AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಗಿಗ್ ಆರ್ಥಿಕತೆ: ಪ್ಲಾಟ್‌ಫಾರ್ಮ್ ಕಾರ್ಮಿಕರ ಸವಾಲುಗಳು ಮತ್ತು ಸಾಮಾಜಿಕ ಭದ್ರತೆ

Santosh Nair's article in 'Your India' series: ಭಾರತದಲ್ಲಿ ಗಿಗ್ ಕೆಲಸವು ವೇಗವಾಗಿ ಬೆಳೆಯುತ್ತಿದ್ದು, 2029-30ರ ವೇಳೆಗೆ 2.35 ಕೋಟಿ ಜನರನ್ನು ತಲುಪುವ ನಿರೀಕ್ಷೆಯಿದೆ. ಆದರೆ, ಈ 'ಪಾಲುದಾರ' ಕಾರ್ಮಿಕರು ಸಂಬಳ, ರಜೆ, ಪಿಎಫ್ ಮತ್ತು ವಿಮೆಯಂತಹ ಮೂಲಭೂತ ಸಾಮಾಜಿಕ ಭದ್ರತೆಗಳಿಂದ ವಂಚಿತರಾಗಿದ್ದಾರೆ. ಸರ್ಕಾರವು ಕಾನೂನುಗಳನ್ನು ರೂಪಿಸುತ್ತಿದ್ದರೂ, ಯೋಜನೆಗಳು ಕಾರ್ಮಿಕರನ್ನು ತಲುಪುವಲ್ಲಿ ಇನ್ನೂ ದೊಡ್ಡ ಅಂತರವಿದೆ, ಇದು ಗಿಗ್ ಕಾರ್ಮಿಕರ ಭವಿಷ್ಯದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾರತದ ಗಿಗ್ ಆರ್ಥಿಕತೆ: ಪ್ಲಾಟ್‌ಫಾರ್ಮ್ ಕಾರ್ಮಿಕರ ಸವಾಲುಗಳು ಮತ್ತು ಸಾಮಾಜಿಕ ಭದ್ರತೆ
ಬ್ಲಿಂಕಿಟ್​ನ ಡೆಲಿವರಿ ಪಾರ್ಟ್ನರ್Image Credit source: Getty Images
Santosh Nair
| Edited By: |

Updated on: Nov 15, 2026 | 3:20 PM

Share

ಅದು ರಾತ್ರಿ ಹನ್ನೊಂದು ಗಂಟೆ, ಜಿಟಿಜಿಟಿ ಮಳೆಯ ಮಧ್ಯೆ ಬೆಲ್ ಬಾರಿಸಿತು; ಬಾಗಿಲಲ್ಲಿ ಒದ್ದೆಯಾದ ಹಳದಿ ಜಾಕೆಟ್ ಧರಿಸಿದ ಯುವಕನೊಬ್ಬ ನಿಂತಿದ್ದ; ಆತ ತನ್ನ ಎರಡೂ ಕೈಗಳಲ್ಲಿ ನಿದ್ರಿಸುತ್ತಿರುವ ಮಗುವಿನಂತೆ ಬೆಚ್ಚಗಿನ ಪಾರ್ಸೆಲ್ ಅನ್ನು ಹಿಡಿದುಕೊಂಡಿದ್ದ. ನಾವು ಆತನನ್ನು ಅರ್ಜುನ್ ಎಂದು ಕರೆಯೋಣ. ಆತ “ಶುಭರಾತ್ರಿ ಸರ್,” ಮತ್ತು “ದಯವಿಟ್ಟು ನನಗೆ ರೇಟಿಂಗ್ ನೀಡಿ ಸರ್” ಎಂದು ಹೇಳಿ, ಲಿಫ್ಟ್ ಬಾಗಿಲು ಮುಚ್ಚುವಷ್ಟರಲ್ಲಿ ಹೊರಟೇಹೋದ. ನೀವು ಅಂತಹ ಅರ್ಜುನ್ ಅನ್ನು ಅನೇಕ ಬಾರಿ ಭೇಟಿಯಾಗಿರಬಹುದು. ಆದರೆ ಆಪ್ (App) ಆತನನ್ನು ಏನೆಂದು ಕರೆಯುತ್ತದೆ ಎಂಬುದನ್ನು ಬಹುಶಃ ನೀವು ಗಮನಿಸಿರುವುದಿಲ್ಲ. ಆತ ಉದ್ಯೋಗಿಯಲ್ಲ. ಆತ ಒಬ್ಬ “ಪಾಲುದಾರ” (Partner). ಆತನಿಗೆ ಯಾವುದೇ ಸಂಬಳವಿಲ್ಲ. ಬದಲಿಗೆ ಪ್ರತಿ ಕೆಲಸಕ್ಕೂ ಒಂದು ಸಂಭಾವನೆ ಮಾತ್ರ ಸಿಗುತ್ತದೆ. ನಿಮ್ಮ ಬಾಸ್ ಯಾರು ಎಂದು ನೀವೇನಾದರೂ ಆತನನ್ನು ಕೇಳಿದರೆ, ಆತ ನಗುತ್ತಾ ಅದು ಆಪ್ ಎಂದು ಹೇಳಬಹುದು.

