AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನಿಗೆ ಕಡಿಮೆ ಬೆಲೆ, ಗ್ರಾಹಕನಿಗೆ ದುಬಾರಿ ಬೆಲೆ; ಆಹಾರ ಪೂರೈಕೆ ಸರಪಳಿಯಲ್ಲಿ ಲಾಭ ಗಳಿಸುತ್ತಿರೋದು ಯಾರು?

Santosh Nair's article in 'Your India' series: ಭಾರತದಲ್ಲಿ ಟೊಮ್ಯಾಟೊ ಬೆಲೆ ಏರಿಳಿತವು ರೈತರಿಗೆ ನಷ್ಟ ತರುತ್ತಿದ್ದರೂ ಗ್ರಾಹಕರಿಗೆ ದುಬಾರಿಯಾಗಿದೆ. ಪೂರೈಕೆ ಸರಪಳಿಯ ದಕ್ಷತೆ ಇಲ್ಲದಿರುವುದೇ ಇದಕ್ಕೆ ಕಾರಣ. ರೈತರಿಗೆ ಸಿಗುವುದು ಗ್ರಾಹಕರು ನೀಡುವ ಬೆಲೆಯ ಮೂರನೇ ಒಂದು ಭಾಗ ಮಾತ್ರ. ಶೈತ್ಯಾಗಾರ, ಸಂಸ್ಕರಣಾ ಘಟಕಗಳ ಕೊರತೆ ಮತ್ತು ಮಧ್ಯವರ್ತಿಗಳ ಪ್ರಾಬಲ್ಯದಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. RBI ಅಧ್ಯಯನದ ಪ್ರಕಾರ, ಉತ್ತಮ ಮಾರುಕಟ್ಟೆ ವ್ಯವಸ್ಥೆಗಳು ಮತ್ತು ಸಂಗ್ರಹಣಾ ಸೌಲಭ್ಯಗಳು ಈ ಅಸಮಾನತೆಯನ್ನು ಕಡಿಮೆ ಮಾಡಬಹುದು.

ರೈತನಿಗೆ ಕಡಿಮೆ ಬೆಲೆ, ಗ್ರಾಹಕನಿಗೆ ದುಬಾರಿ ಬೆಲೆ; ಆಹಾರ ಪೂರೈಕೆ ಸರಪಳಿಯಲ್ಲಿ ಲಾಭ ಗಳಿಸುತ್ತಿರೋದು ಯಾರು?
ಟೊಮ್ಯಾಟೊImage Credit source: PTI
Santosh Nair
| Edited By: |

Updated on:Nov 19, 2026 | 6:54 PM

Share

ಒಂದು ಟೊಮ್ಯಾಟೊ ಬಗ್ಗೆ ತಿಳಿಯೋಣ. ಗೋಪಾಲ ಎಂಬ ಒಬ್ಬ ರೈತನ ಸಣ್ಣ ಹೊಲದ ಗಿಡವೊಂದರಲ್ಲಿ ಆತನ ಪೋಷಣೆಯಲ್ಲಿ ಈ ಟೊಮೆಟೊ ಬೆಳೆಯುತ್ತದೆ; ಜೂನ್ ತಿಂಗಳ ಮುಂಜಾನೆ ಕೆಂಪಾಗಿ ಗಟ್ಟಿಯಾಗಿರುವ ಅದನ್ನು ಕಿತ್ತು, ಇತರ ಸಾವಿರ ಟೊಮ್ಯಾಟೊಗಳೊಂದಿಗೆ ಒಂದು ಕ್ರೇಟ್‌ನಲ್ಲಿ ತುಂಬುತ್ತಾನೆ. ಆ ದಿನ, ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಮಾರುಕಟ್ಟೆ ಪ್ರಾಂಗಣದಲ್ಲಿ ಟೊಮ್ಯಾಟೊಗಳು ಎಷ್ಟು ಹೇರಳವಾಗಿ ಬಂದಿವೆಯೆಂದರೆ ಯಾರಿಗೂ ಅವು ಬೇಡವಾಗಿವೆ. ಗೋಪಾಲ್‌ಗೆ ನೀಡಲಾಗುವ ಬೆಲೆ ಎಷ್ಟು ಕಡಿಮೆಯೆಂದರೆ, ಅದು ಟ್ರಕ್ ಬಾಡಿಗೆಗೂ ಸಾಕಾಗುವುದಿಲ್ಲ. ಸಂಜೆಯ ಹೊತ್ತಿಗೆ, ಆತನ ಸುತ್ತಮುತ್ತಲಿನ ಕೆಲವು ರೈತರು ತಮ್ಮ ಕ್ರೇಟ್‌ಗಳನ್ನು ರಸ್ತೆ ಬದಿಯಲ್ಲಿ ಸುರಿದಿದ್ದಾರೆ. ಟೊಮ್ಯಾಟೊ ಹೆಚ್ಚು ದಿನ ಕಾಯುವಂತಿಲ್ಲ, ಮತ್ತು ತೀರಿಸಬೇಕಾದ ಸಾಲ ಇರುವುದರಿಂದ ಗೋಪಾಲ್‌ಗೂ ಕಾಯಲು ಸಾಧ್ಯವಿಲ್ಲ; ಆದ್ದರಿಂದ ಆತ ಸಿಕ್ಕ ಅಲ್ಪ ಬೆಲೆಗೆ ತನ್ನದನ್ನು ಮಾರಾಟ ಮಾಡುತ್ತಾನೆ.

