AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷನ್ ಕಾರ್ಡ್: ಫಲಾನುಭವಿಗಳ ಪಟ್ಟಿಗೇ ಸೇರದ ಅರ್ಹರು; NFSA ಕಾಯ್ದೆ ಮತ್ತು ವಾಸ್ತವ

Santosh Nair's article in 'Your India' series: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಭಾರತದಲ್ಲಿ ಕೋಟ್ಯಂತರ ಜನರಿಗೆ ಉಚಿತ ಧಾನ್ಯ ಒದಗಿಸುತ್ತದೆ. ಆದರೆ 2011ರ ಜನಗಣತಿಯ ಆಧಾರದ ಮೇಲೆ ಅರ್ಹತಾ ಪಟ್ಟಿ ಸಿದ್ಧಪಡಿಸಿರುವುದರಿಂದ, 2015ರ ನಂತರ ಜನಿಸಿದ ಮಕ್ಕಳು ಅಥವಾ ಕುಟುಂಬಗಳು ಯೋಜನೆಯಿಂದ ವಂಚಿತವಾಗುತ್ತಿವೆ. ಈ ವ್ಯವಸ್ಥೆಯು ಆಹಾರ ಭದ್ರತೆ ಒದಗಿಸಿದರೂ, ಹಳೆಯ ದತ್ತಾಂಶ ಮತ್ತು ಪ್ರವೇಶದ ಅಂತರಗಳು ಇನ್ನೂ ಅನೇಕ ನಿಜವಾದ ಬಡವರನ್ನು ತಲುಪಲು ಅಡ್ಡಿಯಾಗಿವೆ, ಇದು ವಾಸ್ತವ ಬಡತನದ ಮೇಲೆ ಬೆಳಕು ಚೆಲ್ಲುತ್ತದೆ.

ರೇಷನ್ ಕಾರ್ಡ್: ಫಲಾನುಭವಿಗಳ ಪಟ್ಟಿಗೇ ಸೇರದ ಅರ್ಹರು; NFSA ಕಾಯ್ದೆ ಮತ್ತು ವಾಸ್ತವ
ರೇಷನ್Image Credit source: Getty Images
Santosh Nair
| Edited By: |

Updated on:Nov 17, 2026 | 2:36 PM

Share

ಒಂದು ಗಲ್ಲಿಯ ಕೊನೆಯಲ್ಲಿ ಎರಡು ಮನೆಗಳು ಪಕ್ಕಪಕ್ಕದಲ್ಲಿವೆ. ಮೊದಲನೆಯ ಮನೆಯಲ್ಲಿ ಇಬ್ಬರು ಮಕ್ಕಳಿರುವ ಸಾವಿತ್ರಿ ಎಂಬ ವಿಧವೆ ವಾಸಿಸುತ್ತಿದ್ದಾಳೆ. ಅವಳು ಪ್ರತಿ ತಿಂಗಳು ಒಂದು ಬಟ್ಟೆಯ ಚೀಲ ಮತ್ತು ಹಳೆಯದಾದ ರೇಷನ್ ಕಾರ್ಡ್ ಹಿಡಿದು ನ್ಯಾಯಬೆಲೆ ಅಂಗಡಿಗೆ ನಡೆದುಕೊಂಡು ಹೋಗಿ, ಉಚಿತ ಧಾನ್ಯಗಳೊಂದಿಗೆ ಮನೆಗೆ ಬರುತ್ತಾಳೆ. ಎರಡನೆಯ ಮನೆಯಲ್ಲಿ ಅವಳ ನೆರೆಹೊರೆಯವಳಾದ ಫಾತಿಮಾ ವಾಸಿಸುತ್ತಿದ್ದಾಳೆ. ಆಕೆಯ ಪತಿ ಬಾಡಿಗೆ ಆಟೋ ಓಡಿಸುತ್ತಾರೆ ಮತ್ತು ಆಕೆಯ ಮಗಳು 2015 ರಲ್ಲಿ ಜನಿಸಿದ್ದಾಳೆ. ಫಾತಿಮಾಳ ಗಳಿಕೆ ಸಾವಿತ್ರಿಗಿಂತ ಹೆಚ್ಚೇನೂ ಇಲ್ಲ. ಅವಳ ಒಲೆಯೂ ಹೆಚ್ಚೇನೂ ಪ್ರಕಾಶಮಾನವಾಗಿ ಉರಿಯುವುದಿಲ್ಲ. ಆದರೆ ಅವಳ ಮನೆಯ ಅಲ್ಮೇರಾದಲ್ಲಿ ಯಾವುದೇ ಕಾರ್ಡ್ ಇಲ್ಲ. ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣವಿಲ್ಲದಾಗ, ಅವಳು ಅಂಗಡಿಯವನಿಂದ ಸಾಲ ಪಡೆಯುತ್ತಾಳೆ. ಈ ಇಬ್ಬರು ಮಹಿಳೆಯರು ಈ ಬಗ್ಗೆ ಎಂದಿಗೂ ಮಾತನಾಡಿಲ್ಲ. ಒಂದು ಲಿಸ್ಟ್ ಅಸ್ತಿತ್ವದಲ್ಲಿದೆ ಮತ್ತು ಅವರಲ್ಲೊಬ್ಬರ ಹೆಸರು ಮಾತ್ರ ಅದರಲ್ಲಿದೆ ಎಂಬುದಷ್ಟೇ ಅವರಿಗೆ ಗೊತ್ತು.

