ಕೇಳುಗನೊಬ್ಬ ಸಾಕು, ಆಯುಧವೇ ಇಲ್ಲದೆ ನಡೆಯುತ್ತೆ ಸೈಬರ್ ವಂಚನೆ
Santosh Nair's article in 'Your India' series: ಕಳ್ಳತನ ಅಂದರೆ ಮನೆಗೆ ನುಗ್ಗಬೇಕು, ದರೋಡೆ ಅಂದರೆ ಆಯುಧ ತೋರಿಸಬೇಕು ಅನ್ನೋ ಕಾಲ ಈಗ ಬದಲಾಗಿದೆ. ಈಗ ಒಂದು ಫೋನ್ ಕರೆ, ಒಂದು ವಿಡಿಯೋ ಕಾಲ್ ಸಾಕು… ನಿಮ್ಮ ಜೀವಮಾನದ ಉಳಿತಾಯವನ್ನೇ ದೋಚಬಹುದು! ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಜನರನ್ನು ಹೆದರಿಸಿ ಹಣ ವರ್ಗಾಯಿಸಿಕೊಳ್ಳುವ ಜಾಲ ದೇಶಾದ್ಯಂತ ಹೆಚ್ಚುತ್ತಿದೆ. ಅಷ್ಟಕ್ಕೂ ಈ ಡಿಜಿಟಲ್ ಅರೆಸ್ಟ್ ಅಂದರೇನು? ವಿದ್ಯಾವಂತರು, ನಿವೃತ್ತರು ಕೂಡ ಈ ವಂಚನೆಗೆ ಬಲಿಯಾಗುತ್ತಿರುವುದೇಕೆ? ಸೈಬರ್ ವಂಚಕರ ಬಲೆಯಿಂದ ಪಾರಾಗುವುದು ಹೇಗೆ? ಇಲ್ಲಿದೆ ಮಾಹಿತಿ.

ಮಧ್ಯಾಹ್ನ ಎರಡು ಗಂಟೆ, ಮನೆಯಲ್ಲಿದ್ದವರು ಹೊರಗೆ ಹೋಗಿದ್ದ ಸಮಯ. 72 ವರ್ಷದ ನಿವೃತ್ತ ವ್ಯಕ್ತಿ ಅಯ್ಯರ್ ಅವರ ಮೊಬೈಲ್‌ಗೆ ಕರೆ ಬರುತ್ತದೆ. ಕರೆ ಮಾಡಿದ ವ್ಯಕ್ತಿ ತಾನು ತನಿಖಾ ಸಂಸ್ಥೆಯ ಅಧಿಕಾರಿಯೆಂದು ಪರಿಚಯಿಸಿಕೊಳ್ಳುತ್ತಾನೆ. ನಿಮ್ಮ ಹೆಸರಿನಲ್ಲಿ ಬಂದಿರುವ ಪಾರ್ಸೆಲ್‌ನಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ನಿಮ್ಮ ಹೆಸರೂ ಕೇಳಿಬಂದಿದೆ ಎಂದು ಹೆದರಿಸುತ್ತಾನೆ.
ಸ್ವಲ್ಪ ಸಮಯದ ನಂತರ ವಿಡಿಯೋ ಕಾಲ್ ಮಾಡುತ್ತಾನೆ. ಅತ್ತ ಕಡೆಯಿಂದ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬ ಕಾಣಿಸುತ್ತಾನೆ. ಹಿಂಭಾಗದಲ್ಲಿ ರಾಷ್ಟ್ರಧ್ವಜ, ಕಡತಗಳು ಇರುವುದರಿಂದ ಆತ ನಿಜವಾದ ಅಧಿಕಾರಿಯೇ ಇರಬಹುದು ಎಂದು ಅಯ್ಯರ್ ನಂಬುತ್ತಾರೆ. ನಿಮ್ಮನ್ನು ಈಗ ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ. ಕರೆ ಕಡಿತಗೊಳಿಸಬಾರದು, ಯಾರಿಗೂ ವಿಷಯ ತಿಳಿಸಬಾರದು. ನಿಮ್ಮ ನಿರಪರಾಧಿತ್ವ ಸಾಬೀತುಪಡಿಸಲು ಬ್ಯಾಂಕ್‌ನಲ್ಲಿರುವ ಹಣವನ್ನು ಸುರಕ್ಷಿತ ಖಾತೆಗೆ ವರ್ಗಾಯಿಸಬೇಕು ಎಂದು ಸೂಚಿಸುತ್ತಾನೆ.