ಮೂರು ತಿಂಗಳ ಹಿಂದೆ, ಮಾರ್ಚ್‌ನಲ್ಲಿ, ಇದೇ ಟೊಮ್ಯಾಟೊ ಕಿಲೋಗೆ ರೂ. 100 ಇರುತ್ತಿತ್ತು. ಮತ್ತು ಅನೇಕ ಕುಟುಂಬಗಳು ಅದನ್ನು ಬಳಸಿ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದವು. ಆದರೂ ಜೂನ್‌ನಲ್ಲಿ, ರೈತ ಹಣ ಕಳೆದುಕೊಳ್ಳುತ್ತಿರುವಾಗ, ನೆರೆಹೊರೆಯ ಅಂಗಡಿಯಲ್ಲಿ ಬೆಲೆ ಮಾತ್ರ ಅಷ್ಟಾಗಿ ಇಳಿಯುವುದಿಲ್ಲ. ಪೂರೈಕೆಗೆ ತಕ್ಕಂತೆ ಬೆಲೆಗಳು ಸರಾಗವಾಗಿ ಸ್ಪಂದಿಸುವ ಜಗತ್ತಿನಲ್ಲಿ ಇವೆರಡೂ ನಿಜವಾಗಿರಲು ಸಾಧ್ಯವಿಲ್ಲ, ಆದರೂ ಭಾರತದಲ್ಲಿ ಪ್ರತಿ ಕೆಲವು ಸೀಸನ್‌ಗಳಿಗೊಮ್ಮೆ ಇವೆರಡೂ ನಿಜವಾಗುತ್ತವೆ. ಅದಕ್ಕಾಗಿಯೇ ಹೊಲಕ್ಕೂ ಊಟದ ತಟ್ಟೆಗೂ ನಡುವೆ ಏನಿದೆ ಎಂಬುದನ್ನು ಕಂಡುಹಿಡಿಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿತು.