ಈ ಪಟ್ಟಿಯು ಫಾತಿಮಾಳ ಮಗಳು ಹುಟ್ಟುವುದಕ್ಕಿಂತ ಮುಂಚೆ ನಿಗದಿಪಡಿಸಲಾದ ಸಂಖ್ಯೆಯಿಂದ ಬಂದಿದೆ. 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ಅಗ್ಗದ ಧಾನ್ಯಕ್ಕೆ ಅರ್ಹರಾದವರ ಹೆಸರನ್ನು ನೇರವಾಗಿ ಸೂಚಿಸುವುದಿಲ್ಲ. ಇದು ಶೇಕಡಾವಾರು ಪ್ರಮಾಣವನ್ನು ನೀಡುತ್ತದೆ: ಗ್ರಾಮೀಣ ಜನಸಂಖ್ಯೆಯ ಶೇಕಡಾ 75 ರಷ್ಟು ಮತ್ತು ನಗರ ಜನಸಂಖ್ಯೆಯ ಶೇಕಡಾ 50 ರಷ್ಟು ವರೆಗೆ. ಈ ಶೇಕಡಾವಾರು ಪ್ರಮಾಣವನ್ನು 2011 ರ ಜನಗಣತಿಯಲ್ಲಿ ಎಣಿಕೆ ಮಾಡಲಾದ ಜನಸಂಖ್ಯೆಗೆ ಅನ್ವಯಿಸಲಾಗುತ್ತದೆ, ಅಂದರೆ 2015 ರಲ್ಲಿ ಜನಿಸಿದ ಮಗುವು ಅವಳು ಹುಟ್ಟುವುದಕ್ಕಿಂತ ನಾಲ್ಕು ವರ್ಷಗಳ ಮೊದಲು ಮಾಡಿದ ಗಣನೆಗೆ ಗೋಚರಿಸುವುದಿಲ್ಲ. ಯಾರು ಅರ್ಹರು ಎಂಬುದನ್ನು ನಿರ್ಧರಿಸಲು ಇದು ಒಂದು ವ್ಯವಸ್ಥಿತ ಹಾಗೂ ಸರಳವಾದ ಮಾರ್ಗವಾಗಿದೆ. ಮತ್ತು ಆ ಸರಳತೆಯೇ ಇದನ್ನು ಪರಿಶೀಲಿಸುವುದು ಏಕೆ ಮುಖ್ಯ ಎಂಬುದನ್ನು ತೋರಿಸುತ್ತದೆ.