ಇದು ಮುಗುಳ್ನಗೆ ತರಿಸುವಂತಹ ಉತ್ತರವೇ ಆದರೂ, ಕಾನೂನಿನ ದೃಷ್ಟಿಯಲ್ಲಿ ಇದು ಸರಳವಲ್ಲ. ಇದರೊಳಗಿನ ಸಣ್ಣ ಪ್ರಶ್ನೆಯು ಭಾರತೀಯರು ಜೀನವೋಪಾಯಕ್ಕೆ ಈಗ ಹೇಗೆ ಸಂಪಾದಿಸುತ್ತಿದ್ದಾರೆ ಎಂಬುದರ ಬದಲಾವಣೆಯನ್ನು ಮರೆಮಾಚಿದೆ. ಗಿಗ್ ಕೆಲಸ (Gig work) ಎಂದರೆ ತಿಂಗಳ ಸಂಬಳದ ಬದಲಿಗೆ, ಮಾಡುವ ಕೆಲಸಕ್ಕೆ ಹಣ ಪಡೆಯುವುದು. ಆಪ್ ಮೂಲಕ ಕೆಲಸ ಹುಡುಕುವ ಡೆಲಿವರಿ ರೈಡರ್‌ಗಳು, ಕ್ಯಾಬ್ ಡ್ರೈವರ್‌ಗಳು, ಹೋಮ್ ಸರ್ವಿಸ್ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು (Freelancers) ಎಲ್ಲರೂ ಇದರಡಿ ಬರುತ್ತಾರೆ. ಸರ್ಕಾರದ ನೀತಿ ಸಂಶೋಧನಾ ಸಂಸ್ಥೆಯಾದ ನೀತಿ ಆಯೋಗವು (NITI Aayog) 2022 ರ ವರದಿಯಲ್ಲಿ, 2020-21ರಲ್ಲಿ ಸುಮಾರು 77 ಲಕ್ಷ ಭಾರತೀಯರು ಗಿಗ್ ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಿದೆ ಮತ್ತು 2029-30 ರ ವೇಳೆಗೆ ಈ ಸಂಖ್ಯೆಯು ಸುಮಾರು 2.35 ಕೋಟಿ ತಲುಪಲಿದೆ ಎಂದು ನಿರೀಕ್ಷಿಸಿದೆ. ಅಂದರೆ ಕೇವಲ ಒಂದು ದಶಕದಲ್ಲಿ ಇದು ಸರಿಸುಮಾರು ಮೂರು ಪಟ್ಟು ಹೆಚ್ಚಾಗಲಿದೆ.