ಅದರ ಸಂಶೋಧಕರು ಬೆಲೆ ಏರಿಳಿತಗಳಿಗೆ ಹೆಚ್ಚಾಗಿ ಕಾರಣವಾಗುವ ಮೂರು ತರಕಾರಿಗಳನ್ನು ಅಧ್ಯಯನ ಮಾಡಿದರು: ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ. ಅವರ ಸಂಶೋಧನೆಯ ಫಲಿತಾಂಶವನ್ನು ಹೇಳುವುದು ಸುಲಭ ಮತ್ತು ಮರೆಯುವುದು ಕಷ್ಟ. ಗ್ರಾಹಕನು ಪಾವತಿಸುವ ಬೆಲೆಯ ಸುಮಾರು ಮೂರನೇ ಒಂದು ಭಾಗ ಮಾತ್ರ ರೈತನಿಗೆ ಸೇರುತ್ತದೆ. ಉಳಿದ ಭಾಗವು ಮಧ್ಯದ ಪೂರೈಕೆ ಸರಪಳಿಗೆ ಹೋಗುತ್ತದೆ. ಅಂದರೆ ಉತ್ಪನ್ನವನ್ನು ಸಂಗ್ರಹಿಸುವ, ಸಾಗಿಸುವ, ದಾಸ್ತಾನು ಮಾಡುವ ಮತ್ತು ಸಗಟು ಹಾಗೂ ಚಿಲ್ಲರೆ ಮಾರಾಟ ಮಾಡುವವರಿಗೆ ಸಲ್ಲುತ್ತದೆ. ಹಾಲು ಮತ್ತು ಈ ತರಕಾರಿಯನ್ನು ತುಲನೆ ಮಾಡಿ ನೋಡೋಣ. ಹಾಲಿನ ಅಂತಿಮ ಬೆಲೆಯಲ್ಲಿ ಸುಮಾರು ಶೇಕಡಾ 70ರಷ್ಟು ಭಾಗವು ಹೈನುಗಾರಿಕೆಯ ರೈತನಿಗೆ ಸಿಗುತ್ತದೆ. ಅದೇ ಮೇಲಿನ ತರಕಾರಿ ವಿಷಯವಾದರೆ, ಒಂದು ಕುಟುಂಬವು ಒಂದು ಕಿಲೋಗೆ ರೂ. 30 ಪಾವತಿಸಿದರೆ, ಅದನ್ನು ಬೆಳೆದ ವ್ಯಕ್ತಿಗೆ ಸುಮಾರು ರೂ. 10 ಸಿಗಬಹುದು.

ಇದನ್ನೂ ಓದಿ: ರೇಷನ್ ಕಾರ್ಡ್: ಫಲಾನುಭವಿಗಳ ಪಟ್ಟಿಗೇ ಸೇರದ ಅರ್ಹರು; NFSA ಕಾಯ್ದೆ ಮತ್ತು ವಾಸ್ತವ

ಇದನ್ನು ಮಧ್ಯವರ್ತಿಗಳ ವಿರುದ್ಧದ ಆರೋಪವಾಗಿ ಓದುವುದು ಅನ್ಯಾಯವಾಗುತ್ತದೆ. ತರಕಾರಿಗಳು ಬೇಗನೆ ಹಾಳಾಗುತ್ತವೆ. ಅವು ಕೊಳೆಯುವ ಮುನ್ನ ವಿಂಗಡಿಸಬೇಕು, ತುಂಬಬೇಕು, ತಂಪಾಗಿಡಬೇಕು ಮತ್ತು ಮಾರಾಟ ಮಾಡಬೇಕು. ಆ ಮೂರನೇ ಎರಡು ಭಾಗದ ದೊಡ್ಡ ಪಾಲು ನಿಜವಾದ ವೆಚ್ಚಗಳಾದ ಟ್ರಕ್, ಐಸ್, ಶೇಖರಣೆ, ಅಂಗಡಿಯ ಬಾಡಿಗೆ, ಮತ್ತು ದಾರಿಯಲ್ಲಿ ಹಾಳಾಗುವ ಎಲ್ಲದಕ್ಕೂ ಹೋಗುತ್ತದೆ. ಪ್ರತಿ ಹಂತದಲ್ಲೂ ಇರುವ ಲಾಭದ ಅಂತರವನ್ನು ಈ ಅಧ್ಯಯನ ನೀಡುವುದಿಲ್ಲ. ಆದ್ದರಿಂದ ಯಾರು ಅತಿಯಾಗಿ ಲಾಭ ಪಡೆಯುತ್ತಿದ್ದಾರೆ ಎಂದು ಯಾರೂ ಪ್ರಾಮಾಣಿಕವಾಗಿ ಹೇಳಲಾಗದು. ಆದರೆ ಈ ವ್ಯವಸ್ಥೆಯು ಒಂದು ನಿರ್ದಿಷ್ಟ ಸಾಮರ್ಥ್ಯಕ್ಕೆ ಪ್ರತಿಫಲ ನೀಡುತ್ತದೆ ಎಂಬುದನ್ನಂತೂ ಹೇಳಬಹುದು. ಅದು ದುರಾಸೆಯಲ್ಲ. ಅದು ಕಾಯುವ ಸಾಮರ್ಥ್ಯ.