ಮೊದಲನೆಯದಾಗಿ, ಇದು ತಲುಪಿಸುವ ವ್ಯಾಪ್ತಿಯನ್ನು ನೋಡೋಣ. ಈ ಕಾಯ್ದೆಯಡಿ, ಸುಮಾರು 81.35 ಕೋಟಿ ಜನರು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಂದರೆ ದೇಶವ್ಯಾಪಿ ಹರಡಿರುವ ರೇಷನ್ ಅಂಗಡಿಗಳ ಜಾಲದ ಮೂಲಕ ಧಾನ್ಯಗಳನ್ನು ಪಡೆಯಬಹುದು. ಇದು ಇಡೀ ಯುರೋಪ್ ಖಂಡದ ಜನಸಂಖ್ಯೆಗಿಂತಲೂ ಹೆಚ್ಚಿನದಾಗಿದೆ. 2022 ರ ಕೊನೆಯವರೆಗೆ, ಕುಟುಂಬಗಳು ಅತ್ಯಲ್ಪ ಬೆಲೆಯನ್ನು ಪಾವತಿಸುತ್ತಿದ್ದವು: ಅಕ್ಕಿಗೆ ಕೆಜಿಗೆ ರೂ. 3, ಗೋಧಿಗೆ ರೂ. 2 ಮತ್ತು ರಾಗಿಯಂತಹ ಸಿರಿಧಾನ್ಯಗಳಿಗೆ ರೂ. 1. ಆದರೆ 2022 ರ ಡಿಸೆಂಬರ್ 23 ರಂದು ಸಚಿವ ಸಂಪುಟವು ಧಾನ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ನಿರ್ಧರಿಸಿತು. ಆದ್ಯತೆಯ ಕುಟುಂಬದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಧಾನ್ಯ ಸಿಗುತ್ತದೆ, ಮತ್ತು ಅಂತ್ಯೋದಯ ಯೋಜನೆಯಡಿ ಬರುವ ಅತ್ಯಂತ ಬಡ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 35 ಕೆಜಿ ಸಿಗುತ್ತದೆ. ಸಂಬಂಧಿತ ಆಹಾರ ಯೋಜನೆಗಳೊಂದಿಗೆ ಸರ್ಕಾರದ ವಾರ್ಷಿಕ ವೆಚ್ಚವು ರೂ. 2 ಲಕ್ಷ ಕೋಟಿಗಿಂತ ಅಧಿಕವಾಗಿದೆ. ಇದರ ಉದ್ದೇಶ ಸ್ಪಷ್ಟವಾಗಿದೆ. ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆ ಇವತ್ತಿಗೂ ನೈಜವೇ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವಿಕೆ ಸುಧಾರಿಸಿದ್ದರೂ, ಕೋಟ್ಯಂತರ ಜನರಿಗೆ ಇನ್ನೂ ಸರಿಯಾದ ಆಹಾರ ಸಿಗುತ್ತಿಲ್ಲ. ಅಗ್ಗದ ಧಾನ್ಯವು ಕುಟುಂಬಕ್ಕೆ ಒಂದು ಭದ್ರತೆಯ ನೆಲೆಯನ್ನು ಒದಗಿಸುತ್ತದೆ. ಮನೆಯಲ್ಲಿ ದುಡಿಯುವವರಿಗೆ ಅನಾರೋಗ್ಯ ಕಾಡಿದಾಗ ಅಥವಾ ಕೆಲಸವಿಲ್ಲದೆ ಹೋದಾಗ, ಹೊಟ್ಟೆಗಾಗಿ ಯಾರ ಮುಂದೆಯೂ ಕಾಯಬೇಕಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಮಕ್ಕಳ ಮೊಬೈಲ್ ಬಳಕೆ: ಆರೋಗ್ಯಕರ ಬೆಳವಣಿಗೆಗೆ ಪರಿಹಾರಗಳು

ಯಾವುದೇ ಅರ್ಥಶಾಸ್ತ್ರಜ್ಞರಿಗಿಂತ ಸಾವಿತ್ರಿಗೆ ಇದು ಚೆನ್ನಾಗಿ ತಿಳಿದಿದೆ. ಬಜೆಟ್‌ನಲ್ಲಿ ಕಾಣಿಸದ ಮತ್ತೊಂದು ಸಂಗತಿಯೂ ಅವಳಿಗೆ ತಿಳಿದಿದೆ. ಧಾನ್ಯಕ್ಕಾಗಿ ಹಣ ಖರ್ಚು ಮಾಡದ ಕುಟುಂಬವು ಆ ಉಳಿತಾಯದ ಹಣವನ್ನು ಬೇಳೆಕಾಳುಗಳು, ತರಕಾರಿಗಳು, ಶಾಲಾ ಪುಸ್ತಕಗಳು ಅಥವಾ ಔಷಧಿಗಳಿಗಾಗಿ ಸ್ವಲ್ಪ ಹೆಚ್ಚು ಖರ್ಚು ಮಾಡಬಹುದು. ಆಹಾರ ಭದ್ರತೆಯು ಕೇವಲ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ. ಇದು ಜೀವನದ ಉಳಿದ ಅವಶ್ಯಕತೆಗಳಿಗಾಗಿ ಕೆಲವು ಹಣವನ್ನು ಉಳಿಸಿಡುತ್ತದೆ. ಬಹಳ ಬಡಸ್ತನದ ಮನೆಯಲ್ಲಂತೂ ಮಗುವಿನ ನೋಟ್ ಬುಕ್ ಖರೀದಿಸಬೇಕೆ, ಬೇಡವೇ ಎಂದು ಯೋಚಿಸುವಂತಹ ಪರಿಸ್ಥಿತಿ ಇರುತ್ತದೆ.