ಇದಕ್ಕೆ ಕಾರಣಗಳನ್ನು ನೋಡುವುದು ಸುಲಭ. ಬಾಗಿಲು ಎಲ್ಲರಿಗೂ ತೆರೆದಿದೆ. ಇಲ್ಲಿ ಸಾಮಾನ್ಯವಾಗಿ ಯಾವುದೇ ಸಂದರ್ಶನವಿರುವುದಿಲ್ಲ, ಪ್ರಮಾಣಪತ್ರದ ಅಗತ್ಯವಿರುವುದಿಲ್ಲ, ಮತ್ತು ವಾಹನ ಹಾಗೂ ಫೋನ್ ಹೊಂದಿರುವ ವ್ಯಕ್ತಿಯು ದಿನಗಳೊಳಗೆ ಕೆಲಸ ಪ್ರಾರಂಭಿಸಬಹುದು. ತನ್ನ ಹಳ್ಳಿಯಲ್ಲಿ ಕೆಲಸ ಸಿಗದ ಯುವಕನಿಗೆ, ಅಥವಾ ತನ್ನ ಮಕ್ಕಳ ಸಮಯಕ್ಕೆ ತಕ್ಕಂತೆ ಕೆಲಸದ ಸಮಯವನ್ನು ಹೊಂದಿಸಿಕೊಳ್ಳಬೇಕಾದ ತಾಯಿಗೆ ಇದು ನಿಜವಾದ ವರದಾನವಾಗಿದೆ. ಅರ್ಜುನ್ ತನ್ನ ಹಳ್ಳಿಯಿಂದ ನಗರಕ್ಕೆ ಹತ್ತೊಂಬತ್ತು ವಯಸ್ಸಿನಲ್ಲಿ ಬಂದು, ವಾರದೊಳಗೆ ಸಂಪಾದಿಸಲು ಪ್ರಾರಂಭಿಸಿದ.

ಇದನ್ನೂ ಓದಿ: ಕೇಳುಗನೊಬ್ಬ ಸಾಕು, ಆಯುಧವೇ ಇಲ್ಲದೆ ನಡೆಯುತ್ತೆ ಸೈಬರ್ ವಂಚನೆ

ಆದರೆ ಇದರ ಬದಲಾಗಿ ಏನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯ ಪ್ರಶ್ನೆ. ಸಾಮಾನ್ಯ ಉದ್ಯೋಗಿಯು ಸಾಮಾನ್ಯವಾಗಿ ನಿಶ್ಚಿತ ಸಂಬಳ, ವೇತನ ಸಹಿತ ರಜೆ, ಪ್ರಾವಿಡೆಂಟ್ ಫಂಡ್ ಮತ್ತು ವಿಮೆಗೆ ಉದ್ಯೋಗದಾತರ ಕೊಡುಗೆಯನ್ನು ಹೊಂದಿರುತ್ತಾನೆ ಮತ್ತು ತನಗೆ ಗಾಯವಾದಾಗ ಅಥವಾ ಕೆಲಸದಿಂದ ತೆಗೆದುಹಾಕಿದಾಗ ಕೆಲವು ರಕ್ಷಣೆಗಳನ್ನು ಹೊಂದಿರುತ್ತಾನೆ. ಆದರೆ ಗಿಗ್ ಕೆಲಸಗಾರನನ್ನು ಸಾಮಾನ್ಯವಾಗಿ ಉದ್ಯೋಗಿಯ ಬದಲಿಗೆ ಪಾಲುದಾರ ಎಂದು ವರ್ಗೀಕರಿಸಲಾಗುತ್ತದೆ. ಆತ ತನ್ನದೇ ಆದ ಇಂಧನ, ರಿಪೇರಿ ಮತ್ತು ಫೋನ್ ವೆಚ್ಚವನ್ನು ಭರಿಸಿಕೊಳ್ಳುತ್ತಾನೆ. ಆತನಿಗೆ ಅನಾರೋಗ್ಯ ಕಾಡಿದರೆ ಗಳಿಕೆ ನಿಲ್ಲುತ್ತದೆ. ರಸ್ತೆಯಲ್ಲಿ ಗಾಯಗೊಂಡರೆ ಆಸ್ಪತ್ರೆ ಬಿಲ್ ಆತನದೇ ಆಗಿರುತ್ತದೆ. ಪ್ಲಾಟ್‌ಫಾರ್ಮ್ ಅಥವಾ ಆಪ್ ಪ್ರತಿ ಡೆಲಿವರಿಗೆ ತಾನು ನೀಡುವ ಹಣವನ್ನು ಬದಲಾಯಿಸಬಹುದು ಮತ್ತು ಅದನ್ನು ಪ್ರಶ್ನಿಸುವ ಅಥವಾ ಚೌಕಾಸಿ ಮಾಡುವ ಅಧಿಕಾರ ಆತನಿಗೆ ಕಡಿಮೆ ಇರುತ್ತದೆ. “ಪಾಲುದಾರ” ಎಂಬ ಪದವು ಸಮಾನರಾದವರನ್ನು ಸೂಚಿಸುತ್ತದೆ; ಆದರೆ ಒಬ್ಬನು ಸಂಬಳ, ಮಾರ್ಗ (Route) ಮತ್ತು ರೇಟಿಂಗ್ ಅನ್ನು ನಿರ್ಧರಿಸುವಾಗ, ಮತ್ತೊಬ್ಬನು ಕೇವಲ ಕೆಟ್ಟ ಸ್ಟಾರ್ ರೇಟಿಂಗ್‌ನಿಂದ ತನ್ನ ಕೆಲಸವನ್ನೇ ಕಳೆದುಕೊಳ್ಳುವಂತಿದ್ದರೆ ಇಬ್ಬರ ನಡುವೆ ಸಮಾನ ಅಧಿಕಾರವಿದೆಯೇ ಎಂದು ಕೇಳುವುದು ನ್ಯಾಯಯುತವಾಗಿದೆ.