ಗೋಪಾಲ್ ಬಳಿ ಶೈತ್ಯಾಗಾರವಿಲ್ಲ. ಕೈಯಲ್ಲಿ ಅಲ್ಪ ಹಣವಿದೆ. ಆತ ಕಿತ್ತ ದಿನವೇ ಮಾರಾಟ ಮಾಡುತ್ತಾನೆ. ಸುತ್ತಮುತ್ತಲಿನ ರೈತರೂ ಹಾಗೆಯೇ ಮಾಡುತ್ತಾರೆ. ಬೆಲೆ ಅತ್ಯಂತ ಕಡಿಮೆ ಇರುವುದು ನಿಖರವಾಗಿ ಅದೇ ದಿನ. ಶೈತ್ಯಾಗಾರ ಮತ್ತು ಸ್ವಲ್ಪ ಹೆಚ್ಚುವರಿ ಹಣ ಹೊಂದಿರುವ ವ್ಯಾಪಾರಿಯು ಕೆಲವು ವಾರಗಳ ಕಾಲ ದಾಸ್ತಾನು ಇಟ್ಟುಕೊಂಡು, ಬೆಲೆ ಏರಿದ ನಂತರ ಮಾರಾಟ ಮಾಡಬಹುದು. ಅದು ಅದೇ ಹೊಲದ ಅದೇ ಟೊಮ್ಯಾಟೊ. ಕಾಯಬಲ್ಲವನು ಹೆಚ್ಚು ಗಳಿಸುತ್ತಾನೆ. ಮಾರುಕಟ್ಟೆಯನ್ನು ಕೆಲವೊಮ್ಮೆ ಕೊಳ್ಳುವವರು ಮತ್ತು ಮಾರುವವರ ನಡುವಿನ ಸ್ಪರ್ಧೆ ಎಂದು ಬಣ್ಣಿಸಲಾಗುತ್ತದೆ. ಆದರೆ ಬೇಗನೆ ಕೆಡುವ ಸರಕುಗಳ ವಿಷಯದಲ್ಲಿ ಅದು ತಾಳ್ಮೆಯನ್ನು ಭರಿಸಬಲ್ಲವರು ಮತ್ತು ಭರಿಸಲಾಗದವರ ನಡುವಿನ ಸ್ಪರ್ಧೆಯೂ ಆಗಿದೆ.

ಮುಖ್ಯಾಂಶಗಳಾಗುವ ಈ ಏರಿಳಿತಗಳಿಗೂ ಅದೇ ತಾಳ್ಮೆಯ ಕೊರತೆ ಕಾರಣವಾಗಿದೆ. ತರಕಾರಿಯೊಂದಕ್ಕೆ ಉತ್ತಮ ಬೆಲೆ ಬಂದಾಗ, ಅನೇಕ ರೈತರು ಅದನ್ನು ಕೇಳಿ ಅದನ್ನೇ ನೆಡುತ್ತಾರೆ. ಕೆಲವು ತಿಂಗಳ ನಂತರ, ಒಮ್ಮೆಲೇ ಅತಿಯಾದ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದು ಬೆಲೆ ಕುಸಿಯುತ್ತದೆ. ಮುಂದಿನ ಸೀಸನ್‌ನಲ್ಲಿ, ನಿರಾಶೆಗೊಂಡ ರೈತರು ಕಡಿಮೆ ಬೆಳೆಯುತ್ತಾರೆ, ಕೊರತೆಯು ಬೆಲೆಯನ್ನು ಮೇಲಕ್ಕೆ ತಳ್ಳುತ್ತದೆ, ಮತ್ತು ಚಕ್ರ ಮತ್ತೆ ಆರಂಭವಾಗುತ್ತದೆ. ಒಂದು ರೀತಿಯಲ್ಲಿ, ಬಿತ್ತನೆಯ ಕಾಲ ಮುಗಿದ ನಂತರ ಏನು ಬೆಳೆಯಬೇಕು ಎಂದು ಹೇಳುವುದರಿಂದ ಬೆಲೆಯು ರೈತನಿಗೆ ತಪ್ಪು ಪಾಠ ಕಲಿಸುತ್ತದೆ. ಉಷ್ಣದ ಅಲೆ ಅಥವಾ ಒಂದು ವಾರದ ಭಾರಿ ಮಳೆಯು ಕೆಲವೇ ದಿನಗಳಲ್ಲಿ ಬೆಳೆಯನ್ನು ನಾಶಪಡಿಸಿ ಈ ಮಾದರಿಯನ್ನು ಇನ್ನಷ್ಟು ತೀವ್ರಗೊಳಿಸಬಹುದು.