ಇದರಿಂದ ಗಾಬರಿಗೊಂಡ ಅಯ್ಯರ್, ತಮ್ಮ ಜೀವಮಾನದ ಉಳಿತಾಯವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ. ಆದರೆ ಅದೇ ಸಮಯದಲ್ಲಿ ಮನೆಗೆ ಬಂದ ಪಕ್ಕದ ಮನೆಯ ಹುಡುಗನೊಬ್ಬ, ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಅಯ್ಯರ್ ನಡೆದ ವಿಷಯವನ್ನು ಹೇಳುತ್ತಿದ್ದಂತೆ, ಕರೆ ಮಾಡಿದ್ದ ವ್ಯಕ್ತಿ ತಕ್ಷಣ ಸಂಪರ್ಕ ಕಡಿತಗೊಳಿಸುತ್ತಾನೆ. ಆಗಲೇ ಅದು ಸೈಬರ್ ವಂಚನೆ ಎಂಬುದು ಅಯ್ಯರ್‌ಗೆ ಅರ್ಥವಾಗುತ್ತದೆ.
ಇದು ನೈಜ ವ್ಯಕ್ತಿಯ ಕಥೆಯಲ್ಲ. ಸೈಬರ್ ವಂಚಕರು ಹೇಗೆ ಜನರನ್ನು ಬಲೆಗೆ ಬೀಳಿಸುತ್ತಾರೆ ಎಂಬುದನ್ನು ವಿವರಿಸಲು ಸೃಷ್ಟಿಸಿರುವ ಕಾಲ್ಪನಿಕ ಉದಾಹರಣೆ. ಆದರೆ ಇದರ ಹಿಂದಿರುವ ವಂಚನೆಯ ವಿಧಾನ ಮಾತ್ರ ನೈಜವಾಗಿದೆ.
ಇದನ್ನೂ ಓದಿ: ಡಿಜಿಟಲ್ ಗೌಪ್ಯತೆ: DPDP ಕಾಯಿದೆ, ಡೇಟಾ ಪ್ರಿನ್ಸಿಪಾಲ್ ಹಕ್ಕುಗಳು ಮತ್ತು ಕಂಪನಿಗಳ ಹೊಣೆಗಾರಿಕೆ
ಡಿಜಿಟಲ್ ಅರೆಸ್ಟ್ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಬಳಸುತ್ತಿರುವ ಹೊಸ ತಂತ್ರವೇ ‘ಡಿಜಿಟಲ್ ಅರೆಸ್ಟ್’. ಪೊಲೀಸ್, ಸಿಬಿಐ, ಇಡಿ, ಕಸ್ಟಮ್ಸ್ ಅಥವಾ ಇತರ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ಜನರಿಗೆ ಕರೆ ಮಾಡುತ್ತಾರೆ. ನಿಮ್ಮ ಹೆಸರಿನಲ್ಲಿ ಅಕ್ರಮ ಪಾರ್ಸೆಲ್ ಬಂದಿದೆ, ನಿಮ್ಮ ಬ್ಯಾಂಕ್ ಖಾತೆ ಅಪರಾಧಕ್ಕೆ ಬಳಕೆಯಾಗಿದೆ, ನಿಮ್ಮ ಆಧಾರ್ ದುರ್ಬಳಕೆಯಾಗಿದೆ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಹೆದರಿಸುತ್ತಾರೆ. ನಂತರ ವಿಡಿಯೋ ಕಾಲ್‌ನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಕಾಣಿಸಿಕೊಂಡು ನಂಬಿಕೆ ಮೂಡಿಸುತ್ತಾರೆ.
ಗಂಟೆಗಟ್ಟಲೆ ವಿಡಿಯೋ ಕಾಲ್‌ನಲ್ಲೇ ಇರುವಂತೆ ಒತ್ತಾಯಿಸಿ, ಯಾರಿಗೂ ಕರೆ ಮಾಡದಂತೆ ತಡೆಯುತ್ತಾರೆ. ಕೊನೆಗೆ ಬ್ಯಾಂಕ್‌ನಲ್ಲಿರುವ ಹಣವನ್ನು ಪರಿಶೀಲನೆಗಾಗಿ ‘ಸುರಕ್ಷಿತ ಖಾತೆ’ಗೆ ವರ್ಗಾಯಿಸುವಂತೆ ಹೇಳುತ್ತಾರೆ. ಡಿಜಿಟಲ್ ಅರೆಸ್ಟ್ ಎಂಬುದು ಕಾನೂನಿನಲ್ಲಿ ಇರುವ ಬಂಧನದ ವಿಧಾನವಲ್ಲ. ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಹಣವನ್ನು ಪರಿಶೀಲನೆಗಾಗಿ ಖಾಸಗಿ ಅಥವಾ ಸುರಕ್ಷಿತ ಖಾತೆಗೆ ವರ್ಗಾಯಿಸುವಂತೆ ಕೇಳುವುದಿಲ್ಲ.
ಸೈಬರ್ ವಂಚನೆಯಿಂದ ಎಷ್ಟು ಹಣ ನಷ್ಟವಾಗಿದೆ? ಭಾರತದಲ್ಲಿ ಸೈಬರ್ ವಂಚನೆಯ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ಭಾರತೀಯ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ದತ್ತಾಂಶವನ್ನು ಆಧರಿಸಿದ ವರದಿಗಳ ಪ್ರಕಾರ, 2024ರ ಮೊದಲ ಒಂಬತ್ತು ತಿಂಗಳಲ್ಲಿ ದೇಶದಲ್ಲಿ ಸೈಬರ್ ವಂಚನೆಯಿಂದ ಬರೋಬ್ಬರಿ 11,333 ಕೋಟಿ ರೂಪಾಯಿ ನಷ್ಟವಾಗಿದೆ.