ಕಾನೂನು ತಯಾರಕರು ಇದನ್ನು ಗಮನಿಸಿದ್ದಾರೆ. 2020 ರಲ್ಲಿ ಪಾಸ್ ಆದ ಸಾಮಾಜಿಕ ಭದ್ರತಾ ಸಂಹಿತೆಯು (Code on Social Security) ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಕಾನೂನಿನಲ್ಲಿ ಮೊದಲ ಬಾರಿಗೆ ಗುರುತಿಸಿತು. ಇದು ವಿಮೆ, ಆರೋಗ್ಯ ಮತ್ತು ಮ್ಯಾಟರ್ನಿಟಿ ಸೌಲಭ್ಯಗಳು, ಅಪಘಾತ ಕವರೇಜ್ ಮತ್ತು ವೃದ್ಧಾಪ್ಯ ಬೆಂಬಲದ ಬಗ್ಗೆ ಮಾತನಾಡುತ್ತದೆ. ಪ್ಲಾಟ್‌ಫಾರ್ಮ್ ಕಂಪನಿಗಳು ತಮ್ಮ ವಹಿವಾಟಿನ ಒಂದು ಸಣ್ಣ ಪಾಲನ್ನು ಈ ಕಾರ್ಮಿಕರ ನಿಧಿಗೆ ಮೀಸಲಿಡಬೇಕೆಂದು ನಿರೀಕ್ಷಿಸುತ್ತದೆ. ರಾಜಸ್ಥಾನ ಮತ್ತು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ತಮ್ಮದೇ ಆದ ಸ್ವಂತ ಕಾನೂನುಗಳನ್ನು ರೂಪಿಸಿವೆ.

