಟ್ಟಣೆಯೂ ಒಂದಕ್ಕೊಂದು ಸಂಬಂಧ ಹೊಂದಿವೆಯೇ?

ಕಡಿಮೆ ದರದ ಪ್ರಯಾಣದಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ಆದರೆ ಅದೇ ಸಮಯದಲ್ಲಿ ಕಡಿಮೆ ದರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಬೋಗಿಗಳಲ್ಲಿ ಜನದಟ್ಟಣೆಯೂ ಉಂಟಾಗಬಹುದು.

ಹೀಗಾಗಿ ಪ್ರಯಾಣಿಕರಿಗೆ ಸಬ್ಸಿಡಿ ನೀಡಬೇಕೇ ಅಥವಾ ಬೇಡವೇ ಎಂಬುದಕ್ಕಿಂತ, ಆ ಸೌಲಭ್ಯ ನಿಜವಾಗಿಯೂ ಅಗತ್ಯವಿರುವ ಜನರಿಗೆ ತಲುಪುತ್ತಿದೆಯೇ ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವಷ್ಟು ರೈಲ್ವೆ ವ್ಯವಸ್ಥೆ ಬೆಳೆಯುತ್ತಿದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ.

ರೈಲು ಪ್ರಯಾಣದಿಂದ ಪರಿಸರಕ್ಕೂ ಅನುಕೂಲ

ಹೆಚ್ಚಿನ ಸಂಖ್ಯೆಯ ಜನರನ್ನು ದೂರದ ಪ್ರದೇಶಗಳಿಗೆ ಸಾಗಿಸಲು ರೈಲ್ವೆ ಅತ್ಯಂತ ಪರಿಣಾಮಕಾರಿ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಒಂದೇ ಹಳಿಯಲ್ಲಿ ಸಂಚರಿಸುವ ರೈಲು ಸಾವಿರಾರು ಪ್ರಯಾಣಿಕರನ್ನು ಸಾಗಿಸಬಲ್ಲದು. ಹೆಚ್ಚಿನ ಜನರು ರೈಲು ಪ್ರಯಾಣ ಆಯ್ಕೆ ಮಾಡಿಕೊಂಡರೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಬಹುದು. ಇದರಿಂದ ಸಂಚಾರ ದಟ್ಟಣೆ, ವಾಯುಮಾಲಿನ್ಯ ಮತ್ತು ರಸ್ತೆ ಅಪಘಾತಗಳ ಅಪಾಯವೂ ಕಡಿಮೆಯಾಗಲು ನೆರವಾಗುತ್ತದೆ.

ಆದ್ದರಿಂದ ರೈಲ್ವೆಯ ನಿಜವಾದ ಲಾಭ-ನಷ್ಟದ ಲೆಕ್ಕಾಚಾರ ಮಾಡುವಾಗ, ಅದು ಸಮಾಜಕ್ಕೆ ಮತ್ತು ಪರಿಸರಕ್ಕೆ ನೀಡುವ ಪ್ರಯೋಜನಗಳನ್ನೂ ಪರಿಗಣಿಸಬೇಕಾಗುತ್ತದೆ. ಕೊನೆಗೆ, ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಆ ಹತ್ತು ವರ್ಷದ ಹುಡುಗ ನಿದ್ರೆಗೆ ಜಾರಿದ್ದ. ರೈಲು ತನ್ನ ಸಂಬಂಧಿಕರ ಊರನ್ನು ತಲುಪುವಾಗಲೇ ಅವನು ಎಚ್ಚರಗೊಂಡ. ತನ್ನ ಪ್ರಯಾಣದ ಟಿಕೆಟ್‌ಗೆ ಎಷ್ಟು ವೆಚ್ಚವಾಗಿದೆ, ರೈಲ್ವೆಗೆ ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಅವನು ಯೋಚಿಸಲಿಲ್ಲ. ಸಾಮಾನ್ಯವಾಗಿ ಪ್ರಯಾಣಿಕರು ಕೂಡ ಈ ಬಗ್ಗೆ ಯೋಚಿಸುವುದಿಲ್ಲ ಎಂದು ಸಂತೋಷ್ ನಾಯರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
"ಸನ್ಯಾಸಿ, ಸಿಎಂ ಎಲ್ಲವೂ ಹೊರಗಷ್ಟೇ, ಅಮ್ಮನ ಮುಂದೆ ಕೇವಲ ಮಗ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