ಈಗ ಸೂತ್ರಕ್ಕೆ ಮರಳೋಣ. ಯಾರು ಅರ್ಹರು ಎಂಬ ಪಟ್ಟಿಯನ್ನು ಇಂದಿಗೂ ಹಸಿವಿನಿಂದ ಬಳಲುತ್ತಿರುವವರ ಸಮೀಕ್ಷೆ ನಡೆಸಿ ಸಿದ್ಧಪಡಿಸಿಲ್ಲ, ಬದಲಿಗೆ ಒಂದು ಲೆಕ್ಕಾಚಾರದಿಂದ ನಿಗದಿಪಡಿಸಲಾಗಿದೆ. ಸಂಖ್ಯೆಗಳನ್ನು ನವೀಕರಿಸಿದರೆ ಅರ್ಹರಾಗುವ ಅನೇಕರನ್ನು ಇದು ಕೈಬಿಟ್ಟಿದೆ ಎಂದು ಅರ್ಥಶಾಸ್ತ್ರಜ್ಞರು ಮತ್ತು ಆಹಾರ ಹಕ್ಕುಗಳ ಕಾರ್ಯಕರ್ತರು ವರ್ಷಗಳಿಂದ ವಾದಿಸುತ್ತಿದ್ದಾರೆ. ಮುಂದಿನ ಜನಗಣತಿಯು ಹೊಸ ಆಧಾರವನ್ನು ಒದಗಿಸುತ್ತದೆ, ಮತ್ತು ಈ ಚರ್ಚೆ ಮತ್ತೆ ಪ್ರಾರಂಭವಾಗುತ್ತದೆ. ರೇಷನ್ ಕಾರ್ಡ್ ಎನ್ನುವುದು ಒಂದು ಪ್ರವೇಶ ಟಿಕೆಟ್ ಆಗಿರುವುದರಿಂದ ಇದು ಮುಖ್ಯವಾಗಿದೆ. ಪಟ್ಟಿಯಲ್ಲಿಲ್ಲದ ಕುಟುಂಬವು ಪಕ್ಕದ ಮನೆಯ ಅರ್ಹ ಕುಟುಂಬದಷ್ಟೇ ಬಡವರಾಗಿರಬಹುದು. ಹಳೆಯ ಗಣತಿ, ಕಳೆದುಹೋದ ದಾಖಲೆ ಅಥವಾ ಗುಮಾಸ್ತನ ತಪ್ಪಿನಿಂದಾಗಿ ಅವರ ಹೆಸರು ಬಿಟ್ಟುಹೋಗಿರಬಹುದು, ಮತ್ತು ಹೆಸರನ್ನು ಸೇರಿಸಲು ತಿಂಗಳುಗಳೇ ಹಿಡಿಯಬಹುದು, ಆ ಅವಧಿಯಲ್ಲಿ ಹಸಿವು ಮಾತ್ರ ಎಂದಿಗೂ ನಿಲ್ಲುವುದಿಲ್ಲ.

ಇದನ್ನೂ ಓದಿ: ಭಾರತದ ಗಿಗ್ ಆರ್ಥಿಕತೆ: ಪ್ಲಾಟ್‌ಫಾರ್ಮ್ ಕಾರ್ಮಿಕರ ಸವಾಲುಗಳು ಮತ್ತು ಸಾಮಾಜಿಕ ಭದ್ರತೆ