ಆದರೆ ಯಾವುದೇ ಯೋಜನೆಯು ಅದರ ಫಲಾನುಭವಿಗಳ ಪಟ್ಟಿಯಷ್ಟು ಮಾತ್ರ ಉಪಯುಕ್ತವಾಗಿರುತ್ತದೆ. ಸರ್ಕಾರದ ಇ-ಶ್ರಮ್ (e-Shram) ಪೋರ್ಟಲ್ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸುತ್ತದೆ. ಇದರಿಂದ ಸೌಲಭ್ಯಗಳು ಅವರನ್ನು ತಲುಪಬಹುದು. ಆಗಸ್ಟ್ 3, 2025 ರ ವೇಳೆಗೆ ಇದು 309 ಮಿಲಿಯನ್‌ಗಿಂತಲೂ ಹೆಚ್ಚು ಕಾರ್ಮಿಕರನ್ನು ನೋಂದಾಯಿಸಿದೆ. ಅದರಲ್ಲಿ ಕೇವಲ 3,37,000 ಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಮಾತ್ರ ಪ್ಲಾಟ್‌ಫಾರ್ಮ್ ಕಾರ್ಮಿಕರಾಗಿದ್ದಾರೆ. ನೀತಿ ಆಯೋಗದ 77 ಲಕ್ಷ ಗಿಗ್ ಕಾರ್ಮಿಕರ ಅಂದಾಜಿನೊಂದಿಗೆ ಇದನ್ನು ಹೋಲಿಸಿ ನೋಡಿದರೆ ವ್ಯತ್ಯಾಸವು ಎದ್ದು ಕಾಣುತ್ತದೆ. ಈ ಎರಡು ಅಂಕಿಅಂಶಗಳು ಬೇರೆ ಬೇರೆ ವರ್ಷಗಳಲ್ಲಿ ಸ್ವಲ್ಪ ವಿಭಿನ್ನವಾದ ಅಂಶಗಳನ್ನು ಅಳೆಯುವುದರಿಂದ ಅವುಗಳನ್ನು ನಿಖರವಾಗಿ ಹೋಲಿಸಲು ಸಾಧ್ಯವಿಲ್ಲ. ಆದರೆ ಅನೇಕ ಗಿಗ್ ಕೆಲಸಗಾರರು ಇನ್ನೂ ವ್ಯವಸ್ಥೆಯ ಒಳಗೆ ಬಂದಿಲ್ಲ ಎಂಬುದನ್ನು ಸೂಚಿಸಲು ಈ ಅಂತರವು ಸಾಕಷ್ಟಿದೆ. ರೈಡರ್‌ಗೆ ಅಂತಹ ಪೋರ್ಟಲ್ ಅಸ್ತಿತ್ವದಲ್ಲಿ ಇದೆ ಎಂದೇ ತಿಳಿದಿರಲಿಕ್ಕಿಲ್ಲ. ಆರ್ಡರ್‌ಗಳ ನಡುವೆ ನೋಂದಾಯಿಸಿಕೊಳ್ಳಲು ಆತನಿಗೆ ಸಮಯವಿರುವುದಿಲ್ಲ. ಯಾವುದನ್ನಾದರೂ ಕೇಳಿದರೆ ತನ್ನ ಅಕೌಂಟ್ ಕಳೆದುಕೊಳ್ಳಬಹುದು ಎಂಬ ಭಯವೂ ಇರಬಹುದು. ಒಬ್ಬ ವ್ಯಕ್ತಿಗೆ ತಲುಪದ ಹಕ್ಕು ಇನ್ನೂ ಆತನನ್ನು ತಲುಪಿಲ್ಲ ಎಂದೇ ಅರ್ಥ. ಏತನ್ಮಧ್ಯೆ, ಇ-ಶ್ರಮ್‌ನಲ್ಲಿ ನೋಂದಣಿ ಸಂಪೂರ್ಣವಾಗಿ ಉಚಿತವಾಗಿದೆ.

ಇದನ್ನೂ ಓದಿ: ಭಾರತದ ಡಿಜಿಟಲ್ ಅಂತರ: ಗ್ರಾಮೀಣ ಮಹಿಳೆಯರ ಫೋನ್ ಸೌಲಭ್ಯ ಮತ್ತು ಸ್ವಾತಂತ್ರ್ಯದ ಸವಾಲುಗಳು