ಇದರ ಪರಿಣಾಮಗಳು ಸಮಾನವಾಗಿ ಬೀಳುವುದಿಲ್ಲ. ಸಣ್ಣ ದೈನಂದಿನ ಬಜೆಟ್‌ನಲ್ಲಿ ತರಕಾರಿ ಕೊಳ್ಳುವ ಕುಟುಂಬಕ್ಕೆ ಏರಿಕೆಯ ಪ್ರತಿಯೊಂದು ರೂಪಾಯಿಯೂ ಅರಿವಾಗುತ್ತದೆ, ಮತ್ತು ತನ್ನ ಆದಾಯದ ದೊಡ್ಡ ಭಾಗವನ್ನು ಆಹಾರಕ್ಕಾಗಿ ಖರ್ಚು ಮಾಡುವ ಕುಟುಂಬ — ಸಾಮಾನ್ಯವಾಗಿ ಬಡ ಕುಟುಂಬ — ಅತ್ಯಂತ ಕಠಿಣ ಹೊಡೆತವನ್ನು ಅನುಭವಿಸುತ್ತದೆ. ರೈತನು ಬೆಲೆ ಕುಸಿತವನ್ನು ಅನುಭವಿಸುತ್ತಾನೆ. ಯಾವುದೇ ಹೊಲದಿಂದ ದೂರವಿರುವ ಕುಟುಂಬವೂ ಇದರಿಂದ ತಟ್ಟಿಸಿಕೊಳ್ಳುತ್ತದೆ, ಏಕೆಂದರೆ ಭಾರತೀಯ ಕುಟುಂಬಗಳು ಕೊಳ್ಳುವ ವಸ್ತುಗಳಲ್ಲಿ ಆಹಾರವು ದೊಡ್ಡ ಪಾತ್ರ ಹೊಂದಿದೆ. ತರಕಾರಿ ಬೆಲೆಗಳು ಜಿಗಿದಾಗ, ಒಟ್ಟಾರೆ ಬೆಲೆ ಸೂಚ್ಯಂಕವೂ ಅವುಗಳ ಜೊತೆಗೆ ಜಿಗಿಯುತ್ತದೆ, ಮತ್ತು ಅದು ಎಲ್ಲರ ಸಾಲಗಳ ಮೇಲಿನ ಬಡ್ಡಿದರಗಳನ್ನೂ ರೂಪಿಸಬಲ್ಲದು. ಒಂದು ಟೊಮ್ಯಾಟೊ ಅತ್ಯಂತ ದೊಡ್ಡ ಸಂಖ್ಯೆಯನ್ನೇ ಅಲುಗಾಡಿಸಬಲ್ಲದು.

ಇದನ್ನೂ ಓದಿ: ರೈತರಿಗೆ ಸರ್ಕಾರ ನೀಡಿದ ಎಂಎಸ್​ಪಿ ಭರವಸೆಯು ಖರೀದಿ ಕೇಂದ್ರದಷ್ಟೇ ದೂರ; ಎಂಎಸ್​ಪಿ ಭರವಸೆಗೂ ವಾಸ್ತವಕ್ಕೂ ಇದೆ ಅಂತರ