ಈ ಅಂತರಗಳ ಹೊರತಾಗಿಯೂ ನಿಜವಾದ ಲಾಭಗಳೂ ಇವೆ. ಈಗ ಅನೇಕ ರೇಷನ್ ಅಂಗಡಿಗಳು ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸುತ್ತಿವೆ, ಮತ್ತು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ (One Nation One Ration Card) ವ್ಯವಸ್ಥೆಯು ವಲಸೆ ಕಾರ್ಮಿಕನಿಗೆ ತನ್ನ ಕಾರ್ಡ್ ಮಾಡಿಸಿದ ರಾಜ್ಯವಲ್ಲದೆ ಬೇರೆ ರಾಜ್ಯದಲ್ಲೂ ತನ್ನ ಕುಟುಂಬದ ಪಾಲಿನ ಧಾನ್ಯವನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಕೆಲಸಕ್ಕಾಗಿ ಸ್ಥಳಾಂತರಗೊಳ್ಳುವ ಜನರಿಗೆ ಇದು ಒಂದು ರೀತಿಯ ನೆಮ್ಮದಿಯ ಸ್ವಾತಂತ್ರ್ಯವಾಗಿದೆ. ರೇಷನ್ ಧಾನ್ಯವು ಮುಕ್ತ ಮಾರುಕಟ್ಟೆಗೆ ಸೋರಿಕೆಯಾಗುವ ಹಳೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡದಿದ್ದರೂ, ತಂತ್ರಜ್ಞಾನವು ಅದನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಅದೇ ಸಮಯದಲ್ಲಿ, ಬೆರಳಚ್ಚು (Thumbprint) ಹೊಂದಿಕೆಯಾಗದಿದ್ದಾಗ ಯಂತ್ರಗಳು ಕೈಕೊಡಬಹುದು, ಮತ್ತು ಅರ್ಹರಾಗಿದ್ದರೂ ಕುಟುಂಬವನ್ನು ಕೌಂಟರ್‌ನಿಂದ ಹಿಂತಿರುಗಿಸಿ ಕಳುಹಿಸಬಹುದಾದ ಪರಿಸ್ಥಿತಿಯೂ ಉಂಟು.

ಈ ವ್ಯವಸ್ಥೆಯಲ್ಲಿ ಯಾರೂ ಕೂಡ ಫಾತಿಮಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲು ಪ್ರಯತ್ನಿಸುತ್ತಿಲ್ಲ. 2011 ರ ಜನಗಣತಿಗೆ ಆಕೆಯ ಮಗಳನ್ನು ಗುರುತಿಸಲು ಸಾಧ್ಯವಿಲ್ಲ ಅಷ್ಟೇ. ಸಾರ್ವಜನಿಕ ಆಡಳಿತವು ಛಾಯಾಚಿತ್ರಗಳ (Snapshots) ಮೇಲೆ ಅವಲಂಬಿತವಾಗಿರುತ್ತದೆ, ಮತ್ತು ಅವು ಹುಟ್ಟುಹಾಕುವ ಪ್ರಶ್ನೆಯು ಆ ಫೋಟೋ ತೆಗೆವವರ ಮೇಲಿನ ಸಿಟ್ಟಲ್ಲ. ಬದಲಿಗೆ ದೇಶವು ಬದಲಾಗುವ ವೇಗಕ್ಕೆ ತಕ್ಕಂತೆ ಆ ಚಿತ್ರವು ಹೊಸದಾಗುತ್ತದೆಯೇ ಎಂಬುದು ಮುಖ್ಯ.

ಪ್ರತಿ ತಿಂಗಳ ಕೊನೆಯ ದಿನ, ಸಾವಿತ್ರಿ ತನ್ನ ಧಾನ್ಯದ ಚೀಲವನ್ನು ಫಾತಿಮಾಳ ಬಾಗಿಲ ಬಳಿ ಹೊತ್ತುಕೊಂಡು ಹೋಗುತ್ತಾಳೆ, ಆದರೆ ಒಮ್ಮೆಯೂ ಮೇಲಕ್ಕೆ ನೋಡುವುದಿಲ್ಲ.

ಹಸಿವಿನಿಂದ ಇರುವ ಮತ್ತು ಯಾವುದೇ ಪಟ್ಟಿಯಲ್ಲಿ ಇಲ್ಲದವರು ನಿಮ್ಮ ನೆರೆಹೊರೆಯವರಲ್ಲಿ ಯಾರಿರಬಹುದು?

(ಆಧಾರಗಳು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013; 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳ ಕುರಿತು ಡಿಸೆಂಬರ್ 23, 2022 ರ ಸಂಪುಟ ನಿರ್ಧಾರ, ಪತ್ರಿಕಾ ಮಾಹಿತಿ ಬ್ಯೂರೋ (PIB), ಭಾರತ ಸರ್ಕಾರ; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ. ಸಾವಿತ್ರಿ ಮತ್ತು ಫಾತಿಮಾ ಕಾಲ್ಪನಿಕ ವ್ಯಕ್ತಿಗಳು; ಆದರೆ ಸಂಗತಿಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Tue, 17 November 26

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್