ಏನು ಮಾಡಬೇಕು ಎಂಬುದರ ಕುರಿತು ಭಿನ್ನಾಭಿಪ್ರಾಯಗಳಿವೆ. ಎರಡೂ ಕಡೆಯ ಅಭಿಪ್ರಾಯಗಳೂ ಸತ್ಯವೇ ಆಗಿವೆ. ನಮ್ಯತೆಯೇ (Flexibility) ಗಿಗ್ ಕೆಲಸದ ಮುಖ್ಯ ಉದ್ದೇಶವಾಗಿದೆ ಎಂದು ಕಂಪನಿಗಳು ಹೇಳುತ್ತವೆ. ಪ್ರತಿಯೊಬ್ಬ ರೈಡರ್ ಅನ್ನು ಉದ್ಯೋಗಿಯಾಗಿ ಪರಿಗಣಿಸುವುದು ವೆಚ್ಚವನ್ನು ಹೆಚ್ಚಿಸುತ್ತದೆ ಹಾಗೂ ಉದ್ಯೋಗಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ವಾದಿಸುತ್ತವೆ. ಆದರೆ ವೇತನ, ಮಾರ್ಗ ಮತ್ತು ರೇಟಿಂಗ್ ಅನ್ನು ಒಂದು ಆಪ್ ನಿಯಂತ್ರಿಸುವಾಗ ಆ ವ್ಯಕ್ತಿಯು ನಿಜವಾಗಿಯೂ ಸ್ವತಂತ್ರ ಮಾಲೀಕನಲ್ಲ ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತವೆ. ಇತರ ದೇಶಗಳೂ ಇದೇ ರೀತಿಯ ಚರ್ಚೆಯನ್ನು ನಡೆಸುತ್ತಿವೆ. ಇದಕ್ಕೆ ಉತ್ತರವು ಉದ್ಯೋಗಿ ಹಾಗೂ ಸ್ವತಂತ್ರ ಗುತ್ತಿಗೆದಾರರ ನಡುವೆ ಎಲ್ಲೋ ಒಂದು ಕಡೆ ಇರಬಹುದು. ಕಾನೂನು ಇದಕ್ಕೆ ಇನ್ನೂ ಸರಿಯಾಗಿ ಹೆಸರಿಸಲು ಆಗಿಲ್ಲದೇ ಇರಬಹುದು.

ಈ ಮಧ್ಯೆ, ಪ್ರತಿ ಬಾರಿ ಅರ್ಜುನ್‌ಗೆ ರೇಟಿಂಗ್ ನೀಡಿದಾಗಲೂ, ನಾಳೆ ಆತನಿಗೆ ಎಷ್ಟು ಕೆಲಸ ಸಿಗಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆಗೆ ಒಂದು ಸಂಖ್ಯೆ ಸೇರಿಕೊಳ್ಳುತ್ತದೆ. ನಾವು ಸೆಕೆಂಡ್‌ಗಳಲ್ಲಿ ಟ್ಯಾಪ್ ಮಾಡುವ ಐದು ನಕ್ಷತ್ರಗಳೇ ಆತನ ಬಳಿ ಇರುವ ಅತ್ಯಂತ ಹತ್ತಿರದ ಶಿಫಾರಸು ಪತ್ರವಾಗಿದೆ (Reference letter). ನಾವು ಅದನ್ನು ಯಾವುದೇ ವಿಶೇಷ ಯೋಚನೆಯಿಲ್ಲದೆ ಬರೆಯುತ್ತೇವೆ.

ಮಳೆಯ ರಾತ್ರಿಯಲ್ಲಿ ಬಾಗಿಲ ಗಂಟೆ ಬಾಯಿಸಿದಾಗ, ಬಾಗಿಲಲ್ಲಿ ನಿಂತಿರುವ ವ್ಯಕ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?

(ಆಧಾರಗಳು: ನೀತಿ ಆಯೋಗ, “ಇಂಡಿಯಾಸ್ ಬೂಮಿಂಗ್ ಗಿಗ್ ಅಂಡ್ ಪ್ಲಾಟ್‌ಫಾರ್ಮ್ ಎಕಾನಮಿ” (ಜೂನ್ 2022); ಸಾಮಾಜಿಕ ಭದ್ರತಾ ಸಂಹಿತೆ, 2020, ಭಾರತ ಸರ್ಕಾರ; ದಿ ಪಾಲಿಸಿ ಎಡ್ಜ್ ವರದಿ ಮಾಡಿರುವಂತೆ ಆಗಸ್ಟ್ 3, 2025 ರವರೆಗಿನ ಇ-ಶ್ರಮ್ ಪೋರ್ಟಲ್ ನೋಂದಣಿ ಡೇಟಾ. ಅರ್ಜುನ್ ಕಾಲ್ಪನಿಕ ವ್ಯಕ್ತಿ; ಆದರೆ ಸಂಗತಿಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