2024ರಲ್ಲಿ ಸುಮಾರು 12 ಲಕ್ಷ ಸೈಬರ್ ವಂಚನೆ ದೂರುಗಳು ದಾಖಲಾಗಿವೆ. ಇದರಲ್ಲಿ ಡಿಜಿಟಲ್ ಅರೆಸ್ಟ್ ವಂಚನೆಯೊಂದರಿಂದಲೇ 63 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 1,616 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ.
ಇನ್ನು ಷೇರು ಮಾರುಕಟ್ಟೆ ಮತ್ತು ಆನ್‌ಲೈನ್ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ನಡೆಸುವ ವಂಚನೆಗಳಿಂದ ಸುಮಾರು 3,216 ಕೋಟಿ ರೂಪಾಯಿ ನಷ್ಟವಾಗಿದೆ. ಇಂತಹ ವಂಚನೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
1, ಮೊದಲು ಭಯ ಹುಟ್ಟಿಸುತ್ತಾರೆ: ನಿಮ್ಮನ್ನು ಬಂಧಿಸಲಾಗುತ್ತದೆ, ಬ್ಯಾಂಕ್ ಖಾತೆ ಸ್ಥಗಿತಗೊಳ್ಳುತ್ತದೆ, ನಿಮ್ಮ ಕುಟುಂಬದವರು ಅಪಾಯದಲ್ಲಿದ್ದಾರೆ ಎಂದು ಹೆದರಿಸುತ್ತಾರೆ.
2. ತಕ್ಷಣ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಾರೆ: ಈಗಲೇ ಹಣ ವರ್ಗಾಯಿಸಿ, ಕರೆ ಕಡಿತಗೊಳಿಸಬೇಡಿ ಎಂದು ಒತ್ತಾಯಿಸುತ್ತಾರೆ. ಯೋಚಿಸಲು ಅಥವಾ ಬೇರೆಯವರನ್ನು ಸಂಪರ್ಕಿಸಲು ಅವಕಾಶ ಕೊಡುವುದಿಲ್ಲ.
3. ನಿಮ್ಮ ಕೈಯಿಂದಲೇ ಹಣ ವರ್ಗಾಯಿಸುತ್ತಾರೆ: ಒಟಿಪಿ, ಬ್ಯಾಂಕ್ ವಿವರಗಳನ್ನು ಪಡೆದು ಅಥವಾ ಅವರ ಸೂಚನೆಯಂತೆ ಹಣ ವರ್ಗಾಯಿಸುವಂತೆ ಮಾಡಿ ವಂಚಿಸುತ್ತಾರೆ.
4. ಯಾರಿಗೂ ಹೇಳದಂತೆ ತಡೆಯುತ್ತಾರೆ: ಮನೆಯವರಿಗೆ, ಸ್ನೇಹಿತರಿಗೆ ಅಥವಾ ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿಸಬೇಡಿ ಎಂದು ಎಚ್ಚರಿಸುತ್ತಾರೆ. ಇದರಿಂದ ಸಂತ್ರಸ್ತರು ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ.
ಆನ್‌ಲೈನ್ ಕೆಲಸದ ಹೆಸರಲ್ಲೂ ವಂಚನೆ ಸೈಬರ್ ವಂಚನೆ ಕೇವಲ ಡಿಜಿಟಲ್ ಅರೆಸ್ಟ್‌ಗೆ ಸೀಮಿತವಾಗಿಲ್ಲ. ಯೂಟ್ಯೂಬ್ ವಿಡಿಯೋಗಳಿಗೆ ಲೈಕ್ ಮಾಡಿ, ಉತ್ಪನ್ನಗಳಿಗೆ ರೇಟಿಂಗ್ ನೀಡಿ, ಆನ್‌ಲೈನ್‌ನಲ್ಲಿ ಸಣ್ಣ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಆಮಿಷ ಒಡ್ಡುತ್ತಾರೆ. ಮೊದಲಿಗೆ ಸಣ್ಣ ಮೊತ್ತವನ್ನು ಪಾವತಿಸಿ ನಂಬಿಕೆ ಗಳಿಸುತ್ತಾರೆ. ನಂತರ ಹೆಚ್ಚಿನ ಹಣ ಗಳಿಸಲು ಮೊದಲು ನೀವು ಹಣ ಹೂಡಿಕೆ ಮಾಡಬೇಕು, ಹೆಚ್ಚುವರಿ ಟಾಸ್ಕ್‌ಗಳನ್ನು ಅನ್‌ಲಾಕ್ ಮಾಡಬೇಕು ಎಂದು ಹೇಳುತ್ತಾರೆ. ಹೀಗೆ ಹಂತ ಹಂತವಾಗಿ ಹಣ ಪಡೆದು ವಂಚಿಸುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Sat, 14 November 26