ರಿಸರ್ವ್ ಬ್ಯಾಂಕ್ ಅಧ್ಯಯನವು ಆಕರ್ಷಕವಲ್ಲದ ಆದರೆ ಅಗತ್ಯವಾದ ಪರಿಹಾರಗಳನ್ನು ಸೂಚಿಸುತ್ತದೆ: ಉತ್ತಮ ಮಾರುಕಟ್ಟೆ ವ್ಯವಸ್ಥೆಗಳು, ಹೆಚ್ಚು ಶೇಖರಣೆ ಮತ್ತು ಸಂಸ್ಕರಣೆ, ಹಾಗೂ ಬಿಸಿಲು ಮತ್ತು ಅನಿಶ್ಚಿತ ಮಳೆಯನ್ನು ತಡೆದುಕೊಳ್ಳುವ ಬೆಳೆ ತಳಿಗಳ ಕುರಿತು ಹೆಚ್ಚಿನ ಸಂಶೋಧನೆ. ಈ ಬದಲಾವಣೆಗಳು ನಿಧಾನವಾಗಿವೆ, ಆದರೆ ಕೆಲವನ್ನು ಊಹಿಸುವುದು ಸುಲಭ. ಹಳ್ಳಿಯಲ್ಲಿರುವ ಒಂದು ಶೈತ್ಯಾಗಾರವು ರೈತನಿಗೆ ಮೂರು ಗಂಟೆಗಳ ಬದಲು ಮೂರು ದಿನ ಕಾಯಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿ ಟೊಮ್ಯಾಟೊವನ್ನು ಪ್ಯೂರಿಯಾಗಿ ಪರಿವರ್ತಿಸುವ ಸಣ್ಣ ಘಟಕವು ಎಲ್ಲಿಯಾದರೂ ಉಂಟಾಗುವ ಅತಿಯಾದ ಪೂರೈಕೆಗೆ ದಾರಿ ಮಾಡಿಕೊಡುತ್ತದೆ. ಪ್ರತಿಯೊಂದೂ ಕಾಯಬಲ್ಲವನ ಮೇಲಿನ ಅನುಕೂಲವನ್ನು ಕಡಿಮೆ ಮಾಡುತ್ತದೆ, ಅಂದರೆ ಯಾರನ್ನೂ ಬಡವರನ್ನಾಗಿಸದೆಯೇ ಮಾರುಕಟ್ಟೆಯನ್ನು ಸ್ವಲ್ಪ ಹೆಚ್ಚು ನ್ಯಾಯಯುತವಾಗಿಸುತ್ತದೆ.

ಈ ಮಧ್ಯೆ, ಗೋಪಾಲ್‌ನ ಟೊಮ್ಯಾಟೊ ಟ್ರಕ್‌ನಲ್ಲಿ ಪ್ರಯಾಣಿಸಿ, ಮಾರುಕಟ್ಟೆ ಪ್ರಾಂಗಣ ಮತ್ತು ಶೈತ್ಯಾಗಾರದ ಮೂಲಕ ಹಾದು, ನಗರದ ಕೌಂಟರ್‌ವೊಂದನ್ನು ತಲುಪಿತು; ಅಲ್ಲಿ ಮಹಿಳೆಯೊಬ್ಬಳು ಅದನ್ನು ಎತ್ತಿಕೊಂಡು, ತಿರುಗಿಸಿ ನೋಡಿ ತನ್ನ ಚೀಲದಲ್ಲಿ ಹಾಕಿಕೊಂಡಳು. ದಾರಿಯುದ್ದಕ್ಕೂ ಪ್ರತಿಯೊಬ್ಬರೂ ಒಂದು ಪಾಲು ಪಡೆದಿದ್ದರು. ಹಣ ಪಾವತಿಸಿದ ಆ ಮಹಿಳೆಗೆ, ಈ ಹೊಲದ ಬಗ್ಗೆ ಯೋಚನೆ ಬರಲಿಲ್ಲ.

ಒಂದು ಕಿಲೋ ಈರುಳ್ಳಿಗೆ ನೀವು ಹಣ ಪಾವತಿಸುವಾಗ, ಅದರ ಅತಿದೊಡ್ಡ ಪಾಲು ಯಾರಿಗೆ ಸೇರುತ್ತದೆ ಎಂದು ಭಾವಿಸುತ್ತೀರಿ?

(ಆಧಾರಗಳು: ಭಾರತೀಯ ರಿಸರ್ವ್ ಬ್ಯಾಂಕ್ (RBI), ಭಾರತದಲ್ಲಿ ತರಕಾರಿ ಹಣದುಬ್ಬರದ ಕುರಿತ ಕಾರ್ಯಪತ್ರ: ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆಯ ಅಧ್ಯಯನ, ಬಿಸಿನೆಸ್ ಸ್ಟ್ಯಾಂಡರ್ಡ್ (4 ಅಕ್ಟೋಬರ್ 2024) ವರದಿ ಮಾಡಿದಂತೆ. ಗೋಪಾಲ್ ಕಾಲ್ಪನಿಕ ವ್ಯಕ್ತಿ; ಆದರೆ ಸಂಶೋಧನಾ ಅಂಶಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Thu, 19 November 26

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು